ಕೃಷಿ ಜ್ಞಾನವನ್ನು ನೇರವಾಗಿ ರೈತರಿಗೆ ನೀಡುವುದೇ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದ ಮುಖ್ಯ ಉದ್ದೇಶ ಎಂದು ಬಳ್ಳಾರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಪಾಲಯ್ಯ ಪಿ ಹೇಳಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ “ವಿಜ್ಞಾನಿಗಳ ನಡೆ ರೈತರ ಕಡೆ” ಎಂಬ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಅಂಗವಾಗಿ ಕಂಪ್ಲಿ ತಾಲೂಕಿನ ನೆಲ್ಲುಡಿ, ಎಮ್ಮಿಗನೂರು ಗ್ರಾಮಗಳಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಹಗರಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ತಂಡವು ಜೂ.12 ರವರೆಗೆ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಕೃಷಿ ಜ್ಞಾನ ಕುರಿತು ತಿಳಿವಳಿಕೆ ನೀಡಲಿದ್ದಾರೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರಿಗೆ ಬೇಕಾಗಿರುವ ಸಂಶೋಧನೆಗಳನ್ನು ಕೃಷಿ ವಿಜ್ಞಾನಿಗಳಿಗೆ ತಲುಪಿಸುವುದರಿಂದ ಕೃಷಿಯಲ್ಲಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬಹುದು” ಎಂದು ಹೇಳಿದರು.
“ಅಭಿಯಾನದಲ್ಲಿ ಬೆಂಗಳೂರಿನ ಐಸಿಎಆರ್ ನ್ಯಾಷನಲ್ ಬ್ಯೂರೋ ಆಫ್ ಅಗ್ರಿಕಲ್ಷರಲ್ ಇನ್ಸ್‌ಪೆಕ್ಟ್ ರಿಸೋರ್ಸಸ್ ವಿಜ್ಞಾನಿ ಡಾ.ಡೇವಿಡ್ ಕೆ ಜೆ ಮಾತನಾಡಿ, “ರೈತರಿಗೆ ಭತ್ತದ ಬೆಳೆಯಲ್ಲಿ ಸಮಗ್ರ ರೋಗ ಹಾಗೂ ಕೀಟ ನಿಯಂತ್ರಣ ಜೊತೆಗೆ ಸಾವಯವ ಕೃಷಿ ಪದ್ಧತಿಯಲ್ಲಿ ಜೈವಿಕ ಕೀಟನಾಶಕ ಹಾಗೂ ಸಸ್ಯಜನ್ಯ ಕಳೆ ನಾಶಕಗಳ ಬಳಕೆಯ ಬಗ್ಗೆ ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ | ತೈಲ ಹೊರತೆಗೆಯುವ ಕಾರ್ಖಾನೆ ಮೇಲೆ ದಾಳಿ; 7 ಬಾಲ ಕಾರ್ಮಿಕರ ರಕ್ಷಣೆ
ಡಾ.ನವೀನ್ ಕುಮಾರ್ ಪಿ ಮಾತನಾಡಿ, ರೈತರಿಗೆ ಅತಿಯಾದ ಕೀಟ ನಾಶಕಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಇದರಿಂದ ಆರೋಗ್ಯಕ್ಕೆ ಆಗುವ ಹಾನಿಕಾರಕದ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದರು.
ಕಂಪ್ಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಜ್ಯೋತಿ. ಟಿ ಕೃಷಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ ಕೀಟ ಮತ್ತು ರೋಗ ನಿರ್ವಹಣೆಗೆ ಬೇಕಾದ ಪರಿಕರಗಳ ಬಗ್ಗೆ ಮಾಹಿತಿ ನೀಡಿದರು.