ಕೊಡಗು ಜಿಲ್ಲೆ, ಮಡಿಕೇರಿ ಗಾಂಧಿ ಭವನದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ ಸಂಘಟನೆ, ಇಕೋ ಕ್ಲಬ್‍ಗಳು, ಅರಣ್ಯ ಇಲಾಖೆ, ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರಾಭಿವೃದ್ಧಿ ಕೋಶ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇವರುಗಳ ಸಂಯುಕ್ತಾಶ್ರಯದಲ್ಲಿ ‘ ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸಿ ’ ಧ್ಯೇಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಪರಮೇಶ್ವರ ಪ್ರಸನ್ನ ಮಾತನಾಡಿ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ಕರೆ ಕೊಟ್ಟರು.
‘ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಭವಿಷ್ಯದ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಸಾರ್ವಜನಿಕ ಅರಿವು ಮೂಡಿಸಿ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕ. ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಶುಚಿತ್ವಕ್ಕೆ ಗಮನಹರಿಸಬೇಕು ‘ ಎಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ” ನಾವು ನಮ್ಮ ನೆಲ, ಜಲ, ಅರಣ್ಯ ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಲವು ಶತಮಾನಗಳಿಂದ ಪೂರ್ವಿಕರು ಪರಿಸರ ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಅದನ್ನು, ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು. ಪರಿಸರ ದಿನವು ಒಂದು ದಿನಕ್ಕೆ ಸೀಮಿತವಲ್ಲ. ನಿರಂತರವಾಗಿ ಇರಬೇಕು. ವಿದ್ಯಾರ್ಥಿಗಳು ಪರಿಸರ ರಾಯಭಾರಿಗಳಾಗಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.”

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಮಾತನಾಡಿ ‘ ಅಂಗಡಿ, ಮಾರುಕಟ್ಟೆಗೆ ತೆರಳುವಾಗ ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ವಸ್ತುಗಳ ಬಟ್ಟೆ ಬ್ಯಾಗ್ ಬಳಸುವಂತಾಗಬೇಕು. ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸುವ ಮೂಲಕ ಮಾಲಿನ್ಯವನ್ನು ತಡೆಯಬೇಕು ‘ ಎಂದರು.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಮಾತನಾಡಿ ಸುಸ್ಥಿರ ಪರಿಸರ ಸಂರಕ್ಷಣೆ ಮಾಡುವುದು, ಪ್ರಕೃತಿಯನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಿದೆ. ಪ್ಲಾಸ್ಟಿಕ್‍ನಿಂದ ಉಂಟಾಗುವ ಮಾಲಿನ್ಯ ತಡೆಗಟ್ಟಿ ಕೊನೆಗೊಳಿಸುವುದು ಬಹಳ ಮುಖ್ಯ ಎಂದರು.
ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ. ಜಿ. ಪ್ರೇಮ ಕುಮಾರ್ ಮಾತನಾಡಿ ನಾವು ನಾಳಿನ ಉತ್ತಮ ಭವಿಷ್ಯಕ್ಕಾಗಿ ಅರಣ್ಯ, ಪರಿಸರ, ಜೀವ- ವೈವಿಧ್ಯವನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಲು ಸಂಕಲ್ಪ ತೊಡಬೇಕು ಎಂದು ಮನವಿ ಮಾಡಿದರು.
ಈ ವಿಶೇಷ ವರದಿ ಓದಿದ್ದೀರಾ?ಮೈಸೂರು | ಶವಾಗಾರದಲ್ಲಿ ಕೆಲಸ ಮಾಡುವ ಏಕಮೇವ ಮಹಿಳೆ ರಾಜಮ್ಮ
ಪರಿಸರ ಅಧಿಕಾರಿ ಎಂ.ಜಿ. ರಘುರಾಮ್, ನಗರಾಭಿವೃದ್ಧಿ ಯೋಜನಾ ಶಾಖೆ ಯೋಜನಾ ನಿರ್ದೇಶಕ ಬಿ. ಬಸಪ್ಪ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ. ಎ. ನಿರಂಜನ, ಪೌರಾಯುಕ್ತ ಎಚ್. ಆರ್. ರಮೇಶ್, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಎಂ. ಜಿ. ಸವಿತಾ, ಜಿಲ್ಲಾ ಗೈಡ್ಸ್ ವಿಭಾಗದ ಆಯುಕ್ತೆ ರಾಣಿ ಮಾಚಯ್ಯ, ಜಿಲ್ಲಾ ಸಂಸ್ಥೆಯ ಸಹ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ತರಬೇತಿ ಆಯುಕ್ತ ಕೆ.ಯು.ರಂಜಿತ್, ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಮಡಿಕೇರಿ ವಲಯದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್, ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಎಸಿಎಫ್ ಲತಾ ಭಟ್, ಡಿಆರ್‍ಎಫ್‍ಓ ಗಳಾದ ಸುನಿಲ್ ಗುನಗಾ, ಮಂಜೇಗೌಡ, ನವೀನ್, ಅರಣ್ಯ ರಕ್ಷಕ ಮಂಜುನಾಥ್, ಅರಣ್ಯ ವೀಕ್ಷಕ ವಾಸು, ಅರಣ್ಯ ಇಲಾಖೆಯ ತುರ್ತು ಸ್ಪಂದನ ತಂಡದ ಸದಸ್ಯರಾದ ಶರತ್, ತಿಮ್ಮಯ್ಯ, ಕಾರ್ತಿಕ್, ಕುಮಾರೇಶ್, ವಚನ್, ಮಹೇಶ್, ಪ್ರವೀಣ್, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಡಿ.ಎಸ್.ಜಯಪ್ಪ, ಜಿಲ್ಲಾ ಸ್ಕೌಟ್ಸ್ ತರಬೇತಿ ಆಯುಕ್ತ ಕೆ.ಯು.ರಂಜಿತ್ ಸೇರಿದಂತೆ ಇನ್ನಿತರರು ಇದ್ದರು.