ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬ ಮಾತಿನಂತೆ ಸರ್ಕಾರ ಹಣ ಬಿಡುಗಡೆ ಮಾಡಿದರೂ, ತಮ್ಮ ಹೆಸರಿನಲ್ಲಿರುವ ಜಾಗವನ್ನು ಬಿಟ್ಟುಕೊಡಲು ಖಾಸಗಿ ವ್ಯಕ್ತಿ ಸಮ್ಮತಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಮಶಾನ ಭೂಮಿ ಪಾಳುಕೊಂಪೆಯಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಸಂತೆಬೆನ್ನೂರು ಗ್ರಾಮದ ದಲಿತ ನಿವಾಸಿಗಳು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದ ದಲಿತರಿಗಾಗಿ ಸರ್ವೇ ನಂ. 232ರಲ್ಲಿ 56 ಗುಂಟೆ ಸ್ಮಶಾನ ಭೂಮಿಯನ್ನು ಒದಗಿಸಲಾಗಿದೆ. ಹಲವಾರು ವರ್ಷಗಳಿಂದ ಗ್ರಾಮದ ದಲಿತರು ತಮ್ಮ ಸಮುದಾಯದಲ್ಲಿ ಮೃತಪಟ್ಟವರನ್ನು ಅದೇ ಭೂಮಿಯಲ್ಲಿ ಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಆದರೆ, ಆ ಭೂಮಿ ಇನ್ನೂ ಕೂಡ ಗ್ರಾಮದ ಪ್ರಬಲ ಜಾರಿಗೆ ಸೇರಿದ ಇಬ್ಬರು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿದೆ ಎಂದು ತಿಳಿದುಬಂದಿದೆ.
56 ಗುಂಟೆ ಸ್ಮಶಾನ ಭೂಮಿಯ ಪೈಕಿ ಅವರಿಬ್ಬರ ಹೆಸರಿನಲ್ಲಿ ತಲಾ 28 ಗಂಟೆ ಭೂಮಿ ಸೇರಿಕೊಂಡಿದೆ. ಅವರಿಬ್ಬರಲ್ಲಿ ಒಬ್ಬರು ಯಾವುದೇ ತಕರಾರು ಇಲ್ಲದೆ, ಭೂಮಿಯನ್ನು ವರ್ಗಾಯಿಸುವುದಾಗಿ ಹೇಳಿದ್ದಾರೆ. ಆದರೆ, ಮತ್ತೊಬ್ಬರು ಭೂಮಿ ಬಿಟ್ಟುಕೊಡುವುದಿಲ್ಲ, ಅಲ್ಲಿ ನಿವೇಶನ ಮಾಡುತ್ತೇವೆಂದು ಚಕಾರ ಎತ್ತಿದ್ದಾರೆ. ಪರಿಣಾಮ ಸ್ಮಶಾನ ಭೂಮಿಯು ದಲಿತರಿಗೆ ಬಳಕೆಯಾಗದೇ ಪಾಳು ಬಿದ್ದಿದೆ. ಗಿಡ-ಗಂಟಿಗಳು ಬೆಳೆದುಕೊಂಡಿವೆ. ಈಗಾಗಲೇ ಸಂಸ್ಕಾರ ಮಾಡಲಾಗಿರುವ ಹಿರಿಕರಿಗೆ ಪೂಜೆ, ಶ್ರಾದ್ಧಾ ನಡೆಸಲೂ ಕೂಡ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮದ ದಲಿತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
“ಸುಮಾರು ಎರಡು-ಮೂರು ತಲೆಮರುಗಳಿಂದ ನಮ್ಮ ಸಮುದಾಯದವರಲ್ಲಿ ಮೃತಪಟ್ಟಿವರಿಗೆ ಆ ಜಾಗದಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತಾ ಬಂದಿದ್ದೇವೆ. ಆದರೆ, ಈಗ ಸಮಸ್ಯೆ ಎದುರಾಗಿದೆ. ನಮ್ಮಲ್ಲಿ ಯಾರಾದರೂ ಮೃತಪಟ್ಟರೆ, ಸಂಸ್ಕಾರ ಮಾಡಲೂ ಸಾಧ್ಯವಿಲ್ಲದಂತಾಗಿದೆ” ಎಂದುಈದಿನ.ಕಾಮ್ ಜೊತೆ ಮಾತನಾಡಿದ ಗ್ರಾಮದ ಹಿರಿಯ ದಲಿತ ಮುಖಂಡ ರಮೇಶಪ್ಪ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮುಂದಿನ ದಿನಗಳಲ್ಲಿ ಜಗತ್ತಿನಾದ್ಯಂತ ಜಲ ಪ್ರಳಯಗಳೂ ಹೆಚ್ಚಾಗಲಿವೆ ; ನೆಮ್ಮದಿಯ ದಿನಗಳೂ ಮಾಯವಾಗಲಿವೆ
ಸ್ಮಶಾನ ಭೂಮಿಯನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಬಗೆಹರಿಯದೆ, ಭೂಮಿ ಪಾಳುಬಿದ್ದಿದೆ. ಪೂರ್ವಜರಿಗೆ ಸಂಸ್ಕಾರ ಮಾಡಲಾಗಿರುವ ಭೂಮಿಯನ್ನು ಉಳಿಸಿಕೊಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಸ್ಮಶಾನ ಭೂಮಿಯ ಸಮಸ್ಯೆ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಉಚ್ಚಂಗಿ ಪ್ರಸಾದ್, “ನೂರಾರು ವರ್ಷಗಳಿಂದಲೂ ನಮ್ಮ ಹಿರಿಯರ ಅಂತ್ಯಕ್ರಿಯೆಯನ್ನು ಈ ಜಾಗದಲ್ಲಿ ಮಾಡುತ್ತಾ ಬಂದಿದ್ದೇವೆ. ಏಕಾಏಕಿ ಇದು ನಮ್ಮದು ಎಂದು ಖಾಸಗಿ ವ್ಯಕ್ತಿಯೊಬ್ಬರು ಅಡ್ಡಿ ಉಂಟುಮಾಡಿದ್ದಾರೆ. ಭೂಮಿಯು ಹಾಳು ಕೊಂಪೆಯಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷವೇ ಇದಕ್ಕೆ ಕಾರಣ. ಕೂಡಲೇ, ಸ್ಮಶಾನ ಭೂಮಿಯನ್ನು ಜಮೀನ ಮಾಲೀಕರ ಹೆಸರಿನಿಂದ ವರ್ಗಾಯಿಸಿ, ದಲಿತರಿಗೆ ಹಸ್ತಾಂತರಿಸಬೇಕು” ಎಂದು ಆಗ್ರಹಿಸಿದ್ದಾರೆ.