ಸರ್ಕಾರಿ ಶಾಲೆಯ ಹೆಸರುಳ್ಳ ನಾಮಫಲಕವನ್ನು ಉರ್ದು ಭಾಷೆಯಲ್ಲಿ ಬರೆಸಿದ ಕಾರಣಕ್ಕೆ ಶಾಲೆಯ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ.
ಬಿಜ್ನೋರ್‌ನ ಶಹನಪುರ-2 ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ರಪ್ತಾ ಖಾನ್ ಅವರನ್ನು ಅಮಾನತು ಮಾಡಿರುವುದಾಗಿ ಬಿಜ್ನೋರ್ ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ(ಬಿಎಸ್‌ಎ) ಯೋಗೇಂದ್ರ ಕುಮಾರ್ ತಿಳಿಸಿದ್ದಾರೆ.
ಮುಖ್ಯ ಶಿಕ್ಷಕಿ ರಪ್ತಾ ಖಾನ್ ಅವರು ಶಾಲೆಯ ಮುಖ್ಯ ದ್ವಾರ ಮತ್ತು ಒಳಗಿನ ಗೋಡೆ ಮೇಲೆ ಶಾಲೆಯ ಹೆಸರನ್ನು ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಬರೆಸಿದ್ದರು. ಹಿಂದಿಯ ಜೊತೆಗೆ ಉರ್ದು ಭಾಷೆಯಲ್ಲಿಯೂ ನಾಮಫಲಕವನ್ನು ಬರೆಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ.
ಹಿಂದಿ ಮತ್ತು ಉರ್ದು ಭಾಷೆಯಲ್ಲಿ ನಾಮಫಲಕ ಬರೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋ ಆಧರಿಸಿ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.
ಭಾಷೆಗೆ ಸಂಬಂಧಿಸಿದ ನಿಯಮಗಳನ್ನು ಮುಖ್ಯ ಶಿಕ್ಷಕಿ ಉಲ್ಲಂಘಿಸಿದ್ದಾರೆ. ಹೀಗಾಗಿ, ಅವರನ್ನು ಅಮಾನತು ಮಾಡಲಾಗಿದೆ ಎಂದು ಬಿಎಸ್‌ಎ ಯೋಗೇಂದ್ರ ಕುಮಾರ್ ಹೇಳಿದ್ದಾರೆ.
ಆದಾಗ್ಯೂ, ವೈರಲ್ ಆಗಿರುವ ವಿಡಿಯೋ ಹಳೆಯದ್ದಾಗಿದ್ದು, ಈ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಶಾಲೆಗೆ ಬಣ್ಣ ಬಳಿಯಲಾಗಿದೆ. ಈ ವೇಳೆ, ಉರ್ದು ಭಾಷೆಯಲ್ಲಿ ಬರೆಯಲಾಗಿದ್ದ ಹೆಸರನ್ನು ಅಳಿಸಲಾಗಿದೆ ಎಂದು ಅಮಾನತಾಗಿರುವ ಮುಖ್ಯ ಶಿಕ್ಷಕಿ ರಪ್ತಾ ಖಾನ್ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮರಾಠಿ ನಾಡಿನಲ್ಲಿ ಹಿಂದಿ ಕಡ್ಡಾಯಕ್ಕೆ ತಡೆ: ನಡೆದದ್ದೇನು?
ಪ್ರಕರಣದ ಕುರಿತು ತನಿಖೆ ನಡೆಸಲು ಶಿಕ್ಷಣ ಇಲಾಖೆ ಆದೇಶಿಸಿದೆ. ತನಿಖಾ ವರದಿ ಬಂದ ಬಳಿಕ, ಕಾನೂನು ಕ್ರಮ ಜರುಗಿಸುವುದಾಗಿ ಯೋಗೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.
ಅಂದಹಾಗೆ, ದಕ್ಷಿಣ ಭಾರತದ ರಾಜ್ಯಗಳು ಭಾಷಾ ಸ್ವಾಭಿಮಾನಕ್ಕಾಗಿ ಮತ್ತು ಹಿಂದಿ ಹೇರಿಕೆಯ ವಿರುದ್ಧ ನಿರಂತರವಾಗಿ ಹೋರಾಟ ನಡಸುತ್ತಿವೆ. ಆದರೆ, ಎಲ್ಲ ಭಾಷೆಗಳನ್ನು ಒಳಗೊಳ್ಳಬೇಕು, ಕಲಿಯಬೇಕು ಎಂದು ಉತ್ತರ ರಾಜ್ಯಗಳು, ಅದರಲ್ಲೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಹೇಳುತ್ತಿವೆ. ದಕ್ಷಿಣ ರಾಜ್ಯಗಳ ಮೇಲೆ ಹಿಂದಿಯನ್ನು ಹೇರಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಹವಣಿಸುತ್ತಿದೆ. ಇಂತಹ ಸಂದರ್ಭದಲ್ಲಿ, ಹಿಂದಿ ಭಾಷೆಯಲ್ಲದೆ, ಮತ್ತೊಂದು ಭಾಷೆಯಲ್ಲಿ ನಾಮಫಲಕ ಬರೆಸಿದ್ದಕ್ಕಾಗಿ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿರುವುದು ದಕ್ಷಿಣ ರಾಜ್ಯಗಳಲ್ಲಿ ಭಾಷಾ ಹೇರಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.