ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ವಿಶ್ವಪರಿಸರ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಪರಿಸರದ ಸಮೃದ್ಧಿಯೇ ಕಾರಣವಾಗಿದೆ ಎಂದು ಸಿಂದಗಿ ವಲಯ ಉಪ ಅರಣ್ಯಾಧಿಕಾರಿ ಪ್ರಿಯಾಂಕ ನಗರ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸಂಗಮ ಸಂಸ್ಥೆಯಲ್ಲಿ ವಿಶ್ವಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಸಸಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಗಮ ಸಂಸ್ಥೆಯ ನಿರ್ದೇಶಕ ಫಾ. ಸಂತೋಷ ಮಾತನಾಡಿ, “ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಬೇರೆ ಬೇರೆ ಧೈಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವ ಮೂಲಕ ಪರಿಸರ ಹಾಳು ಮಾಡುವುದನ್ನು ತಡೆಯುವುದಾಗಿದೆ. ವಿಶ್ವಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಜಾಗತಿಕ ವೇದಿಕೆಯಾಗಿ ಬೆಳೆದಿದೆ” ಎಂದು ಹೇಳಿದರು.
ಸಂಗಮ ಸಂಸ್ಥೆಯ ಸಹಾ ನಿರ್ದೇಶಕಿ ಸಿಸ್ಟರ್ ಸಿಂತಿಯ ಮಾತನಾಡಿ, “ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಸರ ಸಂರಕ್ಷಣೆಯತ್ತ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಇತ್ತೀಚಿನ ದಿನಗಳಲ್ಲಿ ವಿಶ್ವದೆಲ್ಲೆಡೆ ಆಧುನೀಕರಣ, ಕೈಗಾರೀಕರಣದಿಂದಾಗಿ ಹೆಚ್ಚಿನ ಪರಿಸರ ನಾಶ ಸಂಭವಿಸುತ್ತಿದೆ. ಇದರಿಂದಾಗಿ ಮಳೆ, ಬೆಳೆ ಕಡಿಮೆಯಾಗುತ್ತಿದೆ. ವಾತಾವರಣದಲ್ಲಿ ಬದಲಾವಣೆ ಕಾಣಬಹುದಾಗಿದೆ. ಆದ್ದರಿಂದ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಮರ ಗಿಡಗಳನ್ನು ಬೆಳೆಸುವತ್ತ ಹೆಚ್ಚಿನ ಗಮನಹರಿಸಬೇಕಿದೆ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುವಲ್ಲಿ ಕೈಜೋಡಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಸ್ಪರ್ಧಾತ್ಮಕ ಪರೀಕ್ಷೆಗಳ ಓದು ನಿರಂತರವಾಗಿರಲಿ: ಡಾ ಪರಮಶಿವಮೂರ್ತಿ
“ಮುಂದಿನ ದಿನಗಳಲ್ಲಿ ಅತಿಹೆಚ್ಚು ಗಿಡಗಳನ್ನು ನೆಡುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ಜತೆಗೆ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವಂತಾಗಬೇಕು” ಎಂದು ತಿಳಿಸಿದರು.
“ಅರಣ್ಯ ಅಗ್ನಿ ಪಾಲಕರಾದ ಶಿವಾನಂದ ಹಾಗೂ ಅನಿಲ, ವಿವಿಧ ಹಳ್ಳಿಗಳಿಂದ ಸ್ವ-ಸಹಾಯ ಸದಸ್ಯರು, ಸಂಗಮ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿದರು. ನಂತರ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಒಂದೊಂದು ಸಸಿ ಕೊಡಲಾಯಿತು. ತೇಜಸ್ವಿನಿ ಹಳ್ಳದಕೇರಿ ಸ್ವಾಗತಿಸಿದರು. ಬಸವರಾಜ ಬಿಸನಾಳ ನಿರೂಪಿಸಿದರು. ಉಮೇಶ ದೊಡ್ಡಮನಿ ವಂದಿಸಿದರು.