ಸಮಯ ಎಂಬುದು ತುಂಬಾ ಅಮೂಲ್ಯವಾದುದು. ಪ್ರತಿದಿನವೂ ಆಸಕ್ತಿಯಿಂದ ಅಭ್ಯಾಸ ಮಾಡಬೇಕು. ಸಾಧನೆ ಸಾಧಕನ ಸ್ವತ್ತೇ ವಿನಃ ಸೋಮಾರಿಯದ್ದಲ್ಲ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶ್ರೀಹರಿಬಾಬು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಆಯೋಜಿಸಿರುವ 21 ದಿನಗಳ ಯುಜಿಸಿ ನೆಟ್ ಹಾಗೂ ಕೆ-ಸೆಟ್ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
“ಜೀವನದಲ್ಲಿ ವಿಫಲತೆ ಎಂದರೆ ಅದು ಕೇವಲ ಒಂದು ಸೋಲು ಅಲ್ಲ, ಬದಲಾಗಿ ಅದು ಜೀವನದ ಒಂದು ದೊಡ್ಡ ಭಾಗ. ಪ್ರಯತ್ನ, ಪರಿಶ್ರಮ ಮತ್ತು ಏಕಾಗ್ರತೆ ಇವೇ ಯಶಸ್ಸಿನ ಗುಟ್ಟು ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು. ಈ ಸೋಲನ್ನು ಸರಿಯಾದ ರೀತಿಯಲ್ಲಿ ಅರಿತುಕೊಂಡು ನಿರಂತರ ಪ್ರಯತ್ನದಿಂದ ಯಶಸ್ಸಿನ ಶಿಖರ ಏರಬಹುದು. ಮುಖ್ಯವಾಗಿ ಸಕಾರಾತ್ಮಕ ಮನೋಭಾವದಿಂದ ಜೀವಕ್ಕೆ ಬೇಕಾದ ಕೌಶಲ್ಯ ಹಾಗೂ ತಾಳ್ಮೆ ಒಗ್ಗೂಡಿಸಿಕೊಂಡರೆ ಯಶಸ್ಸಿನ ಹಾದಿ ಸುಲಭವಾಗುತ್ತದೆ” ಎಂದು ಕಿವಿಮಾತು ಹೇಳಿದರು.
“ಇಂದಿನ ದಿನಗಳಲ್ಲಿ ಸಾಕಷ್ಟು ಸೌಲಭ್ಯಗಳಿದ್ದರೂ ಇಚ್ಛಾಶಕ್ತಿ ಕೊರತೆಯಿದೆ. ಆ ದಿಸೆಯಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರದ್ಧೆ, ಆಸಕ್ತಿ, ತಾಳ್ಮೆ, ಪರಿಶ್ರಮ ಹಾಗೂ ಸತತ ಪ್ರಯತ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ತಿಳಿಸುತ್ತಾ ತಮ್ಮ ವಿದ್ಯಾರ್ಥಿ ಜೀವನ ಹಾಗೂ ಪರೀಕ್ಷಾ ತಯಾರಿ ದಿನಗಳನ್ನು ಹಂಚಿಕೊಂಡರು.
ಇದನ್ನೂ ಓದಿ: ವಿಜಯನಗರ | ಆಡಂಬರವಿಲ್ಲದೆ ಸಂವಿಧಾನ ಸಾಕ್ಷಿಯಾಗಿ ಅಂತರ್ಜಾತಿ ವಿವಾಹವಾದ ನವದಂಪತಿ
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, “ಸಂವೇದನಾಶೀಲ ಅಧಿಕಾರಿಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿ ಬೇಕು. ಅಂತಹ ಅಧಿಕಾರಿಯಾಗಿ ಶ್ರೀಹರಿಬಾಬು ಇದ್ದಾರೆ. ತಮ್ಮ ಬಿಡುವಿಲ್ಲದ ವೇಳೆಯಲ್ಲಿ ಸ್ವಯಂ ಪ್ರೇರಣೆಯಿಂದ ಬಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮಾತುಗಳನ್ನಾಡಿದ್ದಾರೆ” ಎಂದು ತಿಳಿಸಿದರು.
ವಿವಿಧ ವಿಭಾಗಳ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಇದ್ದರು.
