2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯನ್ನು ಎದುರಿಸಲು ಸಲುವಾಗಿ ಕಾರ್ಯತಂತ್ರವನ್ನು ರೂಪಿಸಲು ಇಂದು ಬೆಂಗಳೂರಿನಲ್ಲಿ ಸಭೆ ಸೇರಿರುವ 26 ವಿರೋಧ ಪಕ್ಷಗಳ ಒಕ್ಕೂಟಕ್ಕೆ “ಇಂಡಿಯಾ (I.N.D.I.A)” ಎಂಬ ಹೆಸರನ್ನು ಅಂತಿಮಗೊಳಿಸಲಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ, ಇಂಡಿಯಾ ಅಥವಾ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲಯನ್ಸ್(ಭಾರತ ರಾಷ್ಟ್ರೀಯ ಅಭಿವೃದ್ಧಿಶೀಲ ಸರ್ವಸಮ್ಮಿಳಿತ ಒಕ್ಕೂಟ) ಎಂಬ ಸಂಕ್ಷಿಪ್ತ ರೂಪವನ್ನು ಆಡಳಿತ ಪಕ್ಷವನ್ನು ಎದುರಿಸಲು ಪ್ರಯತ್ನಿಸುವ ವಿರೋಧ ಪಕ್ಷದ ಹೆಸರನ್ನಾಗಿ ಇಡಲಾಗಿದೆ.
ಸಭೆಯ ಮೊದಲ ದಿನ ಅನೌಪಚಾರಿಕವಾಗಿತ್ತು. ಇಂದು, ಮಹಾಮೈತ್ರಿಕೂಟದ ಹೆಸರಿನ ಬಗೆಯ ಚರ್ಚೆಯೊಂದಿಗೆ ಸಭೆ ಹೆಚ್ಚು ಔಪಚಾರಿಕವಾಗಲಿದೆ. ನಿನ್ನೆ ನಡೆದ ಔತಣಕೂಟದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಹೆಸರುಗಳನ್ನು ಸೂಚಿಸುವಂತೆ ತಿಳಿಸಲಾಗಿತ್ತು.
ಮೂಲಗಳ ಪ್ರಕಾರ, ಮಾಜಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ವಿಪಕ್ಷಗಳ ಒಕ್ಕೂಟದ ಅಧ್ಯಕ್ಷರನ್ನಾಗಿ ಹೆಸರಿಸಲು ನಿರ್ಧರಿಸಲಾಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಚಾಲಕರಾಗಿರುತ್ತಾರೆ. ಸೋನಿಯಾ ಗಾಂಧಿ ಅವರು 2004 ರಿಂದ 2014 ರವರೆಗೆ ಸಂಯುಕ್ತ ಪ್ರಜಾಸತ್ತಾತ್ಮಕ ಒಕ್ಕೂಟದ (ಯುಪಿಎ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಹೆಚ್ಚುವರಿಯಾಗಿ, ಎರಡು ಉಪಸಮಿತಿಗಳನ್ನು ರಚಿಸಲಾಗುತ್ತದೆ. ಒಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮತ್ತು ಸಂವಹನ ಅಂಶಗಳನ್ನು ಅಂತಿಮಗೊಳಿಸಲು ಮತ್ತು ಇನ್ನೊಂದು ಜಂಟಿ ವಿರೋಧದ ಕಾರ್ಯಕ್ರಮಗಳು, ರ್‍ಯಾಲಿಗಳು ಮತ್ತು ಸಮಾವೇಶಗಳನ್ನು ಯೋಜಿಸಲು ರೂಪಿಸಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಆಸಕ್ತಿ ಹೊಂದಿಲ್ಲ: ವಿಪಕ್ಷಗಳ ಸಭೆಯಲ್ಲಿ ಖರ್ಗೆ ಹೇಳಿಕೆ
ಬೆಂಗಳೂರಿನ ಪ್ರತಿಪಕ್ಷಗಳ ಸಭೆಯಲ್ಲಿ ಸೋನಿಯಾ ಗಾಂಧಿ ಅವರಲ್ಲದೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಎಂ ಕೆ ಸ್ಟಾಲಿನ್, ನಿತೀಶ್ ಕುಮಾರ್, ಅರವಿಂದ್ ಕೇಜ್ರಿವಾಲ್, ಹೇಮಂತ್ ಸೊರೆನ್, ಮಮತಾ ಬ್ಯಾನರ್ಜಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಭಾಗವಹಿಸಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.
“ಸಾಮಾಜಿಕ ನ್ಯಾಯ, ಒಳಗೊಳ್ಳುವ ಅಭಿವೃದ್ಧಿ ಮತ್ತು ರಾಷ್ಟ್ರೀಯ ಕಲ್ಯಾಣದ ಕಾರ್ಯಸೂಚಿಯನ್ನು ಉತ್ತೇಜಿಸಲು ಸಮಾನ ಮನಸ್ಕ ವಿರೋಧ ಪಕ್ಷಗಳು ನಿಕಟವಾಗಿ ಒಟ್ಟಾಗಿ ಕೆಲಸ ಮಾಡುತ್ತವೆ. ನಾವು ದ್ವೇಷ, ವಿಭಜನೆ, ಆರ್ಥಿಕ ಅಸಮಾನತೆ ಮತ್ತು ನಿರಂಕುಶ ಮತ್ತು ಜನವಿರೋಧಿ ರಾಜಕೀಯದಿಂದ ಭಾರತದ ಜನರನ್ನು ಮುಕ್ತಗೊಳಿಸಲು ಬಯಸುತ್ತೇವೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.