ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ(ಬಿಸಿಎಂ) ಅಡಿ ನಿರ್ಮಾಣಗೊಂಡಿರುವ ಡಿ.ದೇವರಾಜ ಅರಸು ಭವನ, ಮುದ್ದೇಬಿಹಾಳ ತಾಲೂಕಿನ ಬಿಸಿಎಂ ಇಲಾಖೆ ಕಚೇರಿ ಕಟ್ಟಡ ಪುಂಡ ಪೋಕರಿಗಳ ತಾಣವಾಗಿ ಮಾರ್ಪಟ್ಟಿದ್ದು, ಮಲಮೂತ್ರ ಮೂತ್ರ ವಿಸರ್ಜಿಸುವುದಕ್ಕೆ ಬಳಯಾಗುತ್ತಿರುವುದನ್ನು ಕಂಡು ಅಕ್ಕಪಕ್ಕದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹುಡ್ಕೋದಲ್ಲಿರುವ ಎರಡನೇ ಗಾರ್ಡನ್ ಪಕ್ಕದಲ್ಲಿ ಅರ್ಧಕ್ಕೆ ನಿಂತಿರುವ ಅರಸು ಭವನ ನಿರ್ಮಾಣಕ್ಕೆ 2021ರಲ್ಲಿ ಒಂದು ಕೋಟಿ ರೊ ಅನುದಾನ ಬಿಡುಗಡೆಯಾಗಿತ್ತು. ಆಗ ಶಾಸಕರಾಗಿದ್ದ ಎ ಎಸ್ ಪಾಟೀಲ ನಡಹಳ್ಳಿಯವರು ಉದ್ಯಾನವನದ ಹತ್ತಿರವಿದ್ದ ಸಿಎ ನಿವೇಶನವನ್ನು ಇಲಾಖೆಗೆ ಕೊಡಸಿ ಅಲ್ಲಿ ಭವನ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದ್ದರು. ಕೆಆರ್‌ಐಡಿಎಲ್(ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ಹಿಂದಿನ ಭೋಸೇನಾ ನಿಗಮ)ಗೆ ಕಟ್ಟಡ ಕಾಮಗಾರಿ ನಿರ್ವಹಿಸಲು ಅನುಮೋದನೆ ಬಿಡುಗಡೆಯಾಗಿತ್ತು.
ಆಗ ಬಿಡುಗಡೆಯಾದ ₹50 ಲಕ್ಷ ಅನುದಾನದಲ್ಲಿ ಎರಡು ಅಂತಸ್ತಿನ ಕಟ್ಟಡ(ಕೆಳಗೆ ಸಮುದಾಯ ಭವನ, ಮೇಲೆ ತಾಲೂಕು ಕಚೇರಿ) ಅಸ್ತಿಪಂಜರದಂತೆ ಸಿದ್ದಗೊಂಡನಂತರ ಇನ್ನುಳಿದ ಅನುದಾನ ಸಕಾಲಕ್ಕೆ ಬಾರದೆ ಕಾಮಗಾರಿ ಅರ್ಧಕ್ಕೆ ನಿಂತುಹೋಯಿತು. ಇದೀಗ 2-3ವರ್ಷ ಕಳೆದರೂ ಅನುದಾನ ಬಾರದ ಕಾರಣ ಕಾಮಗಾರಿ ಅಪೂರ್ಣಗೊಂಡು ಇಡೀ ಕಟ್ಟಡ ಅನೈತಿಕ ಚಟುವಟಿಕೆಗಳಿಗೆ ಕಾನೂನು ಬಾಹಿರವಾಗಿ ಬಳಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಕಳವಳ ವ್ಯಕ್ತಪಡಿಸಿದೆ.
ನೆಲ ಅಂತಸ್ತಿನಲ್ಲಿ ಒಂದೇ ವಿಶಾಲವಾದ ಹಾಲ್ ಇದ್ದು, ಇಲ್ಲಿ ಗುಂಪು ಸೇರುವ ಪುಂಡರು ಬಿಯರ್, ವಿಸ್ಕಿ, ರಮ್ ಮುಂತಾದ ಮದ್ಯ ಸೇವನೆ ಮಾಡುತ್ತಾರೆ. ಬಾಟಲಿಗಳನ್ನು ಹಾಲ್‌ನೊಳಗೆ, ಕಟ್ಟಡದ ಸುತ್ತಲೂ ಎಸೆದು ಹೋಗುತ್ತಾರೆ. ಕೆಲ ಸಂದರ್ಭ ಅಮಲಿನಲ್ಲಿ ರಸ್ತೆಯಲ್ಲೇ ಬಾಟಲಿಗಳನ್ನು ಒಡೆಯುವುದರಿಂದ ಗಾಜಿನ ಚೂರು ಅಲ್ಲಿ ಸಂಚರಿಸುವ ಸಾರ್ವಜನಿಕರ ಕಾಲುಗಳಿಗೆ ಚುಚ್ಚಿ ಹಾನಿಯಾಗಿರುವುದೂ ಇದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಮೊದಲ ಅಂತಸ್ತಿನಲ್ಲಿ ಕಚೇರಿಗಾಗಿ ಕೊಠಡಿಗಳನ್ನು ನಿರ್ಮಿಸಿದ್ದರೂ ಅವುಗಳಿಗೆ ಕಿಟಕಿ, ಬಾಗಿಲು ಜೋಡಿಸದ ಕಾರಣ ಅನೈತಿಕ, ಅಕ್ರಮ ಚಟುವಟಿಕೆಗಳ ಸ್ವರ್ಗ ಎನಿಸಿಕೊಂಡಿದೆ. ಕೊಠಡಿಯೊಂದರಲ್ಲಿ ನೆಲದ ಮೇಲೆ ರಟ್ಟಿನ ಹಾಸಿಗೆ ಹಾಸಿರುವುದು ಅನೈತಿಕತೆಗೆ ಇಂಬು ನೀಡುವಂತಿದೆ. ಅಲ್ಲಲ್ಲಿ ಬಳಸಿದ ನಿರೋದ್‌ಗಳು ಕಂಡುಬರುವುದು ಲೈಂಗಿಕ ಚಟುವಟಿಕೆಗಳು ನಡೆಯುತ್ತಿವೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಇದಲ್ಲದೆ ಕೆಲ ಕೊಠಡಿಗಳಲ್ಲಿ ಮಲ ವಿಸರ್ಜಿಸಿ, ವಾತಾವರಣ ಹದಗೆಡಿಸಿರುವುದು ಕಣ್ಣಿಗೆ ರಾಚುವಂತಿದೆ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.
ಇದಲ್ಲದೆ ಕೆಲ ಕ್ಲಾಸ್ ಬಂಕ್ ಮಾಡುವ ಮೈಗಳ್ಳ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಇಲ್ಲಿಗೆ ಬಂದು ಸಿಗರೇಟ್, ಗಾಂಜಾ ಇನ್ನಿತರ ಮಾದಕ ದ್ರವ್ಯ ಸೇವಿಸಿ ಕಾಲ ಕಳೆಯುತ್ತಾರೆ. ನಶೆ ಇಳಿದ ನಂತರ ಮನೆಗೆ ಹೋಗುತ್ತಾರೆ. ಇದೇ ಪ್ರದೇಶದ ಕೂಗಳತೆ ದೂರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಇರುವುದು ಅಲ್ಲಿನ ನಿವಾಸಿಗಳ ಆತಂಕ ಇಮ್ಮಡಿಯಾಗಿದೆ.
“ಅರ್ಧಕ್ಕೆ ಬಾರಾಕಮಾನ್‌ನಂತೆ ನಿಂತಿರುವ ಕಟ್ಟಡದ ಸುರಕ್ಷತೆಗೆ ಬಿಸಿಎಂ ಅಧಿಕಾರಿಗಳಾಗಲಿ, ಕಟ್ಟಡ ನಿರ್ಮಾಣ ಹೊಣೆ ನಿರ್ವಹಿಸುತ್ತಿರುವ ಕೆಆರ್‌ಐಡಿಎಲ್‌ನವರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಪುಂಡರಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಹಲವು ಬಾರಿ ಅಕ್ಕಪಕ್ಕದವರು ಪೊಲೀಸರನ್ನು ಕರೆಸಿ ನಿಯಂತ್ರಣಕ್ಕೆ ಯತ್ನಿಸಿದರೂ ಅದು ಆಗಷ್ಟೇ ಫಲ ನೀಡಿ, ಕೆಲಹೊತ್ತಿನ ನಂತರ ಮತ್ತೆ ಯಥಾಸ್ಥಿತಿ ಮುಂದುವರೆಯುತ್ತದೆ. ಪೊಲೀಸರಾದರೂ ಎಷ್ಟು ಅಂತ ರಕ್ಷಣೆ ಮಾಡಬೇಕು” ಎಂದು ಜನತೆ ಹೇಳುತ್ತಾರೆ.
“ಪುಂಡ ಪೋಕರಿಗಳ ಹಾವಳಿ ಮಧ್ಯರಾತ್ರಿವರೆಗೂ ಮುಂದುವರೆದಿರುತ್ತದೆ. ಕಟ್ಟಡದ ಪಕ್ಕದ ರಸ್ತೆಯಲ್ಲಿ ಹೆಣ್ಣುಮಕ್ಕಳು ತಿರುಗಾಡಲು ಹೆದರುತ್ತಿದ್ದಾರೆ. ತೊಂದರೆ ಕೊಡಬೇಡಿ ಎಂದು ಬುದ್ಧಿ ಹೇಳಲು ಹೋದರೆ ಇದೇನು ನಿಮ್ಮ ಮನೆಯೇ, ನಿಮ್ಮ ಆಸ್ತಿಯೇ, ಸರ್ಕಾರದ ಅಸ್ತಿ. ಏನು ಬೇಕಾದರೂ ಮಾಡುತ್ತೇವೆಂದು ನಮಗೇ ಬೆದರಸಿ ಕಳಿಸುತ್ತಾರೆ” ಎಂಬುದು ಅಕ್ಕಪಕ್ಕದ ಮಹಿಳೆಯರ ಆರೋಪವಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಶಿವಲೀಲಾ ಕೊಣ್ಣುರೊ ಮಾತನಾಡಿ, “ಅನುದಾನ ಬಿಡುಗಡೆಯಾಗದ ಕಾರಣ ಕೆಲಸ ಅರ್ಧಕ್ಕೆ ನಿಂತಿದ್ದು, ಸದರಿ ಕಟ್ಟಡದಲ್ಲಿ ಅಕ್ರಮ, ಅನೈತಿಕ ಚಟುವಟಿಕೆ ನಡೆಯುತ್ತಿರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುತ್ತೇವೆ. ಈ ಕುರಿತು ಪೊಲೀಸ್ ಇಲಾಖೆಗೂ ಪತ್ರ ಬರೆಯುತ್ತೇವೆ. ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಬಿಡುಗಡೆಯಾದ ಕೂಡಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಬಳಕೆಗೆ ಅನುವುಮಾಡಿಕೊಡುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಉದ್ಯೋಗ | HPCL ಸಂಸ್ಥೆಯಲ್ಲಿ ನೇಮಕಾತಿ; ಅರ್ಜಿ ಸಲ್ಲಿಸಲು ಜೂನ್ 30 ಕೊನೆ ದಿನ
“ಸಂಬಂಧಿಸಿದವರು ಕೂಡಲೇ ಎಚ್ಚೆತ್ತುಕೊಂಡು ಕಟ್ಟಡದ ನೆಲ ಅಂತಸ್ತಿನ ಪ್ರವೇಶ ಸ್ಥಳದಲ್ಲಿ ಕಬ್ಬಿಣದ ಗೇಟ್ ಅಳವಡಿಸಿ ಯಾರೂ ಒಳಗೆ ಪ್ರವೇಶಿಸದಂತೆ ಮಾಡಬೇಕು. ಇಲ್ಲವಾದಲ್ಲಿ ಅಕ್ಕಪಕ್ಕದ ನಿವಾಸಿಗಳಾಗಿರುವ ನಾವೇ ಮುಂದೆ ನಿಂತು ಪ್ರವೇಶ ಸ್ಥಳದಲ್ಲಿ ಮುಳ್ಳುಕಂಟಿಗಳನ್ನು ಹಾಕಿ ಯಾರೂ ಒಳಗೆ ಹೋಗದಂತೆ ಬಂದ್ ಮಾಡುತ್ತೇವೆ” ಎಂದು ಸ್ತಳೀಯರು ಎಚ್ಚರಿಕೆ ನೀಡಿದ್ದಾರೆ.
ಇಷ್ಟಾದರೂ ತಾಲೂಕು ಆಡಳಿತವಾಗಲಿ, ಜನಪ್ರತಿನಿದಿಗಳಾಗಲಿ ಕ್ರಮ ವಹಿಸಿ, ಅನೈತಿಕ ಚಟುವಟಿಕೆಗೆ ಬಳಕೆಯಾಗುತ್ತಿರುವ ಬಿಸಿಎಂ ಕಟ್ಟಡಕ್ಕೆ ಮುಕ್ತಿ ದೊರೆಯುವುದೇ? ಎಂಬುದನ್ನು ಕಾದು ನೋಡಬೇಕಿದೆ.