ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದ ಹೋರಿಯ ಅಂತ್ಯಕ್ರಿಯೆಯನ್ನು ಮುಸ್ಲಿಮರು ಹಿಂದು ಸಂಪ್ರದಾಯದಂತೆ ನೆರವೇರಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.
ಚಿಕ್ಕೋಡಿಯ ಹಾಲಟ್ಟಿ ಬಡಾವಣೆಯ ರೈತ ತಾಜುದ್ದೀನ್ ಜಾಡವಾಲೆ ಅವರು ಸಾಕಿದ್ದ ಎತ್ತು ಅನಾರೋಗ್ಯದಿಂದ ಶುಕ್ರವಾರ ಮೃತಪಟ್ಟಿತ್ತು. ಆ ಎತ್ತಿನ ಅಂತ್ಯಕ್ರಿಯೆನ್ನು ತಾಜುದ್ದೀನ್ ಮತ್ತು ನೆರೆಹೊರೆಯ ಮುಸ್ಲಿಮರು ಹಿಂದು ವಿಧಿ-ವಿಧಾನಗಳನ್ನು ಅನುಸರಿಸಿ ನೆರವೇರಿಸಿದ್ದಾರೆ.
ಬರೋಬ್ಬರಿ 22 ವರ್ಷಗಳ ಹಿಂದೆ ತಾಜುದ್ದೀನ್ ಅವರು ಎರಡು ಹೋರಿ ಕರುಗಳನ್ನು ಖರೀದಿಸಿದ್ದರು. ಅವುಗಳಿಗೆ ಉಳುಮೆಯನ್ನು ಕಲಿಸಿ, ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. ಅದರಲ್ಲಿ, ಒಂದು ಎತ್ತು 2022ರಲ್ಲಿ ಮೃತಪಟ್ಟಿತ್ತು. ಶುಕ್ರವಾರ, ಮತ್ತೊಂದು ಎತ್ತು ಕೂಡ ಸಾವನ್ನಪ್ಪಿದೆ. ಈ ಎರಡೂ ಎತ್ತುಗಳ ಅಂತ್ಯಕ್ರಿಯೆಯನ್ನು ತಾಜುದ್ದೀನ್ ಅವರು ಹಿಂದು ಸಂಪ್ರಪಾಯದಂತೆಯೇ ಮಾಡಿದ್ದಾರೆ.
ತಾವು ಪ್ರೀತಿಯಿಂದ ಸಾಕಿದ್ದ ಎತ್ತುಗಳ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರೈತ ತಾಜುದ್ದೀನ್, “ಮುಂದಿನ ಶ್ರಾವಣ ಮಾಸದಲ್ಲಿ ಮೃತಪಟ್ಟ ಎತ್ತುಗಳಿಗೆ ಪುಟ್ಟ ದೇವಾಲಯ ಕಟ್ಟಿಸುತ್ತೇವೆ. ಪೂಜೆ ಮಾಡುತ್ತೇವೆ. ಅವುಗಳ ನಮ್ಮ ಕುಟುಂಬಕ್ಕೆ ದೇವರಿದ್ದಂತೆ” ಎಂದು ಹೇಳಿದ್ದಾರೆ.