ಬಡ ಕೈದಿಗಳಿಗಾಗಿ ನಿಗದಿಪಡಿಸಿದ ಹಣವನ್ನು ಕೈದಿಗಳು ಆರ್ಥಿಕ ಸಮಸ್ಯೆಯಿಂದಾಗಿ ಜಾಮೀನು ಪಡೆಯಲು ಸಾಧ್ಯವಾಗದ ಅಥವಾ ದಂಡ ಪಾವತಿಸಿ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಗದ ಸಂದರ್ಭದಲ್ಲಿ ಬಳಸಿ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ ಈ ಹಣ ಬಳಸದಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಈ ಯೋಜನೆ ಬಗ್ಗೆ ಪದೇ ಪದೇ ವಿವರವಾದ ಮಾಹಿತಿ ನೀಡಿದ್ದರೂ ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅರ್ಹ ಕೈದಿಗಳನ್ನು ಗುರುತಿಸದ ಕಾರಣ ಮತ್ತು ಅವರಿಗೆ ಯೋಜನೆಯ ಪ್ರಯೋಜನವನ್ನು ಒದಗಿಸದ ಕಾರಣ ಯೋಜನೆಯ ಹಣ ಬಳಕೆಯಾಗದೆ ಹಾಗೆಯೇ ಉಳಿದಿವೆ ಎಂದು ಸಚಿವಾಲಯ ಹೇಳಿದೆ.
ಇದನ್ನು ಓದಿದ್ದೀರಾ? ಜೈಪುರ ಜೈಲು ಹಗರಣ|ಸಜೆಯಿಂದ ಮಜಕ್ಕೆ ರಜೆ : ಪ್ರೇಯಸಿ, ಪತ್ನಿಯ ಜೊತೆ ವಿಹಾರ!
ಏನಿದು ಬಡ ಕೈದಿಗಳಿಗಾಗಿರುವ ಯೋಜನೆ?
ಬಡ ಕೈದಿಗಳಿಗೆ ಬೆಂಬಲ ಯೋಜನೆಯನ್ನು 2023ರ ಮೇ ತಿಂಗಳಲ್ಲಿ ಆರಂಭಿಸಲಾಗಿದ್ದು, ವಿವರವಾದ ಮಾರ್ಗಸೂಚಿಯನ್ನೂ ಅದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಡಿ ರ್ಕಾರ ವಾರ್ಷಿಕವಾಗಿ 20 ಕೋಟಿ ರೂ.ಗಳನ್ನು ಹಂಚಿಕೆ ಮಾಡುತ್ತಿದೆ. ಈ ಹಣವನ್ನು ಬಳಸಿಕೊಂಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರವು ಆರ್ಥಿಕ ಸಮಸ್ಯೆಯಲ್ಲಿರುವ ಬಡ ಕೈದಿಗಳು ಜೈಲಿನಿಂದ ಬಿಡುಗಡೆಯಾಗಲು ಸಹಾಯ ಮಾಡಬಹುದು. ಆದರೆ ಸದ್ಯ ಕೆಲವೇ ರಾಜ್ಯಗಳು ಈ ಹಣವನ್ನು ಬಳಸುತ್ತಿದೆ.
ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಣವನ್ನು ಬಳಸಿಕೊಂಡಿದೆ. ಆದರೆ ಒಟ್ಟಾರೆಯಾಗಿ ಯೋಜನೆಯ ಅನುಷ್ಠಾನ ಹೆಚ್ಚು ಉತ್ತೇಜನಕಾರಿಯಾಗಿಲ್ಲ. ಈ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನ ಮಾಡಿದರೆ ಬಡ ಕೈದಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಅದು ಮಾತ್ರವಲ್ಲದೆ ತುಂಬಿ ಹೋಗಿರುವ ಜೈಲಿನಲ್ಲಿ ಕೈದಿಗಳ ಸಂಖ್ಯೆ ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ಇದನ್ನು ಓದಿದ್ದೀರಾ? ವಂಚನೆ ಪ್ರಕರಣ | ಬಿಜೆಪಿ ನಾಯಕ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಜೈಲು ಶಿಕ್ಷೆ
ಜಾಮೀನು ನೀಡಿದ ಒಂದು ವಾರದೊಳಗೆ ವಿಚಾರಣಾಧೀನ ಕೈದಿಯನ್ನು ಜೈಲಿನಿಂದ ಬಿಡುಗಡೆ ಮಾಡದಿದ್ದರೆ, ಜೈಲು ಪ್ರಾಧಿಕಾರವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ(DLSA) ಕಾರ್ಯದರ್ಶಿಯನ್ನು ನೇಮಿಸುತ್ತದೆ. ಅವರು ಕೈದಿ ಜಾಮೀನು ಪಡೆಯಲು ಆರ್ಥಿಕವಾಗಿ ಗಟ್ಟಿಯಾಗಿಲ್ಲವೇ ಎಂಬ ವಿಚಾರಣೆ ನಡೆಸುತ್ತಾರೆ. ಅಂತ ಪ್ರಕರಣಗಳನ್ನು ಪರಿಶೀಲಿಸಿದ ಸಬಲೀಕರಣ ಸಮಿತಿಯು ಯೋಜನೆಯಡಿಯಲ್ಲಿ ಕೈದಿಗೆ 40,000 ರೂಪಾಯಿವರೆಗೆ ಪರಿಹಾರವನ್ನು ಶಿಫಾರಸು ಮಾಡುತ್ತದೆ.
ಜೈಲಿನಲ್ಲಿ ಹೆಚ್ಚಾದ ಕೈದಿಗಳ ಸಂಖ್ಯೆ
ಇಂಡಿಯಾ ಜಸ್ಟೀಸ್ ರಿಪೋರ್ಟ್-2025 ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಜೈಲುಗಳಲ್ಲಿ ರಾಷ್ಟ್ರೀಯ ಸರಾಸರಿ ಕೈದಿಗಳ ಸಂಖ್ಯೆ ಶೇಕಡ 131ಕ್ಕಿಂತ ಹೆಚ್ಚಾಗಿದೆ. ಅದರಲ್ಲೂ ವಿಚಾರಣಾಧೀನ ಕೈದಿಗಳ ಸಂಖ್ಯೆ ಇಡೀ ಜೈಲಿನಲ್ಲಿರುವ ನಸಂಖ್ಯೆಯ ಶೇಕಡ 76ರಷ್ಟಿದೆ ಎಂದು ಅಂದಾಜಿಸಲಾಗಿದೆ. ಜೈಲುಗಳ ಸಾಮರ್ಥ್ಯ 5.15 ಲಕ್ಷಕ್ಕೆ ಮಾತ್ರ ಬೆಳೆಯುವ ಸಾಧ್ಯತೆಯಿದ್ದರೂ, 2030ರ ವೇಳೆಗೆ ಜೈಲು ಜನಸಂಖ್ಯೆ 6.8 ಲಕ್ಷ ತಲುಪುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
