ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ, ಹೊಸಂಗಡಿ ಭಾಗದಲ್ಲಿ ಕಾಡಾನೆಯೊಂದು ಕಳೆದ ಎರಡು ದಿನಗಳಿಂದ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರವೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಸಿದ್ದಾಪುರ ಹೊಸಂಗಡಿ ಮತ್ತು ಕಮಲಶಿಲೆ ಗ್ರಾಮಗಳ ವ್ಯಾಪ್ತಿಯ ಎಲ್ಲ ಅಂಗನವಾಡಿ ಕೇಂದ್ರಗಳು, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಾರ್ವಜನಿಕರು ಭಯಭೀತರಾಗದೆ ಜಾಗರೂಕತೆಯಿಂದ ಓಡಾಡಬೇಕು ಎಂದು ಕುಂದಾಪುರ ತಹಶೀಲ್ದಾರ್ ತಿಳಿಸಿದ್ದಾರೆ.ಇಂದು ನಡೆಯಲಿರುವ ಸಂತೆಯನ್ನೂ ಮುಂಜಾಗ್ರತಾ ಕ್ರಮವಾಗಿ ರದ್ದು ಮಾಡಲಾಗಿದೆ. ಬುಧವಾರ ಒಂಟಿಸಲಗದ ಚಲನವಲನದ ಬಗ್ಗೆ ವನ್ಯಜೀವಿ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣಾವಲು ಇರಿಸಿದ್ದರು. ಆದರೆ ಸಂಜೆವರೆಗೂ ಚಲನವಲನ ಕಂಡು ಬಂದಿರಲಿಲ್ಲ. ಇಂದು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.