ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಶಾಂತಿ ಕದಡಲು ಮತ್ತು ಸೌಹಾರ್ದತೆಗೆ ಭಂಗ ತರಲು ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಕುರಿತು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಐದು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಮಂದಿ ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬಂಧಿತರನ್ನು ಹೆಜಮಾಡಿಯ ಅಸ್ಲಾಂ (23), ಕಾಟಿಪಳ್ಳದ ಚೇತನ್ (20), ಹಳೆಯಂಗಡಿ ನಿತಿನ್ ಅಡಪ (23), ಫರಂಗಿಪೇಟೆಯ ರಿಯಾಝ್ ಇಬ್ರಾಹೀಂ (30), ಕಸಬಾ ಬೆಂಗ್ರೆಯ ಜಮಾಲ್ ಝಕೀರ್(21) ಮತ್ತು ಕೊಳವೈಲ್‌ನ ಗುರುಪ್ರಸಾದ್ ಎಂದು ಗುರುತಿಸಲಾಗಿದೆ.

ಬಂಧಿತನಾಗಿರುವ ಪೈಕಿ ಮೊಹಮ್ಮದ್ ಅಸ್ಲಾಂ (23), ಹೆಜಮಾಡಿ, ಉಡುಪಿ: ಸೌದಿ ಅರೇಬಿಯಾದಿಂದ ‘team_jokerzzz._’ ಎಂಬ ಇನ್‌ಸ್ಟಾಗ್ರಾಂ ಪುಟದ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪದ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ (ಅಪರಾಧ ಕ್ರಮಾಂಕ: 88/2025, ಕಲಂ 192, 353 (2) ಭಾರತೀಯ ನ್ಯಾಯ ಸಂಹಿತೆ) ಪ್ರಕರಣ ದಾಖಲಾಗಿತ್ತು. ಆರೋಪಿ ಮೊಹಮ್ಮದ್ ಅಸ್ಲಾಂ ವಿರುದ್ಧ ಎಲ್.ಓ.ಸಿ (Look Out Circular) ಹೊರಡಿಸಿ ದಸ್ತಗಿರಿ ಮಾಡಲಾಗಿದೆ.
ಚೇತನ್ (20), ಕಾಟಿಪಳ್ಳ, ಸುರತ್ಕಲ್ ಮತ್ತು ನಿತಿನ್ ಅಡಪ (23), ಹಳೆಯಂಗಡಿ: ಮುಸ್ಲಿಂ ಹೆಸರಿನ ಸಿಮ್ ಕಾರ್ಡ್ ಬಳಸಿ ‘team_karna_surathkal’ ಎಂಬ ಇನ್‌ಸ್ಟಾಗ್ರಾಂ ಪುಟ ತೆರೆದು, ಅದರ ಮೂಲಕ ‘ಚೆನ್ನಪ್ಪ @ ಮುತ್ತು ಸುರತ್ಕಲ್’ ಎಂಬಾತ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಟ್ಟಿದ್ದ. ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ (ಅಪರಾಧ ಕ್ರಮಾಂಕ: 58/2025, ಕಲಂ 196(1), 353(2) ಭಾರತೀಯ ನ್ಯಾಯ ಸಂಹಿತೆ) ಪ್ರಕರಣ ದಾಖಲಾಗಿತ್ತು. ಚೇತನ್ ಮತ್ತು ನಿತಿನ್ ಅಡಪ ಅವರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
.ರಿಯಾಝ್ ಇಬ್ರಾಹಿಂ (30), ಫರಂಗಿಪೇಟೆ, ಮಂಗಳೂರು: ಸೌದಿ ಅರೇಬಿಯಾದಿಂದ ‘Beary_royal_nawab’ ಎಂಬ ಇನ್‌ಸ್ಟಾಗ್ರಾಂ ಪುಟದ ಮೂಲಕ ಪ್ರಚೋದನಾಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ.
ಹೀಗಾಗಿ ಆತನ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ (ಅಪರಾಧ ಕ್ರಮಾಂಕ: 44/2025, ಕಲಂ 353(2) ಭಾರತೀಯ ನ್ಯಾಯ ಸಂಹಿತೆ) ಹಾಗೂ ಮುಲ್ಕಿ ಪೊಲೀಸ್ ಠಾಣೆಯಲ್ಲಿ (ಅಪರಾಧ ಕ್ರಮಾಂಕ: 42/2025, ಕಲಂ 353 (1)(c), 353(2) ಭಾರತೀಯ ನ್ಯಾಯ ಸಂಹಿತೆ) ಪ್ರಕರಣಗಳು ದಾಖಲಾಗಿವೆ. ಆರೋಪಿ ರಿಯಾಝ್ ಇಬ್ರಾಹಿಂ ವಿರುದ್ಧ ಎಲ್.ಓ.ಸಿ ಹೊರಡಿಸಿ ದಸ್ತಗಿರಿ ಮಾಡಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಜಮಾಲ್ ಝಾಕೀರ್ (21), ಕಸಬಾ ಬೆಂಗ್ರೆ, ಮಂಗಳೂರು ನಗರ: ‘Troll_bengare_ro_makka’ ಎಂಬ ಇನ್‌ಸ್ಟಾಗ್ರಾಂ ಪುಟದ ಮೂಲಕ ಪ್ರಚೋದನಾಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪದ ಮೇಲೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ (ಅಪರಾಧ ಕ್ರಮಾಂಕ: 44/2025, ಕಲಂ 353 (1)(c), 353(2) ಭಾರತೀಯ ನ್ಯಾಯ ಸಂಹಿತೆ) ಪ್ರಕರಣ ದಾಖಲಾಗಿತ್ತು. ಜಮಾಲ್ ಝಾಕೀರ್‌ನನ್ನು ದಸ್ತಗಿರಿ ಮಾಡಲಾಗಿದೆ.
ಗುರುಪ್ರಸಾದ್, ಕೊಳವೈಲ್, ಹಳೆಯಂಗಡಿ, ಮಂಗಳೂರು ನಗರ: ‘Guru dprasad Haleyangadi’ ಎಂಬ ಫೇಸ್‌ಬುಕ್ ಖಾತೆಯ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪದ ಮೇಲೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ (ಅಪರಾಧ ಕ್ರಮಾಂಕ: 53/2025, ಕಲಂ 196(1)(A), 353(2), 79, 56 ಭಾರತೀಯ ನ್ಯಾಯ ಸಂಹಿತೆ) ಪ್ರಕರಣ ದಾಖಲಾಗಿತ್ತು. ಗುರುಪ್ರಸಾದ್‌ನನ್ನು ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಎಲ್ಲಾ ಪ್ರಕರಣಗಳ ತನಿಖೆಯನ್ನು ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ವಿಶೇಷ ತಂಡಗಳು ಮುಂದುವರೆಸಿವೆ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
