ಮಲೆನಾಡು ಭಾಗದಲ್ಲಿ ಕಾಡಾನೆ ಮಾನವ ಸಂಘರ್ಷ ನಿರಂತರವಾಗಿದೆ. ಆಹಾರ ಅರಸಿ ಜನವಸತಿ ಪ್ರದೇಶಗಳಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳ ದಾಳಿಗೆ ಸಿಲುಕಿ ಮನುಷ್ಯ ಮೃತಪಟ್ಟರೆ, ಮತ್ತೊಂದೆಡೆ ಬೆಳೆ ರಕ್ಷಣೆಗೆ ರೈತ ಹಾಕಿದ ಅಕ್ರಮ ವಿದ್ಯುತ್ ತಂತಿಬೇಲಿ ಸೋಕಿ ಕಾಡಾನೆಗಳೂ ಪ್ರಾಣ ಬಿಡುತ್ತಿವೆ.
ಕಾಡು ಪ್ರಾಣಿಗಳ ಹಾವಳಿ ವಿಪರೀತವಾಗಿರುವ ಪ್ರದೇಶಗಳಲ್ಲಿ ಬೆಳೆ ರಕ್ಷಣೆಗೆ ರೈತರು ಸೋಲಾರ್ ತಂತಿ ಬೇಲಿ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಕಾಡಾನೆಗಳು ಜಾಣ್ಮೆಯಿಂದ ಈ ಸೋಲಾರ್ ತಂತಿ ಬೇಲಿಯ ಮರವನ್ನು ತಳ್ಳಿ ಬೇಲಿಯನ್ನು ಮುರಿದು ದಾಟುವ ಕಲೆಯನ್ನು ರೂಢಿಸಿಕೊಂಡಿವೆ.
ಈ ಕಾರಣದಿಂದಲೇ ಕೆಲವರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಕಾನೂನು ಮೀರಿ, ಸೋಲಾರ್ ವಿದ್ಯುತ್ ತಂತಿ ಬೇಲಿ ಬದಲಿಗೆ ಹೈವೋಲ್ಟೇಜ್ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದಾರೆ. ಹಾಗಾಗಿ ಆಗಾಗ ಕಾಡಾನೆಗಳು, ಕಾಡು ಪ್ರಾಣಿಗಳು ವಿದ್ಯುತ್ ಶಾಕ್ ತಗುಲಿ ಮೃತಪಡುತ್ತಿವೆ. ಹೀಗೆ ಮಾನವ-ಕಾಡಾನೆ ಸಂಘರ್ಷದಲ್ಲಿ ಪ್ರಸಕ್ತ ವರ್ಷ 9 ಕಾಡಾನೆಗಳು ವಿದ್ಯುತ್ ತಂತಿ ಬೇಲಿಯಿಂದಾಗಿ ಮೃತಪಟ್ಟಿವೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅರಣ್ಯ ಇಲಾಖೆ ಸಚಿವರಾಗಿ ಈಶ್ವರ್ ಖಂಡ್ರೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಮಲೆನಾಡು ಭಾಗದ ಹಾಸನ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಉಲ್ಬಣವಾಗಿರುವ ಕಾಡಾನೆ ಸಮಸ್ಯೆಯನ್ನು ಹೇಗೆ ನಿಬಾಯಿಸುತ್ತಾರೆ ಕಾದು ನೋಡಬೇಕಿದೆ.
ಅಕ್ರಮ ವಿದ್ಯುತ್ ತಂತಿಬೇಲಿಗಳ ತೆರವಿಗೆ ಕಟ್ಟುನಿಟ್ಟಿನ ಕ್ರಮ
“ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಸಮಿಪದ ಕುರುಬರಹುಂಡಿಯಲ್ಲಿ ಅಕ್ರಮ ವಿದ್ಯುತ್ ಬೇಲಿ ಸ್ಪರ್ಶಿಸಿ ಸಲಗ ಸಾವಿಗೀಡಾಗಿರುವುದು ನೋವಿನ ಸಂಗತಿ” ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ರಾಜ್ಯದಾದ್ಯಂತ ಅಕ್ರಮ ವಿದ್ಯುತ್ ಬೇಲಿಗಳ ವಿರುದ್ಧ ಕ್ರಮ ಜರುಗಿಸಲು ಸೂಚನೆ ನೀಡಿದ್ದೇನೆ. ಪ್ರಸಕ್ತ ವರ್ಷದಲ್ಲಿ ಈವರೆಗೆ 9 ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿರುವುದು ಅತ್ಯಂತ ವಿಷಾದಕರ ಸಂಗತಿ. ಇಂತಹ ಅಕ್ರಮ ವಿದ್ಯುತ್ ಬೇಲಿಗಳನ್ನು ತಿಳಿಯದೆ ಮುಟ್ಟಿ ಹಲವರು ಸಾವಿಗೀಡಾಗಿರುವ ಘಟನೆಗಳೂ ಈ ಹಿಂದೆ ನಡೆದಿವೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳಿಗೆ ಬೇಕಿದೆ ಪ್ರಥಮ ಚಿಕಿತ್ಸೆ
“ಈ ಭೂಮಿಯಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಬೆಳೆ ರಕ್ಷಣೆಗೆ ರೈತರು ವೈಜ್ಞಾನಿಕವಾಗಿ ಸೌರ ವಿದ್ಯುತ್ ಬೇಲಿ ಅಳವಡಿಸಿಕೊಳ್ಳಬೇಕೆ ಹೊರತು ಈ ರೀತಿ ವನ್ಯಮೃಗಗಳ ಅಥವಾ ಯಾವುದೇ ವ್ಯಕ್ತಿಯ ಸಾವಿಗೆ ಕಾರಣವಾಗುವುದು ಸರಿಯಲ್ಲ. ಪ್ರತಿಯೊಂದು ಜೀವವೂ ಅಮೂಲ್ಯ ರೈತರೂ ಈ ವಿಷಯದಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸಬೇಕು” ಎಂದು ಮನವಿ ಮಾಡಿದ್ದಾರೆ.
“ಅರಣ್ಯ ಅಧಿಕಾರಿಗಳು ತಮ್ಮ ವಲಯದಲ್ಲಿರುವ ಅಕ್ರಮ ವಿದ್ಯುತ್ ತಂತಿಬೇಲಿಗಳ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಸೂಚನೆ ನೀಡಿದ್ದಾರೆ.