ರಾಜ್ಯಾದ್ಯಂತ ಬರುವ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ಉದ್ದೇಶಿಸಿರುವ ಬಸವ ಸಂಸ್ಕೃತಿ ಅಭಿಯಾನ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ವಿವಿಧ ಬಸವಪರ ಸಂಘ ಸಂಸ್ಥೆಗಳ ಮುಖಂಡರು, ಬಸವಾಭಿಮಾನಿಗಳು ಮನವಿ ಮಾಡಿದ್ದಾರೆ.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಈಚೆಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರಿಗೆ ಪ್ರಮುಖರು ಮನವಿ ಪತ್ರ ಸಲ್ಲಿಸಿದರು.
ʼಬಸವ ಸಂಸ್ಕೃತಿ ಅಭಿಯಾನ ಅರ್ಥಪೂರ್ಣವಾಗಿ ಜರುಗಬೇಕು. ಬಸವಾದಿ ಶರಣರ ತತ್ವಗಳು ಗ್ರಾಮ ಮಟ್ಟಕ್ಕೆ ತಲುಪಿಸಲು ವ್ಯಾಪಕ ಪ್ರಚಾರವಾಗಬೇಕು. ಎಲ್ಲ ಬಸವಪರ ಸಂಘಟನೆ ಒಗ್ಗೂಡಿಸಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ
ಸಮಿತಿಗಳನ್ನು ರಚಿಸಿ ಜನಸಾಮಾನ್ಯರು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕುʼ ಎಂದು ಸಾಮಾಜಿಕ ಕಾರ್ಯಕರ್ತ ಓಂಪ್ರಕಾಶ ರೊಟ್ಟೆ ಅವರು ಶ್ರೀಗಳಲ್ಲಿ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼಬಸವ ಸಂಸ್ಕೃತಿ ಅಭಿಯಾನ ನಿಗದಿತ ವೇಳಾ ಪಟ್ಟಿಯಂತೆ ಜರುಗಲಿದೆ. ಈ ಅಭಿಯಾನವೂ ಬಸವನ ಬಾಗೇವಾಡಿಯಿಂದ ಆರಂಭಗೊಂಡು ಬೆಂಗಳೂರಿನಲ್ಲಿ ಸಮಾವೇಶಗೊಳ್ಳಲಿದೆʼ ಎಂದು ತಿಳಿಸಿದರು.
ಇದನ್ನೂ ಓದಿ : ಕಾರ್ಮಿಕರ ಸ್ಥಿತಿ: ಎಲ್ಲಿಂದ ಎಲ್ಲಿಗೆ? (ಭಾಗ- 2)
ಈ ಸಂದರ್ಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಶರಣ ಸಾಹಿತ್ಯ ಪರಿಷತ್ತು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಮ್ಮ ಆರ್ ಪಾಟೀಲ್, ಪ್ರಮುಖರಾದ
ಗುಂಡಪ್ಪ ಸಂಗಮಕರ್, ರಮೇಶ ಮಠಪತಿ, ಸಿ.ಎಸ್.ಗಣಾಚಾರಿ, ಜಯರಾಜ ಕೊಳ್ಳಾ, ಜಗದೀಶ ಬಿರಾದಾರ್, ವೀರಣ್ಣ ಕುಂಬಾರ, ಸಂತೋಷ ಹಡಪದ ಸೇರಿದಂತೆ ಹಲವರು ಇದ್ದರು.