ಗದಗ ಜಿಲ್ಲೆಯ ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳಲ್ಲಿ ಮೆರಿಟ್, ಕೌನ್ಸಲಿಂಗ್ ಅಧಾರದಲ್ಲಿ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಯನ್ನು ಕೈಬಿಡಬೇಕು. ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್‌ಗಳಲ್ಲಿ ಪ್ರವೇಶ ನೀಡಬೇಕು ಎಂದು ಎಸ್‌ಎಫ್‌ಐ ಒತ್ತಾಯಿಸಿದೆ.
ಹಾಸ್ಟೆಲ್‌ಗಳಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಎಫ್‌ಐ ಗಜೇಂದ್ರಗಢ ತಾಲೂಕಿನ ಅಧ್ಯಕ್ಷ ಚಂದ್ರು ರಾಠೋಡ, “ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಮೆರಿಟ್, ಕೌಲ್ಸಿಂಗ್ ಮೂಲಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಿಗೆ ಆಯ್ಕೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇದು ವಸತಿ ಮತ್ತು ಶಿಕ್ಷಣದಿಂದ ಗ್ರಾಮೀಣ ವಿದ್ಯಾರ್ಥಿಗಳನ್ನು ವಂಚಿತಗೊಳಿಸುವ ಹುನ್ನಾರವಾಗಿದೆ” ಎಂದು ಆರೋಪಿಸಿದ್ದಾರೆ.
“ರಾಜ್ಯ ಸರ್ಕಾರ ಶೈಕ್ಷಣಿಕ ವರ್ಷದಲ್ಲಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ನೂತನವಾಗಿ ಆನ್‌ಲೈಲ್ ನಲ್ಲಿ ಅರ್ಜಿಗಳನ್ನು ಕರೆದು ಅರ್ಜಿ ಸಲ್ಲಿಸಿದ ನಂತರ ಜಿಲ್ಲಾವಾರು ಹಾಸ್ಟೇಲ್‌ಗಳಿಗೆ ವಿದ್ಯಾರ್ಥಿಗಳ ಮೆರಿಟ್ ಮತ್ತು ಕೌಲ್ಸಿಂಗ್ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತಿದೆ. ಅದು ವಿದ್ಯಾರ್ಥಿಗಳಿಗೆ ತುಂಬಾ ಆತಂಕವನ್ನುಂಟುಮಾಡಿದೆ. ರಾಜ್ಯ ಸರ್ಕಾರ ಈ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಹಾಸ್ಟೇಲ್ ಬಯಸಿ ತಮ್ಮ ಹತ್ತಿರದ ಪ್ರದೇಶಗಳಲ್ಲಿ ಅರ್ಜಿ ಸಲ್ಲಿಸಿ, ಶೈಕ್ಷಣಿಕ ಭವಿಷ್ಯದ ಕನಸು ಹೊಂದಿರುತ್ತಾರೆ. ಆದರೆ, ಮೆರಿಟ್, ಕೌನ್ಸಲಿಂಗ್ ಪ್ರಕ್ರಿಯೆಯಿಂದಾಗಿ ಹಾಸ್ಟೆಲ್‌ಗಳಲ್ಲಿ ಹಲವು ವಿದ್ಯಾರ್ಥಿಗಳಿಗೆ ಪ್ರವೇಶ ಸಿಗದೆ, ದೂರದ ಜಿಲ್ಲೆಗಳಿಗೆ ಹೋಗಿ ವಸತಿ ಪಡೆದು ಶಿಕ್ಷಣ ಪಡೆಯಲಾಗದೆ ಶಿಕ್ಷಣದಿಂದ ದೂರ ಉಳಿಯುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳ ಅಡಿಯಲ್ಲಿ ನಡೆಸುತ್ತಿರುವ ಎಲ್ಲ ವಸತಿ ನಿಲಯಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವುದೇ ರೀತಿಯಲ್ಲಿ ಮೆರಿಟ್ ಮತ್ತು ಕೌನ್ಸಲಿಂಗ್ ಮೂಲಕ ಆಯ್ಕೆ ಎಂಬ ನೆಪ ಹೇಳಬಾರದು. ಎಲ್ಲರಿಗೂ ಪ್ರವೇಶ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.