ಕಾಮುಕ ಹಂತಕರು ಹನ್ನೊಂದು ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು, ಕೊಲೆ ಮಾಡಿ ಬಾವಿಗೆ ಎಸೆದ ಅಮಾನುಷ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ದೇವಂತಗಿ ಗ್ರಾಮದಲ್ಲಿ ನಡೆದಿದೆ.
ಅತ್ಯಾಚಾರ ಹಾಗೂ ಕೊಲೆಗೈದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಕುಟುಂಬಸ್ಥರೊಡನೆ ಗ್ರಾಮಸ್ಥರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಭಾನುವಾರ ಪಕ್ಕದ ಮನೆಗೆ ಓದಲು ಹೋಗಿದ್ದ ಬಾಲಕಿ ಮನೆಗೆ ಬಂದಿರಲಿಲ್ಲ. ಹುಡುಕಾಟ ನಡೆಸಿದ ಪೋಷಕರು ಮರುದಿನ ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರ ಗ್ರಾಮದ ಹೊರವಲಯದಲ್ಲಿದ್ದ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು.
ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. “ದೇವಂತಗಿ ಗ್ರಾಮದ ಹೊರವಲಯದ ಬಾವಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಅತ್ಯಾಚಾರ ಹಾಗೂ ಕೊಲೆ ಎಂದು ದೂರು ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ” ಎಂದು ಪೋಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನೆಲಸಮಗೊಳಿಸಿರುವ ಶೌಚಾಲಯ ಮರುಸ್ಥಾಪಿಸುವಂತೆ ಆಗ್ರಹ
ವರ್ಷದ ಹಿಂದೆ ಇದೇ ಆಳಂದ ತಾಲೂಕಿನ ಗ್ರಾಮವೊಂದರ ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರಗೈದು ಹತ್ಯೆ ಮಾಡಿದ್ದ ಅಮಾನುಷ ಕೃತ್ಯ ನಡೆದಿತ್ತು.