ಶಿವಮೊಗ್ಗ-ಭದ್ರಾವತಿ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಪದ್ಧತಿ ಕುರಿತು ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಅಸಮಾಧಾನ ಮತ್ತು ಆಕ್ರೋಶವು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ನಗರದ ನಿತ್ಯ ಸಂಚಾರದಲ್ಲಿ ಬಸ್‌ಗಳು ನಿಗದಿತ ಬಸ್‌ಸ್ಟಾಪ್‌ಗಳಲ್ಲಿ ನಿಲ್ಲಿಸದಿರುವುದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದಲ್ಲದೇ, ಚಾಲಕರು ಮತ್ತು ನಿರ್ವಾಹಕರ ನಿರ್ಲಕ್ಷ್ಯದಾಟ, ಬಸ್ ನಿಲ್ದಾಣದ ಅವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತೆಯೂ ಸಮಸ್ಯೆಗಳನ್ನು ಇನ್ನಷ್ಟು ಗಂಭೀರಗೊಳಿಸುತ್ತಿವೆ. ಈ ಪೈಪೋಟಿಯಲ್ಲಿ, ಶಕ್ತಿ ಯೋಜನೆಯಂತಹ ಮಹತ್ವದ ಸರ್ಕಾರಿ ಯೋಜನೆಯು ತನ್ನ ಉದ್ದೇಶವನ್ನು ಕಳೆದುಕೊಳ್ಳುವ ಹಂತಕ್ಕೆ ಬಂದಿದೆ.
ಶಿವಮೊಗ್ಗ ನಗರದಲ್ಲಿ ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಕೆಎಸ್‌ಆರ್‌ಟಿಸಿ ಕಳ್ಳಾಟ ಜಾಸ್ತಿ ಆದಂತಿದೆ. ಅಧಿಕಾರಿಗಳು ದೂರು ನೀಡಿದರೆ ಯಥಾ ಪ್ರಕಾರ ಕ್ರಮದ ಭರವಸೆ ನೀಡುತ್ತಾರೆ. ಮುಂದೆ ಯಾರ ಮೇಲಾದರೂ ಕ್ರಮವಾಯಿತಾ ಎಂಬುದು ಸುದ್ದಿಯೇ ಇರಲ್ಲ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಜಡ್ಡು ಹಿಡಿದಿದ್ದಾರೆ ಎನ್ನುವುದು ನಿತ್ಯ ಓಡಾಡುವ ಪ್ರಯಾಣಿಕರ ಆರೋಪ.
ಭದ್ರಾವತಿಯಿಂದ ಪ್ರತಿದಿನ ಸಂಚರಿಸುವ ನಗರ ಸಾರಿಗೆ ಬಸ್‌ಗಳ ವರ್ತನೆಯ ಬಗ್ಗೆ ಸಾರ್ವಜನಿಕರು ಮತ್ತೊಮ್ಮೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿದಿನ ಸಂಜೆ ವೇಳೆ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಸಂಚರಿಸುವ ‘ಕೆಎ 42 ಎಫ್ 1949’ ಸಂಖ್ಯೆಯ ಹಸಿರು KSRTC ಬಸ್, ನಿಗದಿತ ಬಸ್ ನಿಲ್ದಾಣಗಳಲ್ಲಿ ನಿಲ್ಲಿಸದೆ ಹೋಗಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಕಾಯುತ್ತಿದ್ದರೂ ಬಸ್ ನಿಲ್ಲಿಸದೆ ನಿರ್ಲಕ್ಷ್ಯ:
ಭದ್ರಾವತಿಯಿಂದ ಶಿವಮೊಗ್ಗ ನಗರ ಮಾರಗವಾಗಿ ಶುಗರ್ ಫ್ಯಾಕ್ಟರಿ, ಹರಿಗೆ ಸೇರಿ ಹಲವು ನಿಗದಿತ ನಿಲ್ದಾಣಗಳಿವೆ. ಈ ನಿಲ್ದಾಣಗಳಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಬಸ್ ನಿಲ್ಲಿಸಲು ಕೈ ತೋರಿಸಿದರೂ, ಬಸ್ ಚಾಲಕ ಹಾಗೂ ನಿರ್ವಾಹಕ ಅವರುಗಳಿಗೆ ಪುಕ್ಕಟೆಯ ನಿರ್ಲಕ್ಷ್ಯ ತೋರಿದ್ದಾರೆ.
ಮಳೆಗಾಲದಂತಹ ದಿನಗಳಲ್ಲಿ ಹಾಗೂ ಸಂಜೆ ವೇಳೆ ಹೀಗೆ ಮಾಡಿದರೆ ಮಹಿಳೆಯರು, ಮಕ್ಕಳು, ವೃದ್ಧರ ಕತೆಯೇನು? ಸರ್ಕಾರೀ ಸಂಬಳದ ಗರ್ವವೋ ಇಲ್ಲ ಇದು ಸರ್ಕಾರದ ಬಸ್ ಸಾರ್ವಜನಿಕ ಸೇವೆಗೆ ಇರುವುದು ಎನ್ನುವುದನ್ನು ಮರೆತಿರುತ್ತಾರೋ ಎನ್ನುವಂತೆ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಈ ಆರೋಪಕ್ಕೂ ಅವರಲ್ಲಿ ಹಲವು ಸಿದ್ಧ ಉತ್ತರಗಳಿರುತ್ತವೆ. ಪ್ರಯಾಣಿಕರ ಮೇಲೆಯೇ ದರ್ಪ ತೋರಿಸಿ ಜಾರಿಕೊಳ್ಳುವ ಮನಸ್ಥಿತಿ ಇಲ್ಲಿಯ ಬಹುತೇಕ ಚಾಲಕ, ನಿರ್ವಾಹಕರದ್ದು. ಇವರ ದರ್ಪದ ಹುಚ್ಚಾಟಕ್ಕೆ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ.
“ನಾವು ಯಾರಿಗೆ ಪ್ರಶ್ನಿಸೋಣ?” ಜನತೆ ಪ್ರಶ್ನೆ
“ಪ್ರತಿದಿನ ಕೆಲಸ ಮುಗಿಸಿಕೊಂಡು ಮನೆಗೆ ಮರಳುವ ಸಮಯದಲ್ಲಿ ಇದೇ ಗೋಳು. ಸರ್ಕಾರ ಉಚಿತ ಸೇವೆ ಕೊಟ್ಟರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಿಬ್ಬಂದಿಗಳು ಕೊಡದಂತಾಗಿದೆ. ವೈಯಕ್ತಿಕ ವಾಹನವಿಲ್ಲದವರಿಗೆ ಸಾರಿಗೆ ಬಸ್‌ಗಳೇ ಗತಿ. ಆದರೆ ಇದಾವುದನ್ನು ಯೋಚಿಸದ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಮನಸೋ ಇಚ್ಛೆ ಬಸ್ ಚಾಲನೆ ಮಾಡುತ್ತಾರೆ. ನಿಗದಿತ ಸ್ಥಳಗಳಲ್ಲಿ ಬಸ್ ನಿಲ್ದಾಣ ಎಂದು ಬೋರ್ಡ್ ಇದ್ದರೂ ನಿಲ್ಲಿಸದೆ ಹೋಗಿಬಿಡುತ್ತಾರೆ. ಇದನ್ನೆಲ್ಲ ನಾವು ಯಾರ ಬಳಿ ಪ್ರಶ್ನಿಸಬೇಕು. ಪ್ರಶ್ನಿಸಿದರೂ ಸ್ಪಂದಿಸುವವರು ಯಾರು ಎಂಬುದೇ ತಿಳಿಯುತ್ತಿಲ್ಲ” ಎನ್ನುತ್ತಾರೆ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರು.

ನಿತ್ಯ ಬೆಳಗ್ಗೆಯಿಂದ ಸಂಜೆವರೆಗೂ 8 ರಿಂದ 10 ರೂಟ್ ಚಾಲನೆ ಮಾಡಬೇಕು. ಆದರೆ, ಮಧ್ಯಾಹ್ನದೊಳಗೆ ಚಾಲಕರು ತಮ್ಮ ರೂಟ್ ಮುಗಿಸಿ ಬಿಡುತ್ತಾರೆ. ಅಧಿಕಾರಿಗಳೂ ಸಹ ಈ ಸಂಬಂಧ ತಲೆಕೆಡಿಸಕೊಳ್ಳುತ್ತಿಲ್ಲ. ಬೆಳಗಿನ ವೇಳೆಯಲ್ಲಿ ಏಕಾಏಕಿ ಒಟ್ಟೊಟ್ಟಿಗೆ ಎರಡು ಮೂರು ಬಸ್ ಬಂದುಬಿಡುತ್ತವೆ. ನಂತರ ಗಂಟೆಗಟ್ಟಲು ಕಾದರೂ ಒಂದು ಬಸ್ ಬರುವುದಿಲ್ಲ. ಜೊತೆಗೆ ಬರುವ ಒಂದೋ ಎರಡೋ ಬಸ್‌ಗಳೂ ಕೂಡ ಪೂರ್ತಿ ಭರ್ತಿಯಾಗಿ ಬರುತ್ತವೆ. ಇದರಿಂದ ಸಮಯಕ್ಕೆ ಸರಿಯಾಗಿ ಹೋಗಬೇಕಾದ ಸ್ಥಳಗಳಿಗೆ ತಲುಪುವುದು ತ್ರಾಸದಾಯಕವಾಗಿದೆ ಎಂಬುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣ.
ಕೊರೋನಾ ಮುಂಚೆ ಖಾಸಗಿ ಬಸ್‌ಗಳು ಅಧಿಕವಾಗಿದ್ದವು. ಖಾಸಗಿ ಬಸ್ ಸೇವೆಯಿಂದಾದರೂ ತಕ್ಕ ಮಟ್ಟಿಗೆ ಪ್ರಯಾಣಿಕರು, ಸಾರ್ವಜನಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಾಗರಿಕರಿಗೆ ನಗರದಲ್ಲಿ ಓಡಾಡುವುದಕ್ಕೆ ಅನುಕೂಲವಾಗುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಅವೂ ಬರುತ್ತಿಲ್ಲ. ಸರ್ಕಾರ ಉಚಿತ ಬಸ್ ಸೇವೆ ಆರಂಭಿಸಿದ ಮೇಲಂತೂ ಖಾಸಗಿ ಬಸ್‌ಗಳು ರಸ್ತೆಗಿಳಿಯುವುದೇ ಕಡಿಮೆಯಾಗಿದೆ. ಅನಿವಾರ್ಯವಾಗಿ ಸರ್ಕಾರಿ ಬಸ್‌ಗಳಲ್ಲೇ ಓಡಾಡಬೇಕು. ಈ ಸಿಬ್ಬಂದಿಗಳಿಂದ ಬಸ್‌ಗಾಗಿ ಕಾಯುವುದು, ಬಸ್ ಬಂದರೂ ನಿಲ್ದಾಣಗಳಲ್ಲಿ ನಿಂತಿರುವವರನ್ನು ನಿರ್ಲಕ್ಷಿಸಿ ಹೋಗುವುದು ಇವೇ ಆಗುತ್ತಿವೆ.
ಶಿವಮೊಗ್ಗದಿಂದ ಭದ್ರಾವತಿಗೆ ಹೋಗುವ ಮಾರ್ಗ ಮಧ್ಯೆ ಸಿಗುವ ಮಲವಗೋಪ್ಪವರೆಗೂ ಮಾತ್ರ ಖಾಸಗಿ, ಸಿಟಿ ಬಸ್ ವ್ಯವಸ್ಥೆಯಿದೆ ಮುಂದಕ್ಕೆ ಕೆಎಸ್‌ಆರ್‌ಟಿಸಿಯನ್ನೇ ಅವಲಂಬನೆ ಮಾಡಬೇಕಾಗಿದೆ. ಇದನ್ನು ದುರುಪಯೋಗಪಡಿಸಿಕೊಳ್ಳತ್ತಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಮಸ್ಯೆ ಸರಿಪಡಿಸುವ ಬದಲು ಮತ್ತಷ್ಟು ಸಮಸ್ಯೆ ತಂದಿಡುತ್ತಿದ್ದಾರೆ.

ಈ ಕುರಿತು ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ಡಿಪೋ ಮ್ಯಾನೇಜರ್, “ಎಲ್ಲವೂ ಸರಿಯಾಗಿದೆ. ಶಿವಮೊಗ್ಗ-ಭದ್ರಾವತಿ ಮಾರ್ಗದ ಬಸ್ ಗಳು ಈ ಮುಂಚೆ ಭದ್ರಾವತಿ ಫ್ಲೈಓವರ್ ಕಾಮಗಾರಿ ಪ್ರಗತಿಯಲ್ಲಿದ್ದ ಕಾರಣ ಸಮಸ್ಯೆ ಆಗುತ್ತಿತ್ತು. ಪ್ರಸ್ತುತ ಎಲ್ಲಾ ಸಮಸ್ಯೆ ಬಗೆಹರಿದಿದೆ ಹಾಗೂ ಈ ರೀತಿಯಲ್ಲಿ ನಿಗಿದಿತ ಸ್ಟಾಪ್ ಗಳಲ್ಲಿ ಬಸ್ ನಿಲ್ಲಿಸದೆ, ಪ್ರಯಾಣಿಕರಿಗೆ ತೊಂದರೆ ಮಾಡಿದ ಬಸ್ ಫೋಟೋ ಕಳಿಸಿಕೊಡಿ, ಬಿಗಿ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಪ್ರಯಾಣದ್ದು ಒಂದು ಕಡೆ ಸಮಸ್ಯೆಯಾದರೆ ಇನ್ನೊಂದೆಡೆ ನಿತ್ಯ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೊಬೈಲ್, ಬ್ಯಾಗ್, ಲ್ಯಾಪ್‌ಟಾಪ್ ಹಾಗೂ ಆಭರಣ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಶೌಚಾಲಯಗಳಲ್ಲಿ ನಿಗದಿಗಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ, ಬಸ್ ಗಳ ಸರಿಯಾದ ಸಮಯದ ಕುರಿತು ಮಾಹಿತಿ ನೀಡುವುದಿಲ್ಲ ಎಂಬ ದೂರುಗಳೂ ಕೇಳಿಬರುತ್ತಿವೆ.
ಶಿವಮೊಗ್ಗ – ಭದ್ರಾವತಿ ಹಾಗೂ ಭದ್ರಾವತಿ – ಶಿವಮೊಗ್ಗಕ್ಕೆ ಬರುವ ನಗರ ಸಾರಿಗೆ ಬಸ್ ಗಳಿಗೆ ಕೆಂಪು ಬೋರ್ಡ್ ಹಾಕುತ್ತಿದ್ದಾರೆ. ನಗರದಲ್ಲಿ KSRTC ಬಸ್ ವ್ಯವಸ್ಥೆಯನ್ನು ಸಮಯಕ್ಕೆ ಸರಿಯಾಗಿ ಮಾಡುತ್ತಿಲ್ಲ, ಇದರೊಂದಿಗೆ ಕೆಂಪು ಬೋರ್ಡ್ ಹಾಕಿಕೊಂಡು ಬಸ್ ನಿಲ್ಲಿಸದೆ ಹೋದರೆ ವಯೋವೃದ್ದರು, ರೋಗಿಗಳು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳಿಗೆ ಎಷ್ಟೆಲ್ಲ ತೊಂದರೆ ಆಗಲಿದೆ ಎಂಬುದು ಅಧಿಕಾರಿಗಳಿಗೆ ತಿಳಿದಿಲ್ಲವೇ? ಎಂಬುದು ಪ್ರಯಾಣಿಕರ ಪ್ರಶ್ನೆ.

ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ಶಿವಮೊಗ್ಗ ನಗರದಲ್ಲಿ ದಿನನಿತ್ಯ ತೊಂದರೆ ಅನುಭವಿಸುತ್ತಿರುವ ಪ್ರಯಾಣಿಕರಿಗೆ ಹಾಗೂ ಜನಸಾಮಾನ್ಯರಿಗೆ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.
ಶಿವಮೊಗ್ಗ-ಭದ್ರಾವತಿ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ಲಕ್ಷ್ಯ ಹಾಗೂ ಜವಾಬ್ದಾರಿಯ ಅಭಾವ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸಿದೆ. ಸಾರ್ವಜನಿಕ ಸೇವೆಗೆ ಮೀಸಲಾಗಿರುವ ಸಾರಿಗೆ ವ್ಯವಸ್ಥೆ ಇಂದಿನ ದಿನಗಳಲ್ಲಿ ಕೆಲವೊಂದು ಸಿಬ್ಬಂದಿಗಳ ಧಾಟಿ, ಅನಿಯಂತ್ರಿತ ಧೋರಣೆಯಿಂದ ತನ್ನ ಗೌರವ ಕಳೆದುಕೊಳ್ಳುತ್ತಿದೆ. ಶಕ್ತಿ ಯೋಜನೆ ಮೂಲಕ ಸರ್ಕಾರ ಸಾರ್ವಜನಿಕರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುತ್ತಿದ್ದರೂ, ಅದನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಅಗತ್ಯವಿರುವ ಮಾನವೀಯತೆ, ಶಿಸ್ತು ಹಾಗೂ ವ್ಯವಸ್ಥಾಪನಾ ನಿಷ್ಠೆ ನಿಷ್ಕ್ರಿಯವಾಗುತ್ತಿರುವುದು ಜನಸಾಮಾನ್ಯರಿಗೆ ನಿರಾಸೆ ಉಂಟುಮಾಡುತ್ತಿದೆ.
ಪ್ರತಿಯೊಂದು ಬಸ್ ನಿಗದಿತ ಬಸ್‌ಸ್ಟಾಪ್‌ನಲ್ಲಿ ನಿಲ್ಲಿಸಬೇಕೆಂಬ ನಿಯಮವಿದ್ದು, ಅದನ್ನು ಉಲ್ಲಂಘಿಸುವುದು ಸಾರ್ವಜನಿಕ ಹಕ್ಕಿಗೆ ಮಾಡುವ ಅವಮಾನವಾಗಿದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ದುರವಸ್ಥೆಯ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿ, ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಾವಶ್ಯಕವಾಗಿದೆ. ಇಲ್ಲದಿದ್ದಲ್ಲಿ ಈ ನಿರ್ಲಕ್ಷ್ಯ ನಾಗರಿಕರ ವಿಶ್ವಾಸ ಕಳೆದುಕೊಂಡು ಸರ್ಕಾರದ ಮಹತ್ವದ ಯೋಜನೆಗಳ ಮೇಲೂ ಭ್ರಮ ನಿರಸನ ಉಂಟುಮಾಡಲು ಕಾರಣವಾಗಬಹುದು.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.