ದೂರು ನೀಡಲು ಹೋದ ದಲಿತ ಕುಟುಂಬದವರನ್ನು ನೆಲದ ಮೇಲೆ ಕೂರಿಸಿ ಅವಮಾನ ಮಾಡಿ ಅಸ್ಪೃಶ್ಯತೆ ಮೆರೆದಿರುವ ಘಟನೆ ಗೃಹಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ನಡೆದಿದೆ.
ತುಮಕೂರು ಜಿಲ್ಲೆಯ ತಿಪಟೂರು ನಗರ ಠಾಣೆಗೆ ದೂರು ನೀಡಲು ಹೋದ ದಲಿತ ಕುಟುಂಬವನ್ನು ನೆಲದ ಮೇಲೆ ಕೂರಿಸಿ ಅವಮಾನ ಮಾಡಿ ಅಸ್ಪೃಶ್ಯತೆಯನ್ನು ಜೀವಂತ ಇರಿಸಿರುವ ಪೊಲೀಸರು, ಆ ಮೂವರನ್ನು ಠಾಣೆಯ ತುಂಬಾ ಎಳೆದಾಡಿದ್ದಾರೆ. ಅಲ್ಲದೆ ಅದರ ವಿಡಿಯೋ ಮಾಡಿದ ಹುಡುಗನನ್ನು ಹಾಗೂ ಫೋಟೋ ತೆಗೆದ ಯುವಕನನ್ನು ಥಳಿಸಿ ಮೊಬೈಲ್ ಕಿತ್ತುಕೊಂಡು ಠಾಣೆಯಲ್ಲೇ ಕೂರಿಸಿದ್ದಾರೆ.
ನ್ಯಾಯ, ನೆರವು ನೀಡಬೇಕಾದ ಪೊಲೀಸರೇ ಇಂತಹ ಕೃತ್ಯಗಳನ್ನು ಎಸಗುವ ಮೂಲಕ ಅಸ್ಪೃಶ್ಯತೆ ಇನ್ನೂ ಜೀವಂತವಿದೆ ಎಂದು ಇಡೀ ದೇಶಕ್ಕೆ ಸಾರುತ್ತಿರುವ ತಿಪಟೂರು ನಗರ ಪೊಲೀಸ್ ಠಾಣೆಯವರು ದೌರ್ಜನ್ಯ ಎಸಗಿದ್ದಾರೆ.

ದಲಿತ, ದಲಿತಪರ ಇರುವ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಸ್ಥಳೀಯ ದಲಿತ ಮುಖಂಡರು ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬತೆ ಪೊಲೀಸರ ಪರವೇ ನಿಂತಿದ್ದಾರೆ. ಅಸ್ಪೃಶ್ಯತೆ ಇಲ್ಲ ಎನ್ನುವವರಿಗೆ ಈ ಫೋಟೋಗಳೇ ಸಾಕ್ಷಿಯಾಗಲಿವೆ. ಸರ್ಕಾರಕ್ಕೆ ಕಿಂಚಿತ್ತಾದರೂ ದಲಿತರ ಮೇಲೆ ಕಾಳಜಿ ಇದ್ದರೆ ಕಾನೂನನ್ನು ಗೌರವಿಸುವುದಾದರೆ ಇಂತಹ ಕೃತ್ಯ ಎಸಗಿರುವ ಪೊಲೀಸರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಿ, ದಲಿತಪರ ಸರ್ಕಾರ ಎಂದು ಸಾಬೀತುಪಡಿಸಲಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿದ್ದೀರಾ? ಎಲೆಚಾಕನಹಳ್ಳಿಯಲ್ಲಿ ಪೊಲೀಸರಿಂದಲೇ ಅಸ್ಪೃಶ್ಯತೆ ಪೋಷಣೆ: ದಲಿತರು ಬದುಕುವುದು ಹೇಗೆ?
ಗೃಹಮಂತ್ರಿ ಡಾ ಜಿ ಪರಮೇಶ್ವರ ಅವರು ತಮ್ಮ ಜಿಲ್ಲೆಯ ಕಾನೂನು ವ್ಯವಸ್ಥೆಯನ್ನೇ ಸರಿಪಡಿಸದವರು, ತಮ್ಮ ಸಮುದಾಯದವರಿಗೆ ನ್ಯಾಯ ಒದಗಿಸದವರು, ಇನ್ನು ರಾಜ್ಯಾದಂತ ದಲಿತರ ರಕ್ಷಣೆಗೆ ನಿಲ್ಲುವರೇ, ಪೊಲೀಸರ ವಿರುದ್ಧ ಸೂಕ್ತ ಕಾನೂನು ಜರುಗಿಸುವವರೇ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ.