ಐಪಿಎಲ್‌ನಲ್ಲಿದೆ ಜನ ಮನಸ್ಥಿತಿಯ ಪ್ರತಿಬಿಂಬ: ಸಚಿನ್, ಧೋನಿ, ಕೊಹ್ಲಿ ಸ್ಟಾರ್‌ ಆಗಿದ್ದೂ ಹೀಗೆ…!

Date:

Advertisements
ಬಂಡವಾಳಶಾಹಿ ವ್ಯವಸ್ಥೆ ಎಲ್ಲ ವರ್ಗದ ಜನರ ಬದುಕಿನ ಕೊರತೆ ಮತ್ತು ಅಗತ್ಯವನ್ನು ಅರ್ಥಮಾಡಿಕೊಂಡು, ಸಣ್ಣ ಮಟ್ಟದಲ್ಲಿ ಆ ಅಗತ್ಯಗಳಿಗೆ ಐಪಿಎಲ್‌ ಮೂಲಕ ಒಂದು ಸಣ್ಣ ತೃಪ್ತಿ ಒದಗಿಸುತ್ತ ಬಂದಿದೆ. ಆ ಮೂಲಕ ಎಲ್ಲ ವರ್ಗದವರನ್ನು ತನ್ನ ಜಾಲದಲ್ಲಿ ಸಿಲುಕಿಸಿದೆ. ಇದು ಬಂಡವಾಳಶಾಹಿ ಮನೋಸ್ಥಿತಿಯನ್ನು ಬೇಡುವ, ಅಂಥಾ ಮನೋಸ್ಥಿತಿಯನ್ನು ಹುಟ್ಟುಹಾಕುವ ಮತ್ತು ಪೋಷಿಸಿ, ಪ್ರೋತ್ಸಾಹಿಸುವ ಜಾಲವಾಗಿದೆ. 

ಐಪಿಎಲ್ – ಜನರ ಪಾಲಿಗೊಂದು ಪ್ರಮುಖವಾದ ಮನೋರಂಜನಾ ಕಾರ್ಯಕ್ರಮ ಆಗಿರುವುದು ತಿಳಿದಿತ್ತಾದರೂ, ಈ ‘ಅಮಲು’ ಇಷ್ಟೊಂದು ಆಳಕ್ಕೆ ಇಳಿದಿದೆ ಎಂದು ನನಗೆ ಗೊತ್ತಾಗಿಯೇ ಇರಲಿಲ್ಲ. ಆರ್‌ಸಿಬಿ ತಂಡದ ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೊಳಗಾಗಿ ಹನ್ನೊಂದು ಮಂದಿ ಸಾವನ್ನಪ್ಪಿದ ಸುದ್ದಿ ಕೇಳಿದಾಗ ತಬ್ಬಿಬ್ಬಾದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕರ್ನಾಟಕಕ್ಕೂ ಏನು ಸಂಬಂಧ? ಆ ತಂಡದಲ್ಲಿ ಯಾರೊಬ್ಬರೂ ಕನ್ನಡದವರಿಲ್ಲ. ಸಣ್ಣ ಪ್ರಮಾಣದಲ್ಲಿ ಭಾರತೀಯ ಮೂಲದ ಆಟಗಾರರು ಆ ತಂಡದಲ್ಲಿದ್ದಾರೆ. ಅವರನ್ನು ಹೊರತುಪಡಿಸಿ ಎಲ್ಲರೂ ವಿದೇಶಿ ಆಟಗಾರರು. ಇಂಥಾ ತಂಡ ತನ್ನ ವಿಜಯೋತ್ಸವ ಆಚರಿಸಲು ಬೆಂಗಳೂರಿಗೆ ಬಂದಿದ್ದಾದರೂ ಯಾಕೆ? ಅವರ ಸಂಭ್ರಮಾಚರಣೆಗೆ ಬೆಂಗಳೂರಿನಲ್ಲಿ ಅವಕಾಶ ಮಾಡಿಕೊಟ್ಟಿದ್ದಾದರೂ ಯಾಕಾಗಿ? ಅದಕ್ಕೂ ಮುಖ್ಯವಾಗಿ, ಆ ತಂಡದೊಂದಿಗೆ ಬೆಂಗಳೂರಿನ ಜನ ಗುರುತಿಸಿಕೊಳ್ಳಲು ಕಾರಣವಾದರು ಏನು? ಕರ್ನಾಟಕದ ತಂಡವೂ ಅಲ್ಲ, ಕನ್ನಡದ ಆಟಗಾರರೂ ಅಲ್ಲ. ಹಾಗಿರುವಾಗ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದು ಯಾಕಾಗಿ? ಈ ಅಸಂಗತತೆಗೆ ನನ್ನ ಬಳಿ ಉತ್ತರ ಇರಲಿಲ್ಲ. ಒಂದು ವೇಳೆ ಉತ್ತರ ಇದ್ದರೂ, ನನಗೆ ಗೊತ್ತು – ಹೋದ ಜೀವಗಳು, ಎದುರಿಗಿರುವ ಹೆಣಗಳು ಎಂದೂ ಉತ್ತರ ಬಯಸುವುದಿಲ್ಲ.

ನನಗೊಂದು ವಿಷಯದ ಬಗ್ಗೆ ಮಹಾ ಅಹಂಕಾರವಿತ್ತು. ಅದನ್ನು ನಾನು ಎದೆಯುಬ್ಬಿಸಿಕೊಂಡು ಸ್ನೇಹಿತರ ಬಳಿ ಹೇಳುತ್ತಲೂ ಇದ್ದೆ. ಅದೇನೆಂದರೆ, ಐಪಿಎಲ್‌ ಆರಂಭಗೊಂಡಾಗಿನಿಂದ ಇಂದಿನ ತನಕ ನಾನು ಒಂದೇ ಒಂದು ಐಪಿಎಲ್ ಪಂದ್ಯ ವೀಕ್ಷಿಸಿಲ್ಲ. ಈ ಮಾತಿನೊಂದಿಗೆ ಇನ್ನೊಂದು ಮಾತನ್ನು ಸಹ ಸೇರಿಸುತ್ತಿದ್ದೆ. ‘ಅಷ್ಟೇ ಅಲ್ಲ, ಈ ತನಕ ನಾನು ಒಂದೇ ಒಂದು ಬಿಗ್‌ಬಾಸ್ ಎಪಿಸೋಡ್ ವೀಕ್ಷಿಸಿಲ್ಲ, ಎಂದು. ಐಪಿಎಲ್‌ ಮತ್ತು ಬಿಗ್‌ಬಾಸ್ – ಈ ಎರಡರ ಬಗ್ಗೆ ನನಗೆ ಯಾವುದೇ ಒಳ್ಳೆಯ ಅಭಿಪ್ರಾಯ ಇಲ್ಲ. ಅವುಗಳನ್ನು ನಾನು ನಿರ್ಲಕ್ಷಿಸುತ್ತಲೇ ಬಂದಿರುವೆ. ಆದರೆ, ಈಗ ನಮ್ಮ ಕಾಲದಲ್ಲಿದ್ದ ‘ಸ್ಟ್ರಕ್ಚರ್ ಆಫ್ ಫೀಲಿಂಗ್ಸ್’ ಇಲ್ಲ ‘ಝಿಟ್‌ಗೀಸ್ಟ್’ಅನ್ನು ಸೂಚಿಸುವ ಬಹು ದೊಡ್ಡ ವಿಷಯಗಳು ಬಹುಶಃ ಐಪಿಎಲ್ ಮತ್ತು ಬಿಗ್‌ಬಾಸ್‌ ಎಂದು ಅನ್ನಿಸತೊಡಗಿದೆ.

Advertisements
ಬಿಗ್‌ ಬ್ರದರ್

ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಮೂಲ ಪ್ರೇರಣೆ ‘ಬಿಗ್ ಬ್ರದರ್’ ಎಂಬ ಕಾರ್ಯಕ್ರಮ. ಅದು ಪಶ್ಚಿಮದಲ್ಲಿ ಆರಂಭಗೊಂಡ ಸಮಯದಲ್ಲೇ ಸ್ವೀಡನ್ ಮೂಲದ ಸಮಾಜಶಾಸ್ತ್ರಜ್ಞ ಝಿಗ್ಮಂಟ್ ಬೌಮನ್ ಒಂದು ದೀರ್ಘ ಲೇಖನ ಬರೆದ. ಬಿಗ್‌ಬಾಸ್‌ ನೋಡದ ನನಗೆ ಬೌಮನ್‌ನ ಆ ಲೇಖನ ಅಚ್ಚುಮೆಚ್ಚು. ಅದರಲ್ಲಿ, ‘ಬಿಗ್ ಬ್ರದರ್’ ಕಾರ್ಯಕ್ರಮದ ವಿನ್ಯಾಸ, ವಿಧಾನ, ಶೈಲಿ ಎಲ್ಲವೂ ಹೇಗೆ ಲೋಕದ ಬದಲಾದ ಮೌಲ್ಯ ಮತ್ತು ಜೀವನಕ್ರಮವನ್ನು ಹೋಲುತ್ತದೆ ಎಂದು ಬರೆದಿದ್ದಾನೆ. ಸ್ವಾರ್ಥವೇ ಗೆಲುವಿಗೆ ಅಗತ್ಯದ ಮಂತ್ರವಾಗುವುದು, ಒಂದಿಷ್ಟು ಮಂದಿ ಗುಂಪು ಕಟ್ಟಿ ಆಟದಲ್ಲಿರುವ ಇನ್ನೊಬ್ಬರನ್ನು ಆಟದಿಂದ ಹೊರದಬ್ಬುವುದು, ಆಮೇಲೆ ಜೊತೆಗಿದ್ದವರೇ ಎದುರಾಳಿಯಾಗುವುದು, ಆಗ ಹಿಂದಿನ ಸ್ನೇಹವನ್ನು ಮರೆತು ಅವರ ವಿರುದ್ಧವೇ ಪಿತೂರಿ ನಡೆಸುವುದು- ಹೀಗೆ… ಆಟದ ನಿಯಮವೇ, ಆಟದ ವಿನ್ಯಾಸವೇ ಅಮಾನವೀಯ. ಬಿಗ್ ಬ್ರದರ್ ಕಾರ್ಯಕ್ರಮ ಹೇಗೆ ಒಂದು ಯುಗದ, ಒಂದು ಸಮಾಜದ ಮನಸ್ಥಿತಿಯನ್ನೇ ಬಿಂಬಿಸುತ್ತದೆ ಎಂದು ಆ ಲೇಖನದಲ್ಲಿ ಬೌಮನ್ ಬಹಳ ಸೂಕ್ಷ್ಮವಾಗಿ ತೋರಿದ್ದ.

ನಮ್ಮ ಕಾಲದ ನಮ್ಮ ದೇಶದ ನಿಜರೂಪ ಅನ್ವೇಷಿಸಲು ಬಯಸಿದರೆ ಬಹುಶಃ ಐಪಿಎಲ್ ನಮಗೆ ಸಿಗುವ ಅತ್ಯುತ್ತಮ ಎಕ್ಸ್-ರೇ ರಿಪೋರ್ಟ್. ಅದರಲ್ಲಿಯೂ ಇತ್ತೀಚಿಗೆ ನಡೆದ ಸಂಭ್ರಮದಲ್ಲಿ ಕೇಂದ್ರದಲ್ಲಿದ್ದ ವಿರಾಟ್ ಕೊಹ್ಲಿ ನಮ್ಮ ಕಾಲ ಮತ್ತು ನಮ್ಮ ಇಂದಿನ ಸಮಾಜವನ್ನು ಬಿಂಬಿಸುವ ಕನ್ನಡಿ. ಈ ಲೇಖನದಲ್ಲಿ ಸಮಾಜದ ಭಾಗವಾಗಿ ನಾನು ಐಪಿಎಲ್ ಮತ್ತು ವಿರಾಟ್ ಕೊಹ್ಲಿ ಎಂಬೆರಡು ಕನ್ನಡಿಗಳಲ್ಲಿ ನಮ್ಮ ಸಮಾಜದ ಮುಖ ನೋಡಲು ಪ್ರಯತ್ನಿಸುತ್ತಿದ್ದೇನೆ.

ಈ ವರದಿ ಓದಿದ್ದೀರಾ?: ಆರ್‌ಸಿಬಿಯಲ್ಲೂ ಪುರುಷಾಧಿಪತ್ಯ: ಮಹಿಳಾ ತಂಡ ವರ್ಷದ ಹಿಂದೆಯೇ ಕಪ್ ಗೆದ್ದಿತ್ತು! ಆಗ ಸಂಭ್ರಮಿಸಲಿಲ್ಲ ಯಾಕೆ?

ಐಪಿಎಲ್‌ ಆರಂಭವಾದ ಸಮಯದಲ್ಲಿ ನನಗೆ ಜನರು ತಮ್ಮ ಇಷ್ಟದ ತಂಡವನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುವುದೇ ತಿಳಿಯದಾಗಿತ್ತು. ಆಮೇಲೆ ಸ್ನೇಹಿತರ ಮಾತುಗಳಿಗೆ ಕಿವಿಯಾಗುವಾಗ ತಿಳಿಯುತ್ತಾ ಹೋಯಿತು. ಕೆಲವರು ತಮ್ಮ ರಾಜ್ಯದ ಹೆಸರು ಹೊತ್ತಿದ್ದ- ಬೆಂಗಳೂರು, ಚೆನ್ನೈ, ಕೊಲ್ಕತ್ತಾ ಹೀಗೆ – ತಂಡದ ಬೆಂಬಲಕ್ಕೆ ನಿಂತರೆ, ಕೆಲವರು ತಮ್ಮಿಷ್ಟದ ಆಟಗಾರರು ಇರುವ ತಂಡವನ್ನು ಬೆಂಬಲಿಸುತ್ತಾರೆ. ರಾಜ್ಯದ ಹೆಸರನ್ನು ಎದೆಗಂಟಿಸಿಕೊಂಡವರಿಗೆ ಆ ತಂಡದಲ್ಲಿ ಯಾವ ಆಟಗಾರ ಇದ್ದರೂ ಪರವಾಗಿಲ್ಲ. ಆ ತಂಡದೊಂದಿಗೆ ಇರುವ ತನಕ ಅವರು ತಮ್ಮವರು ಎಂದು ಭಾವಿಸುತ್ತಾರೆ. ತಮ್ಮಿಷ್ಟದ ಆಟಗಾರರ ಬೆನ್ನು ಹತ್ತಿದ ಅಭಿಮಾನಿಗಳಿಗೆ ತಮ್ಮ ಹೀರೋ ಯಾವ ರಾಜ್ಯದ ಹೆಸರನ್ನು ಹೊತ್ತ ತಂಡ ಸೇರುತ್ತಾರೋ, ಆ ರಾಜ್ಯದೊಂದಿಗೆ ಅವರಿಗೂ ನಂಟು ಏರ್ಪಡುತ್ತದೆ. ಯಾವುದೇ ತಂಡದ ಅಭಿಮಾನಿ ಆಗಿರುವವರು ಸದಾ ಬೇರೆ ಬೇರೆ ಆಟಗಾರರನ್ನು ಬೆಂಬಲಿಸಬೇಕಾಗುತ್ತದೆ. ಆಟಗಾರನ ಅಭಿಮಾನಿ ಆಗಿರುವವರು ಬೇರೆ ಬೇರೆ ತಂಡದ ಬೆಂಬಲಕ್ಕೆ ನಿಲ್ಲಲು ತಯಾರಾಗಿರಬೇಕಾಗುತ್ತದೆ. ಇಲ್ಲಿ ಎಲ್ಲ ತಂಡಗಳು ಸದಾ ಬದಲಾಗುತ್ತಲೇ ಇರುತ್ತವೆ. ಇಂದಿನ ಸಹಚರ್ಯರು, ನಾಳೆ ಎದುರಾಳಿಗಳು. ಇಂದಿನ ಎದುರಾಳಿಗಳು ನಾಳೆ ಜೊತೆಗಾರರು. ರಾಷ್ಟ್ರ ತಂಡದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಂತ ಕ್ರೀಡಾಪಟು ಐಪಿಎಲ್‌ನಲ್ಲಿ ಎದುರಾಳಿ ಆಗಬಹುದು. ರಾಷ್ಟ್ರ ತಂಡದ ಪರವಾಗಿ ಆಡುವಾಗ ಎದುರಾಳಿ ಆಗಿದ್ದವ, ಐಪಿಎಲ್‌ನಲ್ಲಿ ಅಣ್ಣನೋ ತಮ್ಮನೋ ಎಂಬಂತಾಗಬಹುದು.

ಏಕಕಾಲಕ್ಕೆ ನಿಷ್ಠೆಯನ್ನು, ನಿಷ್ಠಾ ರಹಿತತೆಯನ್ನು ಮತ್ತು ಇವೆರಡುಗಳ ಬಿರುಕಿಲ್ಲದಂತೆ ಜೊತೆಗಾರಿಕೆ ಬೇಡುವ ಕ್ರೀಡಾಕೂಟ ಐಪಿಎಲ್‌. ಹಾಗೆಯೇ, ನಿಷ್ಠೆ ಮತ್ತು ನಿಷ್ಠಾ ರಹಿತತೆಯ ಜೊತೆಗಾರಿಕೆಯನ್ನು ಒಪ್ಪಿತವಾಗಿಸುವುದು ಕೂಡ ಐಪಿಎಲ್‌.

ಇದು ಆಳದಲ್ಲಿ ಹೋಲುವುದು ಇಂದಿನ ಕಾರ್ಪೊರೇಟ್ ವ್ಯವಸ್ಥೆಯನ್ನು, ಮಾರುಕಟ್ಟೆ ಕೇಂದ್ರಿತ ಆರ್ಥಿಕ ವ್ಯವಸ್ಥೆಯನ್ನು. ಖಾಯಂ ಉದ್ಯೋಗ ಇಲ್ಲದ, ಯಾವುದೇ ಉದ್ಯೋಗದಲ್ಲಿ ಖಾಯಂ ಆಗಿ ನಿಲ್ಲದ ಜನರಿಗೆ ಈ ಕೂಟದ ಗ್ರಾಮರ್ ತಮ್ಮ ಬದುಕಿನ ಗ್ರಾಮರ್‌ಗೆ ಹೋಲುವಂತೆ ಕಾಣುತ್ತದೆ. ಹಾಗಾಗಿ, ಈ ಕೂಟ ಜನರಿಗೆ ಹತ್ತಿರವಾಗಿದೆ, ಅದರೆಡೆಗೆ ಜನರು ಆಕರ್ಷಿತರಾಗಿದ್ದಾರೆ. ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ, ಹಾಗೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಜಿಗಿಯುವ, ಜಿಗಿಯುತ್ತಲೇ ಇರುವ ಮಧ್ಯಮ ವರ್ಗದ ಕೆಲಸಗಾರರ ಉಪಪ್ರಜ್ಞೆಗೆ ಈ ಆಟದ ವಿನ್ಯಾಸ ಬದುಕಿನ ವಾಸ್ತವಗಳ ಮೂಲಕ ಚಿರಪರಿಚಿತ.

ಅಷ್ಟೇ ಅಲ್ಲ, ಇಂದಿನ ಬದುಕು ಹೇಗಾಗಿದೆ ಎಂದರೆ, ಕಾರ್ಪೊರೇಟ್ ಉದ್ಯೋಗದಲ್ಲಿ ಇರದ ಮಂದಿಯ ಬದುಕು ಸಹ ತೀರಾ ವಿಚಿತ್ರವಾಗಿ ಒಂದು ನೆಲದಲ್ಲಿ ಬೇರು ಬಿಟ್ಟಿಲ್ಲ. ದೇಶಪ್ರೇಮಿ ಆಗಿದ್ದರೂ ವಿದೇಶಿ ಜಾಕಿ ಚಡ್ಡಿ ಹಾಕುವ, ಮಾತೃ ಭಾಷಾಭಿಮಾನಿ ಆಗಿದ್ದರೂ ಕೊರಿಯನ್ ಸೀರೀಸ್ ನೋಡುವ, ಹಣೆಗೆ ವಿಭೂತಿ, ತೋಳಿಗೆ ತಾಯ್ತ ಇರುವಾಗಲೇ ಜರ್ಮನಿ ದೇಶದ ಇನ್ಫಲುವೆನ್ಸರ್ ಅವರುಗಳ ಯುಟ್ಯೂಬ್ ಚಾನೆಲ್ ಫಾಲೋ ಮಾಡುವ, ಊರಲ್ಲೇ ಇದ್ದರೂ ವಿದೇಶಿ ಕಂಪೆನಿಗೆ ಕೆಲಸ ಮಾಡುವ, ವಿದೇಶದಲ್ಲಿ ನೆಲೆಸಿದ್ದರೂ ಊರಿನಲ್ಲಿರುವ ಮಠಕ್ಕೆ ಡೊನೇಶನ್ ನೀಡುವ, ಉದ್ಯೋಗಕ್ಕಾಗಿ ಪರರಾಜ್ಯಕ್ಕೆ ಹೋಗಿ ಅಲ್ಲಿ ಬಳಸಲಾಗುವ ಅಡುಗೆ ಎಣ್ಣೆಗೆ ಒಗ್ಗಿಕೊಳ್ಳುವ ಬದುಕು ಹೆಚ್ಚಿನವರದ್ದು ಈಗ. ಇದೇ ನಾಡು, ಇದೇ ಭಾಷೆ ಎಂದು ಹೇಳಲಾಗದ ಅನಿಶ್ಚಿತ ಅಸ್ಮಿತೆಯ ಜೀವನ. ಇದರಿಂದಾಗಿ ಅಸ್ಮಿತೆಯ ರಾಜಕಾರಣ ತೀವ್ರವಾಗುತ್ತಿದೆ ಎನ್ನುವುದು ಸತ್ಯ. ಅಷ್ಟೇ ಸತ್ಯ, ಈ ಸ್ಥಿತಿಯನ್ನು ಹೋಲುವ ಐಪಿಎಲ್‌ ಜನಪ್ರಿಯವಾಗಿರುವುದು.

image 56 1

ಈ ಬಗೆಯ ಹೊಸ ವಾಸ್ತವ ವ್ಯಕ್ತಿಗಳಲ್ಲಿ ತೀವ್ರವಾದ ಗೊಂದಲ ಉಂಟುಮಾಡಬಹುದು. ಈ ಬಗೆಯ ಬದುಕಿನ ಶೈಲಿ ಆಷಾಢಭೂತಿತನವಾಗಿ ತೋರಲೂಬಹುದು. ಈ ಬಗೆಯ ಬದುಕಿನಲ್ಲಿರುವ ಅನಿತ್ಯತೆ, ಅಸ್ಥಿರತೆ, ದ್ವಂದ್ವ- ಇವೆಲ್ಲ ಮನುಷ್ಯನ ಆಳದಲ್ಲಿ ಆತಂಕ ಉಂಟುಮಾಡುವ ಸಾಧ್ಯತೆ ಇದೆ. ಹಾಗಾಗಿ ಇಂಥಾ ವಾಸ್ತವವನ್ನು ಸಹಜೀಕರಿಸಲು ಮತ್ತು ಈ ಹೊಸ ವಾಸ್ತವದ ಬದುಕಿನ ಶೈಲಿಗೆ ಮನ್ನಣೆ, ಗಾಂಭೀರ್ಯ ಮತ್ತು ಪ್ರತಿಷ್ಠೆ ತಂದುಕೊಡಲು ಏನಾದರೊಂದು ಸಾಂಸ್ಕೃತಿಕ ಪ್ರಸಂಗ ಬೇಕು, ಮತ್ತದು ಧಾರ್ಮಿಕ ಆಚರಣೆಯಂತೆ ಮತ್ತೆ ಮತ್ತೆ ಆಚರಣೆಗೆ ಒಳಪಡುತ್ತಲೇ ಇರಬೇಕು. ಐಪಿಎಲ್‌ – ಈ ಹೊಸ ಬದುಕಿಗೆ, ಬದುಕಿನ ಶೈಲಿಗೆ, ಹೊಸ ಜೀವನ ಪದ್ದತಿಗೆ ಅಗತ್ಯವಾದ ಮನೋಭೂಮಿಕೆ ರೂಪಿಸುವ, ಅದಕ್ಕೊಂದು ಸ್ವೀಕಾರಾರ್ಹತೆ ತಂದುಕೊಂಡುವ, ಗೌರವ ತಂದುಕೊಡುವ ಹೊಸ ರಿಚುವಲ್.

ಸಾಂಪ್ರದಾಯಿಕವಾದ ರಿಚುವಲ್‌ಗಳು ಬದುಕಿನ ಹೊಸ ಹಂತಗಳಿಗೆ ನಮ್ಮನ್ನು ತಯಾರು ಮಾಡುವಂತೆ, ಬದುಕಿನ ಸತ್ಯಗಳನ್ನು ಜೀರ್ಣಮಾಡಿಕೊಳ್ಳಲು ಸಹಾಯ ಮಾಡುವಂತೆ, ಐಪಿಎಲ್‌ ಎಂಬ ಬಂಡವಾಳಶಾಹಿ ರಿಚುಯಲ್ ಜನರನ್ನು ಮತ್ತು ಸಮಾಜವನ್ನು ಈ ದ್ವಂದ್ವಾತ್ಮಕ ಬದುಕಿಗೆ ಮಾನಸಿಕವಾಗಿ ಸಿದ್ಧ ಮಾಡುತ್ತಿದೆ. ಹಾಗಾಗಿ ಐಪಿಎಲ್‌ ಜನರ ಮತ್ತು ಸಮಾಜದ ಸುಪ್ತ ಮನಸ್ಸಿಗೆ ಅಗತ್ಯ ಎಂದು ಕಾಣತೊಡಗಿದೆ. ಧಾರ್ಮಿಕ ಮತ್ತು ರಾಜಕೀಯ ನೆಲೆಯಲ್ಲಿ ಈ ಹೊಸ ಬದುಕಿನ ಮಾರ್ಗಕ್ಕೆ ವರ್ಗಾವಣೆ ಆಗಲು ಬೇಕಾದ ರಿಚುಯಲ್ ಇಲ್ಲದ ಕಾರಣ, ಬಂಡವಾಳಶಾಹಿ ವ್ಯವಸ್ಥೆ ರೂಪಿಸಿದ ಐಪಿಎಲ್‌ ಎಂಬ ಈ ಹೊಸ ರಿಚುವಲ್ ಜನರೊಂದಿಗೆ ಆಳವಾಗಿ ಕನೆಕ್ಟ್ ಆಗಿದೆ. ಬಂಡವಾಳಶಾಹಿ ವ್ಯವಸ್ಥೆ ಈ ರಿಚುವಲ್ಅನ್ನು ಸೃಷ್ಟಿ ಮಾಡಿದ್ದು ಮಾತ್ರವಲ್ಲ, ಅದನ್ನು ತನ್ನ ಲಾಭಕ್ಕಾಗಿಯೂ ಬಳಸಿಕೊಳ್ಳುತ್ತಿದೆ ಅನ್ನುವುದು ಅಚ್ಚರಿಯ ವಿಷಯವೇನಲ್ಲ.

ಕ್ರಿಕೆಟ್ಟಿನ ಬೇರೆ ಪಂದ್ಯಾಕೂಟಕ್ಕೆ- ಅಂದರೆ ವಿಶ್ವ ಕಪ್, ಏಷ್ಯಾ ಕಪ್ ಇತ್ಯಾದಿ ಇತ್ಯಾದಿ- ಹೋಲಿಸಿದರೆ ಐಪಿಎಲ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಆಡಲಾಗುತ್ತದೆ. ಅತಿ ದೀರ್ಘವಾಗಿ ಸಾಗುವ ಕೂಟ ಐಪಿಎಲ್‌. ಇದು ದೀರ್ಘ ಅವಧಿಯ ವರ್ಕಿಂಗ್ ಅವರ್ಸ್ಅನ್ನು ಹೋಲುತ್ತದೆ. ಇಪ್ಪತ್ತು ಓವರಿನ ಫಾರ್ಮ್ಯಾಟ್ ಮತ್ತು ಅದಕ್ಕಿರುವ ವೇಗ, ಅವಸರ, ದೈಹಿಕ ಶ್ರಮ ಇವತ್ತಿನ ಎಲ್ಲ ಬಗೆಯ ಕಾರ್ಮಿಕರ, ಶ್ರಮಿಕರ ಉದ್ಯೋಗದ ಸ್ಥಿತಿಯನ್ನೇ ಹೋಲುತ್ತದೆ. ಐಪಿಎಲ್‌ ದುಡಿಮೆಯ ನಡುವೆ ಅಥವಾ ದುಡಿಮೆಯ ಅವಧಿಯ ನಂತರ ವಿನೋದಕ್ಕಾಗಿ ಆಡುವ ಕ್ರೀಡೆಯಂತೆ ಅನ್ನಿಸುವುದೇ ಇಲ್ಲ. ಅದುವೇ ಒಂದು ದುಡಿಮೆಯಂತೆ, ಶ್ರಮದಂತೆ ಕಾಣಿಸುತ್ತದೆ. ಹಾಗಾಗಿ, ಅಲ್ಲಿರುವ ಕ್ರೀಡಾಪಟುಗಳು ಸಹ ಕಾರ್ಮಿಕರಂತೆ ಕಾಣಿಸುತ್ತಾರೆ. ಈ ಕಾರಣಕ್ಕೆ ಜನಸಾಮಾನ್ಯರು, ದುಡಿಯುವ ಜನರು ಐಪಿಎಲ್‌ ಲೋಕದೊಂದಿಗೆ ಅಪ್ರಜ್ಞಾಪೂರ್ವಕವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ.

ಸೋಲು ಗೆಲುವು ಎಲ್ಲ ಆಟದಲ್ಲಿ ಇರುವುದೇ ಆದರೂ, ಐಪಿಎಲ್‌ ಬೇರೆಲ್ಲ ಆಟಕ್ಕಿಂತ ಕೊಂಚ ಭಿನ್ನ. ಇಲ್ಲಿಯೂ ಯಾವುದೋ ಒಂದು ತಂಡ ಮಾತ್ರ ಗೆಲ್ಲುತ್ತದೆ. ಆದರೂ, ಐಪಿಎಲ್‌ನಲ್ಲಿ ಸೋತವರಿಗೂ ಅದೇನೇನೋ ಲಾಭಗಳಿವೆ. ಅದಕ್ಕೂ ಮಿಗಿಲಾಗಿ ಸೋತವರಿಗೂ ಒಂದು ಗ್ಲಾಮರ್ ಇದೆ. ಈ ಗ್ಲಾಮರ್ ಸೋತವರಿಗೂ ಸಿಗಲು ಸಾಧ್ಯ. ಅದಕ್ಕಾಗಿ ಆಟದಲ್ಲಿ ಪಾಲ್ಗೊಳ್ಳಬೇಕು ಎಂದು ಐಪಿಎಲ್‌ ಸದ್ದಿಲ್ಲದೇ ಹೇಳುತ್ತದೆ. ಮತ್ತು ಐಪಿಎಲ್‌ನ ಗ್ಲಾಮರ್ ಒಂದು ಬಗೆಯ ಜೀವನ ಶೈಲಿಯನ್ನು ಜಾಹೀರಾತು ಮಾಡುತ್ತದೆ.

image 56 2

ಮಧ್ಯಮ ವರ್ಗ ಆ ಗ್ಲಾಮರಸ್ ಜೀವನ ಶೈಲಿಯನ್ನು ವಾರಾಂತ್ಯದಲ್ಲಿ ಮತ್ತು ರಜಾ ದಿನದಲ್ಲಿ ಜೀವಿಸಿ ಮತ್ತೆ ಉಸಿರಿಗೂ ಪುರುಸೊತ್ತಿಲ್ಲದಂತೆ – ಆಟಗಾರರು ಮೈದಾನದಲ್ಲಿ ಆಡುವಂತೆ- ಕೆಲಸ ಮಾಡಲು ಮರಳುತ್ತದೆ. ಕ್ರೀಡಾಪಟುಗಳು ಕತ್ತೆಗಳಂತೆ ಆಟವಾಡಿದಾಗ ಅವರು ತಮ್ಮ ಬೇರೆ ಎಲ್ಲ ಬಗೆಯ ಅಸ್ಮಿತೆ ಮೀರಿ ಗ್ಲಾಮರ್ ಪಡೆಯಬಲ್ಲರು ಎಂಬ ಚಿತ್ರ ಕಟ್ಟಿಕೊಡುವ ಐಪಿಎಲ್‌, ‘ದುಡಿಮೆ ಮಾಡಿದರೆ, ಮಾಡುತ್ತಾ ಹೋದರೆ ಗ್ಲಾಮರ್ ಬದುಕು ಪಡೆಯಬಹುದು’ ಎಂಬ ಭ್ರಮೆ ನಿರ್ಮಿಸಿ, ಕೆಲಸಗಾರರನ್ನು ತನ್ನ ಗಾಣಕ್ಕೆ ಕಟ್ಟಿಬಿಡುತ್ತದೆ. ಮಧ್ಯಮವರ್ಗದಿಂದ ಕೆಳಗಿರುವವರು ಅಂಥಾ ಗ್ಲಾಮರ್ ಜೀವನ ಶೈಲಿಯ ಬಯಕೆಯಲ್ಲಿ ವರ್ಕ್ ಫೋರ್ಸ್ಅನ್ನು ಸೇರಲು ಪ್ರಯತ್ನಪಡುತ್ತಾರೆ. ಅವರುಗಳಿಗೆ ತಾವು ಬಯಸುವ ಜೀವನಶೈಲಿಯ ಒಂದು ಸಂಕೇತವಾಗಿ ಐಪಿಎಲ್‌ ಕಾಣಿಸುತ್ತದೆ. ಅದನ್ನು ಇಂದಲ್ಲ ನಾಳೆ ಪಡೆಯಬೇಕು ಎಂದು ಬಯಸುವ ಅವರಿಗೆ ಐಪಿಎಲ್‌ ತಮ್ಮ ಕನಸಿನ ರೆಫರೆನ್ಸ್ ಪಾಯಿಂಟ್ಆಗಿ ಕಾಣಿಸುತ್ತದೆ. ಹಾಗಾಗಿ, ಐಪಿಎಲ್‌ ಅವರಿಗೂ ಆಪ್ತವಾಗುತ್ತದೆ. ಇನ್ನು ಮಧ್ಯಮ ವರ್ಗದ ಮೇಲಕ್ಕಿರುವವರಿಗೆ ಐಪಿಎಲ್‌ ಒಂದು ಬೆಟ್ಟಿಂಗ್ – ಅದೂ ಲಕ್ಷಲಕ್ಷದಲ್ಲಿ ನಡೆಯುವ ಕಾನೂನುಬಾಹಿರ ವ್ಯವಹಾರ- ಕಾರಣಕ್ಕಾಗಿ ಆಪ್ತವಾಗುತ್ತದೆ, ಮುಖ್ಯವಾಗುತ್ತದೆ.

ಬಂಡವಾಳಶಾಹಿ ವ್ಯವಸ್ಥೆ ಎಲ್ಲ ವರ್ಗದ ಜನರ ಬದುಕಿನ ಕೊರತೆ ಮತ್ತು ಅಗತ್ಯವನ್ನು ಅರ್ಥಮಾಡಿಕೊಂಡು, ಸಣ್ಣ ಮಟ್ಟದಲ್ಲಿ ಆ ಅಗತ್ಯಗಳಿಗೆ ಐಪಿಎಲ್‌ ಮೂಲಕ ಒಂದು ಸಣ್ಣ ತೃಪ್ತಿ ಒದಗಿಸುತ್ತ ಬಂದಿದೆ. ಆ ಮೂಲಕ ಎಲ್ಲ ವರ್ಗದವರನ್ನು ತನ್ನ ಜಾಲದಲ್ಲಿ ಸಿಲುಕಿಸಿದೆ. ಇದು ಬಂಡವಾಳಶಾಹಿ ಮನೋಸ್ಥಿತಿಯನ್ನು ಬೇಡುವ, ಅಂಥಾ ಮನೋಸ್ಥಿತಿಯನ್ನು ಹುಟ್ಟುಹಾಕುವ ಮತ್ತು ಪೋಷಿಸಿ, ಪ್ರೋತ್ಸಾಹಿಸುವ ಜಾಲವಾಗಿದೆ. ಇಲ್ಲಿ ಎಲ್ಲರೂ ಐಪಿಎಲ್‌ ನೋಡುತ್ತಿದ್ದರೂ, ಎಲ್ಲರ ಐಪಿಎಲ್‌ ಒಂದೇ ಅಲ್ಲ, ಎಲ್ಲರೂ ಐಪಿಎಲ್‌ ನೋಡಲು ಕಾರಣ ಒಂದೇ ಅಲ್ಲ. ಕೆಲವರಿಗೆ ಅಫೀಮಾಗಿ, ಕೆಲವರಿಗೆ ಆಕಾಂಕ್ಷೆಯಾಗಿ, ಮತ್ತೂ ಕೆಲವರಿಗೆ ಹಣ ಮಾಡುವ ಜೂಜಾಗಿ ಐಪಿಎಲ್‌ ಚಾಲ್ತಿಯಲ್ಲಿದೆ.

ಇದೆಲ್ಲದರಿಂದ ಗರಿಷ್ಠ ಲಾಭ ಮಾಡುತ್ತಿರುವುದು ಬಂಡವಾಳಶಾಹಿಗಳೇ. ಹಾಗಿದ್ದರೂ ಐಪಿಎಲ್‌ ಎಲ್ಲರಿಗೂ ಇರುವ ಯಾವುದೋ ಒಂದು ‘ಅಗತ್ಯ’ವನ್ನು ಪೂರೈಸುತ್ತದೆ ಎನ್ನುವುದು ಸುಳ್ಳಲ್ಲ. ಅದು ಎಷ್ಟೇ ಅನಾರೋಗ್ಯಕರ ಆಗಿದ್ದರೂ ಸರಿ, ಅದು ಕೊಡುವ ಸಮಾಧಾನ ಸುಳ್ಳಲ್ಲ. ಆ ಸಮಾಧಾನದ ಹೊರತು ಬದುಕು ಸವೆಸುತ್ತಿರುವ ಜನರಿಗೆ ಬೇರೆ ಸಮಾಧಾನ ಇಲ್ಲವಾಗಿ ಹೋಗಿದೆ. ಹಾಗಾಗಿ, ಐಪಿಎಲ್‌ ಇಷ್ಟೊಂದು ಜನಪ್ರಿಯವಾಗಿದೆ ಮತ್ತು ಪಂದ್ಯಾಟದೊಂದಿಗೆ ಜನರು ತಮ್ಮನ್ನು ತಾವೇ ಗುರುತಿಸಿಕೊಂಡಿದ್ದಾರೆ.

ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಈ ಪಂದ್ಯಾಕೂಟದಲ್ಲಿ ಆಟಗಾರರು ತಮ್ಮ ರಾಷ್ಟ್ರೀಯ, ಭಾಷಿಕ, ಹೀಗೆ ಹಲವು ‘ಸೀಮಿತ’ ಅಸ್ಮಿತೆಯನ್ನು ಮೀರಲು ಸಾಧ್ಯ. ಬಂಡವಾಳಶಾಹಿ ವ್ಯವಸ್ಥೆ ಈ ಬಗೆಯಲ್ಲಿ ಗಡಿಗಳನ್ನೆಲ್ಲ ಮೀರಲು ಅವಕಾಶ ಮಾಡಿಕೊಡುತ್ತದೆ. ಆದರೆ, ಯಾರೂ ಈ ಬಂಡವಾಳಶಾಹಿ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ. ಈ ಕಟುವಾಸ್ತವದ ನಡುವೆ ಕೇಳಿಕೊಳ್ಳಬೇಕಾದ ಪ್ರಶ್ನೆ ಏನೆಂದರೆ; ಐಪಿಎಲ್‌ನಲ್ಲಿರುವುದು ಆಟಗಾರರೋ ಅಥವಾ ಪ್ರಚಾರಕರು ಅಥವಾ ಸೈನಿಕರೋ? ಐಪಿಎಲ್‌ಗೆ ಇರುವುದು ಅಭಿಮಾನಿಗಳೋ ಇಲ್ಲ ಗ್ರಾಹಕರೋ?

ಸಮಾಜಶಾಸ್ತ್ರೀಯ ಮತ್ತು ಮನಃಶಾಸ್ತ್ರೀಯ ನೆಲೆಯಲ್ಲಿ ದೇಶದ ಕಾಲವನ್ನು ಅರ್ಥ ಮಾಡಿಕೊಳ್ಳಲು ಸಿನೆಮಾ ಮತ್ತು ಕ್ರಿಕೆಟ್ ಸಹಾಯವಾಗಬಲ್ಲ ಸಂಗತಿಗಳು.

ತೊಂಬತ್ತರ ದಶಕದಲ್ಲಿ ಸಚಿನ್ ತೆಂಡೂಲ್ಕರ್ ಎಂಬ ಆಟಗಾರ ಅದೇ ಸಮಯದಲ್ಲಿ ಬದಲಾಗುತ್ತಿದ್ದ ಸಾಮಾಜಿಕ ಮೌಲ್ಯಗಳ ಮೂರ್ತರೂಪವಾಗಿ ಕ್ರಿಕೆಟ್ಟಿನ ದೇವರ ಸ್ಥಾನ ಪಡೆದ. ನಿಜವಾಗಿಯೂ ಆತ ಆ ಕಾಲಘಟ್ಟದಲ್ಲಿ ಚಲಾವಣೆಗೆ ಬಂದ ಹೊಸ ಮೌಲ್ಯಗಳ ದೇವ. ಇಂಡಿಯಾ ಸೋತರೂ ಪರವಾಗಿಲ್ಲ, ಆದರೆ ಸಚಿನ್ ನೂರು ರನ್ ಹೊಡೆದ ಎಂದು ಸಂಭ್ರಮಿಸುವುದು, ದೇಶದಲ್ಲಿ ಹಸಿವು ಹೆಚ್ಚಿದೆಯಾದರೂ ಪರವಾಗಿಲ್ಲ, ಈ ದೇಶದ ಒಬ್ಬ ಉದ್ಯಮಿ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬ ಎಂದು ಹೆಮ್ಮೆಪಡುವ ಮನಸ್ಥಿತಿಗಿಂತ ಭಿನ್ನವಲ್ಲ. ಇಂಥಾ ಮನೋಸ್ಥಿತಿ 90ರ ದಶಕದಲ್ಲಿ ಉದಾರೀಕರಣಕ್ಕೆ, ಜಾಗತೀಕರಣಕ್ಕೆ ತೆರೆದುಕೊಂಡ ದೇಶದಲ್ಲಿ ನಿರೀಕ್ಷಿತವಾಗಿ ನಡೆದ ಮೌಲ್ಯ ಪಲ್ಲಟದ ಫಲ.

ಸಚಿನ್ ಧೋನಿ

ಬಂಡವಾಳಶಾಹಿ ಶಕ್ತಿಗಳು ಈ ದೇಶದ ಸಣ್ಣ ಪುಟ್ಟ ಊರುಗಳೊಳಕ್ಕೆ ನುಗ್ಗಿ ಅಲ್ಲೊಂದು ಮಾರುಕಟ್ಟೆ ಹುಟ್ಟುಹಾಕಿ ಸಣ್ಣ ಊರುಗಳನ್ನು, ಹಳ್ಳಿಗಳನ್ನು ತನ್ನ ಕೊಡೆಯಡಿಗೆ ತರಲು ಪ್ರಯತ್ನಿಸಿದಾಗ ಕ್ರಿಕೆಟ್ ಲೋಕದಲ್ಲಿ ಎಲ್ಲರ ಕಣ್ಮಣಿ ಆಗಿ ತಲೆಯಿತ್ತಿದ್ದು ಧೋನಿ. ಸಣ್ಣ ಊರಿನ ಜನರಿಗೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮೇಲೇರಲು ಸಾಧ್ಯ ಎಂದು ನಂಬಿಸಲು, ಹಾಗಾಗಿ ಅವರೂ ಸಹ ಈ ವ್ಯವಸ್ಥೆಯನ್ನು ಮನಃಪೂರ್ವಕವಾಗಿ ಒಪ್ಪಿಕೊಂಡು ಅದರ ಭಾಗವಾಗಲು ಬರಬೇಕು ಎಂದು ಸೆಳೆಯಲು ಧೋನಿ ಒಂದು ಸಮರ್ಪಕವಾದ ಐಕಾನ್ ಆದ. ಧೋನಿ ಒಂದು ಐಕಾನ್ ಆದ ಸಮಯದಲ್ಲೇ, ಅಂದರೆ ಈ ದೇಶದ ಸಣ್ಣ ಪುಟ್ಟ ಊರುಗಳು ಸಹ ಬಂಡವಾಳಶಾಹಿ ಕನಸಿನ ಭಾಗ ಆದ ಸಂದರ್ಭದಲ್ಲೇ, ಆರಂಭವಾದದ್ದು ಐಪಿಎಲ್‌.

ಇದರ ಮುಂದಿನ ಹಂತ ವಿರಾಟ್ ಕೊಹ್ಲಿ ಪರ್ವ

ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗುವುದು, ನರೇಂದ್ರ ಮೋದಿ ದೇಶದ ಪ್ರಧಾನಿ ಆಗುವುದು ಹೆಚ್ಚು-ಕಡಿಮೆ ಒಂದೇ ಸಮಯದಲ್ಲಿ. ಇವರಿಬ್ಬರ ಜನಮನ್ನಣೆಗೆ ಒಂದು ದೊಡ್ಡ ಕಾರಣ ಅವರ ವ್ಯಕ್ತಿತ್ವ. ದೇಶದ ಜನರು ಇವರಿಬ್ಬರನ್ನು ಮೆಚ್ಚಲು ಕಾರಣ ಇವರಿಬ್ಬರಲ್ಲಿ ಜನರಿಗೆ ಕಾಣಿಸುವ ಛಲವಾದಿತನ, ಆಕ್ರಮಣಕಾರಿ ಸ್ವಭಾವ, ಎದುರಾಳಿಯನ್ನು ಬಗ್ಗು ಬಡಿದು, ಹಿಂಡಿ ಹಿಪ್ಪೆ ಮಾಡುತ್ತೇನೆ ಎನ್ನುವಂತಹ ಧೋರಣೆ, ಅಪಾರ ಶಿಸ್ತು, ಧಾರ್ಷ್ಟ್ಯ ಮತ್ತು ಅವರ ಹಾರ್ಡ್ ವರ್ಕಿಂಗ್ ನೇಚರ್. ಇವೆಲ್ಲವೂ ಪುರುಷಾಹಂಕಾರದ ಬೇರೆ ಬೇರೆ ಮಗ್ಗುಲುಗಳೂ ಆಗಿವೆ ಎನ್ನುವುದನ್ನು ಗಮನಿಸಬೇಕು. ಈ ಎಲ್ಲ ಗುಣಗಳು ಕೊಹ್ಲಿಯಲ್ಲಿ ನಿಚ್ಚಳವಾಗಿ ಕಂಡರೆ, ಮೋದಿಯವರ ವ್ಯಕ್ತಿತ್ವವನ್ನು ಈ ರೀತಿಯಾಗಿಯೇ ಬಿಂಬಿಸಲಾಗಿದೆ. ಜನರ ದೃಷ್ಟಿಯಲ್ಲಿ ಮೋದಿ ಮತ್ತು ಕೊಹ್ಲಿ ಈ ಎಲ್ಲ ಗುಣಗಳ ಮೂರ್ತರೂಪ ಆಗಿರುವವರು. ಆ ಕಾರಣಕ್ಕಾಗಿಯೇ ಅವರುಗಳು ಜನರಿಗೆ ಪ್ರೀತಿಪಾತ್ರರಾಗಿದ್ದಾರೆ. ಆ ಕಾರಣಕ್ಕಾಗಿಯೇ ಅವರಿಬ್ಬರೂ ಜನರ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ. ಗಂಡುಬೀರಿತನಕ್ಕೆ ಇವರುಗಳಿಂದ ಒಂದು ಮಾನ್ಯತೆ ಒದಗಿದೆ. ಗಂಡುಬೀರಿತನಕ್ಕೆ ಇವರುಗಳಲ್ಲಿ ಒಬ್ಬ ಹೀರೋ ಸಿಕ್ಕಿದ್ದಾನೆ. ಗಂಡುಬೀರಿತನ ನಮ್ಮ ದೇಶ ಕಾಲದ ಸ್ವಭಾವವೂ ಆಗಿದೆ.

ಕೊಹ್ಲಿ ಅಪಾರ ಶಿಸ್ತಿನ ಮತ್ತು ಅತಿ ಭಯಂಕರ ಹಾರ್ಡ್ ವರ್ಕಿಂಗ್ ವ್ಯಕ್ತಿ. ಅವನ ಪರಿಶ್ರಮದ ಫಲವಾಗಿ ಆತ ಯಶಸ್ವೀ ವ್ಯಕ್ತಿಯಾಗಿದ್ದಾನೆ. ಇದು ಇಂದು ಕಾರ್ಪೊರೇಟ್ ಆಗಲಿ, ಕಾರ್ಪೊರೇಟ್ ಅಲ್ಲದ ಕೆಲಸಗಳಲ್ಲೇ ಆಗಲಿ ದುಡಿಯುವ ಮಂದಿಗೆ ಒಂದು ಆಶಾಕಿರಣ. ದುಡಿಯುವವರನ್ನು ಅತೀವವಾಗಿ ದುಡಿಸಿಕೊಳ್ಳುವ ಈ ವ್ಯವಸ್ಥೆಯಲ್ಲಿ ಜನರು ಕೊಹ್ಲಿಯ ಹಾರ್ಡ್ ವರ್ಕ್ ಜೊತೆ ಗುರುತಿಸಿಕೊಂಡಿರುವುದು, ಅವನ ರೀತಿಯ ಯಶಸ್ಸನ್ನು ಬಯಸುತ್ತಿರುವುದು ಎಲ್ಲವೂ ಸಹಜವೇ.

ಮೋದಿ ಮತ್ತು ಕೊಹ್ಲಿ ಅವರ ವೇಷಭೂಷಣ ಮತ್ತು ಅವರು ಕಾಣಿಸಿಕೊಳ್ಳುವ ರೀತಿಯೂ ಅವರುಗಳ ಇಮೇಜ್‌ಗೆ ಪೂರಕವಾಗಿದೆ. ಮೋದಿಯ ಶುಭ್ರ ಬಟ್ಟೆ, ಖಡಕ್ ಇಸ್ತ್ರಿ, ಅಂತೆಯೇ ಕೊಹ್ಲಿಯ ಗಡ್ಡ. ಅವನ ಗಡ್ಡ ಹಿಂದೆಲ್ಲ ಕವಿಗಳು, ಬುದ್ಧಿಜೀವಿಗಳು, ಭಗ್ನಪ್ರೇಮಿಗಳ ಮುಖದಲ್ಲಿ ಕಾಣಿಸುತ್ತಿದ್ದಂತಹ ಗಡ್ಡವಲ್ಲ. ಕೊಹ್ಲಿಯ ಗಡ್ಡಕ್ಕೆ ಒಂದು ನಿಖರತೆ, ಖಚಿತತೆ, ಮತ್ತು ಹರಿತ ಇದೆ. ಮೊದಲೆಲ್ಲ ಗಡ್ಡ ಬಿಡುತ್ತಿದ್ದವರನ್ನು ಅನುಮಾನಾಸ್ಪದವಾಗಿ ನೋಡಲಾಗುತ್ತಿದ್ದರೆ, ಕೊಹ್ಲಿ ಆ ಗಡ್ಡವನ್ನು ಫ್ಯಾಷನ್ ಆಗಿಸಿಬಿಟ್ಟ, ಟ್ರೆಂಡ್ ಆಗಿಸಿಬಿಟ್ಟ. ಗಡ್ಡಕ್ಕೆ ಜನರ ನಡುವೆ ಸಮ್ಮತಿ ಮತ್ತು ಗೌರವ ದೊರಕಿದ್ದು, ಅದು ಆ ಹರಿತ, ಆ ನಿಖರತೆ ಪಡೆದುಕೊಂಡಾಗಲೇ. ಹರಿತ, ನಿಖರತೆ, ಖಡಕ್‌ತನ ಎಲ್ಲವೂ ಬಲಿಷ್ಠತೆಯನ್ನು, ಗಂಡಸುತನ, ವೀರತನದ ಸಂಕೇತವೆಂದು ಬಿಂಬಿಸಲಾಗಿದೆ.

image 56 3

ಇವೆಲ್ಲವೂ ಸಮಾಜದ ಜನರ ಮನಸ್ಸು ಎಂಥಾ ಬಗೆಯ ವ್ಯಕ್ತಿತ್ವವನ್ನು ಆದರ್ಶ ಎಂದು ಒಪ್ಪಿಕೊಳ್ಳುತ್ತಿದೆ, ತಲೆ ಮೇಲೆ ಹೊತ್ತು ಕುಣಿಯುತ್ತಿದೆ, ಎಂಥಾ ವ್ಯಕ್ತಿಗಳಾಗಲು ಜನರು ಹಂಬಲಿಸುತ್ತಿದ್ದಾರೆ ಎಂದು ತೋರಿಸುತ್ತದೆ. ಆ ಬಗೆಯ ವ್ಯಕ್ತಿತ್ವ ಎಂಥಾ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದೆ ಎಂದು ಗಮನಿಸಿದಾಗ ಜನರ ಮನಸ್ಸು ಎಂಥಾ ಮೌಲ್ಯಗಳತ್ತ ವಾಲುತ್ತಿದೆ ಎಂದೂ ತಿಳಿಯುತ್ತದೆ.

ಕೊಹ್ಲಿಯ ಗಡ್ಡ, ಅವನು ಕ್ರೀಡಾಂಗಣದಲ್ಲಿ ತೋರುವ ಗಂಡುಬೀರಿತನದ ಮೌಲ್ಯಗಳನ್ನೇ ಹೋಲುತ್ತದೆ. ಆದರೆ, ಆ ಗಂಡುಬೀರಿತನಕ್ಕೆ, ಒಂದು ಶಿಸ್ತಿದೆ. ಆ ಗಡ್ಡ ಗಡಿ ಮೀರುವುದಿಲ್ಲ. ಅದು ಮನಸೋಯಿಚ್ಛೆ ಅಸ್ತವ್ಯಸ್ಥವಾಗಿ ಬೆಳೆಯುವುದಿಲ್ಲ. ಅದಕ್ಕೆ ಬುದ್ಧಿಜೀವಿಗಳ, ಕವಿಗಳ, ಭಗ್ನಪ್ರೇಮಿಗಳ ಗಡ್ಡಕ್ಕಿರುವ ಅನಾರ್ಕಿಕ್ ರೂಪವಿಲ್ಲ. ಕೊಹ್ಲಿಯ ಗಡ್ಡವನ್ನು ಸೌಂದರ್ಯ ನಿಮಿತ್ತ ನಿಯಂತ್ರಣದಲ್ಲಿ ಇಡಲಾಗಿದೆ. ಆ ಸೌಂದರ್ಯ ಪ್ರಜ್ಞೆಯು, ತುಂಬಾ ಸ್ಲೀಕ್ ಮತ್ತು ಸೊಫೆಸ್ಟಿಕೇಟೆಡ್ ಆದ ಸೌಂದರ್ಯ ಪ್ರಜ್ಞೆ. ಅದಕ್ಕೆ ಒಂದು ಎಲೈಟಿಸಂ ಇದೆ. ಅದು ಬಂಡವಾಳಶಾಹಿ ಕನಸಿನ ಸೌಂದರ್ಯ ಪ್ರಜ್ಞೆ. ಈ ಎಲೈಟಿಸಂ ಮತ್ತದೇ ಐಪಿಎಲ್‌ ಪ್ರಚಾರ ಮಾಡುವ, ಪ್ರೋತ್ಸಾಹಿಸುವ ಗ್ಲಾಮರ್ ಬದುಕಿನಂತೆಯೇ ಇದೆ. ಇದೆಲ್ಲವೂ ನಮ್ಮ ಸಮಾಜ ಈಗ ಬಯಸುವ, ಒಪ್ಪಿಕೊಂಡಿರುವ ಬದುಕಿನ ಮೌಲ್ಯಗಳನ್ನೇ ಬಿಂಬಿಸುತ್ತದೆ.

ವಿರಾಟ್ ಕೊಹ್ಲಿ ಒಬ್ಬ ವ್ಯಕ್ತಿ ಆಗಿ ಬೇರೆಯೇ ಆಗಿರಬಹುದು. ಇದನ್ನು ಹೇಳಲು ಕಾರಣ ಅವನು ತನ್ನ ಪ್ರಿಯತಮೆಯ ಮುಂದೆ ಭಾವುಕವಾಗಿ ಕರಗುವ ರೀತಿ, ಆತ ಪಾಕಿಸ್ತಾನಿ ಆಟಗಾರರೊಂದಿಗೆ ಮೈದಾನದಾಚೆ ವ್ಯವಹರಿಸುವ ಮಾನವೀಯ ರೀತಿ ಇತ್ಯಾದಿ. ಆದರೆ ಜನರ ದೃಷ್ಟಿಯಲ್ಲಿ ಅವನ ವ್ಯಕ್ತಿತ್ವ ಬಲಿಷ್ಠತೆ, ಪರಾಕ್ರಮ, ಆಕ್ರಮಣ ಈ ಪುರುಷಾಹಂಕಾರದ ಗುಣಗಳ ಮೂರ್ತರೂಪ. ಜನರಿಗೆ ಆತ ಇಷ್ಟೊಂದು ಆಳವಾಗಿ ಇಷ್ಟವಾಗಿರುವುದು ಅವನು ಆಟದ ಮೈದಾನದಲ್ಲಿ ತೋರುವ ಗಂಡುಬೀರಿ ಗುಣಗಳಿಗಾಗಿ ಮತ್ತು ಅವನ ಆ ಗುಣ ತಂದುಕೊಡುವ ಯಶಸ್ಸಿನ ಕಾರಣಕ್ಕಾಗಿ. ಅವನ ‘ಹೈಪರ್ ಪ್ರೊಡಕ್ಟಿವಿಟಿ’ ಸಹ ಅವನ ಮೇಲೆ ಜನರಿಗಿರುವ ಪ್ರೀತಿಗೆ ಕಾರಣ. ಈ ‘ಹೈಪರ್ ಪ್ರೊಡಕ್ಟಿವಿಟಿ’ ಬಂಡವಾಳಶಾಹಿತನ ಹುಟ್ಟು ಹಾಕಿದ ಆದರ್ಶ. ಅದು ಜನರ ರಕ್ತ ಮಾಂಸದಲ್ಲಿ ಒಂದಾಗಿದೆ ಎನ್ನುವುದಕ್ಕೆ ಕೊಹ್ಲಿಯ ಜನಪ್ರಿಯತೆ ಸಾಕ್ಷಿ.

ಕೊಹ್ಲಿ ಆಡುವ ಆರ್‌ಸಿಬಿ ತಂಡ ಹದಿನೆಂಟು ವರ್ಷಗಳ ಕಾಯುವಿಕೆಯ ನಂತರ ಗೆದ್ದಿತು ಎಂಬುದು ಮಾತ್ರ ಜನರು ಹುಚ್ಚೆದ್ದು ಕುಣಿಯಲು, ಮದವೇರಿದಂತೆ ಸಂಭ್ರಮಿಸಲು ಕಾರಣವಲ್ಲ. ಕೊಹ್ಲಿ ಜೊತೆಗೆ ಗುರುತಿಸಿಕೊಂಡ ದೊಡ್ಡ ಸಂಖ್ಯೆಯ ಜನ, ಐಪಿಎಲ್‌ ಜೊತೆ ಗುರುತಿಸಿಕೊಂಡ ದೊಡ್ಡ ಸಂಖ್ಯೆಯ ಜನ, ಈ ವಿಜಯವನ್ನು ಈ ರೀತಿಯಾಗಿ ಸಂಭ್ರಮಿಸಲು ಕಾರಣ ಈ ವಿಜಯ ಅವರಲ್ಲಿ ತಾವೂ ತಮ್ಮ ತಮ್ಮ ಬದುಕಿನಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂಬ ಭರವಸೆ ಹುಟ್ಟಿಸಿದೆ. ಅಷ್ಟೇ ಅಲ್ಲ, ತಮ್ಮ ತಮ್ಮ ಬದುಕಿನಲ್ಲವರು ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿರುವಾಗ ಅವರ ಚಡಪಡಿಕೆಗಳಿಗೆ ಒಂದು ಕಥಾರಸಿಸ್ ಒದಗಿಸಿದೆ ಈ ವಿಜಯ. ಅಥವಾ ಹೀಗೂ ಇರಬಹುದು; ತಾವು ಮೆಚ್ಚುವ ತಂಡ, ತಾವು ಮೆಚ್ಚುವ ಆಟಗಾರರ ವಿಜಯದಲ್ಲೇ ಜನರು ಸಾರ್ಥಕತೆ ಕಂಡುಕೊಳ್ಳುತ್ತಲಿರಬಹುದು. ಇದನ್ನು ಮೀರಿದ ಯಾವ ವಿಜಯ ತಮಗೆ ಸಿಗಲಾರದು ಎಂಬ ಅಪ್ರಜ್ಞಾಪೂರ್ವಕವಾದ ತಿಳಿವಳಿಕೆಯೂ, ಅದು ಉಂಟುಮಾಡಬಹುದಾದ ಅಸಹಾಯಕತೆಯೂ ಜನರ ಈ ಸಂಭ್ರಮದ ಹಿಂದಿರಬಹುದು.

ಮೊನ್ನೆ ಬೆಂಗಳೂರಲ್ಲಿ 11 ಜನರ ಸಾವಿಗೆ ಆಡಳಿತದ ವೈಫಲ್ಯ ಕಾರಣವಾಗಿದೆ ಎಂಬುವುದು ಸುಳ್ಳಲ್ಲ. ಆದರೆ, ಅದೊಂದೇ ಈ 11 ಸಾವಿನ ಕಾರಣವೇನೆಂದು ತಿಳಿಯಲು ಸಾಲದು. ಅಲ್ಲದೆ, ಆ ಹನ್ನೊಂದು ಸಾವುಗಳಿಗೆ ಮಾತ್ರ ಉತ್ತರ ಹುಡುಕಿದರೆ ಸಾಲದು. ನೊಬೆಲ್ ಪ್ರಶಸ್ತಿ ಪುರಸ್ಕಾರ ಸ್ವೀಕರಿಸುತ್ತಾ ಬೆರ್ಟ್ರಂಡ್ ರಸ್ಸೆಲ್ ಮಾಡಿದ ಭಾಷಣದಲ್ಲಿ ಆತ, “ನಮ್ಮ ರಾಜಕೀಯ ಚರ್ಚೆಗಳು ಮನಶಾಸ್ತ್ರದ ಕುರಿತು ಆಲೋಚಿಸುತ್ತಿಲ್ಲ, ಮನಃಶಾಸ್ತ್ರೀಯ ಆಯಾಮಗಳನ್ನು ಸಾಕಷ್ಟು ಗಣನೆಗೆ ತೆಗೆದುಕೊಳ್ಳುತ್ತಿಲ್ಲ,” ಎಂದು ಹೇಳಿದ್ದ.

ಥಟ್ ಈಸ್ ಆಲ್ ಮೈ ಲಾರ್ಡ್.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸಂವರ್ತ್ ಸಾಹಿಲ್
ಸಂವರ್ತ್ ಸಾಹಿಲ್
ಕವಿತೆ, ಸಿನೆಮಾ, ಸಾಮಾಜಿಕ ಚಿಂತನೆ-ಹೋರಾಟ ಹೀಗೆ ಹಲವಾರು ರಂಗಗಳಲ್ಲಿ ತೊಡಗಿಕೊಂಡಿರುವ ಸಂವರ್ತ ಸಾಹಿಲ್ ಅವರದ್ದು ಬಹುಮುಖ ಪ್ರತಿಭೆ. ಭಾರತದ ವಿವಿಧ ಭಾಷೆಗಳಲ್ಲಿ ಪ್ರಕಟವಾದ ಕವಿತೆಗಳನ್ನು ‘ರೂಪರೂಪಗಳನು ದಾಟಿ’ ಎಂಬ ಶೀರ್ಷಿಕೆಯಡಿಯಲ್ಲಿ ಅನುವಾದಿಸಿದ್ದಾರೆ. ‘ಓದುವುದೆಂದರೆ ಸ್ಪರ್ಶಿಸಿದಂತೆ’ ಅವರ ಮತ್ತೊಂದು ಅನುವಾದಿತ ಕೃತಿ ಇತ್ತಿಚೆಗೆ ಪ್ರಕಟವಾಗಿದೆ.

1 COMMENT

  1. ಬರಹ ಬಹಳ ಚೆನ್ನಾಗಿದೆ; ಗಹನವಾಗಿದೆ.

    ಸಂವರ್ತ ಮುಂದಿಟ್ಟಿರುವ ವಿಚಾರ ಮತ್ತು ವಿಶ್ಲೇಷಣೆಯ ಮೂಲಾಂಶಗಳು ಮೊದಲಿನಿಂದಲೂ ನಮ್ಮಂಥವರು ಭಾವಿಸುತ್ತ, ಹೇಳುತ್ತ ಬಂದಿರುವಂಥವೇ ಆಗಿವೆ. ಆದರೂ, ಅವರು ಮುಂದಿಟ್ಟಿರುವ ಹಲವು ಉದಾಹರಣೆಗಳ ಚಿತ್ರವತ್ತತೆ ಮತ್ತು ನಿಖರತೆಯಿಂದಾಗಿ ನಾನೂ ಈ ವಿದ್ಯಮಾನ ಸರಣಿಯ ಹೊಸ ಮಗ್ಗುಲೊಂದನ್ನು ಕಂಡಂತಾಗಿದೆ. ಬ್ರಿಲಿಯಂಟ್ ವಿಶ್ಲೇಷಣೆ ಇದು. ಇಮ್ಯಾಜಿನೇಟಿವ್ ಎಂಬ ಅರ್ಥದಲ್ಲಿ ಪ್ರತಿಭಾನ್ವಿತವಾದದ್ದು. ಒಳನೋಟಗಳುಳ್ಳದ್ದು.

    ಇದನ್ನು ಬರೆದದ್ದಕ್ಕೆ ಥ್ಯಾಂಕ್ಸ್, ಸಂವರ್ತ. ಪ್ರಕಟಿಸಿದ್ದಕ್ಕೆ ಥ್ಯಾಂಕ್ಸ್, ಸಂಪಾದಕರೇ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X