ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮವಾಗಿ ಸಾಂವಿಧಾನಿಕ ಮಾನ್ಯತೆ ನೀಡಬೇಕೆಂದು ಆಗ್ರಹಿಸಿ 2017 ಜುಲೈ 19ರಂದು ಬೀದರ್‌ನಲ್ಲಿ ನಡೆದಿದ್ದ ಮೊದಲ ಸಮಾವೇಶದ ನೆನಪಿಗಾಗಿ ಸಾಮಾಜಿಕ ಕಾರ್ಯಕರ್ತ ಓಂಪ್ರಕಾಶ್ ರೊಟ್ಟೆ ಅವರು ಧರಣಿ ನಡೆಸಿದ್ದು, ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“2018ರಲ್ಲಿ ನಿವೃತ್ತ ನ್ಯಾ. ನಾಗಮೋಹನದಾಸ್ ಅವರು ರಚಿಸಿದ್ದ ವರದಿಯನ್ನು ಪ್ರಧಾನಿ ನರೇದ್ರ ಮೋದಿ ನೇತೃತ್ವದ ಸರ್ಕಾರ ಕ್ಷುಲ್ಲಕ ಕಾರಣ ನೀಡಿ ಹಿಂದಿರುಗಿಸಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ, ವರದಿಯನ್ನು ಪುನರ್ ಪರಿಶೀಲಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಮರು ಶಿಫಾರಸ್ಸು ಮಾಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ಸಂವಿಧಾನ ಬದ್ಧವಾಗಿ ಧರ್ಮದ ಮಾನ್ಯತೆ ಪಡೆದುಕೊಂಡಿರುವ ಬೌದ್ಧ, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ್ ಹಾಗೂ ಪಾರ್ಸಿ ಧರ್ಮದ ಬಾಂಧವರು ಸರ್ಕಾರಗಳ ಸೌಲಭ್ಯ ಪಡೆದುಕೊಂಡಿದ್ದಾರೆ. ಅದೇ ಮಾದರಿಯಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ನೀಡಬೇಕು” ಎಂದು ಆಗ್ರಹಿಸಿದರು.
“ವೀರಶೈವ ಮಹಾಸಭಾ, ಪಂಚಪೀಠಾಧೀಶರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವರು ನಮ್ಮ ಹೋರಾಟವನ್ನು ವಿರೋಧಿಸಿದ್ದರು. ವಿರೋಧವನ್ನು ಬದಿಗಿಟ್ಟು, ಸ್ವತಂತ್ರ ಧರ್ಮದ ಹೋರಾಟಕ್ಕೆ ಸಹಕರಿಸಬೇಕು. ಒಗ್ಗಟ್ಟು ಪ್ರದರ್ಶಿಸಿ ಮಾನ್ಯತೆಗೆ ಸಹಕರಿಸಬೇಕು” ಎಂದು ಕೋರಿದರು.