ರಾಯಚೂರು ತಾಲೂಕು ಜೇಗರಕಲ್ ವ್ಯಾಪ್ತಿಗೆ ಸೇರಿರುವ ಮೀರಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಕಳೆದ ಇಪ್ಪತ್ತು ವರ್ಷಗಳಿಂದ ಯಾವ ರೀತಿಯ ದುರಸ್ತಿಗೂ ಒಳಗಾದಂತೆ ಕಾಣುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಆರಂಭವಾದ ದುರಸ್ತಿ ಕಾಮಗಾರಿ ಕೂಡ ಕಳೆದೆರಡು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದು, ಇನ್ನೂ ಪೂರ್ಣಗೊಳ್ಳದ ಸ್ಥಿತಿಯಲ್ಲಿದೆ.
ಈ ರಸ್ತೆ ನಿರ್ವಹಣಾ ಕೊರತೆಯಿಂದಾಗಿ, ಇತ್ತೀಚಿನ ಕೆಲವು ತಿಂಗಳುಗಳಿಂದ ಗ್ರಾಮಕ್ಕೆ ಬಸ್ ಸಂಚಾರವೂ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಮೀರಾಪುರ ಗ್ರಾಮಸ್ಥರು ತಮ್ಮ ದಿನನಿತ್ಯದ ಅವಶ್ಯಕತೆಗಳಿಗೆ, ಶಾಲೆ-ಕೆಲಸದ ಸ್ಥಳಗಳಿಗೆ ಹೋಗಲು 8 ಕಿಲೋ ಮೀಟರ್ ದೂರ ಕಾಲ್ನಡಿಗೆಯನ್ನೇ ಅವಲಂಬಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿರುವ ತಗ್ಗು ಗುಂಡಿಗಳ ಮಧ್ಯೆ ರಸ್ತೆಯ ಜಾಡನ್ನು ಹುಡುಕುತ್ತಾ ಚಾಲಕರು ವಾಹನ ಚಲಾಯಿಸುವಂತಹ ಪರಿಸ್ಥಿತಿ ಇದೆ. ಇತ್ತೀಚಿಗೆ ಕೆಲವು ರಸ್ತೆಗಳು ದುರಸ್ತಿ ಭಾಗ್ಯ ಕಂಡರೂ, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ಲಿನ ಮೊತ್ತ ಪಾವತಿಸುವುದಕ್ಕೂ ಮೊದಲೇ ಗುಂಡಿಗಳು ಬಾಯ್ತೆರೆದು ಕಳಪೆ ಕಾಮಗಾರಿಗೆ ಸಾಕ್ಷಿಯಾಗುತ್ತಿವೆ. ಈ ರಸ್ತೆಗಳು ದುರಸ್ತಿ ಭಾಗ್ಯ ಕಾಣದಿರುವುದರಿಂದ ನಿತ್ಯವೂ ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಈ ಬಗ್ಗೆ ಈದಿನದ ಜೊತೆ ಪದವಿ ವಿದ್ಯಾರ್ಥಿ ಸೋಮಶೇಖರ್ ಮಾತನಾಡಿ, “ರಸ್ತೆಗಳ ದುಸ್ಥಿತಿಯಿಂದ ಸಕಾಲಕ್ಕೆ ಶಾಲಾ, ಕಾಲೇಜುಗಳಿಗೆ ಹಾಗೂ ಕಚೇರಿಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜೇಗರಕಲ್ ಗ್ರಾಮದವರಗೆ ಸುಮಾರು 8 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕು. ಅಲ್ಲಿಂದ ಬಸ್ ಹಿಡಿಬೇಕು.ಕಾಲೇಜಿಗೆ ತಲುಪುವುದರೊಳಗೆ ಅರ್ಧ ದಿನ ಮುಗಿದಿರುತ್ತದೆ. ಕೆಲವೊಮ್ಮೆ ಯಾರಾದರೂ ಗ್ರಾಮದವರು ದ್ವಿಚಕ್ರ ವಾಹನದ ಮೂಲಕ ಹೋಗುತ್ತಿದ್ದರೆ ಡ್ರಾಪ್ ಕೇಳಬಹುದು, ಇಲ್ಲದಿದ್ದರೆ ನಮಗೆ ಪಾದಯಾತ್ರೆ ತಪ್ಪಿದ್ದಲ್ಲ. ಮನೆಗೆ ತಲುಪುವುದೂ ಕೂಡ ಸಂಜೆಯಾದ ಮೇಲೆಯೇ. ಮನೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಸಮಯ ಕಳೆಯಲು ಆಗುತ್ತಿಲ್ಲ. ಸಮಯವೆಲ್ಲಾ ಪ್ರಯಾಣದಲ್ಲೇ ಮುಗಿಯುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದ ನಿವಾಸಿ ಚಂದ್ರಕಲಾ ಮಾತನಾಡಿ, “ರಸ್ತೆ ದುರಸ್ತಿ ಇರುವುದರಿಂದ ಬಸ್‌ಗಳು ಬರಲ್ಲ ಎಂದು ಚಾಲಕರು ಹೇಳುತ್ತಾರೆ. ಡಿಪೋ ವ್ಯವಸ್ಥಾಪಕರಿಗೆ ಕೇಳಿದರೆ ರಸ್ತೆ ಸರಿಯಿಲ್ಲ, ಬಸ್ ಬರೋಕೆ ಆಗಲ್ಲ. ಆದಾಗ್ಯೂ ಬಸ್ ಬಂದರೆ ಅನಾಹುತ ಸಂಭವಿಸಬಹುದು. ಮಳೆಗಾಲದ ಸಮಯದಲ್ಲಿ ಬಸ್‌ಗಳು ಕೆಸರಲ್ಲಿ ಸಿಲುಕಿ ಪಲ್ಟಿಯಾಗುತ್ತವೆ ಎಂದು ಹೇಳುತ್ತಾರೆ. ಆದರೆ ಗ್ರಾಮಸ್ಥರ ಸಮಸ್ಯೆ ಕೇಳೋರು ಯಾರು” ಎಂದರು.

ಗ್ರಾಮದ ಹಿರಿಯ ನಿವಾಸಿ ಕಾಮಾಕ್ಷಿ ಮಾತನಾಡಿ, “ರಸ್ತೆ ಹಾಗೂ ಬಸ್ ಮಧ್ಯೆ ಜೀವನವೇ ಹೋರಾಟವಾಗಿದೆ. ನಮಗೆ ಆದ ಸಮಸ್ಯೆ ಮುಂದೆ ಬರುವ ನಮ್ಮ ಮಕ್ಕಳಿಗೆ ಆಗಬಾರದು ಎಂದು ಪರದಾಡಿದರೂ ನಮ್ಮ ಧ್ವನಿಗೆ ಯಾರೂ ಸ್ಪಂದಿಸುತ್ತಿಲ್ಲ. ಒಮ್ಮೆ ತುರ್ತು ಸಂದರ್ಭದಲ್ಲಿ ಗ್ರಾಮಕ್ಕೆ ಆಂಬುಲೆನ್ಸ್ ಬಂದು ಕೆಸರಲ್ಲಿ ಸಿಲುಕಿ ಸುಮಾರು ಹೊತ್ತು ಪರದಾಡಬೇಕಾಯಿತು. ಇದನ್ನ ಕಂಡ ಡಿಪೋಗಳು ಬಸ್ ಬಿಡಲು ಹಿಂದೇಟು ಹಾಕುತ್ತಿವೆ. ಇಲ್ಲಿ ದುರಸ್ತಿ ಯಾವಾಗ ಆಗುತ್ತೋ ಎಂದು ಬಕಪಕ್ಷಿಗಳಂತೆ ಕಾಯುತ್ತಿದ್ದೇವಷ್ಟೇ. ಕೆಲಸ ಮಾತ್ರ ಇಲ್ಲ” ಎಂದು ನಿಟ್ಟುಸಿರು ಬಿಟ್ಟರು.

ಮಳೆಗಾಲದಲ್ಲಿ ನಡೆದುಕೊಂಡು ಹೋಗುವಾಗ ಮಳೆಯಲ್ಲಿ ನೆಂದು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಕ್ಕಳು ದಿನನಿತ್ಯ ನಡೆದುಕೊಂಡು ಹೋಗಿ ಬರುವುದರಲ್ಲಿ ದಣಿದು ಸುಸ್ತಾಗುತ್ತಿದ್ದಾರೆ. ಪೋಷಕರು ಮಕ್ಕಳಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಸಾಲದ ಸುಳಿಯಲ್ಲಿ ಹೆಣಗುತ್ತಿದ್ದಾರೆ. ಗ್ರಾಮಕ್ಕೆ ಜನಪ್ರತಿನಿಧಿಗಳು ಬಂದು ಹೋದರೂ ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎನ್ನುವುದು ಗ್ರಾಮಸ್ಥರ ಅಳಲು.
ಕೆಲವು ದಿನಗಳ ಹಿಂದೆ ಗ್ರಾಮದ ವಿದ್ಯಾರ್ಥಿಗಳೇ ಸೇರಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮನೆಗೆ ತಲುಪಿ ಮನವಿ ನೀಡಿದ್ದರು. ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಹೇಳಿದ್ದರು ಕೂಡ. ಆದರೂ ರಸ್ತೆ ಸರಿಯಿಲ್ಲ ಎಂದು ನೆಪ ಹೇಳಿ ಡಿಪೋ ಕಡೆಯಿಂದ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಇವರ ಮಧ್ಯದಲ್ಲಿ ನಾವು ಸಿಲುಕಿಕೊಂಡು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಮೀರಾಪುರ ರಸ್ತೆಯ ಸ್ಥಿತಿ ಅಧೋಗತಿಯಾಗಿದೆ. ಇದು ಆಡಳಿತದ ಅನಾಸಕ್ತಿ ಹಾಗೂ ಜನಪರ ಸೇವೆಯ ಕೊರತೆಯ ಜೀವಂತ ಸಾಕ್ಷಿಯಾಗಿದೆ. ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯೇ ಕಾಮಗಾರಿಯ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಗ್ರಾಮಸ್ಥರು ಹಲವು ಬಾರಿ ಸಮಸ್ಯೆಯನ್ನು ತಮ್ಮ ಸ್ಥಾನೀಯ ಶಾಸಕರು ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಯಾವುದೇ ಸ್ಪಂದನೆ ಅಥವಾ ಪರಿಹಾರ ಕೈಗೊಳ್ಳಲಾಗಿಲ್ಲ. ಇದರಿಂದ ರಸ್ತೆ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಗ್ರಾಮಸ್ಥರಿಗೆ ನಿರಂತರ ತೊಂದರೆಯಾಗುತ್ತಿದೆ.

ಸರ್ಕಾರ ಮತ್ತು ಪ್ರಾದೇಶಿಕ ಆಡಳಿತ ಮಂಡಳಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ರಸ್ತೆಗಳು ಕೇವಲ ಸಾಗಣೆಗೆ ಮಾತ್ರವಲ್ಲ, ಅಭಿವೃದ್ಧಿಯ ದಾರಿ ಕೂಡ ಹೌದು ಎಂಬುದನ್ನು ಜನಪ್ರತಿನಿಧಿಗಳು ಮರೆಯಬಾರದು. ವಿಶ್ವಾಸವನ್ನು ಕೇವಲ ಚುನಾವಣೆ ಸಂದರ್ಭದಲ್ಲಿ ಗಿಟ್ಟಿಸುವುದಲ್ಲ. ಅಭಿವೃದ್ಧಿಯಲ್ಲೂ ಗಿಟ್ಟಿಸಿಕೊಳ್ಳಬೇಕು ಎಂಬುದು ಗ್ರಾಮಸ್ಥರ ನ್ಯಾಯಸಮ್ಮತ ವಾದ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್