ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಏಳು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಸತಿ ನಿಲಯಗಳನ್ನು ಉನ್ನತೀಕರಿಸುವ ಇಲಾಖೆಯ ನಿರ್ಧಾರ ಕೂಡಲೇ ಹಿಂಪಡೆಯಬೇಕೆಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಕುರಿತು ದಸಂಸ ಪದಾಧಿಕಾರಿಗಳು ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಜೇವರ್ಗಿ ತಾಲ್ಲೂಕು ಆಡಳಿತಕ್ಕೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳ, ಪಾಲಕರ ಹಾಗೂ ಸ್ಥಳೀಯರ ಗಮನಕ್ಕೆ ತರದೆ ವಸತಿ ನಿಲಯಗಳ ಉನ್ನತೀಕರಿಸುವವುದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಕೂಡಲೇ ಆದೇಶ ಹಿಂಪಡೆದು ಈಗಿರುವ ಸ್ಥಳದಲ್ಲೇ ವಸತಿ ನಿಲಯಗಳು ಮುಂದುವರೆಸುವಂತೆ ಆಗ್ರಹಿಸಿದರು.
ಸುಮಾರು ವರ್ಷಗಳಿಂದ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಆರ್ಥಿಕವಾಗಿ ಕಡುಬಡವರಿದ್ದು, ತಮ್ಮ ಶಿಕ್ಷಣಕ್ಕಾಗಿ ಸಮೀಪದ ವಸತಿ ನಿಲಯಗಳಲ್ಲಿ ಪ್ರವೇಶ ಬಯಸುತ್ತಿದ್ದು, ಸದರಿ ವಸತಿ ನಿಲಯಗಳಲ್ಲಿ 5ರಿಂದ 10ನೇ ತರಗತಿ ವಿದ್ಯಾರ್ಥಿಗಳು, ಏಕಾಏಕಿ ವಸತಿ ನಿಲಯಗಳನ್ನು ಉನ್ನತೀಕರಿಸುವ ಸರಕಾರದ ನಿಲುವು ಒಳಿತಾಗಿದ್ದರು ಏಕಾಏಕಿ ಶಾಲೆಗಳಲ್ಲಿ ಪ್ರವೇಶ ಪಡೆದಿರುವಂತ ವಿದ್ಯಾರ್ಥಿಗಳು ವಸತಿ ನಿಲಯದಿಂದ ವಂಚಿತರಾಗಿ ಶಿಕ್ಷಣದಿಂದ ದೂರ ಉಳಿಯುವಂತಾಗುತ್ತದೆʼ ಎಂದು ದೂರಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬಿಸಿಎಂ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆದು ಯಥಾವತ್ತಾಗಿ ಈಗಿರುವ ಸ್ಥಳದಲ್ಲಿಯೇ ವಸತಿ ನಿಲಯಗಳನ್ನು ಮುಂದುವರೆಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳು, ಪೋಷಕರು ಕಚೇರಿ ಎದುರು ಧರಣಿ ನಡೆಸುತ್ತೇವೆʼ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಜೂನ್ 9ರಂದು ಪ್ರೊ.ಬಿ.ಕೃಷ್ಣಪ್ಪ ಜನ್ಮದಿನ : ನಾಗರಿಕ ಹಕ್ಕು ರಕ್ಷಣಾ ದಿನ ಆಚರಣೆ
ಮುಖಂಡರಾದ ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಶ್ರೀಹರಿ ಕರಕಿಹಳ್ಳಿ, ಸಿದ್ರಾಮ ಕಟ್ಟಿ, ಸಿದ್ದು ಕೆರೂರ, ಮಾಪಣ್ಣ ಕಟ್ಟಿ, ರವಿ ಕುರಳಗೇರಾ, ದವಲಪ್ಪ ಮದನ, ಮಹೇಶ ಕೋಕಿಲೆ, ಪರಮಾನಂದ ಯಲಗೋಡ, ಗುಂಡಪ್ಪ ಜಡಗಿ, ಶಿವಕುಮಾರ ಹೆಗಡೆ ಮತ್ತಿತರರು ಇದ್ದರು.