“ಯುವ ಪೀಳಿಗೆಯ ಉಡುಗೆ-ತೊಡುಗೆ ಬದಲಾಗಿದೆ. ಅದು ಒಳ್ಳೆಯದು. ಆದರೆ, ಅವರ ಆಲೋಚನೆಗಳು ಬದಲಾಗಿಲ್ಲ” ಎಂದು ಹಿರಿಯ ಲೇಖಕಿ, ಪತ್ರಕರ್ತೆ ಡಾ. ಆರ್ ಪೂರ್ಣಿಮಾ ವಿಷಾದ ವ್ಯಕ್ತಪಡಿಸಿದರು.
ನಗರದ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಾನವಿಕ ವೇದಿಕೆ ಮಂಗಳವಾರ ಆಯೋಜಿಸಿದ್ದ ʼವಿದ್ಯಾರ್ಥಿಗಳ ಸಮಕಾಲೀನ ಸವಾಲುಗಳುʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸಮಾಜದಲ್ಲಿ ಎಲ್ಲವೂ ಬದಲಾಗಿದೆ. ತಾಂತ್ರಿಕತೆ, ಆಧುನಿಕ ವಿಜ್ಞಾನವೂ ಬದಲಾಗಿದೆ. ಡ್ರೋನ್, ಕೃತಕ ಬುದ್ಧಿಮತ್ತೆಯ ತಾಂತ್ರಿಕತೆಯ ಮೂಲಕ ಏನನ್ನು ಬೇಕಾದರೂ ಮಾಡುವ ಸಂದರ್ಭದಲ್ಲಿ ಇಂದಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಯುವಜನತೆ ಚಿಂತನೆಯನ್ನು ರೂಪಿಸಿಕೊಳ್ಳಬೇಕು. ಸಾಮಾಜಿಕ ಚಿಂತನೆ, ಸಮಾಜದ ಬಗ್ಗೆ ತಿಳಿದು ಬೆಳೆಸಿಕೊಳ್ಳಬೇಕು. ಜಾತಿ ವ್ಯವಸ್ಥೆಯ ತರ-ತಮ ಅರ್ಥ ಮಾಡಿಕೊಂಡು ವ್ಯವಸ್ಥೆಯನ್ನು ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
“ಸಮಾಜದ ಸಮಸ್ಯೆಗಳನ್ನು ಗುರುತಿಸುವುದು, ಪ್ರಶ್ನಿಸುವುದನ್ನು ಇಂದಿನ ಯುವಜನರಲ್ಲಿ ಮೂಡಿಸಬೇಕು. ಸಮಸ್ಯೆಗಳು, ಅನ್ಯಾಯವನ್ನು ಪರಿಹರಿಸಲು ಪ್ರಶ್ನೆ ಮಾಡಬೇಕು. ವಿದ್ಯಾರ್ಥಿಗಳು ಕರ್ತವ್ಯ ಮತ್ತು ಜವಾಬ್ದಾರಿಯುತ ನಡವಳಿಕೆಯ ರೀತಿಯನ್ನು ಅರ್ಥಮಾಡಿಕೊಂಡರೆ, ಸವಾಲುಗಳನ್ನು ಎದುರಿಸಬಹುದು. ಸಮಕಾಲೀನ ಸವಾಲುಗಳಲ್ಲಿ ಬೌದ್ಧಿಕ, ಮಾನಸಿಕ ಸೇರಿದಂತೆ ಹಲವಾರು ಅಂಶಗಳನ್ನು ಅರ್ಥ ಮಾಡಿಕೊಳ್ಳುವುದೇ ದೊಡ್ಡ ಸವಾಲು” ಎಂದರು.
“ಇಡೀ ಸಮಾಜದ ಒಳಿತಿಗಾಗಿ ಅಸಮಾನತೆಯನ್ನು ತೊಡೆದು ಹಾಕುವುದಕ್ಕಾಗಿ ಪಠ್ಯ ಕ್ರಮದ ಆಚೆಗಿನ ಚಿಂತನೆಯನ್ನು ಬೆಳೆಸಿಕೊಳಬೇಕು. ತಮ್ಮ ಸುತ್ತ ನಡೆಯುತ್ತಿರುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದನ್ನು ತೊಲಗಿಸಲು ಪ್ರಯತ್ನಿಸಬೇಕು. ಸಾಂಸ್ಕೃತಿಕ ರಂಗ ಸಾಹಿತ್ಯ, ಸಿನಿಮಾ, ರಂಗಭೂಮಿಯಲ್ಲಿ ಎದುರಾಗುತ್ತಿರುವ ವಿಚಾರಗಳನ್ನು, ಸಮಸ್ಯೆಗಳನ್ನು ಗಮನಿಸಬೇಕು. ರಂಗಭೂಮಿಯಲ್ಲಿ ಉತ್ತಮ ಪ್ರಯೋಗಗಳು ಬರುತ್ತಿವೆ. ಅವುಗಳನ್ನು ಯುವಜನತೆ ನೋಡುವ ಮೂಲಕ ಪ್ರೋತ್ಸಾಹಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ವೈ ವೆಂಕಟೇಶಪ್ಪ, ಮಾನವಿಕ ವೇದಿಕೆಯ ಸಂಚಾಲಕ ಡಾ. ಕರಿಬಸವಯ್ಯ ಉಪಸ್ಥಿತರಿದ್ದರು.