ಐಪಿಎಲ್ 18ನೇ ಆವೃತ್ತಿಯ ಫೈನಲ್‌ನಲ್ಲಿ ಗೆದ್ದ ಆರ್‌ಸಿಬಿ ತಂಡದ ಸಂಭ್ರಮಾಚರಣೆ ಸಮಯದಲ್ಲಿ ನಡೆದ ಕಾಲ್ತುಳಿತದಲ್ಲಿ 10 ಮಂದಿ ದಾರುಣ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯತನ ಮೆರೆದಿರುವ ಸರ್ಕಾರದ ವಿರುದ್ಧ ಸಿಪಿಐಎಂ ಮತ್ತು ಸಿಪಿಐಎಂಎಲ್ ಲಿಬರೇಷನ್ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಆರ್‌ಸಿಬಿ ಅಭಿಮಾನಿಗಳ ಸಾವಿನ ಹೊಣೆಯನ್ನು ವಿಜಯೋತ್ಸವದ ಆಯೋಜನರು ಮತ್ತು ರಾಜ್ಯ ಸರ್ಕಾರವು ಹೊತ್ತುಕೊಳ್ಳಬೇಕು ಎಂದು ಆಗ್ರಹಿಸಿ ಸಿಪಿಐಎಂ ಮತ್ತು ಸಿಪಿಐಎಂಎಲ್ ಲಿಬರೇಷನ್ ಪಕ್ಷಗಳು ಪ್ರತ್ಯೇಕವಾಗಿ ಪ್ರತಿಕಾ ಪ್ರಕಟಣೆ ನೀಡಿವೆ.
“ಐಪಿಎಲ್ ಗೆಲುವಿನ ಸಂಭ್ರಮದ ಯಾವುದೇ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಭಾಗವಹಿಸುವಿಕೆಯ ಪ್ರಮಾಣದ ಬಗ್ಗೆ ರಾಜ್ಯ ಸರ್ಕಾರ ಮತ್ತು ಸಂಘಟಕರಿಗೆ ಅರಿವು ಇರಬೇಕು. ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ರಾಜ್ಯ ಸರ್ಕಾರವೇ ವಿಧಾನಸೌಧದಲ್ಲಿ ಆಯೋಜಿಸಿದ ಕಾರ್ಯಕ್ರಮಗಳು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವಗಳು ದುರಂತ ಮತ್ತು ಸಂಪೂರ್ಣವಾಗಿ ತಪ್ಪಿಸಬಹುದಾದ ಜೀವಹಾನಿಗೆ ಕಾರಣವಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿವೆ.
“ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದ್ದರೂ, ಜನರ ಸುರಕ್ಷತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಗಣಿಸದೆ ಆರ್‌ಸಿಬಿ ಆಯೋಜಕರು ಏಕಪಕ್ಷೀಯವಾಗಿ ವಿಜಯೋತ್ಸವ ರ್‍ಯಾಲಿಯನ್ನು ನಡೆಸುವುದಾಗಿ ಘೋಷಿಸಿತ್ತು. ಆಯೋಜಕರು ಬೇಜವಾಬ್ದಾರಿ ನಿರ್ಲಕ್ಷ್ಯ ಧೋರಣೆ ಮೆರೆದಿದ್ದಾರೆ. ಈ ಅತಿ ಕಾರ್ಪೊರೇಟ್ ಸರಕು ಕ್ರಿಕೆಟ್ ಆವೃತ್ತಿಯಿಂದ ರಾಜಕೀಯ ಲಾಭ ಪಡೆಯಲು ರಾಜ್ಯ ಸರ್ಕಾರವು ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ದುರದೃಷ್ಟಕರ. ಇದರ ಹಿಂದೆ, ಸರ್ಕಾರದ ಅವಕಾಶವಾದಿತನ ಸ್ಪಷ್ಟವಾಗಿದ್ದೆ” ಎಂದು ಕಿಡಿಕಾರಿವೆ.
“ಆರ್‌ಸಿಬಿ ಅಭಿಮಾನಿಗಳ ದುರಂತ ಸಾವು ನೋವಿಗೆ ಒಳಗಾದ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಈ ದುರ್ಘಟನೆಗೆ ರಾಜ್ಯ ಸರ್ಕಾರ ಹಾಗೂ ವಿಜಯೋತ್ಸವ ಸಂಭ್ರಮಾಚರಣೆ ಆಯೋಜಕರು ನೇರ ಹೊಣೆಯಾಗಿದೆ. ಸಂತ್ರಸ್ತರಿಗೆ ಕೂಡಲೇ ಸಮರೋಪಾದಿಯಲ್ಲಿ ನೆರವು ಕಾರ್ಯಗಳನ್ನು ಕೈಗೊಳ್ಳಬೇಕು, ಮೃತಕುಟುಂಬಕ್ಕೆ ಸೂಕ್ತ ಪರಿಹಾರ,ಶಾಶ್ವತ ಅಂಗವೈಕಲ್ಯರಾದವರಿಗೆ ಸಹ ಸೂಕ್ತ ಪರಿಹಾರ ಹಾಗೂ ಗಂಭೀರ ಸ್ವರೂಪದ ಗಾಯಗಳಾದವರಿಗೆ ಚಿಕಿತ್ಸೆ ವೆಚ್ಚ ಭರಿಸಿ ಬೇಕು ಹಾಗೂ ಈ ದುರಂತ ಪ್ರಕರಣವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿವೆ.