ಇಡಬ್ಲ್ಯುಎಸ್ 10% ಮೀಸಲಾತಿಯನ್ನು ಹೊರತುಪಡಿಸಿ, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರ ಸಾಮಾಜಿಕವಾಗಿ- ಶೈಕ್ಷಣಿಕವಾಗಿ ಹಿಂದುಳಿದ ಗುಂಪುಗಳಿಗೆ ಒಟ್ಟು 85% ಮೀಸಲಾತಿಯನ್ನು ನೀಡಲಾಗುತ್ತಿದೆ
2019ರಲ್ಲಿ ಸಂವಿಧಾನದ ವಿಧಿ 370ನ್ನು ರದ್ದು ಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ರಚಿಸಲಾಯಿತು. ‘ಜಮ್ಮು ಮತ್ತು ಕಾಶ್ಮೀರ’ ಹಾಗೂ ‘ಲಡಾಖ್’ ಪ್ರದೇಶಗಳನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಲಾಯಿತು. ಈ ಸಂದರ್ಭದಲ್ಲಿ ಲಡಾಖ್ ಜನರಿಂದ ಹಲವು ಬೇಡಿಕೆಗಳು ಕೇಳಿಬಂದಿದ್ದವು. ಜಮ್ಮು- ಕಾಶ್ಮೀರಕ್ಕೆ ಇರುವಂತೆ ಶಾಸಕಾಂಗವನ್ನು ನಮಗೂ ಒದಗಿಸಬೇಕು ಎಂಬುದು ಪ್ರಮುಖ ಆಗ್ರಹವಾಗಿತ್ತು. ಜೊತೆಗೆ ತಮ್ಮ ಭೂಮಿ, ಉದ್ಯೋಗ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ದನಿ ಎತ್ತಿದರು. ಸುಮಾರು ಐದು ವರ್ಷಗಳ ಈ ಹೋರಾಟಕ್ಕೆ ಕೇಂದ್ರ ಸರ್ಕಾರ ಕೊಂಚ ಮಣಿದಿದ್ದು, ಮಹತ್ವದ ನೀತಿಗಳನ್ನು ರೂಪಿಸಿದೆ.
ಹೊಸ ಬದಲಾವಣೆ
ನಿವಾಸ ಆಧಾರಿತ ಉದ್ಯೋಗ ಮೀಸಲಾತಿ, ಸ್ಥಳೀಯ ಭಾಷೆಗಳಿಗೆ ಮಾನ್ಯತೆ ಮತ್ತು ನಾಗರಿಕ ಸೇವಾ ನೇಮಕಾತಿಯಲ್ಲಿ ಹಲವು ಬದಲಾವಣೆಗಳನ್ನು ಹೊಸ ನೀತಿಗಳು ತರಲಿವೆ.
ಅವುಗಳೆಂದರೆ:
1. ಲಡಾಖ್ ನಾಗರಿಕ ಸೇವೆಗಳ ವಿಕೇಂದ್ರೀಕರಣ ಮತ್ತು ನೇಮಕಾತಿ (ತಿದ್ದುಪಡಿ) ನಿಯಂತ್ರಣ, 2025
ಈ ನಿಯಮವು ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ಲಡಾಖ್‌ನಲ್ಲಿ ನಿವಾಸ ಹೊಂದಿರುವುದು ಕಡ್ಡಾಯ ಎನ್ನುತ್ತದೆ. ಇದರ ಪ್ರಕಾರ, ಈ ಕೆಳಗಿನವರು ಈ ನಿಯಮದ ಲಾಭ ಪಡೆಯುತ್ತಾರೆ:
- ಕನಿಷ್ಠ 15 ವರ್ಷಗಳಿಂದ ಲಡಾಖ್‌ನಲ್ಲಿ ವಾಸಿಸುತ್ತಿರುವವರು.
- 7 ವರ್ಷ ಲಡಾಖ್‌ನಲ್ಲಿ ಓದಿ, 10 ಅಥವಾ 12ನೇ ತರಗತಿ ಪರೀಕ್ಷೆಯನ್ನು ಅಲ್ಲಿಯೇ ಬರೆದಿರುವವರು.
- ಕನಿಷ್ಠ 10 ವರ್ಷ ಲಡಾಖ್‌ನಲ್ಲಿ ಸೇವೆ ಸಲ್ಲಿಸಿರುವ ಕೇಂದ್ರ ಸರ್ಕಾರಿ ನೌಕರರ ಕುಟುಂಬ.
ಇದನ್ನೂ ಓದಿರಿ: ಬಿಜೆಪಿ ಪ್ರಕಾರ ‘ಆಪರೇಷನ್ ಸಿಂಧೂರ’ ಯಶಸ್ವಿ: ಅಭಿಯಾನ ಆರಂಭಿಸಿದ ಸ್ತ್ರೀದ್ವೇಷಿಗಳು!
2. ಲಡಾಖ್ ನಾಗರಿಕ ಸೇವೆಗಳ ವಾಸಸ್ಥಳ ಪ್ರಮಾಣಪತ್ರ ನಿಯಮಗಳು, 2025
ಈ ನಿಯಮವು ವಾಸಸ್ಥಳ ಪ್ರಮಾಣಪತ್ರ (Domicile Certificate) ಪಡೆಯಲು ಬೇಕಾದ ವಿಧಾನ ಮತ್ತು ದಾಖಲೆಗಳ ಕುರಿತು ವಿವರಿಸಿದೆ. ತಹಸೀಲ್ದಾರ್‌ಗಳು ಈ ಪ್ರಮಾಣಪತ್ರಗಳನ್ನು ನೀಡುತ್ತಾರೆ, ಜಿಲ್ಲಾಧಿಕಾರಿಯವರು ಮೇಲ್ಮನವಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತಾರೆ. ಅರ್ಜಿಗಳನ್ನು ನೇರವಾಗಿ ಅಥವಾ ಆನ್‌ಲೈನ್ ಮೂಲಕ ಸಲ್ಲಿಸಬಹುದು.
3. ಲಡಾಖ್ ಕೇಂದ್ರಾಡಳಿತ ಪ್ರದೇಶ ಮೀಸಲಾತಿ (ತಿದ್ದುಪಡಿ) ನಿಯಂತ್ರಣ, 2025
ಈ ನಿಯಮವು ಮೀಸಲಾತಿ ನೀತಿಯಲ್ಲಿ ಬದಲಾವಣೆ ತರುತ್ತಿದೆ. ಆರ್ಥಿಕ ದುರ್ಬಲ ವರ್ಗಗಳ (EWS) 10% ಮೀಸಲಾತಿಯನ್ನು ಹೊರತುಪಡಿಸಿ, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರ ಹಿಂದುಳಿದ ವರ್ಗಗಳು (OBC) ಮತ್ತು ಇತರ ಸಾಮಾಜಿಕವಾಗಿ- ಶೈಕ್ಷಣಿಕವಾಗಿ ಹಿಂದುಳಿದ ಗುಂಪುಗಳಿಗೆ ಒಟ್ಟು 85% ಮೀಸಲಾತಿಯನ್ನು ನೀಡಲಾಗುತ್ತಿದೆ.
ಮುಖ್ಯವಾಗಿ, ಈ ಮೀಸಲಾತಿಗಳು ಲಡಾಖ್‌ನಲ್ಲಿರುವ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಂತಹ ವೃತ್ತಿಪರ ಸಂಸ್ಥೆಗಳಿಗೂ ವಿಸ್ತರಿಸಲ್ಪಟ್ಟಿವೆ. ಈ ಹಿಂದೆ ಈ ಕಾಲೇಜುಗಳಲ್ಲಿ SC, ST, OBC ಕೋಟಾ 50%ಗೆ ಸೀಮಿತವಾಗಿತ್ತು, ಈಗ ಅದನ್ನು 85%ಗೆ ಹೆಚ್ಚಿಸಲಾಗಿದೆ.
4. ಲಡಾಖ್ ಅಧಿಕೃತ ಭಾಷೆಗಳ ನಿಯಂತ್ರಣ, 2025
ಇಂಗ್ಲಿಷ್, ಹಿಂದಿ, ಉರ್ದು, ಭೋಟಿ ಮತ್ತು ಪುರ್ಗಿ ಭಾಷೆಗಳನ್ನು ಲಡಾಖ್‌ನ ಅಧಿಕೃತ ಭಾಷೆಗಳಾಗಿ ಈ ನಿಯಮ ಗುರುತಿಸುತ್ತಿದೆ. ಲಡಾಖ್‌ನ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಕಾಪಾಡಲು ಶಿನಾ, ಬ್ರೋಕ್ಸ್‌ಕಟ್, ಬಾಲ್ಟಿ ಮತ್ತು ಲಡಾಖಿ ಪ್ರದೇಶಗಳ ಪ್ರಚಾರಕ್ಕೂ ಈ ನಿಯಮ ಒತ್ತು ನೀಡಿದೆ.
5. ಲಡಾಖ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿಗಳು (ತಿದ್ದುಪಡಿ) ನಿಯಂತ್ರಣ, 2025
ಲೇಹ್ ಮತ್ತು ಕಾರ್ಗಿಲ್‌ನ ‘ಲಡಾಖ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿ’ಗಳಲ್ಲಿ (LAHDC) ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡಲು ಈ ನಿಯಮ ರೂಪಿಸಲಾಗಿದೆ. 1997ರ LAHDC ಕಾಯ್ದೆಯಲ್ಲಿ ಈ ಮೂಲಕ ತಿದ್ದುಪಡಿ ತರಲಾಗುತ್ತಿದೆ.
ಈ ನಿಯಮಗಳು ಗಮನಾರ್ಹವೇಕೆ?
2019ರಲ್ಲಿ ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿದ ನಂತರ, ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಲಡಾಖ್‌ಗೆ ನಿರ್ದಿಷ್ಟವಾದ ಸಮಗ್ರ ಆಡಳಿತ ಮತ್ತು ಆಡಳಿತಾತ್ಮಕ ಚೌಕಟ್ಟನ್ನು ರೂಪಿಸಿದೆ. ಲಡಾಖ್‌ಗೆ ಸಂವಿಧಾನದ ಆರನೇ ಶೆಡ್ಯೂಲ್‌ನ ಸ್ಥಾನಮಾನ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಆದರೆ, ಈ ಹೊಸ ನಿಯಮಗಳ ಮೂಲಕ, ಜನರಲ್ಲಿ ಒಂದಿಷ್ಟು ವಿಶ್ವಾಸವನ್ನು ಉಳಿಸಿಕೊಳ್ಳುವ ಕಸರತ್ತನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.
ಸ್ಥಳೀಯ ಜನರಿಗೆ ಉದ್ಯೋಗಗಳನ್ನು ಕಾಯ್ದಿರಿಸಬೇಕು ಎಂಬುದು ಲಡಾಖ್ ಜನರ ಹೋರಾಟದ ಮುಖ್ಯ ಬೇಡಿಕೆಯಾಗಿತ್ತು. ಹಾಗೆಯೇ, ಸ್ಥಳೀಯ ಜನರ ಮಾತೃಭಾಷೆಗಳಾದ ಭೋಟಿ ಮತ್ತು ಪುರ್ಗಿ ಭಾಷೆಗಳಿಗೆ ಅಧಿಕೃತ ಮಾನ್ಯತೆ ನೀಡಬೇಕು, ಸಾಂಸ್ಕೃತಿಕ ಗುರುತುಗಳನ್ನು ಉಳಿಸಬೇಕು ಎಂಬುದು ದೀರ್ಘಕಾಲದ ಆಗ್ರಹವಾಗಿತ್ತು.
ಇದನ್ನೂ ಓದಿರಿ: ಭಾರತದಲ್ಲಿ ಟೆಸ್ಲಾ ಉತ್ಪಾದನೆ | ಕೇಂದ್ರ ಸಚಿವ ಎಚ್ ಡಿಕೆ ಉತ್ಪಾದನಾ ಘಟಕ ಸ್ಥಾಪನೆ ಇಲ್ಲ ಎಂದಿದ್ದೇಕೆ?
2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದಾಗ, ಜಮ್ಮು ಮತ್ತು ಕಾಶ್ಮೀರಕ್ಕೆ ಶಾಸಕಾಂಗವನ್ನು ನೀಡಲಾಯಿತು. ಆದರೆ ಲಡಾಖ್ ಅನ್ನು ನೇರ ಕೇಂದ್ರಾಡಳಿತಕ್ಕೆ ಒಳಪಡಿಸಲಾಯಿತು. ಇದರಿಂದ ಲಡಾಖ್‌ನ ಜನರು ರೊಚ್ಚಿಗೆದ್ದರು. ತಮ್ಮ ವಿಶಿಷ್ಟ ಬುಡಕಟ್ಟು ಗುರುತಿನ ಬಗ್ಗೆ, ಸೂಕ್ಷ್ಮ ಪರಿಸರ ವ್ಯವಸ್ಥೆ ಮತ್ತು ಸೀಮಿತ ಸಂಪನ್ಮೂಲಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಈಶಾನ್ಯ ರಾಜ್ಯಗಳಲ್ಲಿ ಬುಡಕಟ್ಟು ಬಹುಸಂಖ್ಯಾತ ಪ್ರದೇಶಗಳಿಗೆ ಶಾಸಕಾಂಗ ಮತ್ತು ಆರ್ಥಿಕ ಸ್ವಾಯತ್ತತೆ ನೀಡುವ ಆರನೇ ಶೆಡ್ಯೂಲ್‌ನ ಸ್ಥಾನಮಾನವನ್ನು ಲಡಾಖ್‌ಗೆ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿತ್ತು. ಲಡಾಖ್ ಜನಸಂಖ್ಯೆಯ 90% ಕ್ಕಿಂತ ಹೆಚ್ಚು ಜನರು ಪರಿಶಿಷ್ಟ ಪಂಗಡಗಳಿಗೆ ಸೇರಿದವರು ಎಂಬ ವಾದವನ್ನು ಬಲವಾಗಿ ಮಂಡಿಸಲಾಗಿತ್ತು.
ಈ ಬೇಡಿಕೆಗಳನ್ನು ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA) ನಿರಂತರವಾಗಿ ಎತ್ತಿ ಹಿಡಿದಿದ್ದವು. ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ನೇತೃತ್ವದಲ್ಲಿ 2024ರಲ್ಲಿ ನಡೆದ ಪ್ರತಿಭಟನೆಗಳಿಂದಾಗಿ ಲಡಾಖ್ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
ಹೊಸ ನಿಯಮಗಳು ಹಳೆಯವುಗಳಿಗಿಂತ ಹೇಗೆ ಭಿನ್ನವಾಗಿವೆ?
ಈ ಹಿಂದೆ ‘ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ಕಾಯ್ದೆ (2004)’ ಹಾಗೂ ‘ನಾಗರಿಕ ಸೇವೆಗಳ ವಿಕೇಂದ್ರೀಕರಣ ಮತ್ತು ನೇಮಕಾತಿ ಕಾಯ್ದೆ (2010)’ ಅಡಿಯಲ್ಲಿ ಲಡಾಖ್ ಕಾರ್ಯನಿರ್ವಹಿಸಬೇಕಿತ್ತು.
ಆ ಹಳೆಯ ಕಾಯ್ದೆಗಳಲ್ಲಿ:
- ಲಡಾಖ್‌ಗೆ ನಿರ್ದಿಷ್ಟವಾದ ವಾಸಸ್ಥಳ ಪರಿಕಲ್ಪನೆ ಇರಲಿಲ್ಲ.
- ಸ್ಥಳೀಯರಿಗೆ ಉದ್ಯೋಗ ರಕ್ಷಣೆ ಇರಲಿಲ್ಲ.
- EWS ಗಾಗಿ ಸ್ಪಷ್ಟ ಮೀಸಲಾತಿ ಮಿತಿಗಳು ಅಥವಾ ಹೊರಗಿಡುವಿಕೆಗಳು ಇರಲಿಲ್ಲ.
- ಅಧಿಕೃತ ಬಳಕೆಯಲ್ಲಿ ಲಡಾಖಿ ಭಾಷೆಗಳ ಮಾನ್ಯತೆ ಇರಲಿಲ್ಲ.
ಆದರೆ, ಈಗಿನ ಹೊಸ ನಿಯಮಗಳು ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಿದ್ದು, ಲಡಾಖ್‌ನ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಕಾನೂನು ಚೌಕಟ್ಟನ್ನು ಒದಗಿಸಿವೆ. ಆದರೆ ಈ ನಿಯಮಗಳನ್ನು ಲಡಾಖ್ ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಸದ್ಯದ ಕುತೂಹಲ.
ಮಾಹಿತಿ ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್