ದಕ್ಷಿಣ ಭಾರತದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಕರ್ನಾಟಕ ಸರ್ಕಾರದ ಉದ್ದೇಶಕ್ಕೆ ಮಹಾರಾಷ್ಟ್ರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೃಷ್ಣಾ ನದಿ ಜಲ ಹಂಚಿಕೆಯಲ್ಲಿ ಮತ್ತೆ ಬಿಕ್ಕಟ್ಟು ಸೃಷ್ಟಿಯಾಗಿದೆ.
ಕರ್ನಾಟಕ ಸರ್ಕಾರ ಕಳೆದ ವಾರದ ಜಲಸಂಪತ್ತು ಅಭಿವೃದ್ಧಿ ಸಮಿತಿಯಲ್ಲಿ, ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಪ್ರಸ್ತುತ 519.6 ಮೀಟರ್‌ನಿಂದ 524.26 ಮೀಟರ್‌ಗೆ ಹೆಚ್ಚಿಸುವ ಬಗ್ಗೆ ಕೇಂದ್ರದ ಅನುಮತಿ ಪಡೆದು ಮುಂದುವರಿಯಲು ತೀರ್ಮಾನಿಸಿದೆ. ಈ ಎತ್ತರವೃದ್ಧಿಯು ಅಣೆಕಟ್ಟಿನಲ್ಲಿ 130 ಟಿಎಂಸಿ ಯಿಂದ 200 ಟಿಎಂಸಿ ದಕ್ಕುವಂತೆ ನೀರಿನ ಸಂಗ್ರಹ ಶಕ್ತಿಯನ್ನು ಹೆಚ್ಚಿಸಲಿದೆ. ಇದರಿಂದ ಜಮಖಂಡಿ, ಅಥಣಿ, ರಾಮದುರ್ಗ ಹಾಗೂ ಇಳಕಲ್ ಪಟ್ಟಣದ ಕೃಷಿ ಪ್ರದೇಶಗಳಿಗೆ ಹೆಚ್ಚುವರಿ ನೀರಾವರಿ ಲಭ್ಯವಾಗುವ ನಿರೀಕ್ಷೆ ಇದೆ. ಇದೇ ಉದ್ದೇಶದಿಂದ ಸರ್ಕಾರ ಅಣೆಕಟ್ಟು ಎತ್ತರಕ್ಕೆ ಮುಂದಾಗಿದೆ.
ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನ ಒತ್ತಡವು ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆಯೇ ಎಂದು ಪರಿಶೀಲಿಸಲು ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯ ತಜ್ಞರ ವರದಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮಹಾರಾಷ್ಟ್ರ ಸರ್ಕಾರ 2024ರ ಡಿಸೆಂಬರ್‌ನಲ್ಲಿ ಒತ್ತಾಯಿಸಿತ್ತು.
ಮಹಾರಾಷ್ಟ್ರದ ಆಕ್ಷೇಪ ಏಕೆ?
ಈ ಯೋಜನೆ ಕೃಷ್ಣಾ ನದಿ ತೀರದ ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣ ನೀಡಿ, ಮಹಾರಾಷ್ಟ್ರದ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತ ಪತ್ರ ಬರೆಯುವ ಮೂಲಕ ಆಕ್ಷೇಪ ವ್ಯಕ್ತಪಡಿಸಿದೆ. “ಅಣೆಕಟ್ಟಿನ ಎತ್ತರ ಹೆಚ್ಚಿಸಿದರೆ ಮಹಾರಾಷ್ಟ್ರದ ಜಲಾಶಯಗಳ ಪೂರೈಕೆ ಮೇಲೆ ದುಷ್ಪರಿಣಾಮ ಬೀರಬಹುದು. ಮೇಲ್ವಿಚಾರಣೆಯಿಲ್ಲದೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದು ನ್ಯಾಯಸಮ್ಮತವಲ್ಲ. ಅಣೆಕಟ್ಟು ಎತ್ತರಿಸುವ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಅಣೆಕಟ್ಟು ಎತ್ತರಿಸಿ ಆಲಮಟ್ಟಿ ಮೇಲ್ದಂಡೆಯಲ್ಲಿ ಹೆಚ್ಚು ನೀರು ಸಂಗ್ರಹಿಸುವುದರಿಂದ ಕೃಷ್ಣಾ ನದಿ ತೀರದಲ್ಲಿರುವ ಮಹಾರಾಷ್ಟ್ರದ ಸಾಂಗ್ಲಿ, ಸತಾರಾ ಮತ್ತು ಕೊಲ್ಹಾಪುರ ಜಿಲ್ಲೆಗಳು ಪ್ರವಾಹ ಸಮಸ್ಯೆ ಎದುರಿಸುತ್ತವೆ ಎಂದು ಮಹಾರಾಷ್ಟ್ರ ಸರ್ಕಾರ ಕಾರಣ ನೀಡಿದೆ.
ರಾಜಕೀಯ ಪ್ರತಿಕ್ರಿಯೆಗಳು:
ಕರ್ನಾಟಕ ಸರ್ಕಾರವು ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಲು ಯೋಜಿಸಿದೆ ಮತ್ತು ಕರ್ನಾಟಕದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ರಾಜ್ಯದ ಕೇಂದ್ರ ಸಚಿವರು ಮತ್ತು ಸಂಸದರು ಒಗ್ಗಟ್ಟಿನಿಂದ ನಿಲ್ಲುವಂತೆ ಒತ್ತಾಯಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಮಹಾರಾಷ್ಟ್ರದ ಆಕ್ಷೇಪಣೆಯನ್ನು “ಆಘಾತಕಾರಿ” ಎಂದಿರುವ ಅವರು, 2010ರ ತೀರ್ಪಿನ ಬಗ್ಗೆ ಮಹಾರಾಷ್ಟ್ರ ಎಲ್ಲೂ ಪ್ರಶ್ನೆ ಎತ್ತಿರಲಿಲ್ಲ. ಈ ಹಿಂದೆಯೂ ಕರ್ನಾಟಕದ ನಿರ್ಧಾರಗಳನ್ನು ಎಂದಿಗೂ ವಿರೋಧಿಸದ ನೆರೆ ರಾಜ್ಯ ಈಗ ಪ್ರಸ್ತಾವಿತ ಹೆಚ್ಚಳವು ನದಿ ಪಾತ್ರದ ಕೆಲ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಕಾರಣವಾಗಬಹುದು ಎನ್ನುತ್ತಿದೆ. ಈ ಯೋಜನೆ ಜಾರಿ ಮಾಡಲಿ ಎಂದು ಮಹಾರಾಷ್ಟ್ರ ಕೂಡ ಕೇಂದ್ರಕ್ಕೆ ಅಫಿಡವಿಟ್ ಸಲ್ಲಿಸಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಈ ಪತ್ರ ಬರೆದಿದ್ದಾರೆ. ಈ ಯೋಜನೆ ನ್ಯಾಯಾಧಿಕರಣದಲ್ಲಿ ನಮಗೆ ಸಿಕ್ಕಿರುವ ಹಕ್ಕು. ಹೀಗಾಗಿ ನಮ್ಮ ಸಿಎಂ ಸಹ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ” ಎಂದಿದ್ದಾರೆ.
ಕೇಂದ್ರ ಸಚಿವ ಸೋಮಣ್ಣ, “ಕೇಂದ್ರ ಜಲಶಕ್ತಿ ಸಚಿವಾಲಯದ ಭಾಗ. ಆಲಮಟ್ಟಿ ಯೋಜನೆ ನಮ್ಮ ರಾಜ್ಯದ ಹಿತ. ನಮಗೆ ನೆರೆ ರಾಜ್ಯಗಳ ಜತೆ ತಿಕ್ಕಾಟ ಇಷ್ಟವಿಲ್ಲ. ಈ ಯೋಜನೆ ತಡವಾಗುತ್ತಿರುವುದರಿಂದ ಯೋಜನೆ ವೆಚ್ಚ ವಿಪರೀತ ಏರಿಕೆಯಾಗುತ್ತಿದೆ. ಯೋಜನೆ ಭೂಸ್ವಾಧೀನಕ್ಕೆ 1 ಲಕ್ಷ ಕೋಟಿ ರೂಪಾಯಿ ಬೇಕಾಗಬಹುದು. ನಮ್ಮ ಪಾಲಿನ ನೀರು ಬಳಸಲು ಈ ಯೋಜನೆ ಮುಖ್ಯ” ಎಂದು ಹೇಳಿದ್ದಾರೆ.
“ಅವರ ರಾಜ್ಯದಲ್ಲಿ (ಮಹಾರಾಷ್ಟ್ರ) ಪ್ರವಾಹ ಎದುರಾದರೆ ಅದನ್ನು ಅವರು ಆಂತರಿಕವಾಗಿ ಸರಿಪಡಿಸಿಕೊಳ್ಳಲಿ. ನಾವು ಈ ವಿಚಾರವಾಗಿ ಕೇಂದ್ರ ಸಚಿವರು ಹಾಗೂ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಒತ್ತಡ ಹಾಕಬೇಕಿದೆ. ಈ ವಿಚಾರದಲ್ಲಿ ನಾವು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. 2013ರಿಂದ ಈ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಆಗಬೇಕು ಎಂದು ಕಾಯುತ್ತಿದ್ದೇವೆ. ಇನ್ನು ಎಷ್ಟು ದಿನ ಕಾಯಬೇಕು?” ಎಂದು ಪ್ರಶ್ನಿಸಿದ್ದಾರೆ.
“ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗಿರುವುದು ಅದರ ಆಂತರಿಕ ವಿಷಯ ಮತ್ತು ಆ ರಾಜ್ಯವು ಅದನ್ನು ಸರಿಪಡಿಸಬೇಕು. ನಾವು ಪ್ರಧಾನಿ ಮತ್ತು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ನಮ್ಮ ಯೋಜನೆಗೆ ಅನುಮೋದನೆ ನೀಡುವಂತೆ ಒತ್ತಾಯಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಅಣೆಕಟ್ಟು ಎತ್ತರದಿಂದ ಮಹಾರಾಷ್ಟ್ರದಲ್ಲಿ ಪ್ರವಾಹ ಸಂಭವದ ವೈಜ್ಞಾನಿಕ ಪುರಾವೆಗಳಿಲ್ಲ:
ಈ ಹಿಂದೆ 2021ರಲ್ಲಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅಣೆಕಟ್ಟನ್ನು ಎತ್ತರಿಸುವ ಕುರಿತು ಉತ್ಸಾಹ ತೋರಿದ್ದರು. “2019ರಲ್ಲಿ ಸಾಂಗ್ಲಿ, ಸತಾರ ಮತ್ತು ಕೊಲ್ಲಾಪುರದಲ್ಲಿ ಉಂಟಾದ ಪ್ರವಾಹದ ಸಮಯದಲ್ಲಿ ಕರ್ನಾಟಕ ಸರ್ಕಾರ ನಮ್ಮೊಂದಿಗೆ ತುಂಬಾ ಸಹಕಾರ ನೀಡಿದೆ. ಎರಡನೆಯದಾಗಿ, ಆಲಮಟ್ಟಿಯ ಎತ್ತರವನ್ನು ಹೆಚ್ಚಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಲಾಪುರದಲ್ಲಿ ಹಾನಿ ಉಂಟಾಗಬಹುದೇ ಎಂದು ವೈಜ್ಞಾನಿಕವಾಗಿ ತೀರ್ಮಾನಿಸಲಾಗಿಲ್ಲ. ಪಾಲುದಾರರಾಗಿ, ಯಾವುದೇ ಹಾನಿ ಸಂಭವಿಸುವ ನಿರೀಕ್ಷೆಯಿದ್ದರೆ, ನ್ಯಾಯಾಲಯಕ್ಕೆ ಹೋಗುವ ಹಕ್ಕನ್ನು ನಾವು ಹೊಂದಿರುತ್ತೇವೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದರು.

ಪ್ರಸ್ತುತ ಜಲಸಂಪನ್ಮೂಲ ಅಧಿಕಾರಿಗಳು ಹೇಳುವುದು ಅದನ್ನೇ. ಆಲಮಟ್ಟಿಯ ಎತ್ತರದ ಏರಿಕೆಯು ಮಹಾರಾಷ್ಟ್ರದಲ್ಲಿ ಹಾನಿಯನ್ನುಂಟುಮಾಡುತ್ತದೆ ಎಂಬುದಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ. ಈ ಯೋಜನೆಯಿಂದ ಕರ್ನಾಟಕದ ಉತ್ತರ ಭಾಗಕ್ಕೆ ಅನುಕೂಲವಾಗಲಿದೆ ಎಂದು.
ಇದು ಕೇವಲ ಮಹಾರಾಷ್ಟ್ರದೊಂದಿಗಿನ ಬಿಕ್ಕಟ್ಟಲ್ಲ:
ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ 2010 ರಲ್ಲಿ ಪ್ರಕಟಿಸಿದ್ದ ತೀರ್ಪಿನ ವಿರುದ್ಧ ಅವಿಭಜಿತ ಆಂಧ್ರಪ್ರದೇಶ 2011 ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ನ್ಯಾಯಮಂಡಳಿ 2013ರಲ್ಲಿ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಲು ಅನುಮತಿಸಿತ್ತು.
ಆದರೆ, 2011ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರವು ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸುವ ನಿರ್ಧಾರವನ್ನು ತಡೆಹಿಡಿದಿತ್ತು. ಕೇಂದ್ರವು ಮೊದಲು ತನ್ನೊಂದಿಗೆ ಸಮಾಲೋಚಿಸಬೇಕೆಂದು ಆದೇಶಿಸಿತು. ಏತನ್ಮಧ್ಯೆ, 2014 ರಲ್ಲಿ ಆಂಧ್ರಪ್ರದೇಶದಿಂದ ಬೇರ್ಪಟ್ಟ ತೆಲಂಗಾಣ ರಾಜ್ಯ ಕೂಡ ನೀರಿನ ಪಾಲು ಕೋರಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಯೋಜನಾ ವೆಚ್ಚವೇ ದೊಡ್ಡ ಸವಾಲು:
ಪರಿಹಾರ, ಪುನರ್ವಸತಿ ಮತ್ತು ನೀರು ವಿತರಣಾ ಜಾಲದ ನಿರ್ಮಾಣ ಸೇರಿದಂತೆ ಈ ಯೋಜನೆಗೆ ಸುಮಾರು 1,33,867 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. 1 ಲಕ್ಷ ಕೋಟಿಗೂ ಹೆಚ್ಚ ವೆಚ್ಚವಾಗಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಸದ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ಅಷ್ಟು ದೊಡ್ಡ ಗಾತ್ರದ ಬಜೆಟ್ ಭರಿಸುವುದು ಕಷ್ಟ ಸಾಧ್ಯ.
ಈ ಎಲ್ಲಾ ಅಡೆತಡೆಗಳನ್ನು ದಾಟಿ ಯೋಜನೆಯನ್ನು ಅನುಷ್ಠಾನ ಮಾಡಲೇಬೇಕೆಂದಾದರೆ, ಕೇಂದ್ರವು ಆಲಮಟ್ಟಿ ಅಣೆಕಟ್ಟನ್ನು ಒಳಗೊಳ್ಳುವ ಕೃಷ್ಣಾ ಮೇಲ್ದಂಡೆ ಯೋಜನೆ -3 ಅನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ ವೆಚ್ಚವನ್ನು ಭರಿಸಬೇಕು.
ಇದನ್ನೂ ಓದಿ: ಸಮೂಹ ಸನ್ನಿಯ ಬಿತ್ತಿ ಹಣದ ಬೆಟ್ಟವನ್ನೇ ಬಾಚುತ್ತಿರುವ ಐಪಿಎಲ್; ಅಭಿಮಾನಿಗಳ ಕಣ್ಣಿಗೆ ಮಣ್ಣೆರಚುತ್ತಿದೆ!
ಹೆಚ್ಚುವರಿಯಾಗಿ 100 ಟಿಎಂಸಿ ಸಂಗ್ರಹ ಸಾಮರ್ಥ್ಯವನ್ನು ಒದಗಿಸಲು ಅಣೆಕಟ್ಟು ಎತ್ತರಿಸುವುದು ಒಳ್ಳೆಯ ಉದ್ದೇಶವೇ. ಇದು ಹೆಚ್ಚುವರಿಯಾಗಿ 6 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಪೂರೈಕೆಗೆ ಅನುವು ಮಾಡಿಕೊಡುತ್ತದೆ. ಆದರೆ 20 ಹಳ್ಳಿಗಳು ಮತ್ತು ಬಾಗಲಕೋಟೆ ಪಟ್ಟಣದ ಅರ್ಧದಷ್ಟು ಭಾಗ ಮುಳುಗಡೆಯಾಗುವ ಪ್ರಾಥಮಿಕ ಸವಾಲೂ ಇದೆ.
ಕೇಂದ್ರದ ಮಧ್ಯಸ್ಥಿಕೆ ಅನಿವಾರ್ಯ:
ಈ ಹೊಸ ಜಲವಿವಾದದಿಂದ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಹಾರ ಹುಡುಕುವ ಅಗತ್ಯವಿದೆ. ಈಗಾಗಲೇ ತಮಿಳುನಾಡು-ಕರ್ನಾಟಕ ನಡುವೆ ಕಾವೇರಿ ನದೀ ಹಂಚಿಕೆಯ ವಿಚಾರದಲ್ಲಿ ಏಕಾಂಗಿತ್ವ, ನ್ಯಾಯಾಲಯದ ಮೊರೆ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳು ಮುಂದುವರೆದಿರುವ ಸಂದರ್ಭದಲ್ಲಿ, ಕೃಷ್ಣಾ ನದಿಯ ಬಗ್ಗೆ ಮಹಾರಾಷ್ಟ್ರ-ಕರ್ನಾಟಕ ನಡುವೆ ತೀವ್ರತೆಯು ಹೆಚ್ಚಾದರೆ ದಕ್ಷಿಣ ಭಾರತದ ಜಲ ರಾಜಕಾರಣ ಮತ್ತಷ್ಟು ಗಂಭೀರ ತಿರುವು ಪಡೆಯುವುದು ನಿಶ್ಚಿತ.