ನಿನ್ನೆ (ಜೂ.4) ವಿಧಾನ ಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಹಿನ್ನೆಲೆ ಲಕ್ಷಾಂತರ ಮಂದಿ ಕ್ರೀಡಾಂಗಣ, ವಿಧಾನ ಸೌಧದ ಬಳಿ ಜಮಾಯಿಸಿದ್ದರು. ಕಾರ್ಯಕ್ರಮಕ್ಕೆ ತೆರಳಲು ಹಾಗೂ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವಾಪಸ್ ತೆರಳಲು ಬಹುತೇಕರು ಮೆಟ್ರೋವನ್ನೇ ಬಳಸಿದ್ದು, ಒಟ್ಟು 9,66,732 ಜನ ಪ್ರಯಾಣ ಮಾಡಿದ್ದಾರೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಕಬ್ಬನ್ ಪಾರ್ಕ್, ವಿಧಾನಸೌಧ, ಎಂಜಿ ರಸ್ತೆ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಸೇರಿದಂತೆ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ನಿಲ್ದಾಣಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ. ಮಾರ್ಗ 1 ರಲ್ಲಿ 4,78,334, ಮಾರ್ಗ 2 ರಲ್ಲಿ 2,84,674 ಹಾಗೂ ಕೆಂಪೇಗೌಡ (ಕೆಜಿಡಬ್ಲ್ಯೂಎ) ದಲ್ಲಿನ ಇಂಟರ್‌ಚೇಂಜ್‌ನಲ್ಲಿ 2,03,724 ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ನಟ ಕಮಲ್ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ; ಇಬ್ಬರ ವಿರುದ್ಧ ಎಫ್‌ಐಆರ್
ನಗರದ ಹಲವು ರಸ್ತೆಗಳು ಬಂದ್ ಆಗಿದ್ದರಿಂದ ಮತ್ತು ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಅನಿವಾರ್ಯವಾಗಿ ಬೃಹತ್ ಪ್ರಮಾಣದಲ್ಲಿ ಮೆಟ್ರೋ ಅವಲಂಬಿಸಿದ್ದಾರೆ. ಅಂಧಾಭಿಮಾನಿಗಳ ಅತಿರೇಕ, ಕ್ರಿಕೆಟ್ ಅಸೋಸಿಯೇಷನ್ ಹಾಗೂ ಸರ್ಕಾರದ ಭದ್ರತಾ ವೈಫಲ್ಯ, ಆಯೋಜನೆಯ ಅವ್ಯವಸ್ಥೆಗಳಿಂದ ಕಾರ್ಯಕ್ರಮದ ವೇಳೆ ಜನಸಂದಣಿ ಉಂಟಾಗಿ ಕಾಲ್ತುಳಿತ ದುರಂತ ಸಂಭವಿಸಿದೆ. 11 ಮಂದಿ ದುರ್ಮರಣ ಹೊಂದಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದ್ದವರ ಕುಟುಂಬಗಳಿಗೆ ಸರ್ಕಾರ ಪರಿಹಾರವನ್ನೇನೋ ಘೋಷಿಸಿದೆ. ಆದರೆ, ಕಾರ್ಯಕ್ರಮ ಆಯೋಜನೆಗೆ ಮುಂಚೆ ಇದೇ ಬದ್ಧತೆ, ಕೊಂಚ ತಾಳ್ಮೆ ವಹಿಸಿದ್ದರೆ ಈ ಘೋರ ಘಟಿಸುತ್ತಿರಲಿಲ್ಲ.