ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ನೇತಾಜಿ ಬಳಗ ಚಳ್ಳಕೆರೆ ಹಾಗೂ ಚಳ್ಳಕೆರೆ ನಗರದ ಎಲ್ಲಾ ಸಂಘಟನೆಗಳು ಒಗ್ಗೂಡಿ ಪಾವಗಡ ರಸ್ತೆ ರೈಲ್ವೆ ಗೇಟ್ ಹತ್ತಿರ ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ರೈತ ಮುಖಂಡ ಭೂತಯ್ಯ, “ಸುಮಾರು 13 ವರ್ಷಗಳಿಂದ ರೈತ ಸಂಘ ಮತ್ತು ಅನೇಕ ಸಂಘ ಸಂಸ್ಥೆಗಳು ಪಾವಗಡ ರಸ್ತೆಯ ಹೋರಾಟ ಮಾಡುತ್ತಿದ್ದು, ಈ ಬಾರಿ ದೊಡ್ಡಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಚಳ್ಳಕೆರೆ ನಗರವು ದಿನೇ ದಿನೇ 4 ದಿಕ್ಕಿನಲ್ಲೂ ಹೆಚ್ಚೆಚ್ಚು ಬೆಳೆಯುತ್ತಿದ್ದು ಜನ ಸಂದಣಿ ಜಾಸ್ತಿಯಾಗುತ್ತಿದ್ದು, ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಗೂಡ್ಸ್ ರೈಲು ಪ್ರತಿ ಗಂಟೆ ಚಲಿಸುವುದರಿಂದ ಈ ಸಮಯದಲ್ಲಿ ರೈಲ್ವೆ ಗೇಟ್ ಹಾಕಿದರೆ ವಾಹನಗಳು ಸುಮಾರು 1 ಕಿಲೋಮೀಟರ್‌ನಷ್ಟು ದೂರ ನಿಲುಗಡೆಯಾಗಿ ತೊಂದರೆ ಅನುಭವಿಸುತ್ತಿದ್ದಾರೆ” ಎಂದು ಕಿಡಿಕಾರಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, “ಗ್ರಾಮಾಂತರ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದ್ದು ಮತ್ತು ಪಾವಗಡ ರಸ್ತೆಯಲ್ಲಿ ಮೊರಾರ್ಜಿ ಶಾಲೆ, ಐಟಿಐ ಕಾಲೇಜು, ಆದರ್ಶ ಕಾಲೇಜು, ವಿದ್ಯಾರ್ಥಿ ನಿಲಯಗಳು, ಸಾರಿಗೆ ಘಟಕ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಪೂರ್ಣಚಂದ್ರ ತೇಜಸ್ವಿ ಶಾಲೆಗಳಿದ್ದು, ಈ ರೈಲ್ವೆ ಗೇಟ್ ಹಾಕಿದಮೇಲೆ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಸಾರ್ವಜನಿಕರಿಗೂ, ರೈತರಿಗೂ ಆಂಬ್ಯುಲೆನ್ಸ್‌ನಲ್ಲಿ ಹೋಗಿ ಬರುವ ರೋಗಿಗಳಿಗೆ ಬಹಳ ತೊಂದರೆಯಾಗಿ ಎಷ್ಟೋ ರೋಗಿಗಳು ಪ್ರಾಣ ಕಳೆದುಕೊಂಡು ತೊಂದರೆಗೀಡಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇತರ ಮುಖಂಡರು ಮಾತನಾಡಿ “ಈಗಿನ ಲೋಕಸಭಾ ಸದಸ್ಯರಾದ ಗೋವಿಂದ ಎಂ. ಕಾರಜೋಳ, ಈಗಿನ ರೈಲ್ವೆ ಕೇಂದ್ರ ಸಚಿವರಾದ ವಿ. ಸೋಮಣ್ಣನವರಿಗೂ ಸೇರಿದಂತೆ ಜಿಲ್ಲೆಯ ಹಿಂದಿನ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಮತ್ತು 2014 ರಿಂದ ರೈಲ್ವೆ ಗೇಟ್ ಹತ್ತಿರ ಎಲ್ಲಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರೈಲ್ವೆ ತಡೆ ಚಳುವಳಿ, ಧರಣಿ ಸತ್ಯಾಗ್ರಹ ಹಾಗೂ ಹುಬ್ಬಳ್ಳಿ ವಿಭಾಗದ ಸೂಪರಿಂಡೆಂಟ್ ಇಂಜಿನಿಯರ್ ಮತ್ತು ರೈಲ್ವೆ ಚೀಫ್ ಇಂಜಿನಿಯರ್, ಹಿಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಆರ್ ಬೊಮ್ಮಾಯಿ ಇವರೆಲ್ಲರಿಗೂ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗದ ಕಾರಣ ಇಂದು ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುತ್ತೇವೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕಾಡು, ಭೂಮಿ ಸಂರಕ್ಷಿಸಲು ಕರೆ, ವಿಮುಕ್ತಿ ವಿದ್ಯಾಸಂಸ್ಥೆಯಲ್ಲಿ ಪರಿಸರ ದಿನಾಚರಣೆ.
ರಾಜ್ಯ ರೈತ ಸಂಘ ಹಸಿರುಸೇನೆ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘಗಳ ಮುಖಂಡರಾದ ಆರ್.ಬಿ. ನಿಜಲಿಂಗಪ್ಪ, ಹಿರೇಹಳ್ಳಿ, ಓ.ಟಿ. ತಿಪ್ಪೇಸ್ವಾಮಿ, ಚಿಕ್ಕಹಳ್ಳಿ ತಿಮ್ಮಣ್ಣ, ಬಿ. ಓ. ತಿಪ್ಪೇಸ್ವಾಮಿ, ಬುಡ್ಡಹಟ್ಟಿ, ರಾಮಚಂದ್ರಪ್ಪ, ಚಿಕ್ಕಣ್ಣ, ಟಿ. ಹಂಪಣ್ಣ, ಆರ್. ರಾಜಣ್ಣ, ಜಿ. ಗುರುಮೂರ್ತಿ, ಬಿ. ರಾಜಣ್ಣ, ಕೆ. ಸಿ. ಶ್ರೀಕಂಠಮೂರ್ತಿ, ನೇತಾಜಿ ಪ್ರಸನ್ನ, ಹನುಮಂತರಾಯ, ಹೆಚ್.ಎಸ್. ಸೈಯದ್, ಚೇತನ್‌ಕುಮಾರ್, ಬಿ. ಫರೀದ್ ಖಾನ್, ವೆಂಕಟೇಶ್, ನಗರಂಗೆರೆ ಬಾಬು, ಕನ್ನಡ ರಕ್ಷಣಾ ವೇದಿಕೆಯ ಪ್ರಸನ್ನ ಕುಮಾರ್, ವಿಶ್ವ ಕರ್ಮ ಸಮಾಜದ ಪರುಸಪ್ಪ ಸೇರಿದಂತೆ ಹಲವು ಸಮಾಜದ ಮುಖಂಡರು ಕಾರ್ಯಕರ್ತರು, ನಾಯಕರು, ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.