ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡ ಆಯೋಜಿಸಿದ್ದ ಸಂಭ್ರಮಾಚರಣೆಯನ್ನು ವೀಕ್ಷಿಸಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದ 10 ಮಂದಿ ದುರ್ಮರಣ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಭಿಮಾನಿಗಳು ಸಂಭ್ರಮಿಸುವ ಭರದಲ್ಲಿ ಜೀವ ತೆತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಜನರು ಗದ್ದಲಗಳಲ್ಲಿ ಸಿಲುಕಿಕೊಳ್ಳದೆ ತಮ್ಮ ಮನೆಗಳಿಗೆ ಮರಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಂಭ್ರಮಾಚರಣೆ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ. ಕ್ರೀಡಾಂಗಣದ ಒಳಗೆ ಹೋಗುವಾಗ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಸಾವಿನ ಸಂಖ್ಯೆ ಮತ್ತು ಅಸ್ವಸ್ಥಗೊಂಡವರ ಸಂಖ್ಯೆಯ ಬಗ್ಗೆ ಸರ್ಕಾರವಾಗಲಿ, ಪೊಲೀಸ್ ಇಲಾಖೆ ಆಗಲಿ ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಮೂವರು ಪುರುಷರು, ಓರ್ವ ಯುವತಿಯ ಮೃತದೇಹ (ಒಟ್ಟು ನಾಲ್ಕು) ಹಾಗೂ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಪುರಷರ ಸೇರಿ ಒಟ್ಟು 6 ಮೃತದೇಹಗಳಿವೆ ಎಂದು ತಿಳಿದು ಬಂದಿದೆ.
“ಒಟ್ಟು 16 ಮಂದಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಅವರಲ್ಲಿ ನಾಲ್ಕು ಮಂದಿ ಆಸ್ಪತ್ರೆ ತಲುಪುವ ಮೊದಲೇ ಮೃತಪಟ್ಟಿದ್ದರು. ಇಬ್ಬರ ಗುರುತು ಪತ್ತೆಯಾಗಿದೆ. ಇಬ್ಬರ ಗುರುತು ಪತ್ತೆಯಾಗಿಲ್ಲ. ಗಾಯಗೊಂಡಿರುವ 12 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ” ಎಂದು ವೈದೇಹಿ ಆಸ್ಪತ್ರೆಯ ವೈದ್ಯೆ ಉಮೈರಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕ್ರೀಡಾಂಗಣದ ಬಳಿ ಆರ್‌ಸಿಬಿ ಪ್ರಾಂಚೈಸಿ ಮತ್ತು ಕ್ರೀಡಾಂಗಣ ಆಡಳಿತವು ಭದ್ರತೆ ಮತ್ತು ತುರ್ತುಸೇವೆ ಒದಗಿಸುವಲ್ಲಿ ವಿಫಲರಾಗಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ.