ಪಹಲ್ಗಾಮ್ ದಾಳಿಯ ಬಳಿಕ ಉದ್ಭವಿಸಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕದನ ವಿರಾಮದೊಂದಿಗೆ ಕೊನೆಗೊಂಡಿದೆ. ಭಾರತವು ಕದನ ವಿರಾಮಕ್ಕೆ ಒಪ್ಪಿಕೊಂಡ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, “ಅಮೆರಿಕದಿಂದ ದೂರವಾಣಿ ಕರೆ ಬಂದ ಕೂಡಲೇ ಪ್ರಧಾನಿ ಮೋದಿ ಶರಣಾಗಿದ್ದಾರೆ” ಎಂದು ಟೀಕಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ವ್ಯಾಪಾರ ಸಂಬಂಧವನ್ನು ಅಸ್ತ್ರವಾಗಿ ಬಳಸಿಕೊಂಡು ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಾಗುವಂತೆ ಮಾಡಿದೆ’ ಎಂದು ಪದೇ-ಪದೇ ಹೇಳಿಕೊಂಡಿದ್ದಾರೆ. ಆದಾಗ್ಯೂ, ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖ ನಾಯಕರು ಟ್ರಂಪ್ ಹೇಳಿಕೆಯನ್ನು ಅಲ್ಲಗಳೆದಿಲ್ಲ. ಹೀಗಾಗಿ, ಕದನ ವಿರಾಮಕ್ಕೆ ಭಾರತ ಒಪ್ಪಿಕೊಂಡ ಬಗ್ಗೆ ಸಾಕಷ್ಟು ಆಕ್ಷೇಪ, ಟೀಕೆಗಳು ವ್ಯಕ್ತವಾಗುತ್ತಿವೆ. ರಾಹುಲ್ ಗಾಂಧಿ ಕೂಡ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“1971ರ ಯುದ್ಧದ ಸಮಯದಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಿ ಅಮೆರಿಕದಿಂದ ಒತ್ತಡ ಹಾಕುವ ಕರೆ ಬಂದರೂ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಮಣಿದಿರಲಿಲ್ಲ. ದಿಟ್ಟತನದಿಂದ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಭಾರತವು ಪಾಕಿಸ್ತಾನವನ್ನು ಎರಡು ರಾಷ್ಟ್ರಗಳಾಗಿ ವಿಭಜಿಸಿತ್ತು. ಆದರೆ, ಈಗ ಟ್ರಂಪ್ ಒಂದು ಕರೆ ಮಾಡಿದ್ದಕ್ಕೆ, ಮೋದಿ ತಕ್ಷಣವೇ ಶರಣಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
“ಸ್ವಾತಂತ್ರ್ಯ ಚಳುವಳಿಯ ಸಮಯದಿಂದಲೂ ಶರಣಾಗತಿ, ಕ್ಷಮಾಪಣೆಯ ಪತ್ರ ಬರೆಯವುದು ಆರ್‌ಎಸ್‌ಎಸ್, ಬಿಜೆಪಿಗರಿಗೆ ಅಭ್ಯಾಸವಾಗಿದೆ. ಕಾಂಗ್ರೆಸ್ ಎಂದಿಗೂ ಶರಣಾಗಿಲ್ಲ. ಇದೇ ಬಿಜೆಪಿ/ಆರ್‌ಎಸ್‌ಎಸ್ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ” ಎಂದಿದ್ದಾರೆ.