ಹಣಕ್ಕಾಗಿ ಆಡುವ ಕ್ರಿಕೆಟ್ ಆಟಗಾರರು ಮತ್ತು ಅವರ ಜನಪ್ರಿಯತೆಯನ್ನು ಮತ ಗಳಿಕೆಗಾಗಿ ಬಳಸಿಕೊಳ್ಳಲು ಹವಣಿಸುವ ಅಧಿಕಾರಸ್ಥ ರಾಜಕಾರಣಿಗಳು ಖಂಡಿತ ಮನುಷ್ಯರಲ್ಲ. ಇವರನ್ನು ಹೊತ್ತುಕೊಂಡು ಮೆರೆಯುವ ಅಭಿಮಾನಿಗಳಿಗೆ ಬುದ್ಧಿ ಇಲ್ಲ.
ಜೂನ್ 3ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಪಂಜಾಬ್ ತಂಡದ ವಿರುದ್ಧ ಐಪಿಎಲ್ ಫೈನಲ್ ಪಂದ್ಯ ಗೆದ್ದ ನಂತರ, ಅಹಮದಾಬಾದ್ ಸ್ಟೇಡಿಯಂನಲ್ಲಿ ಕಪ್ ಹಿಡಿದು ಇಡೀ ತಂಡ ಸಂಭ್ರಮಿಸಿತ್ತು. ಅದೇ ರೀತಿ ಕ್ರಿಕೆಟ್ ಅಭಿಮಾನಿಗಳು ಆ ಸಂಭ್ರಮವನ್ನು ಬುಧವಾರ ಬೆಳಗಿನ ತನಕ ಮುಂದುವರೆಸಿದ್ದರು.
ಆರ್‌ಸಿಬಿ ಮತ್ತು 18 ವರ್ಷಗಳ ಕಾಯುವಿಕೆಯ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಈ ಸಂಭ್ರಮ ಕೊಂಚ ಹೆಚ್ಚಾಗಿಯೇ ಇತ್ತು. ಅದು ಉನ್ಮಾದದ ಮಟ್ಟ ಮುಟ್ಟಿತ್ತು. ಅಭಿಮಾನಿಗಳ ಅತಿರೇಕವನ್ನು ನಿಯಂತ್ರಿಸಲಾಗದೆ ಪೊಲೀಸರು ಹೈರಾಣಾಗಿದ್ದರು. ಆದರೆ ಅಭಿಮಾನಿಗಳ ಸಡಗರ ಮತ್ತು ಸಂಭ್ರಮದ ಬಿಸಿ ಆರುವ ಮುನ್ನ ಅದರ ‘ಲಾಭ’ ಪಡೆಯಲು ಹವಣಿಸಿದ ಸರ್ಕಾರ ಮತ್ತು ಆರ್‌ಸಿಬಿ ಆಡಳಿತ ಮಂಡಳಿ, ಇಡೀ ತಂಡವನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬರಮಾಡಿಕೊಂಡಿತ್ತು. ಗಡಿಬಿಡಿಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.
ಈ ನಿಟ್ಟಿನಲ್ಲಿ ‘ಮಂಗಳವಾರ ರಾತ್ರಿಯಿಂದಲೇ ಸರ್ಕಾರ ಮತ್ತು ಫ್ರಾಂಚೈಸಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆವು. ಜನರ ಭಾವನೆ, ಉದ್ವೇಗ ತುಸು ತಣ್ಣಗಾದ ನಂತರ, ಮುಂದಿನ ಭಾನುವಾರ ಕಾರ್ಯಕ್ರಮ ಆಯೋಜಿಸಲು ಶಿಫಾರಸು ಮಾಡಿದ್ದೆವು’ ಎಂದು ಉನ್ನತ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ, ಅಧಿಕಾರಿಗಳ ಸಲಹೆಯನ್ನು ಆಳುವ ಸರ್ಕಾರ ಪ್ರಜ್ಞಾಪೂರ್ವಕವಾಗಿ ಧಿಕ್ಕರಿಸಿತು ಎಂಬ ಆರೋಪ ಕೇಳಿಬರತೊಡಗಿದೆ.
ಇದನ್ನು ಓದಿದ್ದೀರಾ?: ಕಾಲ್ತುಳಿತ | ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್
ಹೀಗೆ ಧಿಕ್ಕರಿಸುವ ಹಿಂದೆ ರಾಜಕೀಯ ಲಾಭದ ಹಪಾಹಪಿ ಇದೆ. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಬಗ್ಗೆ ಜನಮಾನಸದಲ್ಲಿ ತಿರಸ್ಕಾರ ಭಾವವಿದೆ. ಜೊತೆಗೆ ಅಟಾಟೋಪ, ಭ್ರಷ್ಟಾಚಾರ, ಜನವಿರೋಧಿ ಕೃತ್ಯಗಳಿಂದಾಗಿ ರಾಜಕೀಯ ನಾಯಕರು ಜನಪ್ರೀತಿ ಕಳೆದುಕೊಂಡಿದ್ದಾರೆ. ಇದೇ ಸಮಯದಲ್ಲಿ ರಾಜಕಾರಣಕ್ಕಿಂತ ಸಿನೆಮಾ ನಟ-ನಟಿಯರು, ಕ್ರಿಕೆಟ್ ಆಟಗಾರರು, ಧರ್ಮ, ದೇಶಪ್ರೇಮ, ಮುಸ್ಲಿಂ ದ್ವೇಷ ಜನಪ್ರಿಯತೆ ಗಳಿಸಿವೆ. ರಾಜಕಾರಣಿಗಳು ಅವುಗಳ ಬೆನ್ನೇರಿ ಬದುಕುತ್ತಿದ್ದಾರೆ.
ಚಿತ್ರನಟ ಪುನೀತ್ ರಾಜಕುಮಾರ್ ಅಕಾಲಿಕ ಸಾವನ್ನಪ್ಪಿದಾಗ, ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಆ ಅಭಿಮಾನಿಗಳ ಅಭಿಮಾನದ ಫಸಲನ್ನು ಮತಗಳನ್ನಾಗಿ ಪರಿವರ್ತಿಸಲು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹವಣಿಸಿದ್ದರು. ಪುನೀತ್ ಹಣೆಗೆ ಮುತ್ತಿಟ್ಟು, ಪಾರ್ಥಿವ ಶರೀರಕ್ಕೆ ಅಂಟಿಕೊಂಡೇ ಇಡೀ ದಿನ ನಿಂತಿದ್ದರು. ಆರ್. ಅಶೋಕ್ ರಿಂಗ್ ರೋಡಿಗೆ ಪುನೀತ್ ಹೆಸರು ನಾಮಕರಣ ಮಾಡಿ, ಪುತ್ಥಳಿ ನಿರ್ಮಿಸಿ, ಕ್ರಿಕೆಟ್ ಟೂರ್ನಿ ಆಯೋಜಿಸಿ ಅದನ್ನು ರಾಜ್ಯವ್ಯಾಪಿ ವಿಸ್ತರಿಸಿದ್ದರು. ಆ ಮೂಲಕ ಅಭಿಮಾನಿಗಳ ಕೃಪೆಗೆ ಪಾತ್ರರಾಗಲು, ಮತ ಗಳಿಸಲು ಯತ್ನಿಸಿದ್ದರು.
ಅದೇ ರೀತಿ ಕುಂಭಮೇಳವೆಂಬ ಧರ್ಮಾಚರಣೆಯ ಲಾಭ ಪಡೆಯಲು ಯೋಗಿ ಆದಿತ್ಯನಾಥ್; ಪಹಲ್ಗಾಮ್ ಉಗ್ರರ ದಾಳಿಯಿಂದ ದೇಶಪ್ರೇಮ ಮತ್ತು ಮುಸ್ಲಿಂ ದ್ವೇಷವನ್ನು ಮತಗಳನ್ನಾಗಿ ಮಾರ್ಪಡಿಸಲು ಬಿಜೆಪಿ ಹವಣಿಸಿತ್ತು. ಈಗ ಆ ಜಾಗವನ್ನು ಕ್ರಿಕೆಟ್ ಆಕ್ರಮಿಸಿಕೊಂಡಿದೆ. ಆಟಗಾರನ ವರ್ಚಸ್ಸು, ಜನಪ್ರಿಯತೆ ಮತ್ತು ಹಣದ ಹರಿವು ರಾಜಕಾರಣವನ್ನೂ ಮೀರಿಸುವಂತಿದೆ.
ಒಂದು ಕಾಲಕ್ಕೆ ಇಂಗ್ಲಿಷರ ಜಂಟಲ್‌ಮನ್ಸ್ ಪ್ಲೇ ಎನಿಸಿಕೊಂಡಿದ್ದ ಕ್ರಿಕೆಟ್, ಲಲಿತ್ ಮೋದಿ ಎನ್ನುವ ವ್ಯವಹಾರಸ್ಥನ ಕೈಗೆ ಸಿಕ್ಕು ಉದ್ಯಮವಾಗಿದೆ. ಲಲಿತ್ ಮೋದಿ ಹುಟ್ಟುಹಾಕಿದ ಟ್ವೆಂಟಿ-20 ಕ್ರಿಕೆಟ್ ಮುಂದೆ ಐದು ದಿನದ ಟೆಸ್ಟ್ ಕ್ರಿಕೆಟ್ ಇರಲಿ, ಏಕದಿನ ಪಂದ್ಯಗಳೇ ಕಳೆಗುಂದತೊಡಗಿವೆ. ತಾಳ್ಮೆ-ಸಹನೆಯ ಆಟಕ್ಕೆ ವೇಗೋಷ್ಕರ್ಷ ಬಂದು; ಆಟಗಾರರು ರನ್ ಹೊಳೆ ಹರಿಸುವ-ಕ್ಷಣಕ್ಕೊಂದು ವಿಕೆಟ್ ಕೀಳುವ ಮಷೀನ್‌ಗಳಾಗಿದ್ದಾರೆ.
ಕ್ಷಣಕ್ಷಣಕ್ಕೂ ರೋಚಕ ಕ್ಷಣವನ್ನು ಕಟ್ಟಿಕೊಡುವ ಚುಟುಕು ಕ್ರಿಕೆಟ್ ಅಭಿಮಾನಿಗಳಿಗೆ ಥ್ರಿಲ್ ಕೊಡುವ, ಮನರಂಜನೆ ನೀಡುವ ಆಟ. ಅದೇ ಕ್ರಿಕೆಟ್ ಆಟ, ಆಟಗಾರ, ಪ್ರತಿ ಬಾಲ್-ರನ್ ಮೇಲೆ ಹಣ ಕಟ್ಟುವವರಿಗೆ ಜೂಜಾಟ. ಸಣ್ಣದಾಗಿ ಶುರುವಾದ ಜೂಜಾಟ ಈಗ ಕೋಟ್ಯಂತರ ರೂಪಾಯಿಗಳ ಕೈ ಬದಲಾಗುವ ದಂಧೆಯಾಗಿ ಮಾರ್ಪಾಡಾಗಿದೆ. ಹಾಗೆಯೇ ಕ್ರಿಕೆಟ್ ಆಟಗಾರರಿಗೆ, ಸಿನಿಮಾ ನಟ-ನಟಿಯರಿಗೆ, ಪ್ರಾಯೋಜಕರಿಗೆ, ಜಾಹೀರಾತುದಾರರಿಗೆ, ಸುದ್ದಿ ಮಾಧ್ಯಮಗಳಿಗೆ, ಉದ್ಯಮಿಗಳಿಗೆ, ಸ್ಟೇಡಿಯಂಗಳಿಗೆ ಹಣ ಹರಿಸುವ ಆಟವಾಗಿದೆ. ಬಹಳ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ.
ದೇಶದ ಯುವಜನತೆ ಅಭಿಮಾನದ ನೆಪದಲ್ಲಿ ಕ್ರಿಕೆಟ್ ಎಂಬ ಹೊಸ ಸಮೂಹ ಸನ್ನಿಗೆ ಒಳಗಾಗಿದೆ. ಅದರಲ್ಲೂ ಐಪಿಎಲ್ ಫೈನಲ್ ಗೆದ್ದ ಆರ್‌ಸಿಬಿಗೆ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಪ್ರಪಂಚದಾದ್ಯಂತ ಅಭಿಮಾನಿ ಬಳಗವಿದೆ. ಅದು ಹುಚ್ಚು ಹೊಳೆಯಾಗಿ ಹರಿಯುತ್ತಿದೆ. ಸರ್ಕಾರ ಆ ಹುಚ್ಚಿನಲ್ಲಿ, ಉನ್ಮಾದದಲ್ಲಿ ‘ಓಟ್ ಬ್ಯಾಂಕ್’ ಹುಡುಕಲು ಹವಣಿಸಿತು. ಆದರೆ ಮಂಗಳವಾರ ರಾತ್ರಿಯಿಂದ ಆದ ಬೆಳವಣಿಗೆಗಳ ಬಗ್ಗೆ ಕುರುಡಾಯಿತು. ಮುಂಜಾಗ್ರತೆ ವಹಿಸದೆ ಎಚ್ಚರ ತಪ್ಪಿತು.
ಐಪಿಎಲ್ ಜನಪ್ರಿಯತೆ, ಅಭಿಮಾನಿಗಳ ಉನ್ಮಾದದ ಲಾಭ ಪಡೆಯಲು ರಾಜಕಾರಣಿಗಳು ಹವಣಿಸಿದಂತೆಯೇ, ಟಿವಿ ಸುದ್ದಿ ವಾಹಿನಿಗಳು ಕೂಡ ಅದೇ ಜಾಡಿಗೆ ಬಿದ್ದವು. ಕ್ಷಣಕ್ಷಣಕ್ಕೂ ರೋಚಕ ಸುದ್ದಿಗಳನ್ನು ಬಿತ್ತರಿಸಿ, ಅಭಿಮಾನಿಗಳನ್ನು ಉದ್ರೇಕಿಸಿ ಗುಂಪುಗೂಡಲು ಕಾರಣವಾದವು. ಟಿಆರ್‍ಪಿ ಎಂಬ ಉಚ್ಚೆಯಲ್ಲಿ ಮೀನು ಹಿಡಿಯಲು ಯತ್ನಿಸಿದವು.
ಇದೆಲ್ಲದರ ಫಲವಾಗಿ ಹನ್ನೊಂದು ಅಮಾಯಕರು ಅಸುನೀಗುವಂತಾಯಿತು. 30ಕ್ಕೂ ಹೆಚ್ಚು ಜನ ಗಾಯಗೊಂಡು ಆ ಕುಟುಂಬಗಳು ನೋವಿನಲ್ಲಿ ನರಳುವಂತಾಯಿತು. ಇಷ್ಟೆಲ್ಲ ಆದಮೇಲೂ ಆಳುವ ಸರ್ಕಾರ ತನ್ನ ಅಮಾನವೀಯ ನಡೆಯನ್ನೇ ಮುಂದುವರೆಸಿತು. ಮೊದಲ ಕಾಲ್ತುಳಿತ ವರದಿಯಾಗಿದ್ದು 3.45ಕ್ಕೆ. ಸನ್ಮಾನ ಕಾರ್ಯಕ್ರಮ ನಡೆಯುವ 5 ಗಂಟೆಯ ಸಮಯಕ್ಕೆ ದುರಂತದ ಸುದ್ದಿ ಆಳುವವರ ಕಿವಿ ಮುಟ್ಟಿತ್ತು. ಆದರೂ ಅವರು ಕ್ರಿಕೆಟಿಗರ ಕೈ ಕುಲುಕಲು, ಅವರೊಂದಿಗೆ ನಿಂತು ನಗಲು, ಸನ್ಮಾನಿಸಲು, ಫೋಟೋ ಕ್ಲಿಕ್ಕಿಸಿಕೊಳ್ಳಲು ಹಿಂಜರಿಯಲಿಲ್ಲ.
ಇದನ್ನು ಓದಿದ್ದೀರಾ?: ಸಮೂಹ ಸನ್ನಿಯ ಬಿತ್ತಿ ಹಣದ ಬೆಟ್ಟವನ್ನೇ ಬಾಚುತ್ತಿರುವ ಐಪಿಎಲ್; ಅಭಿಮಾನಿಗಳ ಕಣ್ಣಿಗೆ ಮಣ್ಣೆರಚುತ್ತಿದೆ!
ಅದೇ ರೀತಿ, ಆರ್‌ಸಿಬಿ ಆಟಗಾರರು ಕೂಡ ಮಾನವೀಯತೆ ಮರೆತರು. 6 ಗಂಟೆಗೆ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಹಾಡಿ ಕುಣಿದರು, ಮೈದಾನದಲ್ಲಿ ಸುತ್ತು ಹಾಕಿ ಅಭಿಮಾನಿಗಳಿಗೆ ಕಪ್ ತೋರಿಸಿ ಸಂಭ್ರಮಿಸಿದರು. ಅವರ ಮುಖದಲ್ಲಿ ತೋರಿಕೆಗಾದರೂ ಸತ್ತ ಹನ್ನೊಂದು ಮಂದಿಯ ಬಗ್ಗೆ ಕನಿಕರ-ಕಾಳಜಿ ಕಾಣಲಿಲ್ಲ. ಪಶ್ಚಾತ್ತಾಪವಂತೂ ಇರಲೇ ಇಲ್ಲ.
ಹಣಕ್ಕಾಗಿ ಆಡುವ ಈ ಕ್ರಿಕೆಟ್ ಆಟಗಾರರು ಮತ್ತು ಅವರ ಜನಪ್ರಿಯತೆಯನ್ನು ಮತ ಗಳಿಕೆಗಾಗಿ ಬಳಸಿಕೊಳ್ಳಲು ಹವಣಿಸುವ ಅಧಿಕಾರಸ್ಥ ರಾಜಕಾರಣಿಗಳು ಖಂಡಿತ ಮನುಷ್ಯರಲ್ಲ. ಇವರನ್ನು ಹೊತ್ತುಕೊಂಡು ಮೆರೆಯುವ ಅಭಿಮಾನಿಗಳಿಗೆ ಬುದ್ಧಿ ಇಲ್ಲ.

Ayyo bolimagane sarakaravanna tikisodu bittu bjp bagge kettadagi bariyode chata baddimakkala ninu ninna potgisi patrike badalagalla