ಅಮೆರಿಕ ಸರ್ಕಾರದಿಂದ ಆಮದು ನಿಷೇಧ: ಸಂಕಷ್ಟದಲ್ಲಿ ರಾಜ್ಯದ ಅಡಿಕೆ ಎಲೆ ತಟ್ಟೆ ತಯಾರಕರು

Date:

Advertisements
ಅಮೆರಿಕದ ಆಹಾರ ಮತ್ತು ಔಷಧ ಆಡಳಿತ(Food and Drug Administration-FDA)ನಿಂದ ಈ ಅಡಿಕೆ ಎಲೆ ತಟ್ಟೆಗಳನ್ನು ಆಹಾರದೊಂದಿಗೆ ಬಳಸಲಾಗಲಾರದ್ದು, ಅದರಲ್ಲಿ ಸೋಂಕು ಹರಡುವ ಸಾಧ್ಯತೆಗಳಿವೆ ಎಂಬ ಕಾರಣದಿಂದ ಆಮದು ನಿಷೇಧವನ್ನು ವಿಧಿಸಲಾಗಿದೆ.

ಅಮೆರಿಕ ಸರ್ಕಾರದಿಂದ ಇತ್ತೀಚೆಗೆ ಪ್ರಕಟಿಸಿದ ಆಮದು ನಿಷೇಧದ ತೀರ್ಮಾನವು, ಭಾರತದ ಹಲವು ಉತ್ಪನ್ನಗಳ ಮೇಲೆ ನೇರ ಪರಿಣಾಮ ಬೀರಿದೆ. ಆದರೆ ಇದರಿಂದ ಕರ್ನಾಟಕದ ಅಡಿಕೆ ಎಲೆ ತಟ್ಟೆ ತಯಾರಕರು ಮತ್ತು ಅಡಿಕೆ ಬೆಳೆಯುವ ರೈತರಿಗೆ ತೀವ್ರವಾದ ಸಂಕಷ್ಟ ಉಂಟಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಭದ್ರಾವತಿ, ಶಿರಸಿ, ಸಾಗರ, ಹೊಸನಗರ, ತೀರ್ಥಹಳ್ಳಿ, ಹೊನ್ನಾಳಿ, ಹರಿಹರ ಮುಂತಾದ ಪ್ರದೇಶಗಳಲ್ಲಿ ಅಡಿಕೆ ಆಧಾರಿತ ಕೃಷಿ ಮತ್ತು ಕೈಗಾರಿಕೆಗಳ ಭವಿಷ್ಯ ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಒದಗಿಬಂದಿದೆ. ನಿಷೇಧದಿಂದಾಗಿ ಅಡಿಕೆ ಎಲೆಗಳಿಂದ ತಯಾರಿಸುತ್ತಿರುವ ತಟ್ಟೆಗಳ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ತಟ್ಟೆಗಳಿಗೆ ಮುಖ್ಯವಾಗಿ ಅಮೆರಿಕಾದಲ್ಲೇ ಬಹುಮಟ್ಟಿಗೆ ಬೇಡಿಕೆ ಇತ್ತು. ಅಲ್ಲಿನ ಭಾರತೀಯ ಮೂಲದ ಜನಸಂಖ್ಯೆ ಮಾತ್ರವಲ್ಲದೆ, ಪರಿಸರಪಾಲಕ ಸಂಘಟನೆಗಳು ಮತ್ತು ಪ್ಲಾಸ್ಟಿಕ್ ವಿರೋಧಿ ಚಳವಳಿಗಳಿಂದ ಕೂಡ ಇದಕ್ಕೆ ಒತ್ತುನೀಡಲಾಗುತ್ತಿತ್ತು. ಆದರೆ ಈಗ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ(Food and Drug Administration-FDA)ನಿಂದ ಈ ಅಡಿಕೆ ಎಲೆ ತಟ್ಟೆಗಳನ್ನು ಆಹಾರದೊಂದಿಗೆ ಬಳಸಲಾಗಲಾರದ್ದು, ಅದರಲ್ಲಿ ಸೋಂಕು ಹರಡುವ ಸಾಧ್ಯತೆಗಳಿವೆ ಎಂಬ ಕಾರಣದಿಂದ ಆಮದು ನಿಷೇಧವನ್ನು ವಿಧಿಸಲಾಗಿದೆ.

ಈ ನಿಷೇಧದ ಹಿನ್ನಲೆಯಲ್ಲಿ, ಅಡಿಕೆ ತಟ್ಟೆ ಉತ್ಪನ್ನಗಳ ಉತ್ಪಾದನೆ, ರಫ್ತು, ಸಂಸ್ಕರಣಾ ಘಟಕಗಳ ನಿರ್ವಹಣೆ ಎಲ್ಲವೂ ಸಂಕಷ್ಟಕ್ಕೀಡಾಗಿದೆ. ಈ ಉದ್ಯಮದಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಸಾವಿರಾರು ಕಾರ್ಮಿಕರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ಅಡಿಕೆ ಬೆಳೆಯು ಈಗ ಕರ್ನಾಟಕದ ಕೆಲ ಭಾಗಗಳಿಗೆ ಹೆಚ್ಚು ಲಾಭವನ್ನು ನೀಡುವ ವಾಣಿಜ್ಯ ಬೆಳೆಯಾಗಿ ಪರಿಣಮಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆಯುವ ರೈತರು ಬೆಳೆ ಹಾನಿ, ಬೆಲೆ ಕುಸಿತ, ಮಾರಾಟ ಸಮಸ್ಯೆ ಮುಂತಾದವುಗಳಿಂದ ಅವರ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಕುಸಿಯುತ್ತಿದೆ. ಈಗ ಅಮೆರಿಕದ ಆಮದು ನಿಷೇಧದ ತೀರ್ಮಾನ ಅಡಿಕೆ ಬೆಳೆಗಾರರನ್ನು ಮತ್ತಷ್ಟು ಕಷ್ಟಕ್ಕೆ ದೂಡಲಿದೆ.

ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ ಮುಂತಾದ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಕಳೆದ ಎರಡು ದಶಕಗಳಿಂದ ಅಡಿಕೆ ಎಲೆ ಸಂಸ್ಕರಣಾ ಘಟಕಗಳು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ್ದವು. ಈ ಘಟಕಗಳು ಅಡಿಕೆ ಎಲೆಗಳನ್ನು ತೊಳೆದು, ಒಣಗಿಸಿ, ಬಟ್ಟಲು ಬಿಗಿದು ಮಾರಾಟಕ್ಕೆ ತಯಾರಿಸುವ ಕಾರ್ಯವನ್ನು ನಡೆಸುತ್ತಿವೆ. ಕೋಟ್ಯಂತರ ಮೌಲ್ಯದ ಈ ಉದ್ಯಮ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ಕೆನಡಾ ಮುಂತಾದ ದೇಶಗಳಿಗೆ ತಟ್ಟೆ ರಫ್ತು ಮಾಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಜನರಿಗೆ ಸ್ವಯಂ ಉದ್ಯೋಗಗಳನ್ನು ನೀಡಿತ್ತು. ಇದು ವಿಶೇಷವಾಗಿ ಮಹಿಳಾ ಉದ್ಯೋಗಕ್ಕೆ ಪೂರಕವಾಗಿತ್ತು. ಅಲ್ಲದೆ ಇದರಿಂದ ಸಣ್ಣ ಕೈಗಾರಿಕೆಗಳು ಕೂಡ ಆರ್ಥಿಕವಾಗಿ ಚೇತರಿಸಿಕೊಂಡಿದ್ದವು. ಇದೀಗ ಈ ನಿಷೇಧದಿಂದಾಗಿ ರಫ್ತು ಆಧಾರಿತ ಕಂಪನಿಗಳು ತಾತ್ಕಾಲಿಕವಾಗಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸುವ ಆತಂಕಕ್ಕೆ ಎದುರಾಗಿವೆ. ಉತ್ಪನ್ನಗಳು ಮಾರಾಟವಾಗದಿದ್ದರೆ ರೈತರ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ರೈತರು ಮಾತ್ರವಲ್ಲದೆ, ಇದನ್ನು ನಂಬಿರುವ ಸಣ್ಣ ಕೈಗಾರಿಕೆಗಳಿಗೂ ಹೊಡೆತ ಬೀಳುತ್ತದೆ. ಇದನ್ನೇ ನಂಬಿರುವ ಸಾವಿರಾರು ಕಾರ್ಮಿಕರು ಕೂಡ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಅಡಿಕೆ ತೀವ್ರ ಕುಸಿತದ ಹಾದಿಯಲ್ಲಿ ಸಾಗುತ್ತಿದೆ. ಕರ್ನಾಟಕದಲ್ಲಿ ಬೆಳೆಯುತ್ತಿರುವ ಅಡಿಕೆ ಸಣ್ಣ ರೈತರಿಗೆ ಒಂದು ಪ್ರಮುಖ ಆದಾಯದ ಮೂಲವಾಗಿದ್ದು, ಇದೀಗ ತಯಾರಿಕೆ ಕಡಿಮೆಯಾಗಿ ಮಾರಾಟದಲ್ಲಿ ಏರಿಕೆ ಇಲ್ಲದಿರುವುದರಿಂದ ರೈತರು ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ರಾಜ್ಯದ ರೈತರು ಅಡಿಕೆಯಂಥ ವಾಣಿಜ್ಯ ಬೆಳೆ ಬೆಳೆಯುವಾಗ ಬ್ಯಾಂಕುಗಳಿಂದ ಸಾಲ ತೆಗೆದುಕೊಂಡು ತೋಟ ಅಭಿವೃದ್ಧಿಪಡಿಸುತ್ತಾರೆ. ಆದರೆ ಬೆಲೆ ಕಡಿಮೆಯಾದರೆ ಆ ಸಾಲ ತೀರಿಸಲು ಸಾಧ್ಯವಾಗದಿದ್ದಾಗ ಹತಾಶ ಪರಿಸ್ಥಿತಿ ಎದುರಾಗುತ್ತದೆ. ಇದಲ್ಲದೆ ಅಡಿಕೆ ಬೆಳೆಗಾರರು ಬೆಳೆ ಬೆಳೆಯುವಾಗಲು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊಳೆರೋಗ, ಎಲೆ ಚುಕ್ಕಿ ರೋಗ, ಹಳದಿ ರೋಗ, ಮತ್ತು ಬೇರುಹುಳ ರೋಗದಂತಹ ರೋಗಗಳು ಅಡಿಕೆ ಬೆಳೆಯನ್ನು ಕಾಡುತ್ತಿವೆ. ಈ ರೋಗಗಳು ಒಂದು ತೋಟದಿಂದ ಇನ್ನೊಂದಕ್ಕೆ ತ್ವರಿತವಾಗಿ ಹರಡುವುದರಿಂದ, ನೂರಾರು ಹೆಕ್ಟೇರ್‌ಗಳಷ್ಟು ಬೆಳೆ ನಾಶವಾಗುತ್ತಿದೆ.

arecanut leaf 1

ಅಡಿಕೆ ಎಲೆ ತಟ್ಟೆಗಳಿಗೆ ಅಮೆರಿಕಾದಲ್ಲಿ ಇರುವ ಬಹುಮಟ್ಟದ ಬೇಡಿಕೆಯನ್ನು ಕಳೆದ ಐದು ವರ್ಷಗಳಲ್ಲಿ ಪರಿಗಣಿಸಿದರೆ, ಈ ನಿಷೇಧದ ನಿರ್ಧಾರ ಹಠಾತ್ ಆಗಿ ತೆಗೆದುಕೊಂಡಂತಿದೆ. ಭಾರತದಿಂದ ಅಮೆರಿಕಕ್ಕೆ ಆಗಮಿಸುತ್ತಿರುವ ತಟ್ಟೆಗಳ ಗುಣಮಟ್ಟವನ್ನು ನೋಡಿಕೊಂಡು ಅಲ್ಲಿನ ಗ್ರಾಹಕರು ಈ ಉತ್ಪನ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಇವು ಪ್ಲಾಸ್ಟಿಕ್ ಅಥವಾ ಕಾಗದದ ತಟ್ಟೆಗಳ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿವೆ ಎಂಬ ಕಾರಣದಿಂದಾಗಿ ಹಲವಾರು ಸಂಘಟನೆಗಳು ಮತ್ತು ಆಹಾರಮೇಳಗಳು ಈ ತಟ್ಟೆಗಳನ್ನು ಬಳಕೆ ಮಾಡುತ್ತಿದ್ದರು. ಇದೀಗ ಅಮೆರಿಕದ ಎಫ್‌ಡಿಎ ಸಂಸ್ಥೆ ಅಡಿಕೆ ಎಲೆ ತಟ್ಟೆಗಳಲ್ಲಿ ಕ್ಯಾಲಿಫೋರ್ನಿಯಾದ ಸಂಶೋಧನಾ ವರದಿಗಳನ್ನು ಆಧಾರವಿಟ್ಟುಕೊಂಡು ಸೋಂಕು ಹರಡುವ ಸಾಧ್ಯತೆಗಳಿವೆ ಎಂಬ ವರದಿ ಬಂದಿದ್ದು, ತಾತ್ಕಾಲಿಕವಾಗಿ ನಿಷೇಧವನ್ನು ಹೇರಲಾಗಿದೆ. ಆದರೆ ಈ ಆರೋಪಕ್ಕೆ ಕೇಂದ್ರ ಸರ್ಕಾರದ ರಫ್ತು ಹಾಗೂ ವಾಣಿಜ್ಯ ಇಲಾಖೆಗಳು ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಆರೋಪವು ಕೇಳಿಬರುತ್ತಿದೆ.   

ಕೇಂದ್ರ ಸರ್ಕಾರವಲ್ಲದೆ ರಾಜ್ಯ ಸರ್ಕಾರ ಕೂಡ ಈ ನಿಷೇಧದ ವಿರುದ್ಧ ಪ್ರಬಲವಾಗಿ ಪ್ರತಿಭಟಿಸಲು ಮುಂದಾಗಿಲ್ಲ. ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಗಳ ಸಹಕಾರದಿಂದ ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಈ ನಿಷೇಧವನ್ನು ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಒಂದು ವೇಳೆ ತಾತ್ಕಾಲಿಕವಾಗಿರುವ ಈ ನಿಷೇಧ ಮುಂದುವರಿದರೆ, ಅಡಿಕೆ ಎಲೆ ತಟ್ಟೆ ಉದ್ಯಮ ಸಂಪೂರ್ಣವಾಗಿ ಕುಸಿದು ಬೀಳುವ ಅಪಾಯ ಇದೆ. ಈ ಉದ್ಯಮವನ್ನು ಪುನಶ್ಚೇತನಗೊಳಿಸಲು ಸರ್ಕಾರಗಳ ಮಧ್ಯಸ್ಥಿಕೆ ತುರ್ತಾಗಿ ಅಗತ್ಯವಿದೆ.

ಇದನ್ನು ಓದಿದ್ದೀರಾ? ಭಾರತದಲ್ಲಿ ಟೆಸ್ಲಾ ಉತ್ಪಾದನೆ | ಕೇಂದ್ರ ಸಚಿವ ಎಚ್ ಡಿಕೆ ಉತ್ಪಾದನಾ ಘಟಕ ಸ್ಥಾಪನೆ ಇಲ್ಲ ಎಂದಿದ್ದೇಕೆ?

ಅದಲ್ಲದೆ ರೈತರು ಮತ್ತು ತಟ್ಟೆ ತಯಾರಕರಿಗೆ ಪರಿಹಾರವಾಗಿ, ಸರ್ಕಾರವು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಮೆರಿಕದ ಆಮದು ನಿಷೇಧದ ವಿಷಯದಲ್ಲಿ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿ, ಪರಿಹಾರವನ್ನು ಕಂಡುಕೊಳ್ಳಬೇಕು. ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಎಲೆ ತಟ್ಟೆಗಳ ಬೇಡಿಕೆಯನ್ನು ಹೆಚ್ಚಿಸಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ರೈತರಿಗೆ ರೋಗ ನಿರೋಧಕ ಔಷಧಿಗಳು ಮತ್ತು ತರಬೇತಿಯನ್ನು ಒದಗಿಸುವ ಮೂಲಕ ಬೆಳೆಯ ಗುಣಮಟ್ಟವನ್ನು ಸುಧಾರಿಸಬೇಕು. ಇದರ ಜೊತೆಗೆ, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ರೈತರಿಗೆ ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ತಲುಪಿಸಲು ಸಹಾಯ ಮಾಡಬೇಕು. ಅಡಿಕೆ ಬೆಳೆಯುವ ರೈತರು ಮತ್ತು ಎಲೆ ತಟ್ಟೆ ತಯಾರಕರ ಸಮಸ್ಯೆಗಳು ಕೇವಲ ಆರ್ಥಿಕವಾಗಿ ಮಾತ್ರವಲ್ಲದೆ, ಸಾಮಾಜಿಕವಾಗಿಯೂ ಪರಿಣಾಮ ಬೀರುತ್ತವೆ. ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರವು ತಕ್ಷಣದ ಕ್ರಮಗಳನ್ನು ಕೈಗೊಳ್ಳದಿದ್ದರೆ, ಕರ್ನಾಟಕದ ಗ್ರಾಮೀಣ ಆರ್ಥಿಕತೆಯ ಮೇಲೆ ಇದರ ಪರಿಣಾಮವು ಇನ್ನಷ್ಟು ತೀವ್ರಗೊಳ್ಳಬಹುದು. ರೈತರಿಗೆ ಮತ್ತು ಉದ್ಯಮಿಗಳಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸಲು, ಸರ್ಕಾರವು ಸಮಗ್ರ ಯೋಜನೆಯನ್ನು ರೂಪಿಸಿ, ಅವರ ಹಿತಾಸಕ್ತಿಗಳನ್ನು ರಕ್ಷಿಸಬೇಕಾಗಿದೆ.

ವೈಜ್ಞಾನಿಕ ಆಧಾರವಿಲ್ಲದೆ ಅಮೆರಿಕದಿಂದ ನಿಷೇಧ

ಕರ್ನಾಟಕದಿಂದ ರಫ್ತಾಗುವ ಅಡಿಕೆ ಎಲೆ ತಟ್ಟೆಗಳನ್ನು ಅಮೆರಿಕ ಸರ್ಕಾರ ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ನಿಷೇಧಿಸಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೆ ಟಿ ಗಂಗಾಧರ್‌ ತಿಳಿಸಿದ್ದಾರೆ. ಈ ಬಗ್ಗೆ ಈದಿನ.ಕಾಂ ವೆಬ್‌ಸೈಟ್‌ನೊಂದಿಗೆ ಮಾತನಾಡಿದ ಅವರು ಒಂದಿಷ್ಟು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

”ಅಮೆರಿಕ ಸರ್ಕಾರವು ನಮ್ಮ ದೇಶೀಯ ಉತ್ಪನ್ನಗಳನ್ನು ವಿಶ್ವ ವಾಣಿಜ್ಯ ಒಪ್ಪಂದದ ನಿಮಯದ ಪ್ರಕಾರ ಈ ರೀತಿ ನಿಷೇಧಿಸಲು ಸಾಧ್ಯವಿಲ್ಲ. ನಿಯಮವು ಕೂಡ ಹಾಗೆಯೇ ಹೇಳುತ್ತದೆ. ಈ ನಡೆಗೆ ನಮ್ಮ ಕೇಂದ್ರ ಸರ್ಕಾರ ಅಮೆರಿಕವನ್ನು ಸಂಪರ್ಕಿಸಿ ನಿಷೇಧದ ಬಗ್ಗೆ ಸೂಕ್ತ ಕಾರಣವನ್ನು ಕೇಳಬೇಕು. ಅಡಿಕೆ ಎಲೆ ತಟ್ಟೆಗಳಿಂದ ಕ್ಯಾನ್ಸರ್‌, ಇತ್ಯಾದಿ ರೋಗಗಳು ಬರುತ್ತದೆ ಎಂದು ಹೇಳಲಾಗಿದೆ. ಆದರೆ ಅದಕ್ಕೆ ಯಾವುದೇ ಪುರಾವೆಯಿಲ್ಲ. ಈ ಕಾರಣಗಳನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಕೂಡಲೇ ಅಮೆರಿಕ ಸರ್ಕಾರ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು. ಆರೋಪಗಳಿದ್ದರೆ ಸಂಶೋಧನೆಗೆ ಒಳಪಡಿಸಬೇಕೇ ವಿನಾ, ದಿಢೀರಾಗಿ ಆಪಾದಿಸಿ ನಿಷೇಧಿಸಬಾರದು. ಭಾರತದಲ್ಲಿಯೇ ಅತೀ ಹೆಚ್ಚು ಅಡಿಕೆ ಉತ್ಪಾದನೆಯಾಗುತ್ತಿರುವುದು ಕರ್ನಾಟಕದಲ್ಲಿ.”

”ಪ್ಲಾಸ್ಟಿಕ್‌ ಉತ್ಪನ್ನಗಳಿಗೆ ಪರ್ಯಾಯವಾಗಿ ಬಂದಿದ್ದೆ ಅಡಿಕೆ ಎಲೆ ತಟ್ಟೆಗಳ ಉದ್ಯಮ. ಹಿಂದಿನಿಂದಲೂ ಹಳ್ಳಿಗಾಡಿನಲ್ಲಿ ಯಾವುದೇ ವಸ್ತುವನ್ನು ಸಂರಕ್ಷಿಸಲು ಅಡಿಕೆ ಎಲೆ ಅತ್ಯುತ್ತಮ ಉತ್ಪನ್ನ. ಆಹಾರವನ್ನು 10-15 ದಿನಗಳ ಕಾಲ ಅಡಿಕೆ ಎಲೆಯಲ್ಲಿ ಇಡಲಾಗುತ್ತಿತ್ತು. ಅಮೆರಿಕ ಸರ್ಕಾರಕ್ಕೆ ಆರೋಪಗಳಿದ್ದರೆ ಸಂಶೋಧನೆ ಕೈಗೊಂಡು ಬಹಿರಂಗಪಡಿಸಲಿ. ನ್ಯೂನತೆಗಳಿದ್ದರೆ ಸರಿಪಡಿಸೋಣ. ಏಕಾಏಕಿ ನಿ‍ಷೇಧಿಸುತ್ತೇನೆ ಎಂದರೆ ಖಂಡಿತಾ ಒಪ್ಪಲು ಸಾದ್ಯವಿಲ್ಲ. ಮುಂದುವರಿದ ದೇಶಗಳು ಬಂಡವಾಳಶಾಹಿಗಳ ಒತ್ತಡದಿಂದ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನಮ್ಮ ದೇಶದ ಮೇಲೆ ಆರೋಪ ಮಾಡುತ್ತಿವೆ. ರಾಜ್ಯ ಸರ್ಕಾರ ಕೂಡ ಅಡಿಕೆ ಹಾಳೆಗಳಂತಹ ಉತ್ಪನ್ನಗಳಿಗೆ ಪೇಟೆಂಟ್‌ ಪಡೆಯಬೇಕಿದೆ. ಪೇಟೆಂಟ್‌ ಆದ ಉತ್ಪನ್ನಗಳು ಸಂಶೋಧನೆಗೆ ಒಳಪಡುತ್ತವೆ. ವಿಜ್ಞಾನಿಗಳನ್ನು ಒಳಗೊಂಡ ಆಯೋಗವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರಚಿಸಿ ರೈತರಿಗೆ ಹಾಗೂ ಅಮೆರಿಕ ಸರ್ಕಾರಕ್ಕೆ ಉತ್ತರ ನೀಡಬೇಕಿದೆ” ಎಂದು ಕೆ ಟಿ ಗಂಗಾಧರ್‌ ಒತ್ತಾಯಿಸಿದ್ದಾರೆ.

KT Gangadhar

    

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

Download Eedina App Android / iOS

X