- ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸಿದ ಶಂಕಿತ ಉಗ್ರರ ತಂಡ
- ಸ್ಪೋಟ ನಡೆಸುವ ಬಗ್ಗೆ ತರಬೇತಿ ನೀಡುತ್ತಿದ್ದ ಪ್ರಮುಖ ಆರೋಪಿ ಜುನೈದ್
ರಾಜಧಾನಿ ಬೆಂಗಳೂರಿನ 10 ಕಡೆಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಐವರು ಶಂಕಿತ ಉಗ್ರರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಶಂಕಿತ ಉಗ್ರರನ್ನು ಸೈಯದ್ ಸುಹೇಲ್, ಉಮರ್, ಜಾನಿದ್, ಮುದಾಸಿರ್ ಮತ್ತು ಜಾಹಿದ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸಿಸಿಬಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ಈ ಐವರಿಗೆ ತರಬೇತಿ ನೀಡಿದ್ದ ಜುನೈದ್ ಎಂಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
2017ರಲ್ಲಿ ಆರ್.ಟಿ. ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ 21 ಜನ ಜೈಲು ಸೇರಿದ್ದರು. ಶಂಕಿತ ಉಗ್ರರಾಗಿ ಬಂಧನವಾಗಿರುವ ಐವರು ಈ ಪ್ರಕರಣದಲ್ಲಿ ಸೇರಿದ್ದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಈ ಐವರು ಉಗ್ರರ ಸಂಪರ್ಕ ಬೆಳೆಸಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಈ ತಂಡ ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸಿತ್ತು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಧಿತ ಈ ಶಂಕಿತ ಉಗ್ರರು ದಿನನಿತ್ಯ ಸಾಯಂಕಾಲ ಒಂದೆಡೆ ಸೇರುತ್ತಿದ್ದರು. ಇವರೆಲ್ಲರಿಗೂ ಜುನೈದ್ ಎಂಬ ಪ್ರಮುಖ ಆರೋಪಿ ಸ್ಪೋಟ ನಡೆಸುವ ಬಗ್ಗೆ ತರಬೇತಿ ನೀಡುತ್ತಿದ್ದನು ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೀದಿನಾಯಿಗಳ ಗಣತಿಗೆ ಮೊದಲ ಬಾರಿಗೆ ಡ್ರೋನ್ ಬಳಕೆ
ಸಿಸಿಬಿ ಪೊಲೀಸರು ತರಬೇತಿ ನೀಡುತ್ತಿದ್ದ ಸ್ಥಳವನ್ನು ಗುರುತು ಮಾಡಿ ಐವರು ಶಂಕಿತ ಉಗ್ರರನ್ನು ಪತ್ತೆ ಮಾಡಿದ್ದಾರೆ. ಪೊಲೀಸ್ ಕಾರ್ಯಾಚರಣೆ ವೇಳೆ ಪ್ರಮುಖ ಆರೋಪಿ ಜುನೈದ್ ಸ್ಥಳದಲ್ಲಿ ಇರಲಿಲ್ಲ. ಇದೀಗ ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.