ಕ್ರೀಡಾಂಗಣದ ಒಳಗೆ ಟ್ರೋಫಿ ಗೆದ್ದ ಸಂಭ್ರಮ ಜರುಗಿದ್ದ ಅದೇ ಕ್ಷಣಗಳಲ್ಲಿ ಹೊರಗೆ ಸಾವಿನ ತಾಂಡವ ನಡೆದಿತ್ತು! ದುರಂತವನ್ನು ಕ್ಯಾಮೆರ ಮುಂದೆ ವರದಿ ಮಾಡುತ್ತಿದ್ದ ವರದಿಗಾರನ ಹಿಂದೆ ನಿಂತು ಆರ್‌ಸಿಬಿ…ಆರ್‌ಸಿಬಿ ಎಂದು ಪಡ್ಡೆಗಳು ಅರಚಿದ್ದಕ್ಕೆ ಅಭಿಮಾನ ಎನ್ನಬೇಕೇ ಅಥವಾ ಬುದ್ಧಿಭ್ರಷ್ಟ ಹೃದಯಹೀನತೆ ಎಂದು ಹೆಸರಿಡಬೇಕೇ?
ಐಪಿಎಲ್ ಕ್ರಿಕೆಟ್ ಎಂಬ ಸಮೂಹ ಸನ್ನಿಯು ಬುಧವಾರ ಬೆಂಗಳೂರಿನಲ್ಲಿ ಹುಚ್ಚುಹೊಳೆಯಾಗಿ ಹರಿಯಿತು. ಸಾವು ನೋವುಗಳನ್ನು ತಂದಿತು. ಈ ಉನ್ಮಾದವನ್ನು ಬಡಿದೆಬ್ಬಿಸುವವರು ವರ್ಷ ವರ್ಷಗಳಿಂದ ತಮ್ಮ ತಿಜೋರಿಗಳನ್ನು ನಿರಂತರ ತುಂಬಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಅಮಾಯಕ ಅಭಿಮಾನಿಗಳು ಜೀವ ತೆತ್ತಿದ್ದಾರೆ. ಎಳೆಯರ ಸಾವುಗಳು ಅತೀವ ಹೃದಯ ವಿದ್ರಾವಕ. ಹಲವು ಗಾಯಾಳುಗಳು ಸಾವು ಬದುಕಿನ ತೂಗುಯ್ಯಾಲೆಯಲ್ಲಿದ್ದಾರೆ.
ಕಾಲ್ತುಳಿತದ, ನೂಕುನುಗ್ಗಲಿನ ಸಾವು-ನೋವುಗಳು ಕಣ್ಣಿಗೆ ಕಾಣುತ್ತವೆ. ಸಂಭ್ರಮ-ಸಾವುಗಳೆರಡೂ ಟೀವಿ ಚಾನೆಲ್ ಗಳ ಪರದೆ ತುಂಬುತ್ತವೆ. ಆದರೆ ತೆರೆಮರೆಯಲ್ಲಿ ಜರುಗುವ ಈ ಪಂದ್ಯಗಳ ಜೂಜು ಎಷ್ಟು ಮನೆಮಠಗಳನ್ನು ದೋಚಿದೆಯೆಂಬುದು ಸಲೀಸಾಗಿ ಬೆಳಕಿಗೆ ಬರುವುದಿಲ್ಲ.
ಐಪಿಎಲ್ ಎಂಬ ಉದ್ಯಮದ ವಹಿವಾಟು ಎರಡು ವರ್ಷಗಳ ಹಿಂದೆಯೇ 60 ಸಾವಿರ ಕೋಟಿ ರುಪಾಯಿಗಳನ್ನು ಸಮೀಪಿಸಿತ್ತು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿಗಳ ಜಾರಿಗೆ ವಾರ್ಷಿಕ ವೆಚ್ಚವನ್ನು ಮೀರಿದ ಆದಾಯವಿದು. ಅಂದ ಹಾಗೆ ಪಂಚ ಗ್ಯಾರಂಟಿಗಳ ವಾರ್ಷಿಕ ವೆಚ್ಚ 52 ಸಾವಿರ ಕೋಟಿ ರುಪಾಯಿಗಳು.
ಐಪಿಎಲ್ ನ ಉಸ್ತುವಾರಿ ನೋಡಿಕೊಳ್ಳುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ದತ್ತಿ ದಾನ ಸಂಸ್ಥೆಯೆಂದು ನೋಂದಣಿಯಾಗಿರುವ ಸಂಸ್ಥೆ. ಒಂದೇ ಒಂದು ಕಾಸಿನ ಆದಾಯ ತೆರಿಗೆಯನ್ನೂ ನೀಡುವುದಿಲ್ಲ. ಈ ಆದಾಯತೆರಿಗೆ ವಿನಾಯಿತಿಯು ಐಪಿಎಲ್ ಗೂ ಅನ್ವಯಿಸುತ್ತದೆ. ಆದರೆ ಆಟಗಾರರ ಆದಾಯ ಮೂಲದಲ್ಲೇ ತೆರಿಗೆ ಮುರಿದುಕೊಳ್ಳುವ ಮತ್ತು ಜಿ.ಎಸ್.ಟಿ. ತೆರಿಗೆಗಳಿಂದ ತಪ್ಪಿಸಿಕೊಳ್ಳಲಾಗಿಲ್ಲ.
ಬೆಂಗಳೂರು ತಂಡದಲ್ಲಿ ಬೆಂಗಳೂರು ಎಂದಿಗೂ ಇರಲಿಲ್ಲ. ಹೆಸರಿನಲ್ಲಷ್ಟೇ ಬೆಂಗಳೂರನ್ನು ಹೆಣೆಯಲಾಗಿತ್ತು. ಬೆಂಗಳೂರಿಗರು ಮತ್ತು ಕರ್ನಾಟಕದವರ ಕಣ್ಣಿಗೆ ಮಣ್ಣೆರಚಿ ಹಣ ದೋಚುವ ಕಪಟ ಕಣ್ಕಟ್ಟು. ಈ ಸಮೂಹ ಸನ್ನಿಯ ಸೃಷ್ಟಿಯಲ್ಲಿ ಸಮೂಹ ಮಾಧ್ಯಮಗಳದೂ ಸಕ್ರಿಯ ಪಾತ್ರ. ಈ ಕುರಿತು ಯಾವ ಸಂಶಯವೂ ಇಲ್ಲ. ಐಪಿಎಲ್ ನ ಪ್ರವರ್ತಕರು ವರ್ಷಾನುಗಟ್ಟಲೆ ಪ್ರಚಾರಾಂದೋಲನ ನಡೆಸಿ ಸೃಷ್ಟಿಸಿರುವ ಈ ಉನ್ಮಾದ ಸಮೂಹ ಮಾಧ್ಯಮಗಳ ಸಹಕಾರವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ. ಕ್ರಿಕೆಟ್ ಆಟಗಾರರ ಹರಾಜಿನಿಂದ ಮೊದಲುಗೊಂಡು ತಂಡಗಳ ಬಲಾಬಲಗಳು, ಪೈಪೋಟಿಗಳು, ಆಟಗಾರರ ವರ್ಚಸ್ಸುಗಳ ಕುರಿತು ಪುಟಗಟ್ಟಲೆ ಬರೆಯುತ್ತವೆ, ತಾಸುಗಟ್ಟಲೆ ಕಿರುಪರದೆಯ ಕಾರ್ಯಕ್ರಮಗಳನ್ನು ಪೋಣಿಸುತ್ತವೆ. ಅಪ್ಪಟ ಉದ್ಯಮವಾಗಿರುವ ಈ ಕ್ರಿಕೆಟ್ ಉದ್ಯಮದ ಒಳವಿಕಾರಗಳನ್ನು ಬಯಲು ಮಾಡದೆ ಅದರ ಮೇಲೆ ಮುಸುಕು ಹೊದಿಸುವ ಸಮೂಹ ಮಾಧ್ಯಮಗಳು ಐಪಿಎಲ್ ಗಳ ಭಾರೀ ಜಾಹೀರಾತುಗಳ ಲಾಭಾರ್ಥಿಗಳು.

ಮಂಗಳವಾರ ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಈ ಉನ್ಮಾದ ರೂಪು ತಳೆಯಲಾರಂಭಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಸೂಪರ್ ಕಿಂಗ್ಸ್ ತಂಡಗಳ ನಡುವೆ ಫೈನಲ್ ಪಂದ್ಯ ಸಂಜೆ ಗುಜರಾತಿನ ಅಹ್ಮದಾಬಾದಿನಲ್ಲಿ ಶುರುವಾಗಿತ್ತು. ಕುಬೇರ ಬೆಂಗಳೂರು ಭಾರೀ ಸ್ಕ್ರೀನ್ ಗಳನ್ನು ನಿರ್ಮಿಸಿಕೊಂಡು ಲೈವ್ ಪ್ರಸಾರಕ್ಕೆ ಕಣ್ಣು ಕೀಲಿಸಿತ್ತು. ಮೋಜು ಮಜಾದಲ್ಲಿ ಮುಳುಗಿತ್ತು. ಮಧ್ಯಮ ಮತ್ತು ಕೆಳಮಧ್ಯಮವರ್ಗಗಳ ಜನವಸತಿಗಳ ರಸ್ತೆಗಳು ಭಣಗುಟ್ಟಿದ್ದವು. ರಾತ್ರಿ ಹನ್ನೊಂದರ ಸುಮಾರಿಗೆ ಆರ್.ಸಿ.ಬಿ. ತಂಡದ ಗೆಲುವಿನ ಮೊದಲ ಸುಳಿವು ದೊರೆಯುತ್ತಿದ್ದಂತೆ ಕಿವಿ ಗಡಚಿಕ್ಕಿ ಸಿಡಿದಿದ್ದವು ಪಟಾಕಿಗಳು. ಗೆಲುವಿನ ಘೋಷಣೆಯೊಂದಿಗೆ ಈ ಸದ್ದು ಶಿಖರ ಏರಿತ್ತು.
ಮೋಜು-ಜೂಜಿನ ಉನ್ಮಾದವನ್ನು ಇಷ್ಟಕ್ಕೇ ನಿಲ್ಲಿಸುವ ಇರಾದೆ ಐಪಿಎಲ್ ವ್ಯಾಪಾರಿಗಳಿಗೆ ಇರಲಿಲ್ಲ. ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಏರ್ಪಾಡಾಯಿತು. ಈ ಸಮೂಹ ಸನ್ನಿಗೆ ರಾಜ್ಯ ಸರ್ಕಾರವೂ ಸೇರಿಕೊಂಡಿತು. ವಿಧಾನಸೌಧದ ಮೆಟ್ಟಿಲುಗಳ ಮೇಲೆಯೇ ಆರ್.ಸಿ.ಬಿ.ತಂಡದ ಸನ್ಮಾನ ಏರ್ಪಾಡಾಗಿ ನಡೆದು ಹೋಯಿತು. ಸರ್ಕಾರಕ್ಕೆ ಸರ್ಕಾರವೇ ಜಮೆಯಾಯಿತು. ಅಹ್ಮದಾಬಾದಿನ ಫೈನಲ್ ಪಂದ್ಯ ಮುಗಿದು 24 ತಾಸುಗಳೂ ಆಗಿರಲಿಲ್ಲ. ಇಷ್ಟು ತರಾತುರಿಯಲ್ಲಿ ವಿಜಯೋತ್ಸವ ಯಾಕಾಗಿ ನಡೆಸಬೇಕಿತ್ತು. ಸರಿಯಾದ ಭದ್ರತಾ ಏರ್ಪಾಡುಗಳನ್ನು ಇತರೆ ಸಿದ್ಧತೆಗಳನ್ನು ಮಾಡಿಕೊಂಡು ಆನಂತರ ಗೆಲುವನ್ನು ಆಚರಿಸಬಹುದಿತ್ತಲ್ಲ? ಗೆಲುವಿನ ಪಾಲು ಪಡೆದು ಅದರಲ್ಲಿ ತಾನೂ ಮುಳುಗೇಳುವ ಹಪಾಹಪಿಯನ್ನು ಅದುಮಿಟ್ಟುಕೊಳ್ಳದಾಯಿತು ರಾಜ್ಯ ಸರ್ಕಾರದ ಮಂತ್ರಿಮಂಡಲ. ಹನ್ನೊಂದು ಜೀವಗಳ ಬಲಿ ಪಡೆದ ಈ ಅದಕ್ಷತೆ ಹೊಣೆಗೇಡಿತನ ಕರ್ನಾಟಕದ ಆಡಳಿತಯಂತ್ರದ ತಲೆಗಳು ಉರುಳಲೇಬೇಕು. ಜವಾಬ್ದಾರಿಯನ್ನು ಹೊರಲೇಬೇಕು.
ವಿಧಾನಸೌಧದ ಸನಿಹದಲ್ಲೇ ಇರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಂದು ಸಂಭ್ರಮ ಏರ್ಪಾಡಾಗಿತ್ತು. ಮಧ್ಯಾಹ್ನದಿಂದಲೇ ಅಭಿಮಾನಿಗಳು ತಂಡತಂಡವಾಗಿ ಕ್ರೀಡಾಂಗಣದತ್ತ ಧಾವಿಸುತ್ತಿದ್ದರು. ಆರ್.ಸಿ.ಬಿ…ಆರ್.ಸಿ.ಬಿ…ಎಂಬ ಉನ್ಮಾದಭರಿತ ಘೋಷಣೆಗಳು ಕ್ರೀಡಾಭಿಮಾನಕ್ಕಷ್ಟೇ ಸೀಮಿತ ಆಗಿರಲಿಲ್ಲ. ಅಂಧಾಭಿಮಾನವನ್ನು ಧ್ವನಿಸಿದ್ದವು.
ಕ್ರೀಡಾಂಗಣದ ಒಳಗೆ ಟ್ರೋಫಿ ಗೆದ್ದ ಸಂಭ್ರಮ ಜರುಗಿದ್ದ ಅದೇ ಕ್ಷಣಗಳಲ್ಲಿ ಹೊರಗೆ ಸಾವಿನ ತಾಂಡವ ನಡೆದಿತ್ತು! ದುರಂತವನ್ನು ಕ್ಯಾಮೆರ ಮುಂದೆ ವರದಿ ಮಾಡುತ್ತಿದ್ದ ವರದಿಗಾರನ ಹಿಂದೆ ನಿಂತು ಆರ್ ಸೀ ಬೀ…ಆರ್ ಸೀ ಬೀ ಎಂದು ಪಡ್ಡೆಗಳು ಅರಚಿದ್ದಕ್ಕೆ ಅಭಿಮಾನ ಎನ್ನಬೇಕೇ ಅಥವಾ ಬುದ್ಧಿಭ್ರಷ್ಟ ಹೃದಯಹೀನತೆ ಎಂದು ಹೆಸರಿಡಬೇಕೇ?
ಜನಸಾಮಾನ್ಯರ ಬರಿಗಣ್ಣುಗಳಿಗೇ ಕಾಣುತ್ತಿದ್ದ ಈ ಹುಚ್ಚು ಉನ್ಮಾದ ಪೊಲೀಸ್ ಬೇಹುಗಾರಿಕೆಯ ಕಣ್ಣುಗಳಿಗೆ ಕಾಣದೆ ಹೋದದ್ದು ಬಹುದೊಡ್ಡ ವೈಫಲ್ಯ. ಇಂತಹ ಜನಜಂಗುಳಿಯನ್ನು ನಿರೀಕ್ಷಿಸಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದೋಬಸ್ತ್ ವೈಫಲ್ಯವನ್ನು ಸಮರ್ಥಿಸಿಕೊಳ್ಳಲು ಹೆಣಗಿರುವುದು ನಿಚ್ಚಳ. ಇದು ಹೆಚ್ಚೆಂದರೆ ಹೊಣೆಗೇಡಿತನವಾದೀತೇ ವಿನಾ ಯಾವುದೇ ಕಾರಣಕ್ಕೂ ಸಮರ್ಥನೆ ಎನಿಸಿಕೊಳ್ಳುವುದಿಲ್ಲ.

ಹಲವಾರು ವರ್ಷಗಳಿಂದ ಪಂದ್ಯಗಳ ಸುತ್ತ ಈ ಸಮೂಹ ಸನ್ನಿಯನ್ನು ಬಡಿದೆಬ್ಬಿಸಲಾಗಿದೆ. ಹುಸಿ ರೋಮಾಂಚನವನ್ನು ಕಟ್ಟಿ ನಿಲ್ಲಿಸಲಾಗಿದೆ. ಹಣ ಹಿಂಡುವುದೇ ಈ ಕ್ರಿಕೆಟ್ ಕೈಗಾರಿಕೆಯ ಹಿಂದಿನ ಅಸಲಿ ಹಿಕಮತ್ತು.
ದೇಶವನ್ನು ಕಾಡುತ್ತಿರುವ, ಸಮಾಜವನ್ನು ಸುಡುತ್ತಿರುವ ಕಹಿ ವಾಸ್ತವಗಳಿಗೆ ಅರಿವಳಿಕೆಯ ಈ ಗುಳಿಗೆ ತಯಾರಿಸುವ ಈ ಬೃಹತ್ ಉದ್ಯಮಕ್ಕೆ ಸರ್ಕಾರಗಳೂ ನೀರೆರೆಯುತ್ತ ಬಂದಿವೆ.
ಪಹಲ್ಗಾಮಿನಲ್ಲಿ 26 ಮಂದಿಯನ್ನು ಉಗ್ರರು ಗುಂಡಿಕ್ಕಿ ಕೊಂದಾಗಲೂ ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಬಹುತೇಕ ಭಂಗ ಬರಲಿಲ್ಲ. ಏಪ್ರಿಲ್ 22ರಂದು ಈ ನರಮೇಧ ನಡೆದಿತ್ತು. ಮೇ ಒಂಬತ್ತರವರೆಗೆ ಬಿಸಿಸಿಐ ಅಥವಾ ಐಪಿಎಲ್ ಪಂದ್ಯಗಳನ್ನು ನಿಲ್ಲಿಸುವ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಮೇ ಒಂಬತ್ತರಿಂದ ಕೇವಲ ಒಂದು ವಾರ ಕಾಲ ಪಂದ್ಯಗಳನ್ನು ಸ್ಥಗಿತಗೊಳಿಸಲಾಯಿತು.
ಐಪಿಎಲ್ ಅಧ್ಯಕ್ಷ ಅರುಣ್ ಧುಮಲ್ ಅವರು ಬಿಜೆಪಿ ನಾಯಕ ಪ್ರೇಮಕುಮಾರ್ ಧುಮಲ್ ಅವರ ಮಗ. ಕೇಂದ್ರ ಸರ್ಕಾರದ ಕ್ಯಾಬಿನೆಟ್ ಮಂತ್ರಿ ಅನುರಾಗ್ ಸಿಂಗ್ ಠಾಕೂರ್ ಅವರ ಒಡಹುಟ್ಟಿದ ತಮ್ಮ ಅರುಣ್. ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರ ಮಗ ಜೈ ಶಾ ಅವರು ಬಿಸಿಸಿಐ (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಮುಖ್ಯಸ್ಥರಾಗಿದ್ದರು. ತರುವಾಯ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿದ್ದಾರೆ. ಈ ಭಾರೀ ಕುಳಗಳು ಕೇಂದ್ರ ಸರ್ಕಾರದ ಬೆಂಬಲ ಉಳ್ಳ ಪ್ರಬಲ ಪ್ರಭಾವಿಗಳು. ಹೀಗಾಗಿಯೇ ಪಹಲ್ಗಾಮ್ ದುರಂತವನ್ನೂ ಲೆಕ್ಕಿಸದೆ ಉರುಳಿದ್ದವು ಐಪಿಎಲ್ ಎಂಬ ಮಹಾರಥ ಚಕ್ರಗಳು.
ಕಳೆದ ಜನವರಿಯಲ್ಲಿ ಜರುಗಿದ ಮಹಾಕುಂಭ ಮೇಳದ ನೂಕುನುಗ್ಗಲಿನಲ್ಲಿ ಕನಿಷ್ಟ 30 ಮಂದಿ, ದೆಹಲಿ ರೇಲ್ವೇ ಸ್ಟೇಷನ್ ನಲ್ಲಿ ಕಳೆದ ಫೆಬ್ರವರಿಯಲ್ಲಿ ಜರುಗಿದ ಕಾಲ್ತುಳಿತದಲ್ಲಿ 18 ಮಂದಿ ಅಸುನೀಗಿದ್ದರು. ಮಣಿಪುರದ ಹಿಂಸಾಚಾರದ ಸಾವುಗಳು 300 ರ ಸಂಖ್ಯೆಯನ್ನು ದಾಟಿವೆ. 2022 ರ ಅಂತ್ಯದಲ್ಲಿ ಗುಜರಾತಿನ ಮೋರ್ಬಿ ಸೇತುವೆ ಕುಸಿತ ದುರಂತದಲ್ಲಿ 140 ಮಂದಿ ಪ್ರಾಣ ಕಳೆದುಕೊಂಡರು. ಆದರೆ ಬಿಜೆಪಿ ಆಳ್ವಿಕೆಯ ಈ ಅವಘಢಗಳನ್ನು ಮುಂದೆ ಮಾಡಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳುವುದು ಸರ್ವಥಾ ಸಲ್ಲದು.

ಮೇಲ್ನೋಟಕ್ಕೆ ನಿರಪಾಯಕಾರಿಯಾಗಿ ತೋರುವ ಜನಪ್ರಿಯತೆಯನ್ನು ನಗದು ಮಾಡಿಕೊಳ್ಳಲು ರಾಜಕಾರಣಿಗಳು ಹಾತೊರೆವುದು ಸಾಮಾನ್ಯ. ಆದರೆ ಈ ಅಗ್ಗದ ಗಿಮಿಕ್‌ನಿಂದ ಸಿದ್ದರಾಮಯ್ಯ ಸರ್ಕಾರ ದೂರ ಉಳಿಯಬೇಕಿತ್ತು. ಬದಲಾಗಿ ಖುದ್ದಾಗಿ ಮುಖ್ಯಮಂತ್ರಿ ಮತ್ತು ಅವರ ಸಹೋದ್ಯೋಗಿಗಳು ಸ್ಟೇಡಿಯಂಗೆ ತೆರಳಿ ಆರ್.ಸಿ.ಬಿ. ಪಂದ್ಯಗಳನ್ನು ವೀಕ್ಷಿಸಿದರು.
ಪ್ರಜೆಗಳಿಗೆ ರೊಟ್ಟಿ ನೀಡಲಾಗದಿದ್ದರೆ ಸರ್ಕಸ್ ಪ್ರದರ್ಶನಗಳನ್ನು ಏರ್ಪಡಿಸಿ ಎಂಬುದು ರೋಮ್ ಚಕ್ರವರ್ತಿಗಳ ಉಪಾಯವಾಗಿತ್ತಂತೆ. ಭಾರತದಲ್ಲಿ ಏರ್ಪಡಿಸಲಾಗುತ್ತಿರುವ ಇಂತಹುದೇ ಒಂದು ಸರ್ಕಸ್ಸು ಕ್ರಿಕೆಟ್. ಉದ್ಯೋಗ, ಶಿಕ್ಷಣ, ಪೌಷ್ಟಿಕ ಆಹಾರ, ಆರೋಗ್ಯ ಸೌಲಭ್ಯಗಳನ್ನು ನೀಡಲಾಗದವರು ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಬಳಸುತ್ತಿರುವ ಕೆಟ್ಟ ತಂತ್ರ. ಅದು ಜನಸಮುದಾಯಕ್ಕೆ ಉಣಿಸುತ್ತಿರುವ ಅಫೀಮುಗಳಲ್ಲೊಂದು ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಬಣ್ಣಿಸಿದ್ದಾರೆ. ಕಾಟ್ಜು ಹೇಳಿರುವುದು ಕಟು ಸತ್ಯ. ಅಭಿಮಾನಿ ದೇವರುಗಳು ಮಾಡಿರುವ ಅತಿರೇಕಗಳನ್ನು ಕರ್ನಾಟಕದ ಇತಿಹಾಸ ಅಲ್ಲಲ್ಲಿ ದಾಖಲಿಸಿದೆ. ಅವುಗಳಿಂದ ಪಾಠ ಕಲಿಯಬೇಕು.
ಆರೋಗ್ಯಕರ ಮನಸಿನ ಅಭಿಮಾನ ಇರಲಿ.ಆದರೆ ಮಿದುಳನ್ನು ಒತ್ತೆಯಿಟ್ಟ ಅಂಧ ಭಕ್ತಿ ಬೇಡವೇ ಬೇಡ. ಅದು ಕ್ರೀಡೆಯಾಗಲಿ, ರಾಜಕಾರಣವೇ ಇರಲಿ ಅಥವಾ ಧರ್ಮವೇ ಆಗಿರಲಿ.

ಡಿ ಉಮಾಪತಿ
ಹಿರಿಯ ಪತ್ರಕರ್ತರು