ರಾಜ್ಯದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಡಿಪ್ಲೊಮಾ ಕೋರ್ಸನ್ನು ರದ್ದುಗೊಳಿಸಿರುವ ನಿರ್ಧಾರವನ್ನು ಹಿಂಪಡೆಯಬೇಕು. ಆ ಕೋರ್ಸ್‌ಅನ್ನು ಪುನರಾರಂಭಿಸಬೇಕು ಎಂದು ಭಾರತೀಯ ಕೃಷಿಕ ಸಂಯುಕ್ತ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಕಲಬುರಗಿ ಜಿಲ್ಲೆ ಆಳಂದ ಶಾಸಕ ಬಿ.ಆರ್ ಪಾಟಿಲ್ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮನವಿ ಸಲ್ಲಿಸಿದರು. “ಧಾರವಾಡ ಮತ್ತು ಬೆಂಗಳೂರಿನಲ್ಲಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳು ಕೃಷಿ, ಅರಣ್ಯೀಕರಣ ಮತ್ತು ರೇಷ್ಮೆ ಸಾಕಾಣಿಕೆಗಳಲ್ಲಿ 2 ವರ್ಷಗಳ ಕನ್ನಡ ಮಾಧ್ಯಮ ಡಿಪ್ಲೊಮಾ ಕೋರ್ಸಗಳಗಾಗಿ ನೋಟಿಫಿಕೇಶನ್‌ಗಳನ್ನು ಹೊರಡಿಸಿದ್ದವು. ಆದರೆ, ಇದ್ದಕ್ಕಿದ್ದಂತೆ ಅವುಗಳನ್ನು ಹಿಂಪಡೆದಿವೆ. ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ವಿಶ್ವವಿದ್ಯಾಲಯಗಳು ಈ ಕೋರ್ಸುಗಳನ್ನು ಹಿಂಪಡೆದಿವೆ ಎನ್ನಲಾಗಿದೆ. ಅಲ್ಲದೇ ಸರ್ಕಾರವು ಸಾಕಷ್ಟು ಹಣಕಾಸು ಬೆಂಬಲ ನೀಡದೇ ಇರುವುದೂ ಕಾರಣ ಎನ್ನಲಾಗುತ್ತಿದೆ” ಎಂದು ಹೇಳಿದರು.
“ಕೇವಲ 5 ಸಾವಿರ ರೂ.ಗಳ ಶುಲ್ಕದಲ್ಲಿ ರಾಜ್ಯದ ಬಡ ರೈತರು ಈ ಕೋರ್ಸ್‌ಗಳನ್ನು ನಡೆಯಬಹುದಾಗಿತ್ತು. ಅಲ್ಲದೇ ಇಂತಹ ಡಿಪ್ಲೊಮಾ ಕೋರ್ಸಗಳಲ್ಲಿ ಉತ್ತೀರ್ಣರಾದ ಯುವಜನರಿಗೆ ರಾಜ್ಯ ಸರ್ಕಾರದಲ್ಲಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸಾಕಷ್ಟು ಉದ್ಯೋಗವಕಾಶಗಳ ಲಭ್ಯವಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಕೃಷಿ ವಿಶ್ವವಿದ್ಯಾಲಯಗಳಿಗೆ ಸೂಕ್ತ ಆದೇಶ ನೀಡುವ ಮೂಲಕ ಕೃಷಿ ವಿಜ್ಞಾನ ಡಿಪ್ಲೊಮಾ ಕೋರ್ಸ್‌ಗಳನ್ನು ಪುನರಾರಂಭಿಸಲು ಕ್ರಮ ಕೈಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನೆಲಸಮಗೊಳಿಸಿರುವ ಶೌಚಾಲಯ ಮರುಸ್ಥಾಪಿಸುವಂತೆ ಆಗ್ರಹ
ಈ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಪ್ರಕಾಶ ಕಮ್ಮರಡ್ಡಿ, ಭಾರತೀಯ ಕೃಷಿಕ ಸಮಾಜದ ಮುಖಂಡ ಸಿದಗೌಡ ಮೋದಗಿ ಹಾಗೂ ರೈತ ಸಂಘಟನೆಯ ಮುಖಂಡರುಗಳಾದ ಬಡಗಲಾಪುರ ನಾಗೇಂದ್ರ, ಜಿ ಸಿ ಬಯ್ಯಾರಡ್ಡಿ, ಸಿದ್ದಗೌಡ ಪಾಟಿಲ್, ಕೆ ವಿ ಭಟ್ ಹಾಗೂ 20 ಮಂದಿ ರೈತ ಮುಖಂಡರು ಇದ್ಧರು.