ವಿಶ್ವ ಆಹಾರ ಸುರಕ್ಷತಾ ದಿನ | ತಿಂದು ಬದುಕುವುದಕ್ಕಿಂತ, ಆರೋಗ್ಯವಾಗಿ ಬದುಕುವುದು ಮುಖ್ಯ

Date:

Advertisements

ಆಹಾರ– ಜೀವ ಸಂಕುಲದ ಅತ್ಯವಶ್ಯಕ ಅವಿಭಾಜ್ಯ ಅಂಶ. ಜೀವವನ್ನು ಉಳಿಸುವ ಶಕ್ತಿಯೊಂದಿಗೆ ಅದು ಆರೋಗ್ಯವಂತ ಸಮಾಜವನ್ನೂ ರೂಪಿಸುತ್ತದೆ. ಆದರೆ ತಿನ್ನುವ ಆಹಾರವೇ ಅಸುರಕ್ಷಿತವಾಗಿದ್ದರೆ? ಜೀವಕ್ಕೆ ಅಪಾಯ; ಸಮಾಜಕ್ಕೆ ಮಾರಕ. ಈ ಹಿನ್ನಲೆ ಪ್ರತಿ ವರ್ಷ ಜೂನ್ 7ರಂದು ‘ವಿಶ್ವ ಆಹಾರ ಸುರಕ್ಷತಾ ದಿನ’ವನ್ನು ಆಚರಿಸಲಾಗುತ್ತದೆ. ಈ ದಿನವು ಆಹಾರದ ಶುದ್ಧತೆ, ಸಂರಕ್ಷಣೆ ಮತ್ತು ಅದರ ಮೇಲೆ ವ್ಯಕ್ತಿಯ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಆಹಾರ ಸುರಕ್ಷತೆಯಲ್ಲಿ ನಾಗರಿಕರಾಗಿ ನಮ್ಮ ಸಹಭಾಗಿತ್ವವೂ ಮುಖ್ಯ ಪಾತ್ರ ವಹಿಸುತ್ತದೆ.

ವಿಶ್ವಾದ್ಯಂತ 10 ಜನರಲ್ಲಿ ಒಬ್ಬರು ಕಲುಷಿತ ಆಹಾರ ಸೇವಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ಸಂಶೋಧನೆಗಳೇ ತಿಳಿಸುತ್ತವೆ. ಇದರಲ್ಲಿ ವಯಸ್ಸಾದವರು, ಐದು ವರ್ಷದೊಳಗಿನ ಮಕ್ಕಳು ಮತ್ತು ಬಡ ಕುಟುಂಬಗಳು ಹೆಚ್ಚು ಒಡ್ಡಿಕೊಳ್ಳುತ್ತವೆ ಎಂಬುದು ಸ್ಪಷ್ಟ. ಅಸುರಕ್ಷಿತ ಆಹಾರ ಸೇವನೆಯಿಂದ ಹರಡುವ ರೋಗಗಳು ಕೂಡ ಈ ವರ್ಗದವರಲ್ಲಿಯೇ ಹೆಚ್ಚಾಗಿ ಕಂಡುಬರುತ್ತವೆ. ಇದೆಲ್ಲವನ್ನು ತಡೆಯುವುದು, ಅಸುರಕ್ಷಿತ ಆಹಾರದ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶ.

ಇತಿಹಾಸ

Advertisements

ಜುಲೈ 2017ರಲ್ಲಿ ನಡೆದ ಆಹಾರ ಮತ್ತು ಕೃಷಿ ಸಂಸ್ಥೆ (FIO) ಸಮ್ಮೇಳನದ 40ನೇ ಅಧಿವೇಶನದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (WHO) ವಿಶ್ವ ಆಹಾರ ಸುರಕ್ಷತಾ ದಿನದ ನಿರ್ಣಯಕ್ಕೆ ತನ್ನ ಬೆಂಬಲ ಸೂಚಿಸಿತು. ಬಳಿಕ ಈ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಅಂಗೀಕರಿಸಿತು ಮತ್ತು ಪ್ರತಿ ವರ್ಷ ಜೂನ್ 7ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಡಬ್ಲ್ಯುಎಚ್ಒ, ಎಫ್ಎಒ ಜಂಟಿಯಾಗಿ, ಜಾಗತಿಕವಾಗಿ ಎಲ್ಲರಿಗೂ ಸುರಕ್ಷಿತ ಆಹಾರವನ್ನು ಖಚಿತಪಡಿಸಿಕೊಳ್ಳಲು ಈ ಪ್ರಮುಖ ದಿನವನ್ನು ಆಚರಿಸಲು ಕರೆ ನೀಡಿದವು. ಅಂದಿನಿಂದ ಪ್ರತಿವರ್ಷ ಜೂನ್ 7 ರಂದು ವಿಶ್ವ ಆಹಾರ ಸಂರಕ್ಷಣಾ/ಸುರಕ್ಷಿತ ದಿನ ಆಚರಿಸಲಾಗುತ್ತದೆ.

ಈ ಸಲದ ಥೀಮ್- “ಆಹಾರ ಸುರಕ್ಷತೆ: ಕಾರ್ಯಪ್ರವೃತ್ತ ವಿಜ್ಞಾನ”

ಈ ವರ್ಷದ ಥೀಮ್, ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನವು ಆಹಾರದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಲು, ಪತ್ತೆಹಚ್ಚಲು ಮತ್ತು ನಿರ್ವಹಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಒತ್ತಿಹೇಳುತ್ತದೆ.

ಅಪಾಯಗಳನ್ನು ಗುರುತಿಸುವ ಡೇಟಾ ಮತ್ತು ರೋಗನಿರ್ಣಯ, ಉತ್ತಮ ಅಭ್ಯಾಸಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಂಶೋಧನೆ, ಮತ್ತು ಇಡೀ ಆಹಾರ ಸರಪಳಿಯಾದ್ಯಂತ- ಆಹಾರ ಬೆಳೆಯುವ ಭೂಮಿಯಿಂದ ತಿನ್ನುವ ಕೈವರೆಗೆ ನೈರ್ಮಲ್ಯ ಮತ್ತು ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ವೈಜ್ಞಾನಿಕ ಪರಿಹಾರಗಳು… ಈ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ವರ್ಷದ ಥೀಮ್‌ ಸಕ್ರಿಯವಾಗಿದೆ. ಮುಂದಿನ ದಿನಗಳಲ್ಲಿ ಅಸುರಕ್ಷಿತ ಆಹಾರ ಉತ್ಪಾದನೆ, ಮಾರಾಟ, ಸೇವನೆಗಳಿಗೆ ವೈಜ್ಞಾನಿಕ ತಳಹದಿಯ ಮೇಲೆಯೇ ಕಡಿವಾಣ ಹಾಕುವ ಉದ್ದೇಶ ಹೊಂದಲಾಗಿದೆ.

ಅಧ್ಯಯನಗಳು ಹೇಳುವುದೇನು?

ಇತ್ತೀಚಿನ ವರ್ಷಗಳಲ್ಲಿ ಜನರ ದೇಹಕ್ಕೆ ಗುಣಮಟ್ಟದ ಆಹಾರದ ಬದಲು ಕಲಬೆರಕೆ ಆಹಾರ ಸೇರುತ್ತಿರುವುದು ಕಳವಳಕಾರಿ. ಅಧ್ಯಯನವೊಂದರ ಪ್ರಕಾರ, ಎಣ್ಣೆಯಲ್ಲಿ ಕರಿದ/ತಯಾರಿಸಿದ ಪದಾರ್ಥಗಳ ಸೇವನೆಯಿಂದ ಐವರಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ಕಲಬೆರಕೆ ಆಹಾರ ಸೇವನೆಯಿಂದ ಹೃದಯಾಘಾತ, ಕ್ಯಾನ್ಸರ್, ಕಿಡ್ನಿ, ಹೊಟ್ಟೆ ಸಂಬಂಧಿ ಕಾಯಿಲೆ, ಮಿದುಳು, ಶ್ವಾಸಕೋಶ ಸಮಸ್ಯೆ, ಮಧುಮೇಹ, ರಕ್ತದೊತ್ತಡದಂತಹ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇತ್ತೀಚೆಗೆ ಬೊಜ್ಜಿನ ಕುರಿತು ಪ್ರಸ್ತಾಪಿಸಿ ಎಣ್ಣೆ ಪದಾರ್ಥಗಳನ್ನು ಶೇ.10ರಷ್ಟು ಕಡಿಮೆ ಸೇವನೆ ಮಾಡಲು ಕರೆ ಕೊಟ್ಟಿದ್ದರು.

WhatsApp Image 2025 06 07 at 1.31.23 PM

ಕೆಲ ತಿಂಗಳ ಹಿಂದೆ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ, ಕಬಾಬ್‌ಗಳಲ್ಲಿ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿದ್ದು ಗೊತ್ತೇ ಇದೆ. ಆದರೆ ಎಷ್ಟು ಮಂದಿ ಫಾಸ್ಟ್‌ ಫುಡ್‌ ತಯಾರಕರು ಈ ನಿಯಮ ಪಾಲಿಸುತ್ತಿದ್ದಾರೋ ತಿಳಿಯದು. ಇಡ್ಲಿ ತಯಾರಿಕೆಯಲ್ಲಿ ಬಳಸುವ ಪ್ಲಾಸ್ಟಿಕ್‌ನಲ್ಲೂ ರಾಸಾಯನಿಕ ಅಂಶ ಪತ್ತೆಯಾಗಿರುವುದು ಆತಂಕ ತಂದೊಡ್ಡಿದ್ದು, ಆಹಾರ ತಯಾರಿಕೆಯಲ್ಲಿನ ಅಸುರಕ್ಷತೆ ಚಿಂತೆಗೆ ಕಾರಣವಾಗಿದೆ. ಆದರೂ, ಹೊರಗಿನ ಆಹಾರ ಸೇವನೆ ನಗರ ಪ್ರದೇಶದ ಬಹುತೇಕರ ಜೀವನಶೈಲಿಯಲಿಯೇ ಆಗಿಹೋಗಿದೆ. ಹೀಗಾಗಿಯೇ ಗ್ರಾಮೀಣ ವಾಸಿಗಳಿಗಿಂತ ಹೆಚ್ಚಾಗಿ ನಗರವಾಸಿಗಳೇ ಮಧುಮೇಹ, ಬೊಜ್ಜು, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆನ್ನುವುದು ಗಮನಾರ್ಹ.

ಆಹಾರ ಸುರಕ್ಷತೆಯಲ್ಲಿ ಪಾಲುದಾರ ಸಂಸ್ಥೆಗಳು

ಭಾರತದಲ್ಲಿ ಆಹಾರ ಸುರಕ್ಷತೆಯ ನಿರ್ವಹಣೆ ಮತ್ತು ಅನುಷ್ಠಾನದಲ್ಲಿ ಹಲವಾರು ಪ್ರಮುಖ ಇಲಾಖೆಗಳು ಹಾಗೂ ಸಂಸ್ಥೆಗಳು ಪಾಲ್ಗೊಂಡಿರುತ್ತವೆ. ಇವುಗಳ ಸಹಕಾರದಿಂದಲೇ ಆಹಾರದ ಗುಣಮಟ್ಟವನ್ನು ನಿಗದಿಪಡಿಸುವುದು, ಮಾಲಿನ್ಯ ತಡೆಗಟ್ಟುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದು ಸಾಧ್ಯವಾಗಿದೆ.

ಆಹಾರ ಸುರಕ್ಷತೆಯ ನಿಯಂತ್ರಣದಲ್ಲಿ ಅತ್ಯಂತ ಮುಖ್ಯವಾದ ಸಂಸ್ಥೆ ಎಂದರೆ ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ (FSSAI). ದೇಶಾದ್ಯಂತ ಆಹಾರದ ಲೈಸೆನ್ಸಿಂಗ್, ಲೇಬಲಿಂಗ್, ಗುಣಮಟ್ಟದ ನಿಯಮಗಳನ್ನು ರೂಪಿಸುವ ಜವಾಬ್ದಾರಿಯನ್ನು ಈ ಸಂಸ್ಥೆ ಹೊತ್ತಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ‘Eat Right India’ ಅಭಿಯಾನವೂ ಇದರ ಭಾಗವಾಗಿದೆ.

WhatsApp Image 2025 06 07 at 2.56.59 PM

AGMARK ಎಂಬುದು ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಪ್ರಮಾಣೀಕರಿಸುವ ವ್ಯವಸ್ಥೆಯಾಗಿದ್ದು, ಇದು ಕೃಷಿ ಮಾರುಕಟ್ಟೆ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಧಾನ್ಯಗಳು ಸೇರಿ ಬೆಳೆಯ ಗುಣಮಟ್ಟವನ್ನು ನಿಗದಿಪಡಿಸಲಾಗುತ್ತದೆ.

BIS ಅಥವಾ ಭಾರತೀಯ ಪ್ರಮಾಣಿತ ಸಂಸ್ಥೆಯು, ಪ್ಯಾಕೇಜ್ಡ್ ಆಹಾರ ಮತ್ತು ಪಾನೀಯಗಳಿಗೆ ಸರಿಯಾದ ಪ್ರಮಾಣದ ನಿಯಮಗಳನ್ನು ರೂಪಿಸುತ್ತದೆ. ISI ಮಾರ್ಕ್ ಈ ಸಂಸ್ಥೆಯಿಂದಲೇ ಸಿಗುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಇನ್ನೊಂದು ಪ್ರಮುಖ ಸಂಸ್ಥೆ. ಇದು ಆಹಾರದ ಮೂಲಕ ಹರಡುವ ರೋಗಗಳು, ಆಹಾರ ಮಾಲಿನ್ಯದಿಂದ ಉಂಟಾಗುವ ಪರಿಣಾಮಗಳ ಕುರಿತು ತಜ್ಞ ಸಂಶೋಧನೆ ನಡೆಸುತ್ತದೆ.

ಈ ಮುಖ್ಯ ರಾಷ್ಟ್ರೀಯ ಸಂಸ್ಥೆಗಳ ಜೊತೆಗೆ, ಗ್ರಾಹಕರ ವ್ಯವಹಾರಗಳ ಇಲಾಖೆ ಸಹ ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ಇದು ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಜೊತೆಗೆ, ಆಹಾರದ ಗುಣಮಟ್ಟದ ಮೇಲ್ವಿಚಾರಣೆ, ದೂರುಗಳ ವಿಚಾರಣೆ ಇತ್ಯಾದಿಗಳನ್ನು ನೋಡಿಕೊಳ್ಳುತ್ತದೆ.

ಪ್ರತಿ ರಾಜ್ಯದಲ್ಲಿಯೂ ಆಹಾರ ಸುರಕ್ಷತಾ ಆಯುಕ್ತರು ಇದ್ದು, ರಾಜ್ಯ ಮಟ್ಟದಲ್ಲಿ ನಿಯಮಗಳ ಅನುಷ್ಠಾನ, ಅನುಮತಿ ನೀಡುವಿಕೆ, ಸ್ಥಳೀಯ ತಪಾಸಣೆ ನಡೆಸುವುದು ಇತ್ಯಾದಿಗಳನ್ನು ನಿರ್ವಹಿಸುತ್ತಾರೆ. ಈ ಆಯುಕ್ತರು ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆ ಮತ್ತು ಆಹಾರ ನಿರೀಕ್ಷಕರ ಸಹಕಾರದಿಂದ ಕಾರ್ಯನಿರ್ವಹಿಸುತ್ತಾರೆ.

ಇದಲ್ಲದೆ, ನಗರಸಭೆಗಳು, ಪಟ್ಟಣ ಪಂಚಾಯಿತಿಗಳು ಮತ್ತು ಗ್ರಾಮ ಪಂಚಾಯಿತಿಗಳಂತಹ ಸ್ಥಳೀಯ ಸಂಸ್ಥೆಗಳು, ಹೋಟೆಲ್‌, ರಸ್ತೆಬದಿ ತಿನಿಸು ಮಾರಾಟಗಾರರು, ಹಾಗೂ ಪಾಕಶಾಲೆಗಳ ಮೇಲೆ ನಿಗಾ ವಹಿಸುವ ಜವಾಬ್ದಾರಿ ಹೊತ್ತಿರುತ್ತವೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಆಹಾರ ತಯಾರಿಕಾ ಘಟಕಗಳಿಂದ ಹೊರಬರುವ ತ್ಯಾಜ್ಯ ಮತ್ತು ಮಾಲಿನ್ಯದ ಮೇಲೆ ನಿಗಾ ಇಡುತ್ತದೆ.

ಈ ಎಲ್ಲಾ ಇಲಾಖೆ-ಸಂಸ್ಥೆಗಳ ನಿರಂತರ ಸಹಕಾರ ಮತ್ತು ನಿಗದಿತ ಕಾರ್ಯಪದ್ಧತಿಗಳಿಂದಲೇ, ನಾವು ತಿನ್ನುವ ಆಹಾರ ಶುದ್ಧವಾಗಿರುತ್ತದೆ ಎಂಬ ವಿಶ್ವಾಸ ಸಾಧ್ಯವಾಗುತ್ತದೆ. ಆದ್ದರಿಂದ, ಈ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ನಾಗರಿಕರ ಸಹಭಾಗಿತ್ವವೂ ಮುಖ್ಯವಾಗುತ್ತದೆ.

ನಾವು ತಿನ್ನುವ ಪ್ರತಿಯೊಂದು ತುಣುಕು ಆಹಾರವು ವಿಶ್ವಾಸಾರ್ಹತೆಯಿಂದ ಕೂಡಿರಲಿ ಎಂಬುದೇ ಈ ದಿನದ ಆಶಯ. ನಾವು ತಿನ್ನುವ ಆಹಾರ ಎಲ್ಲಿಂದ ಬಂದದ್ದು? ಹೇಗೆ ತಯಾರಿಸಲಾಗಿದೆ? ಯಾರು ತಯಾರಿಸಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಅಗತ್ಯವಾಗಿ ಉತ್ತರ ಕಂಡುಕೊಳ್ಳಬೇಕು. ಆಹಾರ ಸುರಕ್ಷತೆ ಅಂದರೆ ಆರೋಗ್ಯದ ಸುರಕ್ಷೆ.

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ ಸಮಯದಲ್ಲಿ ತಬ್ಲಿಘಿ ಸಭೆ: 70 ಜನರ ವಿರುದ್ಧದ FIR ರದ್ದು; ಕೋರ್ಟ್‌ ಆದೇಶ

ದೇಶದಲ್ಲಿ ಕೊರೋನಾ ಆಕ್ರಮಣ ಆರಂಭವಾಗಿದ್ದ ಸಮಯ 2020ರ ಮಾರ್ಚ್‌ನಲ್ಲಿ ದೆಹಲಿಯಲ್ಲಿ ತಬ್ಲಿಘಿ...

ದಾವಣಗೆರೆ | ಹೃದಯಾಘಾತಕ್ಕೆ ಯುವಕ ಬಲಿ

ದಾವಣಗೆರೆಯ ಉದ್ಯಮಿಯೊಬ್ಬರ ಪುತ್ರ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ (Heart Attack) ಕುಸಿದು...

ಮಹಿಳೆಯರನ್ನು ಗರ್ಭಕೋಶ ಕ್ಯಾನ್ಸರ್‌ನಿಂದ ರಕ್ಷಿಸಲು ಎಚ್‌ಪಿವಿ ಲಸಿಕೆ ಅತ್ಯಗತ್ಯ: ಡಾ. ಮಂಗಳ

ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು...

ಕೋವಿಡ್ ಲಸಿಕೆಗೂ ಹಠಾತ್ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ: ಆರೋಗ್ಯ ಸಚಿವಾಲಯ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ...

Download Eedina App Android / iOS

X