ಹೇಮೆಯ ಗೊಂದಲಕ್ಕೆ ಮೂರೂ ಪಕ್ಷಗಳ ಸಮಾನ ಪಾಲು!
ತುಮಕೂರು ಜಿಲ್ಲೆಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ರೂಪಿಸಿದ್ದು ಜೆಡಿಎಸ್ –ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ. ಕುಣಿಗಲ್‌ಗೆ ಮಾತ್ರ ಸೀಮಿತಗೊಳಿಸಿ ರೂಪುಗೊಂಡಿದ್ದ ಯೋಜನೆಯನ್ನು ಪರಿಷ್ಕೃತಗೊಳಿಸಿ ಮಾಗಡಿ ತಾಲ್ಲೂಕಿಗೆ ನೀರು ಹರಿಸುವ ಯೋಜನೆಯನ್ನು ರೂಪಿಸಿದ್ದ ಬಿಜೆಪಿ ಸರ್ಕಾರ ಎನ್ನುವ ವಿಚಾರ ಬಹಿರಂಗವಾಗಿದೆ.
2019ರಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಕೊನೆ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕುಣಿಗಲ್ ತಾಲ್ಲೂಕು ಹಲವು ವರ್ಷಗಳಿಂದ ಬರಪೀಡಿತವಾಗಿರುವುದರಿಂದ ಕುಡಿಯುವ ನೀರು ಮತ್ತು ನೀರಾವರಿಗೆ ಹೇಮಾವತಿ ನಾಲೆಯ ಅವಲಂಬಿತವಾಗಿದ್ದು, ಕುಣಿಗಲ್ ಗೆ ಸಮರ್ಪಕವಾಗಿ ನೀರು ಹರಿಸಲು ಲಿಂಕ್ ಕೆನಾಲ್ ಕಾಮಗಾರಿಗೆ ಆದೇಶ ನೀಡಿದ್ದರು.
ಹೇಮಾವತಿ ತುಮಕೂರು ನಾಲೆ 240 ಕಿ.ಮೀ ಉದ್ದವಿದ್ದರೂ ಸಹ 170 ಕಿ.ಮೀಗಿಂತ ಮುಂದಕ್ಕೆ ನೀರು ಹರಿಸಲು ಸಾಧ್ಯವಾಗದೇ ಇರುವುದರಿಂದ ತುಮಕೂರು ನಾಲೆಯ 70 ಕಿ.ಮೀರಿಂದ 165.60 ಕಿ.ಮೀವರೆಗೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಸರ್ಕಾರ ರೂಪಿಸಿತ್ತು.

ಸದರಿ ಯೋಜನೆಯಡಿ 34.535 ಕಿ.ಮೀ ಪೈಪ್ ಲೈನ್ ಮೂಲಕ 388 ಕ್ಯೂಸೆಕ್ಸ್ ನೀರನ್ನು ಹರಿಸಲು ಕುಣಿಗಲ್‌ಗೆ ಹರಿಸಲು ಭೂಸ್ವಾಧೀನ ಸಮಸ್ಯೆಯಿಂದ ಕಾಮಗಾರಿಯ ವಿಳಂಬವನ್ನು ತಪ್ಪಿಸಲು ಪೈಪ್ ಲೈನ್ ಅನ್ನು ರಸ್ತೆಯಲ್ಲಿ ತೆಗೆದುಕೊಂಡು ಹೋಗಲು ಲಿಂಕ್ ಕೆನಾಲ್ ಅನ್ನು ೬೧೪ ಕೋಟಿ ವೆಚ್ಚದಲ್ಲಿ ರೂಪಿಸುವ ಯೋಜನೆಯ ಅಂದಾಜಿಗೆ ದಿನಾಂಕ: 26/06/2019ರಂದು ಸರ್ಕಾರ ಆಡಳಿತಾತ್ಮಕ ಅನುಮೋದನೆಯನ್ನು ನೀಡಿತ್ತು.
ಎರಡು ಹಂತದಲ್ಲಿ ಯೋಜನೆ: ಲಿಂಕ್ ಕೆನಾಲ್ ಯೋಜನೆಯನ್ನು ಹೇಮಾವತಿ ತುಮಕೂರು ನಾಲೆ 165.60ಕ್ಕೆ ಸೀಮಿತಗೊಳಿಸಿ ಸಮ್ಮಿಶ್ರ ಸರ್ಕಾರ ರೂಪಿಸಿದ್ದ ಯೋಜನೆಯನ್ನು ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲು ಮುಂದಾಗಿತ್ತು. ಮೊದಲ ಹಂತದಲ್ಲಿ ಮೊದಲ ಹಂತದಲ್ಲಿ 350 ಕೋಟಿ ಹಾಗೂ ಎರಡನೇ ಹಂತದಲ್ಲಿ 264 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡು ಮೊದಲನೇ ಹಂತಕೆ ಮಾತ್ರ ಟೆಂಡರ್ ಕರೆಯಲು ಸರ್ಕಾರ26-9-2019 ರಂದು ಅನುಮೋದನೆ ನೀಡಿತ್ತು.
ಮಾಗಡಿಗೆ ಹೇಮೆ ನೀರು ಬಿಜೆಪಿ ಕೂಸು: ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದೆ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು, 2008ರಿಂದ 2013ರವರೆಗೆ ಅಧಿಕಾರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಗಡಿ ತಾಲ್ಲೂಕಿಗೆ ಕುಡಿಯುವ ನೀರಿಗಾಗಿ ಹೇಮಾವತಿ ಪೂರೈಸಬೇಕೆಂಬ ಇಂದಿನ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರ ಮನವಿಯನ್ನು ಪರಿಗಣಿಸಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.
ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಪೂರೈಸಲು ಬಿಜೆಪಿ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅಂದಿನ ಕೇಂದ್ರ ಕಾನೂನು ಸಚಿವರಾಗಿದ್ದ ಎಂ.ವೀರಪ್ಪ ಮೊಯ್ಲಿ ಅವರು ಅವಕಾಶವನ್ನು ಕಲ್ಪಿಸುವ ಮೂಲಕ ಬರಪೀಡಿತ ಮಾಗಡಿ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಇದ್ದ ಅಡೆತಡೆಯನ್ನು ನಿವಾರಿಸಿದ್ದರು.ನಂತರ ಯೋಜನೆ ಅಧ್ಯಯನ ವರದಿ(ಡಿಪಿಆರ್) ಮಾಡಲು ಸೂಚಿಸಿತ್ತು

ತದನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮಾಗಡಿ ತಾಲ್ಲೂಕಿಗೆ ನೀರು ಹರಿಸಲು ತುಮಕೂರು ಶಾಖಾ ನಾಲೆ ಸರಪಳಿ 192.30 ಕಿ.ಮೀಯಿಂದ ನೀರನ್ನು ಎತ್ತಿ ಮಾಗಡಿ ತಾಲ್ಲೂಕು ಹಾಗೂ ಹುತ್ರಿದುರ್ಗ ಹೋಬಳಿಯ 83 ಕೆರೆಗಳಿಗೆ 843.71 ಎಂಸಿಎಫ್ ಟಿ ನೀರನ್ನು ಹರಿಸಲು 277.50 ಕೋಟಿ ವೆಚ್ಚದ ಯೋಜನೆಗೆ ದಿನಾಂಕ: 28-02-2014ರಂದು ಆಡಳಿತಾತ್ಮಕ ಅನುಮೋದನೆಯನ್ನು ನೀಡಿತ್ತು.
ಆಡಳಿತಾತ್ಮಕ ಅನುಮೋದನೆ ನೀಡಿ ಕಾಮಗಾರಿಯನ್ನು ಪ್ರಾರಂಭಿಸಿದ್ದ ಸರ್ಕಾರ ಯೋಜನೆಯನ್ನು ಪೂರ್ಣಗೊಳ್ಳುವ ಮೊದಲೇ ಅಧಿಕಾರವನ್ನು ಕಳೆದುಕೊಂಡಿತ್ತಲ್ಲದೆ, ಗ್ರಾವಿಟಿ ಪೈಪ್ ಲೈನ್ ಗೆ ಪಿಎಸ್ ಸಿ ಪೈಪ್ ಬದಲಿಗೆ ಎಂಎಸ್ ಮತ್ತು ಡಿಐ ಪೈಪ್ ಅಳವಡಿಸಿರುವುದ ಕಾಮಗಾರಿ ಮೊತ್ತ ಟೆಂಡರ್ ಮೊತ್ತಕ್ಕಿಂತ ಹೆಚ್ಚುವರಿಯಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು 23/07/2019ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಸದರಿ ವರದಿಯ ಮೇಲೆ ಸರ್ಕಾರ ದಿನಾಂಕ: 15/09/2020ರಲ್ಲಿ ಶ್ರೀರಂಗ ಏತ ನೀರಾವರಿ ಯೋಜನೆಯ ಮೊತ್ತವನ್ನು 277.50 ಕೋಟಿಯಿಂದ 450 ಕೋಟಿಗೆ ಹೆಚ್ಚಿಸಿ ಪರಿಷ್ಕೃತ ಆದೇಶವನ್ನು ನೀಡಿತ್ತು. ಸದರಿ ಆದೇಶದ ಮೇರೆಗೆ ಶ್ರೀರಂಗ ಏತನೀರಾವರಿ ಯೋಜನೆಯ ಕಾಮಗಾರಿಯನ್ನು ವರ್ಷದೊಳಗೆ ಪೂರ್ಣಗೊಳಿಸಲು ಅನುವಾಗುವಂತೆ ಅಂದಿನ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಅವರು ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.
ಹೇಮೆಯ ಗೊಂದಲಕ್ಕೆ ಮೂರೂ ಪಕ್ಷಗಳ ಸಮಾನ ಪಾಲು!
ಜಿಲ್ಲೆಯ ಹೇಮಾವತಿ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳಿಗೆ ಮೂರು ಪಕ್ಷಗಳು ಸಮಾನವಾಗಿ ಕಾರಣವೇ.. ಲಿಂಕ್ ಕೆನಾಲ್ ಅನ್ನು ಸಮ್ಮಿಶ್ರ ಸರ್ಕಾರ ರೂಪಿಸಿರುವುದು ಕುಣಿಗಲ್ ಸೀಮಿತವಾಗಿದೆ. ಮಾಗಡಿ ತಾಲ್ಲೂಕಿಗೆ ನೀರು ಹರಿಸುವುದಕ್ಕೆ ಪರಿಷ್ಕೃತ ಯೋಜನೆ ರೂಪಿಸಿರುವುದು ಬಿಜೆಪಿ ಸರ್ಕಾರ. ಇಂದು ಜಿಲ್ಲೆಯ ರೈತರಲ್ಲಿ ಆತಂಕ ನಿರ್ಮಾಣವಾಗಲು ಮೂರು ಪಕ್ಷಗಳ ರಾಜಕಾರಣವೇ ಕಾರಣ.
ಲಿಂಕ್ ಕೆನಾಲ್ ಕುಣಿಗಲ್ ಗೆ ಸೀಮಿತವಾಗಿದ್ದರೂ ಸಹ ಮಾಗಡಿಗೆ ನೀರು ಹರಿಸಲು ಮಾಡಲಾಗುತ್ತಿದೆ ಎಂದು ಸುಳ್ಳು ಪುಕಾರುಗಳನ್ನು ಹಬ್ಬಿಸುವ ಮೂಲಕ ರೈತರಲ್ಲಿ ಗೊಂದಲ ನಿರ್ಮಿಸಲಾಗಿದೆ. ಮಾಗಡಿ ತಾಲ್ಲೂಕಿಗೆ ನೀರು ಹಂಚಿಕೆಯಾಗಿರುವುದರಿಂದ ನೀರು ನೀಡಲೇ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.