ಕರ್ನಾಟಕ ವಿದ್ಯುತ್ ಪ್ರಸಾರ ನಿಗಮದಿಂದ ಇಂಡಿ ತಾಲೂಕಿನ ನಾಲ್ಕು ಕಡೆ 110 ಕೆವಿ ಉಪಕೇಂದ್ರಗಳಿಗೆ ಮಂಜೂರಾತಿ ದೊರೆತಿದೆ ಎಂದು ತಾಲೂಕು ಕಾರ್ಯ ನಿರ್ವಾಹಕ ಅಭಿಯಂತರ ಎಸ್ ಎ ಬಿರಾದಾರ ಮತ್ತು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್ ಆರ್ ಮೆಡೆಗಾ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, “ಶಿರಗೂರ ಇನಾಂ, ತಾಂಬಾ, ಹಡಲಸಂಗ ಮತ್ತು ಅಗಸನಾಳಗಳಲ್ಲಿ ಮಂಜುರಾತಿ ಆಗಿವೆ. ನಿಂಬಾಳ 110 ಕೆವಿ ಉಪಕೇಂದ್ರ ಪ್ರಗತಿ ಹಂತದಲ್ಲಿದೆ. ಕೇಂದ್ರ ಸ್ಥಾಪನೆಗೆ ಖಾಸಗಿಯವರಿಂದ ಜಾಗ ಪಡೆಯಲಾಗಿದೆ. ತಾಂತ್ರಿಕ ತಂಡದಿಂದ ಜಾಗ ಪರಿಶೀಲನೆ ಮಾತ್ರ ಬಾಕಿ ಇದೆ. ಪ್ರಕ್ರಿಯೆ ಟೆಂಡರ್ ಹಂತದಲ್ಲಿದ್ದು, ಹಂತ ಹಂತವಾಗಿ ಕಾಮಗಾರಿ ಆರಂಭಿಸಲು ಗಮನಹರಿಸಲಾಗುವುದು” ಎಂದರು.
“ಈಗಾಗಲೇ ಇಂಡಿ ಎರಡು, ಹಿರೇಬೇವನೂರ, ಲಚ್ಯಾಣ, ಅಥರ್ಗಾ, ತಡವಲಗಾ, ನಾದ ಕೆಡಿ, ತಾಂಬಾ, ಝಳಕಿ, ಹೋರ್ತಿ, ರೋಡಗಿ, ಮಸಳಿ, ನಿಂಬಾಳ, ಸಾತಲಗಾಂವ ಕ್ರಾಸ್, ಬೆರುಣಗಿ 110 ಕೆವಿ ಕೇಂದ್ರಗಳು ಈಗಾಗಲೇ ಚಾಲ್ತಿಯಲ್ಲಿವೆ. ರಾಜ್ಯದಲ್ಲಿಯೇ ವಿಜಯಪುರಕ್ಕೆ ಹೆಚ್ಚು ಕೇಂದ್ರಗಳು ಮಂಜೂರಾಗಿದ್ದು, ಇಂಡಿ ತಾಲೂಕು ರಾಜ್ಯದಲ್ಲಿಯೇ ಅತಿ ಹೆಚ್ಚು ಉಪಕೇಂದ್ರ ಮಂಜುರಾತಿ ಪಡೆದು ಪ್ರಥಮ ಸ್ಥಾನದಲ್ಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ: ಕೇಂದ್ರ ಆದೇಶ
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಮತ್ತು ಕರ್ನಾಟಕ ವಿದ್ಯುತ್ ಪ್ರಸಾರ ನಿಗಮ ಇವರ ಪ್ರಯತ್ನದಿಂದ ಇಂಡಿ ತಾಲೂಕಿಗೆ ನಾಲ್ಕು ಉಪಕೇಂದ್ರಗಳು ಮಂಜೂರಾಗಿವೆ. ಈ ಕಾರ್ಯದಲ್ಲಿ ಸಹಕರಿಸಿದ ಕೆಪಿಟಿಸಿಎಲ್ ಅಧಿಕಾರಿಗಳು ಹಾಗೂ ತಂಡದವರು ಮತ್ತು ಇಂಡಿಯ ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದೆ” ಎಂದರು.
“ಕೆಲವೆಡೆ 33/11 ಕೆ ವಿ ಮತ್ತೆ ಕೆಲವೆಡೆ 66/11 ಕೆ ವಿ ಕೇಂದ್ರ ಸ್ಥಾಪನೆಗೆ ಉದ್ದೇಶೀಸಲಾಗಿದೆ. ಉಪಕೇಂದ್ರ ಸ್ಥಾಪನೆಯಿಂದ ವೋಲ್ಟೇಜ್ ಸಮಸ್ಯೆ, ವಿದ್ಯುತ್ ಅಡಚಣೆ ಮೊದಲಾದ ತೊಡಕುಗಳು ಪರಿಹಾರವಾಗಲಿವೆ. ಕೃಷಿ, ತೋಟಗಾರಿಕೆ, ಕೈಗಾರಿಕೆ ಚಟುವಟಿಕೆಗಳಿಗೆ ಅನುಕೂಲವಾಗಲಿದೆ” ಎಂದರು.