ನಕಲಿ ಬೀಜ, ರಬ್ಬಗೊಬ್ಬರ ಹಾಗೂ ಕಾಳ ಸಂತೆಯಲ್ಲಿ ಮಾರಾಟ ಕುರಿತು ಗಮನ ಸೆಳೆದ ಯಾದಗಿರಿ ಜಿಲ್ಲೆಯ ರೈತ ಮುಖಂಡ ಚನ್ನಪ್ಪ ಆನೆಗುಂದಿ ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದನ್ನು ಖಂಡಿಸಿ ಶಹಾಪುರ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಸಂಯುಕ್ತ ರೈತ ಹೋರಾಟ ಸಮಿತಿ ನೇತ್ರತ್ವದಲ್ಲಿ ನಗರದ ಚರಬಸವೇಶ್ವರ ಕಮಾನ್‌ದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಜರುಗಿತು. ಬಸವೇಶ್ವರ ವೃತ್ತದಲ್ಲಿ ರೈತ ಮುಖಂಡರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಉಮಾಕಾಂತ ಅಳ್ಳೆ ಅವರಿಗೆ ಸಲ್ಲಿಸಿದರು.

ʼಜಿಲ್ಲಾ ಕೃಷಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಭೀಮರಾಯನಗುಡಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿದ್ದ ಮುಂಗಾರು ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತ ಮುಖಂಡ ಚೆನ್ನಪ್ಪ ಆನೆಗುಂದಿ ಅವರು ಕಳಪೆ ಬೀಜ, ನಕಲಿ ರಬ್ಬಗೊಬ್ಬರ ಹಾಗೂ ಕಾಳ ಸಂತೆ ಮಾರಾಟ ಕುರಿತು ಗಮನ ಸೆಳೆದಿದ್ದರು. ಅದಕ್ಕೆ ಕೃಷಿ ಪರಿಕರಣಗಳ ಮಾರಾಟಗಾರರ ಸಂಘದ ಪದಾಧಿಕಾರಿಗಳು ಚೆನ್ನಪ್ಪ ಆನೆಗುಂದಿ ಹಾಗೂ ಇತರ ರೈತ ಮುಖಂಡರ ಮೇಲೆ ಹಲ್ಲೆ ನಡೆಸಿದ್ದಾರೆ. ಚನ್ನಪ್ಪ ಆನೆಗುಂದಿ ಅವರ ಮೇಲೆ ದೂರು ದಾಖಲಿಸಿದ್ದು ಖಂಡನೀಯʼ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂಯುಕ್ತ ರೈತ ಹೋರಾಟ ಸಮಿತಿಯ ಮುಖಂಡರಾದ ನರಸಿಂಹ ನಾಯಕ ರಾಯಚೂರು, ಕೆ.ನೀಲಾ ಕಲಬುರಗಿ, ದವಲ್‌ಸಾಬ್ ನದಾಫ್, ಮಲ್ಲಿಕಾರ್ಜುನ ಸತ್ಯಂಪೇಟೆ, ಶರಣಬಸಪ್ಪ ಮಮಶೆಟ್ಟಿ, ನಾಗರತ್ನಮ್ಮ ಪಾಟೀಲ್, ಶರಣು ಮಂದರವಾಡ, ನಾಗಣ್ಣ ಬಡಗೇರ್, ಹೊನ್ನಪ್ಪ ಗಂಗನಾಳ, ಮಹಾದೇವಿ ಬೆನಮಠ, ಲವಿತ್ರ ವಸ್ತ್ರದ್ ಅವರು ಮಾತನಾಡಿ, ʼರೈತರಿಗೆ ರಿಯಾಯಿತಿ ದರದಲ್ಲಿ ಬೀಜ, ರಸಗೊಬ್ಬರ ವಿತರಿಸಬೇಕು. ಆದರೆ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ವಿತರಿಸುವ ಕುರಿತು ರೈತ ಮುಖಂಡ ಚನ್ನಪ್ಪ ಆನೆಗುಂದಿ ಅವರು ರೈತರ ಪರವಾಗಿ ಮಾತನಾಡಿದ್ದು ಸರಿಯಾಗಿಯೇ ಇದೆ. ಅದನ್ನೇ ನೆಪ ಮಾಡಿಕೊಂಡ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಮುಖಂಡರು ರೈತ ಹೋರಾಟ ಹತ್ತಿಕ್ಕುವ ಹುನ್ನಾರದಿಂದ ಚನ್ನಪ್ಪ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ರೈತ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ಕೂಡಲೇ ಈ ಪ್ರಕರಣ ವಾಪಸ್ ಪಡೆಯಬೇಕುʼ ಎಂದು ಒತ್ತಾಯಿಸಿದರು.
ʼರೈತರಿಗೆ ಕೃತಕ ಅಭಾವ ಸೃಷ್ಟಿಸದೆ ಸಮರ್ಪಕವಾಗಿ ಬೀಜ ಗೊಬ್ಬರಗಳನ್ನು ರೈತ ಸಂಪರ್ಕ ಕೇಂದ್ರದಿಂದ ವಿತರಿಸಬೇಕು. ಕೃಷಿ ಪರಿಕರ ವಿತರಕರಿಗೆ ಮಾತ್ರ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಿ ರೈತರಿಗೆ ಹಾಗೂ ಕೃಷಿ ಪರಿಕರ ವಿತರಕರ ನಡುವೆ ಗೊಂದಲ ಸೃಷ್ಟಿಸಿದ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತ ಮುಖಂಡ ಚನ್ನಪ್ಪ ಆನೆಗುಂದಿ ಅವರ ಮೇಲೆ ದಾಖಲಾದ ಪ್ರಕರಣಕ್ಕೆ ಪ್ರತಿ ದೂರು ದಾಖಲು ಮಾಡದ ಭೀಮರಾಯನಗುಡಿ ಪಿಎಸ್‌ಐ ಮಹಾಂತೇಶ ಪಾಟೀಲ್ ಅವರನ್ನು ಅಮಾನತು ಮಾಡಬೇಕುʼ ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಆರ್‌ಜಿಕರ್ ಆಸ್ಪತ್ರೆ, ಅಣ್ಣಾ ವಿ ವಿ ರೀತಿ ಎಲ್ಲ ಅತ್ಯಾಚಾರ ಪ್ರಕರಣಗಳಲ್ಲೂ ತ್ವರಿತ ನ್ಯಾಯದಾನ ಅತ್ಯಗತ್ಯ
ಪ್ರಮುಖರಾದ ಟಿ.ಯಶವಂತ, ಮಹೇಶಗೌಡ ಸುಭೇದಾರ್, ಮಲ್ಲಣಗೌಡ ಪರಿವಾಣ, ಎಸ್.ಎಂ.ಸಾಗರ್, ದೇವೆಂದ್ರಪ್ಪಗೌಡ, ಅಶೋಕ ಸಾಹು ಬಲಕಲ್, ಚನ್ನಾರೆಡ್ಡಿ ಪಾಟೀಲ್, ಬಸವರಾಜ ದೊರೆ, ಧರ್ಮಣ್ಣ ತಹಶೀಲ್ದಾರ್, ಜೈಲಾಲ್ ತೋಟದಮನಿ, ದೇವೆಂದ್ರಪ್ಪ ಕೋಲಾರ್, ಮಲ್ಲಣ ಚಿಂತಿ, ಅನಿತಾ ಹಿರೇಮಠ, ಪ್ರಭಾಕರರೆಡ್ಡಿ, ರಾಮಯ್ಯ ಭೋವಿ, ಭೀಮಣ್ಣ ಶಹಾಪುರ, ಸಿದ್ದು ಮುಂಡಾಸ, ಮಲ್ಲಣಗೌಡ ನಗನೂರು, ಧರ್ಮಣ್ಣ ದೊರೆ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ, ಕೃಷಿ ಕೂಲಿಕಾರ್ಮಿಕರ ಸಂಘಟನೆ, ಪ್ರಾಂತ ರೈತ ಸಂಘಟನೆ ಮುಖಂಡರು, ರೈತರು ಪಾಲ್ಗೊಂಡಿದ್ದರು.