ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ಬೈಕ್ನಲ್ಲಿ ತೆರಳುತ್ತಿದ್ದ ದಂಪತಿ ಹಾಗೂ ಓರ್ವ ಮಹಿಳೆ ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ನಂಜನಗೂಡು ತಾಲೂಕಿನ ಸಂಗಮ-ಹುಲ್ಲಹಳ್ಳಿ ಮುಖ್ಯರಸ್ತೆಯಲ್ಲಿ ಸಂಭವಿಸಿದೆ.
ಮೈಸೂರು ಜಿಲ್ಲೆಯ ಹಂಚೀಪುರ ಗ್ರಾಮದ ಚಿಕ್ಕಸ್ವಾಮಿ(45) ಅವರ ಪತ್ನಿ ರೂಪಾ(38), ಕಣೇನೂರು ಗ್ರಾಮದ ಚನ್ನಮಲ್ಲಮ್ಮ(55) ಮೃತ ದುರ್ದೈವಿಗಳು.
ಚಿಕ್ಕಸ್ವಾಮಿ, ಪತ್ನಿ ರೂಪಾ ಮತ್ತು ಚನ್ನಮಲ್ಲಮ್ಮ ಅವರಿದ್ದ ಬೈಕ್ಗೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂವರೂ ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ, ಲಾರಿಯು ಅವರ ಮೇಲೆ ಹರಿದಿದೆ. ಚಕ್ರಕ್ಕೆ ಸಿಲುಕಿದ ಮೂವರು ನುಜ್ಜುಗುಜ್ಜಾಗಿ ಸ್ಥಳದಲ್ಲೇ ಉಸಿರು ಚಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಐಪಿಎಲ್ ಸಂಭ್ರಮಾಚರಣೆ ವೇಳೆ ಗಲಾಟೆ; ಅಟ್ಟಾಡಿಸಿ ಯುವಕನ ಹತ್ಯೆ
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ರಘು, ಪಿಎಸ್ಐ ಚೇತನ್ ಕುಮಾರ್, ಅಪರಾಧ ವಿಭಾಗದ ರಸೂಲ್ ಪಾಗವಾಲೆ, ಎಸ್ಐ ಶಿವಣ್ಣ, ದೊಡ್ಡಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತವಾದ ಲಾರಿಯು ತಮಿಳುನಾಡು ಮೂಲದ್ದಾಗಿದೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.