ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಮಲ್ಲಾರ್ ಮಾಜೂರು ಬದ್ರಿಯಾ ಜುಮ್ಹಾ ಮಸೀದಿ ವತಿಯಿಂದ ಮಸೀದಿಯ ವಠಾರದಲ್ಲಿ ಸುಮಾರು 300 ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ, ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಹಾಗೂ ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ 1972 ರಿಂದ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತಾ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಪರಿಸರವನ್ನು ಹದಗೆಡಿಸುತ್ತಿದೆ. ಪ್ಲಾಸ್ಟಿಕ್‌ಗಳು ನೀರಿನ ಮೂಲಗಳಲ್ಲಿ ಸೇರಿ ಅಲ್ಲಿನ ಜಲಚರಗಳು, ಸಸ್ಯ ಪ್ರಬೇಧ ಹಾಗೂ ಜೀವ ಸಂಕುಲಕ್ಕೆ ಹಾನಿ ಉಂಟು ಮಾಡುವುದರೊಂದಿಗೆ ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಲಯನ್ಸ್ ಗವರ್ನರ್ ಶ್ರೀ ಹರಿಪ್ರಸಾದ್ ರೈ, ಜಮಾತಿನ ಆಡಳಿತ ಸಮಿತಿಯ ಅಧ್ಯಕ್ಷರಾದ ಡಾ.ಪಾರೂಕ್ ಚಂದ್ರನಗರ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್, ಕಾಪು ಪೋಲೀಸ್ ಇಲಾಖೆಯ ASI ಜನಾರ್ದನ್, ಮಸೀದಿಯ ಖತೀಬರಾದ ಅಬ್ದುಲ್ ರಶೀದ್ ಸಕಾಫಿ ಮತ್ತು ಆಡಳಿತ ಸಮಿತಿಯ ಎಲ್ಲಾ ಸದಸ್ಯರು ಅಂಗ ಸಂಸ್ಥೆಯ ಎಲ್ಲಾ ಸದಸ್ಯರು, ಹಾಗೂ ಜಮಾತಿಗರು ಉಪಸ್ಥಿತರಿದ್ದರು.