‘ನಮ್ಮ ಮುಂದಿರುವ ಬೃಹತ್ ಸವಾಲು ಪರಿಸರ ಬಿಕ್ಕಟ್ಟಲ್ಲ; ರಾಜಕೀಯ ಬಿಕ್ಕಟ್ಟು’ ಜೋಸೆ ಮುಯಿಕ ಚಿಂತನೆ

Date:

Advertisements
ಬ್ರೆಜಿಲ್‌ನ ರಾಜಧಾನಿ ರಿಯೋ ಡೇ ಜಾನಿರೊ ನಗರದಲ್ಲಿ ವಿಶ್ವಸಂಸ್ಥೆಯು ಏರ್ಪಡಿಸಿದ್ದ ಮೂರು ದಿನಗಳ ಜಗತ್ತಿನ ವಿವಿಧ ಸಮಸ್ಯೆಗಳ ಕುರಿತ ಚರ್ಚೆಯ ಸಮ್ಮೇಳನದಲ್ಲಿ ಸುಸ್ಥಿರ ಅಭಿವೃದ್ಧಿ ವಿಷಯ ಕುರಿತ ಪೂರ್ಣಾವಧಿ ಅಧಿವೇಶನದಲ್ಲಿ ಭಾಗವಹಿಸಿದ 139 ರಾಷ್ಟ್ರಗಳ ಸದಸ್ಯರನ್ನು ಉದ್ದೇಶಿಸಿ ಉರುಗ್ವೆಯ ಅಧ್ಯಕ್ಷ ಜೋಸೆ ಮುಯಿಕ ಅವರು ದಿನಾಂಕ 20ನೇ ಜೂನ್ 2012ರಲ್ಲಿ ಮಾಡಿದ ಭಾಷಣ… ಇಂದಿಗೂ ಚಿಂತನೆಗೆ ಅರ್ಹವಾಗಿದೆ.

ಜಗತ್ತಿನ ಎಲ್ಲ ಮೂಲೆಗಳಿಂದ ಆಗಮಿಸಿ ಇಲ್ಲಿ ಉಪಸ್ಥಿತರಿರುವ ಎಲ್ಲಾ ಪ್ರಾಧಿಕಾರಗಳಿಗೆ, ನನ್ನ ಧನ್ಯವಾದಗಳು. ಬ್ರೆಜಿಲ್ ದೇಶದ ಜನರು ಮತ್ತು ಅದರ ಅಧ್ಯಕ್ಷೆ ಶ್ರೀಮತಿ ದಿಲ್ಮಾ ರೂಸೆಫ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಮೊದಲು ಭಾಷಣ ಮಾಡಿದ ಎಲ್ಲರೂ ವ್ಯಕ್ತಪಡಿಸಿದ ಭರವಸೆ, ವಿಶ್ವಾಸಕ್ಕೆ ಧನ್ಯವಾದಗಳು.

ನಮ್ಮ ನಿರ್ಭಾಗ್ಯ ಮನುಕುಲದ ಉದ್ಧಾರಕ್ಕಾಗಿ ಈ ಸಮ್ಮೇಳನದಲ್ಲಿ ಆವಿರ್ಭವಿಸಬಹುದಾದ ಎಲ್ಲಾ ಒಪ್ಪಂದಗಳಿಗೆ ಬದ್ಧವಾಗಿರಲು ಅಧಿಕಾರ ನಡೆಸುವವರಾಗಿ ನಾವು ನಮ್ಮ ಮನೋ ಸಂಕಲ್ಪವನ್ನು ಇಲ್ಲಿ ವ್ಯಕ್ತಪಡಿಸುತ್ತೇವೆ. ಆದರೂ ಕೆಲವು ಪ್ರಶ್ನೆಗಳನ್ನು ಗಟ್ಟಿಯಾದ ದನಿಯಲ್ಲಿ ಕೇಳಲು ಈ ಅವಕಾಶವನ್ನು ಬಳಸಿಕೊಳ್ಳೋಣ. ಈ ಮಧ್ಯಾಹ್ನದ ಉದ್ದಕ್ಕೂ, ನಾವು ಸುಸ್ಥಿರ ಅಭಿವೃದ್ಧಿಯ ಬಗ್ಗೆ, ಬಡತನದ ಬಿಗಿಹಿಡಿತದಿಂದ ಜನಸಾಮಾನ್ಯರನ್ನು ರಕ್ಷಿಸುವ ಬಗ್ಗೆ ಮಾತನಾಡುತ್ತಿದ್ದೇವೆ.

ನಮ್ಮ ಮನಸ್ಸಿನಲ್ಲಿ ಇರುವ ತಳಮಳಗಳೇನು? ಶ್ರೀಮಂತ ಸಮಾಜಗಳ ಮಾದರಿಯಂತೆ ರೂಪುಗೊಂಡ ಅಭಿವೃದ್ಧಿ ಮತ್ತು ಬಳಕೆಯ ಮಾದರಿಯ ಬಗೆಗಿನ ತುಡಿತವೇ, ಇದು? ಜರ್ಮನಿಯ ಕುಟುಂಬವೊಂದರ ಒಡೆತನದಲ್ಲಿರುವಷ್ಟೇ ಸಂಖ್ಯೆಯ ಕಾರುಗಳು ಭಾರತದ ಜನರಲ್ಲೂ ಇದ್ದದ್ದೇ ಆಗಿದ್ದರೆ ಈ ಗ್ರಹಕ್ಕೆ ಏನಾಗುತ್ತಿತ್ತು ಎಂಬ ಪ್ರಶ್ನೆಯನ್ನು ನಾನು ಕೇಳುತ್ತಿದ್ದೇನೆ. ಆಗ ನಮಗೆ ಉಸಿರಾಡಲು ಎಷ್ಟು ಆಮ್ಲಜನಕ ಉಳಿಯುತ್ತಿತ್ತು? ಇನ್ನೂ ಹೆಚ್ಚು ಸ್ಪಷ್ಟವಾಗಿ ಪ್ರಶ್ನೆ ಹಾಕುವೆ: ಜಗತ್ತಿನ ಅತ್ಯಂತ ಶ್ರೀಮಂತ ಪಾಶ್ಚಿಮಾತ್ಯ ಸಮಾಜಗಳು ಬಳಸುತ್ತಿರುವ ಮತ್ತು ದುಂದುವ್ಯಯ ಮಾಡುತ್ತಿರುವ ಪ್ರಮಾಣದಲ್ಲೇ ಜಗತ್ತಿನ ಏಳು ಅಥವಾ ಎಂಟು ಶತಕೋಟಿ ಜನರೂ ಆನಂದಿಸಲು ಅವಕಾಶ ಮಾಡಿಕೊಡುವ ಭೌತಿಕ ಸಂಪನ್ಮೂಲಗಳು ಇಂದಿನ ಪ್ರಪಂಚದಲ್ಲಿದೆಯೇ? ಅದು ಎಂದಾದರೂ ಸಾಧ್ಯವಾಗುವುದೇ? ಅಂತಹ ನಿಟ್ಟಿನಲ್ಲಿ ನಾವು ಒಂದು ದಿನ ಬೇರೆ ರೀತಿಯ ಚರ್ಚೆಯನ್ನು ಪ್ರಾರಂಭಿಸಬೇಕೇ? ಏಕೆಂದರೆ ನಾವು ಬದುಕುತ್ತಿರುವ ಈ ನಾಗರಿಕತೆಯು ನಮ್ಮದೇ ಸೃಷ್ಟಿ: ಮಾರುಕಟ್ಟೆ ಮತ್ತು ಸ್ಪರ್ಧೆಯು ನಿರಂತರವಾಗಿ ಸೃಷ್ಟಿಸುತ್ತಿರುವ ಉತ್ಪನ್ನಗಳು ಪ್ರಚಂಡವಾದ ಮತ್ತು ಸ್ಫೋಟಕ ಭೌತಿಕ ಪ್ರಗತಿಗೆ ಕಾರಣವಾಯಿತು. ಆದರೆ ಮಾರುಕಟ್ಟೆ ಆಧಾರಿತ ಆರ್ಥಿಕತೆಯು ಮಾರುಕಟ್ಟೆ ಸಮಾಜಗಳನ್ನು ಸೃಷ್ಟಿಸಿದೆ. ಮತ್ತು ಅದು ನಮಗೆ ಈ ಜಾಗತೀಕರಣವನ್ನು ನೀಡಿದೆ. ಅದರ ಅರ್ಥ ನಾವು ಇಡೀ ಗ್ರಹದ ಬಗ್ಗೆ ಕಾಳಜಿ ವಹಿಸುವುದಾಗಿದೆ.

Advertisements

ಇದನ್ನು ಓದಿದ್ದೀರಾ?: ಲಡಾಖ್‌ನಲ್ಲಿ ಹೊಸ ನೀತಿಗಳ ಜಾರಿ; ಕೇಂದ್ರ ಸರ್ಕಾರ ಇಟ್ಟ ಮಹತ್ವದ ಹೆಜ್ಜೆಗಳೇನು?

ನಾವು ಜಾಗತೀಕರಣದ ಮೇಲೆ ಆಳ್ವಿಕೆ ನಡೆಸುತ್ತಿದ್ದೇವೆಯೋ ಅಥವಾ ಜಾಗತೀಕರಣವು ನಮ್ಮ ಮೇಲೆ ಆಳ್ವಿಕೆ ನಡೆಸುತ್ತಿದೆಯೋ? ನಿರ್ದಯ ಮತ್ತು ಕಠೋರವಾದ ಸ್ಪರ್ಧೆಯನ್ನು ಆಧರಿಸಿದ ಆರ್ಥಿಕತೆಯಲ್ಲಿ ಐಕಮತ್ಯ ಮತ್ತು ‘ಎಲ್ಲರೂ ಒಟ್ಟಿಗೆ ಇರುವುದು’ ಎಂಬ ಪರಿಕಲ್ಪನೆಯ ಬಗ್ಗೆ ಮಾತನಾಡಲು ಸಾಧ್ಯವೇ? ನಮ್ಮ ಭ್ರಾತೃತ್ವ ಎಷ್ಟು ಕಾಲ ಉಳಿಯುತ್ತದೆ?

ಈ ಸಮಾವೇಶದ ಮಹತ್ವವನ್ನು ಅಲ್ಲಗಳೆಯಲು ನಾನು ಯಾವುದನ್ನೂ ಹೇಳುತ್ತಿಲ್ಲ. ಇದಕ್ಕೆ ಬದಲಾಗಿ, ನಮ್ಮ ಮುಂದಿರುವ ಬೃಹತ್ ಪ್ರಮಾಣದ ಸವಾಲು ಪರಿಸರ ಬಿಕ್ಕಟ್ಟಲ್ಲ, ಬದಲಾಗಿ ರಾಜಕೀಯ ಬಿಕ್ಕಟ್ಟು ಎಂದು ಹೇಳುವುದು ನನ್ನ ಉದ್ದೇಶವಾಗಿದೆ.

ಇಂದು, ಮನುಷ್ಯನು ತಾನು ಬಿಡುಗಡೆ ಮಾಡಿದ ಶಕ್ತಿಗಳನ್ನು ಆಳುತ್ತಿಲ್ಲ, ಬದಲಿಗೆ, ಈ ಶಕ್ತಿಗಳೇ ಮನುಷ್ಯನನ್ನು ಮತ್ತು ಜೀವನವನ್ನು ಆಳುತ್ತವೆ. ಏಕೆಂದರೆ ನಾವು ಈ ಗ್ರಹಕ್ಕೆ ಹಾಗೆ ಸುಮ್ಮನೆ ಕೇವಲ ವಿವೇಚನೆಯಿಲ್ಲದೆ ಅಭಿವೃದ್ಧಿಯಾಗಲು ಬಂದಿರುವುದಿಲ್ಲ. ನಾವು ಸಂತೋಷವಾಗಿರಲು ಈ ಗ್ರಹಕ್ಕೆ ಬರುತ್ತೇವೆ. ಏಕೆಂದರೆ ಜೀವನವೆಂಬುದು ಅಲ್ಪಕಾಲದ್ದು ಮತ್ತು ಅದು ನಮ್ಮಿಂದ ಜಾರಿ ಹೋಗುವಂಥದ್ದು. ಯಾವುದೇ ಭೌತಿಕ ವಸ್ತುವು ಜೀವನದಷ್ಟು ಮೌಲ್ಯಯುತವಾಗಿಲ್ಲ. ಇದು ಮೂಲಭೂತವಾದ ಸತ್ಯ. ಆದರೆ ಜೀವನವು ನನ್ನ ಕೈಯಿಂದ ಜಾರಿಕೊಳ್ಳುತ್ತಿದ್ದರೆ, ನಾನು ಹೆಚ್ಚು ಅನುಭೋಗಿಸುವದನ್ನು ಸಾಧ್ಯವಾಗಿಸಲು ಅತಿಯಾಗಿ ದುಡಿಮೆಯಲ್ಲಿ ತೊಡಗಿದರೆ ಕೊನೆಗೆ ಗ್ರಾಹಕ ಸಮಾಜವೇ ಬದುಕನ್ನು ನಿರ್ದೇಶಿಸುವ ಯಂತ್ರವಾಗುತ್ತದೆ. ಒಂದುವೇಳೆ ಬಳಕೆ ಅಥವಾ ಉಪಭೋಗವು ಊನಗೊಂಡರೆ ಆರ್ಥಿಕತೆ ಸ್ಥಗಿತಗೊಳ್ಳುತ್ತದೆ. ನೀವು ಆರ್ಥಿಕತೆಯನ್ನು ನಿಷ್ಕ್ರಿಯಗೊಳಿಸಿದರೆ, ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಆಲಸ್ಯದ ಭೂತ ಕಾಣಿಸಿಕೊಳ್ಳುತ್ತದೆ.

ಆದರೆ ಈ ಅತಿಯಾದ ಬಳಕೆಯೇ ಭೂಗ್ರಹಕ್ಕೆ ಹಾನಿ ಮಾಡುತ್ತಿದೆ. ಈ ಅತಿಬಳಕೆಗೆ ಬಳಸುವ ವಸ್ತುಗಳನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಬೇಕಾಗಿದೆ. ಅತಿಯಾಗಿ ಉತ್ಪಾದಿಸಿದ ವಸ್ತುಗಳನ್ನು ಹೆಚ್ಚು ಪ್ರಮಾಣದಲ್ಲಿ ಮಾರಾಟ ಮಾಡಲು ಕಡಿಮೆ ಅವಧಿ ಬಾಳಿಕೆ ಬರುವ ವಸ್ತುಗಳನ್ನು ತಯಾರು ಮಾಡುತ್ತದೆ. ಹೀಗಾಗಿ, ಒಂದು ಬೆಳಕಿನ ಬಲ್ಬ್ 1000 ಗಂಟೆಗಳಿಗಿಂತ ಹೆಚ್ಚು ಕಾಲ ಉರಿಯಲು ಸಾಧ್ಯವಿಲ್ಲ. ಆದರೆ 1,00,000 ಗಂಟೆಗಳಿಗಿಂತ ಹೆಚ್ಚು ಕಾಲ ಉಳಿಯುವ ಬೆಳಕಿನ ಬಲ್ಬ್ ಗಳಿವೆ! ಆದರೆ ಇವುಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ, ಏಕೆಂದರೆ ಸಮಸ್ಯೆ ಇರುವುದು ಮಾರುಕಟ್ಟೆಯಲ್ಲಿ. ‘ಬಳಸಿ ಬಿಸಾಡಿ’ ಎಂಬ ನಾಗರಿಕತೆಯನ್ನು ಉಳಿಸಿಕೊಳ್ಳಬೇಕಾದರೆ ನಾವು ಹೆಚ್ಚು ದುಡಿಯಬೇಕು. ಹಾಗಾಗಿ ನಾವು ಒಂದು ವಿಷವರ್ತುಲದಲ್ಲಿ ಬಂಧಿಯಾಗಿದ್ದೇವೆ. ಇವು ರಾಜಕೀಯ ಸ್ವಭಾವದ ಸಮಸ್ಯೆಗಳಾಗಿದ್ದು, ಅವು ವಿಭಿನ್ನ ಸಂಸ್ಕೃತಿಗಾಗಿ ಹೋರಾಡುವ ಸಮಯ ಬಂದಿದೆ ಎಂದು ನಮಗೆ ತೋರಿಸುತ್ತಿವೆ.

ಹೊಸ ಸಂಸ್ಕೃತಿಯ ಸಾಧನೆಗೆ ನಾನು ಮಾನವ ಗುಹೆಯಲ್ಲಿ ವಾಸಿಸುತ್ತಿದ್ದ ಯುಗಕ್ಕೆ ಮರಳುವ ಬಗ್ಗೆ ಅಥವಾ ‘ಹಿಂದುಳಿದ ಸ್ಥಿತಿಯನ್ನು ವೈಭವೀಕರಿಸುವ’ ಬಗ್ಗೆ ಮಾತನಾಡುತ್ತಿಲ್ಲ. ಆದರೆ ನಾವು ಹೀಗೆಯೇ ಮಾರುಕಟ್ಟೆಯಿಂದ ಆಳಿಸಿಕೊಳ್ಳುವ ರೀತಿಯು ಅನಿರ್ದಿಷ್ಟ ಕಾಲ ಮುಂದುವರಿಯಲು ಸಾಧ್ಯವಿಲ್ಲ. ಬದಲಾಗಿ ನಾವು ಮಾರುಕಟ್ಟೆಯನ್ನು ಆಳಬೇಕು.

ಇದಕ್ಕಾಗಿಯೇ ನಾವು ಎದುರಿಸುತ್ತಿರುವ ಸಮಸ್ಯೆ ರಾಜಕೀಯವಾದುದು ಎಂದು ನನ್ನ ವಿನಮ್ರ ಚಿಂತನೆಯಲ್ಲಿ ಮೂಡಿದ ಅಭಿಪ್ರಾಯವನ್ನು ಹೇಳುತ್ತಿದ್ದೇನೆ. ಅಭಾವ ಇರುವಾತ ಬಡವನಲ್ಲ; ಅನಂತಕಾಲದವರೆಗೆ ತನಗೆ ಬೇಕು, ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎನ್ನುವವನೇ ಬಡವ ಎಂದು ಎಪಿಕ್ಯುರಸ್, ಸೆನೆಕಾ ಮತ್ತು ಐಮಾರಾ ಅವರಂಥ ಪುರಾತನ ಚಿಂತಕರೂ ಹೇಳಿದ್ದಾರೆ. ಆದ್ದರಿಂದ ಇದು ಸಂಸ್ಕೃತಿಗೆ ಸಂಬಂಧಿಸಿದ ವಿಷಯವೂ ಆಗಿದೆ.

jose mujica
ಸುಖ ಎನ್ನುವುದು ನಮ್ಮಲ್ಲಿರುವ ಅತ್ಯಂತ ಅಮೂಲ್ಯವಾದ ನಿಧಿ. ನಾವು ಪರಿಸರಕ್ಕಾಗಿ ಹೋರಾಡುವಾಗ, ಪರಿಸರದ ಸಾರಭೂತವೇ ಮಾನವ ಸಂತೋಷ ಎಂಬುದನ್ನು ನಾವು ನೆನಪಿನಲ್ಲಿಡಬೇಕು… ಎಂದ ಜೋಸೆ ಮುಯಿಕ

ಆದ್ದರಿಂದ ನಾನು ಇಲ್ಲಿ ಮಾಡಲಾಗುತ್ತಿರುವ ಪ್ರಯತ್ನಗಳು ಮತ್ತು ಒಪ್ಪಂದಗಳನ್ನು ಸ್ವಾಗತಿಸುತ್ತೇನೆ. ಒಬ್ಬ ಆಡಳಿತಗಾರನಾಗಿ ನಾನು ಅವುಗಳನ್ನು ಪಾಲಿಸುತ್ತೇನೆ. ನಾನು ಹೇಳುತ್ತಿರುವ ಕೆಲವು ವಿಷಯಗಳನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ ಎಂದು ನನಗೆ ತಿಳಿದಿದೆ. ಆದರೆ ನೀರಿನ ಬಿಕ್ಕಟ್ಟು ಮತ್ತು ಪರಿಸರದ ಮೇಲಿನ ಆಕ್ರಮಣವು ನಮ್ಮ ಪರಿಸರ ಸಮಸ್ಯೆಗೆ ಕಾರಣವಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ನಿಜವಾದ ಕಾರಣ ನಾವು ಸೃಷ್ಟಿಸಿದ ನಾಗರಿಕತೆಯ ಮಾದರಿ. ನಾವು ಮರುಪರಿಶೀಲಿಸಬೇಕಾದ ವಿಷಯವೆಂದರೆ ನಮ್ಮ ಜೀವನ ವಿಧಾನ.

ಜೀವನಕ್ಕೆ ಅಗತ್ಯವಾದ ನೈಸರ್ಗಿಕ ಸಂಪನ್ಮೂಲಗಳಿಂದ ತುಂಬಿದ ಸಣ್ಣ ದೇಶಕ್ಕೆ ಸೇರಿದವನು, ನಾನು. ನನ್ನ ದೇಶದಲ್ಲಿ, ಮೂವತ್ತು ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಆದರೆ ಸುಮಾರು ನೂರ ಮೂವತ್ತು ಲಕ್ಷ ಹಸುಗಳಿವೆ. ಅವುಗಳಲ್ಲಿ ಕೆಲವು ವಿಶ್ವದಲ್ಲೇ ಅತ್ಯುತ್ತಮವಾದವು. ಸುಮಾರು ಎಂಬತ್ತು ಲಕ್ಷ ಅಥವಾ ಒಂದು ಕೋಟಿ ಅತ್ಯುತ್ತಮ ಕುರಿಗಳಿವೆ. ನನ್ನ ದೇಶವು ಆಹಾರ, ಹಾಲಿನ ಉತ್ಪನ್ನಗಳು, ಮಾಂಸವನ್ನು ರಫ್ತು ಮಾಡುವ ದೇಶ. ಹೆಚ್ಚು ಗುಡ್ಡಗಾಡು ಕಣಿವೆಗಳಿಲ್ಲದ ಬಯಲು ಪ್ರದೇಶ ಮತ್ತು ಸುಮಾರು ಶೇ. 90ರಷ್ಟು ಭೂಮಿ ಫಲವತ್ತಾಗಿರುವ ದೇಶ.

ನನ್ನ ಸಹೋದ್ಯೋಗಿಗಳು, 8 ಗಂಟೆಗಳ ಕೆಲಸದ ದಿನಕ್ಕಾಗಿ ತೀವ್ರವಾಗಿ ಹೋರಾಡಿದರು.  ಈಗ ಅವರು ದಿನಕ್ಕೆ ಆರು ಗಂಟೆಗಳ ದುಡಿಮೆಗೆ ಒತ್ತಾಯಿಸುತ್ತಿದ್ದಾರೆ. ಆದರೆ ಆರು ಗಂಟೆಗಳ ಪಾಳಿ ಕೆಲಸ ಮಾಡುವ ವ್ಯಕ್ತಿಗೆ ಎರಡು ಪಾಳಿಗಳ ಕೆಲಸಗಳು ಸಿಗುತ್ತವೆ. ಆದ್ದರಿಂದ, ಅವನು ಮೊದಲಿಗಿಂತ ಹೆಚ್ಚು ಸಮಯ ಕೆಲಸ ಮಾಡುತ್ತಾನೆ. ಆದರೆ ಅದು ಯಾತಕ್ಕಾಗಿ? ಏಕೆಂದರೆ ಅವನು ಮೋಟಾರ್ ಸೈಕಲ್, ಕಾರು ಇತ್ಯಾದಿಗಳ ಮಾಸಿಕ ಕಂತುಗಳನ್ನು ಪಾವತಿಸಲು ಅವನಿಗೆ ಹೆಚ್ಚು ದುಡಿಮೆ ಬೇಕು. ಕಂತುಗಳು ಹೆಚ್ಚಾದಂತೆಲ್ಲಾ ಹೆಚ್ಚು ಹೆಚ್ಚು ದುಡಿಯಬೇಕು. ಅವನು ಅದನ್ನೆಲ್ಲ ಪೂರ್ಣ ಮಾಡಿ ಮುಗಿಸಿದಾಗ, ನನ್ನಂತೆ ಸಂಧಿವಾತದ ಮುದುಕನಾಗಿರುವುದು ಮತ್ತು ಜೀವನವು ಈಗಾಗಲೇ ಮುಗಿದಿರುವುದು ಅರಿವಾಗುತ್ತದೆ. 

ಇದು ಮಾನವ ಜೀವನದ ಹಣೆಬರಹವೇ? ಎಂದು ಯಾರಾದರೊಬ್ಬರು ಮತ್ತು ಒಬ್ಬರು ಪ್ರಶ್ನಿಸುತ್ತಾರೆ. ನಾನು ಹೇಳುವ ಈ ವಿಷಯಗಳು ಬಹಳ ಮೂಲಭೂತವಾಗಿವೆ: ಅಭಿವೃದ್ಧಿಯು ಸಂತೋಷಕ್ಕೆ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲ. ಅದು ಮಾನವ ಸಂತೋಷ, ಭೂಮಿಯ ಮೇಲಿನ ಪ್ರೀತಿ, ಮಾನವ ಸಂಬಂಧಗಳು, ಮಕ್ಕಳ ಆರೈಕೆ, ಸ್ನೇಹಿತರನ್ನು ಹೊಂದಿರುವುದು, ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಮುಂತಾದವುಗಳ ಪರವಾಗಿ ಕೆಲಸ ಮಾಡಬೇಕು. ನಿಖರವಾಗಿ ಇದಾಗಬೇಕು. ಏಕೆಂದರೆ ಸುಖ ಎನ್ನುವುದು ನಮ್ಮಲ್ಲಿರುವ ಅತ್ಯಂತ ಅಮೂಲ್ಯವಾದ ನಿಧಿ. ನಾವು ಪರಿಸರಕ್ಕಾಗಿ ಹೋರಾಡುವಾಗ, ಪರಿಸರದ ಸಾರಭೂತವೇ ಮಾನವ ಸಂತೋಷ ಎಂಬುದನ್ನು ನಾವು ನೆನಪಿನಲ್ಲಿಡಬೇಕು.

ಅನುವಾದ: ಡಾ. ಕೆ. ಪುಟ್ಟಸ್ವಾಮಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

Download Eedina App Android / iOS

X