ಪ್ರಬಲ ಜಾತಿಯ ಸುಮಾರು 60 ಜನರು ಮೂವರು ದಲಿತ ಯುವಕರನ್ನು ಗ್ರಾಮ ಪಂಚಾಯತಿ ಎದುರಿನ ಧ್ವಜಸ್ಥಂಭಕ್ಕೆ ಕಟ್ಟಿಹಾಕಿ, ಅಮನುಷವಾಗಿ ಹಲ್ಲೆ ನಡೆಸಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ನಡೆದಿದೆ. ತಡೆಯಲು ಬಂದ ಯವಕರ ಪೋಷಕರಿಗೂ ಸವರ್ಣೀಯರು ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯು ನರಗುಂದ ತಾಲೂಕಿನ ಬನಹಟ್ಟಿಯಲ್ಲಿ ಮೇ 29ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಬಲ ಜಾತಿಯ ಬಾಲಕಿಗೆ ಮೆಸೇಜ್ ಕಳಿಸಿದ್ದಾರೆ, ಚುಡಾಯಿಸಿದ್ದಾರೆ ಎಂಬ ಆರೋಪದ ಯುವಕರನ್ನು ಸವರ್ಣೀಯರು ಥಳಿಸಿದ್ದಾರೆ ಎಂದು ಹೇಳಲಾಗಿದೆ.
ದಲಿತ ಯುವಕರನ್ನು ಸಾರ್ವಜನಿಕವಾಗಿ ಧ್ವಜಸ್ಥಂಭಕ್ಕೆ ಕಟ್ಟಿಹಾಕಿ ಹಗ್ಗ, ದೊಣ್ಣೆ, ಚಪ್ಪಲಿಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಯುವಕರ ರಕ್ಷಣೆಗೆ ಬಂದ ಪೋಷಕರಿಗೂ ಬೆದರಿಕೆ ಹಾಕಿ ವಾಪಸ್ ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಯುವಕರ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಊರಿನಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ನಮ್ಮ ಮಕ್ಕಳನ್ನು ಅನಾವಶ್ಯಕವಾಗಿ, ಸುಳ್ಳು ಆರೋಪದ ಮೇಲೆ ಥಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪೋಷಕರು ನೀಡಿದ ದೂರಿನ ಆಧಾರದ ಮೇಲೆ ನರಗುಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದಾಗ್ಯೂ, ಸವರ್ಣೀಯರು ರಾಜಿ-ಸಂದಾನಕ್ಕೆ ಮುಂದಾಗಿದ್ದು, ಮಾತುಕತೆ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ಆದರೆ, ಹಲ್ಲೆಗೊಳಗಾದವರಲ್ಲಿ ಓರ್ವ ಯುವಕ ಅನುಮಾನದಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
“ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಈವರೆಗೆ 8 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಬಾಲಕಿಯರನ್ನು ಯುವಕರು ಚುಡಾಯಿಸಿದ್ದಾರೆ ಎಂಬ ಆರೋಪಗಳೂ ಇವೆ. ಆ ಬಗ್ಗೆಯೂ ತನಿಖೆ ನಡೆಯುತ್ತಿದೆ” ಎಂದು ನರಗುಂದ ಪೊಲೀಸರು ಈದಿನ.ಕಾಮ್‌ಗೆ ತಿಳಿಸಿದ್ದಾರೆ.
ಪ್ರಬಲ ಜಾತಿಯವರೂ ಕೂಡ ಸಂತ್ರಸ್ತ ಯುವಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.