ವಿಧಾನಸಭೆಯಲ್ಲಿ ಅಂಗೀಕೃತಗೊಂಡಿದ್ದ ಎರಡು ಮಹತ್ವದ ವಿಧೇಯಕಗಳನ್ನು ಮಂಗಳವಾರ ವಿಧಾನ ಪರಿಷತ್‌ನಲ್ಲೂ ಸುದೀರ್ಘ ಚರ್ಚೆಯ ನಂತರ ಅಂಗೀಕರಿಸಲಾಗಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ 2023 ಹಾಗೂ ಕರ್ನಾಟಕ ಸರಕು ಮತ್ತು ಸೇವೆಗಳ (ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆ ಅಂಗೀಕಾರ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು ಮಸೂದೆಗಳನ್ನು ಮಂಡಿಸಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
ಕರ್ನಾಟಕ ಸರಕು ಮತ್ತು ಸೇವೆಗಳ ತಿದ್ದುಪಡಿ ಕಾಯ್ದೆ ಮೇಲೆ ಅನೇಕ ಸದಸ್ಯರು ಮಾತನಾಡಿದರು. ಸದಸ್ಯರಾದ ಡಿ.ಎಸ್.ಅರುಣ್, ನವೀನ್, ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಮುನಿರಾಜು ಗೌಡ ಸೇರಿದಂತೆ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು. ಇನ್ನು ಜೆಡಿಎಸ್ ಪರವಾಗಿ ಮರಿತಿಬ್ಬೇಗೌಡ, ಟಿ.ಎ.ಶರವಣ, ಭೋಜೇಗೌಡ ಸೇರಿ ಹಲವು ಸದಸ್ಯರು ಈ ಬಗ್ಗೆ ಮಾತನಾಡಿದರು.
“ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಸೋರಿಕೆಯಾಗುತ್ತಿರುವ ತೆರಿಗೆಯನ್ನು ತಡೆಗಟ್ಟಲು ಬಿಗಿ ಕ್ರಮ ಕೈಗೊಳ್ಳಬೇಕು” ಎಂಬ ಸಲಹೆಗಳು ವ್ಯಕ್ತವಾದವು.
ಸಚಿವ ಎಚ್ ಕೆ ಪಾಟೀಲ್ ಉತ್ತರಿಸಿ, “ವಿಧೇಯಕ ತಿದ್ದುಪಡಿಯಿಂದ ಯಾರು ಕೂಡ ಆತಂಕ ಪಡಬೇಕಾದ ಅಗತ್ಯವಿಲ್ಲ. ಎಲ್ಲರನ್ನು ಗಮನದಲ್ಲಿಟ್ಟುಕೊಂಡೇ ತಿದ್ದುಪಡಿ ಮಾಡಲಾಗಿದೆ. ಸದಸ್ಯರ ಅಭಿಪ್ರಾಯ ಮನ್ನಿಸಲಾಗುವುದು” ಎಂದರು. ಬಳಿಕ ವಿಧೇಯಕವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ಅಂಗೀಕಾರ ಮಾಡಿದರು.