ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಡೆದ ಜಿಲ್ಲಾಮಟ್ಟದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಿಸುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಇದೇ ಜೂನ್. 7 ರಂದು ಬಕ್ರೀದ್ ಹಬ್ಬ ನಡೆಯಲಿದ್ದು ಹಿಂದಿನಂತೆಯೇ ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಜಿಲ್ಲೆಯಲ್ಲಿ ಹಿಂದಿನಿಂದಲೂ ಸಾಮರಸ್ಯದಿಂದ ಎಲ್ಲ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಶಾಂತಿ ಸಹಬಾಳ್ವೆಯಿಂದ ಜಿಲ್ಲೆಯ ಜನರು ಬದುಕುತ್ತಿದ್ದಾರೆ. ಈ ಬಾರಿಯೂ ಸಹ ಈ ಹಿಂದೆ ನಡೆದುಕೊಂಡ ಬಂದ ಮಾದರಿಯಲ್ಲಿಯೇ ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬದ ಆಚರಣೆಯಾಗಲಿ. ಇದಕ್ಕಾಗಿ ಸರ್ವರು ಸಹಕರಿಸಲಿದ್ದಾರೆ ಎಂದರು.
ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರು, ಸ್ವಚ್ಚತೆ, ತ್ಯಾಜ್ಯಗಳ ನಿರ್ವಹಣೆ, ನಿರಂತರ ವಿದ್ಯುತ್, ಇನ್ನಿತರ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಒಳ್ಳೆಯ ವಾತಾವರಣದಲ್ಲಿ ಹಬ್ಬ ಆಚರಣೆಯಾಗಲಿ. ಸಂತೋಷ ಸಂಭ್ರಮದಿಂದ ಹಬ್ಬ ನಡೆಯಲಿ. ಎಲ್ಲ ಮುಖಂಡರು ಎಲ್ಲ ಸಂದರ್ಭಗಳಲ್ಲಿಯೂ ಪರಸ್ಪರ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಬಂದಿದ್ದಾರೆ. ಇದು ಹೀಗೆಯೇ ಮುಂದುವರೆಯಲೆಂದು ಆಶಿಸಿದರು.
ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಒದಗಿಸಿ. ಸ್ವಚ್ಚತೆಗೆ ವಿಶೇಷ ಗಮನಹರಿಸಿ. ತ್ಯಾಜ್ಯ ವಿಲೇವಾರಿ ಸಕಾಲದಲ್ಲಿ ಪೂರ್ಣವಾಗಬೇಕು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಹಬ್ಬದ ವೇಳೆ ಒದಗಿಸಬೇಕಿರುವ ಸೌಲಭ್ಯಗಳು ಹಾಗೂ ಸೇವೆಗೆ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ ಮಾತನಾಡಿ ‘ ಜಿಲ್ಲೆಯಲ್ಲಿ ಎಲ್ಲರು ಸಹೋದರರಂತೆ ಇದ್ದಾರೆ. ಶಾಂತಿಯುತವಾಗಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದೇ ಮಾದರಿಯಲ್ಲಿ ಈ ಬಾರಿಯೂ ಬಕ್ರೀದ್ ಹಬ್ಬ ಸಾಂಗವಾಗಿ ನಡೆಯಲಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಬಂದೋ ಬಸ್ತ್ ಮುನ್ನೆಚ್ಚರಿಕೆ ವಹಿಸಲಾಗಿದೆ ‘ ಎಂದರು.
ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ ‘ ಜಿಲ್ಲೆಯಲ್ಲಿ ಅಣ್ಣ ತಮ್ಮಂದಿರಂತೆ ಪರಸ್ಪರ ಎಲ್ಲರು ಇದ್ದೇವೆ. ಬಕ್ರೀದ್ ಹಬ್ಬವನ್ನು ಸಾಮರಸ್ಯದಿಂದ ಆಚರಿಸಲಾಗುತ್ತಿದೆ. ಎಲ್ಲರು ಸಹಕರಿಸುತ್ತಿದ್ದಾರೆ. ಹಬ್ಬದ ವೇಳೆ ಸ್ವಚ್ಚತೆ, ಕುಡಿಯುವ ನೀರು ಮತ್ತಿತ್ತರ ಸೌಲಭ್ಯಗಳು ಸಮರ್ಪಕವಾಗಿ ಒದಗಿಸಬೇಕು ‘ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಕೋಮಿನ ಮುಖಂಡರು ಮಾತನಾಡಿ ಹಬ್ಬದ ಸಂದರ್ಭದಲ್ಲಿ ಈ ಹಿಂದೆಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸೌಹಾರ್ದತೆಯಿಂದ ಹಬ್ಬ ಆಚರಣೆಗೆ ಪರಸ್ಪರ ಸಹಕಾರ ನೀಡಲಾಗುತ್ತಿದೆ. ಈ ಉತ್ತಮ ಬಾಂಧವ್ಯ ನಡೆ ಮುಂದುವರೆಯಲಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು ಮರೆಯುವುದೇ ಪ್ರಜಾಪ್ರಭುತ್ವಕ್ಕೆ ಅಪಾಯ : ಅಹಿಂದ ಜವರಪ್ಪ
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್‍ಪಿ ಲಕ್ಷ್ಮಯ್ಯ, ಧಮೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸುಧಾ, ಪಶುಪಾಲನಾ ಇಲಾಖೆಯ ಉಪನಿರ್ದೆಶಕ ಹನುಮೇಗೌಡ, ಮುಖಂಡರಾದ ಮಹಮ್ಮದ್ ಜಿಯಾವುಲ್ಲಾ, ನಗರಸಭಾ ಸದ್ಯರಾದ ಅಬ್ರಾರ್ ಅಹಮದ್, ಸುರೇಶ್ ವಾಜಪೇಯಿ, ಶಿವಣ್ಣ, ಮಹಮ್ಮದ್ ಜಸೀಂ ಪಾಷ, ತಹಶೀಲ್ದಾರ್ ಗಿರಿಜಾ, ಬಸವರಾಜು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಮುಖ್ಯಾಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇನ್ನಿತರ ಮುಖಂಡರು ಸಭೆಯಲ್ಲಿ ಇದ್ದರು.