ಚಿತ್ತಾಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಪಿ.ಚಿತ್ತಾಪುರ ಕಂದಾಯ ವ್ಯಾಪ್ತಿಯ ಜಮೀನಿನಲ್ಲಿ ಗುರುವಾರ ಕುರಿ ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ತೆರೆದ ಬಾವಿಯಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಕುಶಾಲ್ ಚೆನ್ನಪ್ಪ (8), ರಾಜಕುಮಾರ ಲಕ್ಷ್ಮಣ (15) ಎಂಬ ಬಾಲಕರು ಮೃತಪಟ್ಟವರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ, ಗ್ರೇಡ್-2 ತಹಶೀಲ್ದಾರ್ ರಾಜಕುಮಾರ ಮರತೂರಕರ್ ಹಾಗೂ ಪಿಎಸ್ಐ ಶ್ರೀಶೈಲ್ ಅಂಬಾಟಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳೀಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬಾಲಕರಿಬ್ಬರ ಮೃತದೇಹಗಳನ್ನು ಬಾವಿಯಿಂದ ಹೊರಗೆ ತೆಗೆದಿದ್ದಾರೆ. ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾತರಿಸಿದರು.
ಇದನ್ನೂ ಓದಿ : ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತ : ಯಾದಗಿರಿ ಮೂಲದ ಶಿವಲಿಂಗ ಕುಂಬಾರ ಸಾವು
ಮೃತಪಟ್ಟಿರುವ ಬಾಲಕರಿಬ್ಬರ ಕುಟುಂಬಕ್ಕೆ ಸಿಎಂಆರ್‌ಎಫ್ ನಿಧಿಯಡಿ ಪರಿಹಾರ ಒದಗಿಸಲು ಠಾಣೆಯಲ್ಲಿ ದಾಖಲಾದ ಪ್ರಕರಣದ ವಿವರ ಹಾಗೂ ಶವ ಪರೀಕ್ಷೆ ವರದಿಯೊಂದಿಗೆ ಶೀಘ್ರ ವರದಿ ಸಲ್ಲಿಸುವಂತೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೂಚಿಸಿದ್ದಾರೆ ಎನ್ನಲಾಗಿದೆ.