ವಿವಾದಾತ್ಮಕ ವೆಚ್ಚ ಮಸೂದೆಯ ಪರ ಮತ ಚಲಾಯಿಸಿದ ರಿಪಬ್ಲಿಕನ್ನರನ್ನು ಶಿಕ್ಷಿಸಲು ಬಯಸಿದರೆ, ಅದಕ್ಕಾಗಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಮ್ಮ ಮಾಜಿ ಸಲಹೆಗಾರರೂ ಆದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಒಡ್ಡಿದ್ದಾರೆ.
ವಿಶ್ವದ ಅತ್ಯಂತ ಬಲಿಷ್ಠ ವ್ಯಕ್ತಿಯಾದ ಡೊನಾಲ್ಡ್ ಟ್ರಂಪ್ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಯಾದ ಎಲಾನ್ ಮಸ್ಕ್ ಈ ವಾರ ಪರಸ್ಪರ ಜಟಾಪಟಿಗಿಳಿದ ಕೆಲವು ದಿನಗಳ ನಂತರ, ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರಿಂದ ಬೃಹತ್ ಹಾಗೂ ಸುಂದರ ಮಸೂದೆ ಎಂದು ಬಣ್ಣನೆಗೊಳಗಾಗಿರುವ, ಸದ್ಯ ಅನುಮೋದನೆಗಾಗಿ ಕಾಂಗ್ರೆಸ್ ಮುಂದಿರುವ ವೆಚ್ಚ ಮಸೂದೆಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ಕೆಸರೆರಚಾಟದ ಪೋಸ್ಟ್ಗಳನ್ನು ಮಾಡಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮೋದಿ ಶರಣಾಗಿದ್ದಾರೆ’ ಎಂಬ ರಾಹುಲ್ ಹೇಳಿಕೆಯು ಹಲವು ಪ್ರಶ್ನೆಗಳನ್ನು ಎತ್ತುತ್ತದೆ
ಗುರುವಾರದಂದು ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಅವರಿಬ್ಬರ ನಡುವೆ ಈ ಮನಸ್ತಾಪ ಉಂಟಾಗಿತ್ತು. ಆದರೆ, ಡೊನಾಲ್ಡ್ ಟ್ರಂಪ್ರ ಮಹತ್ವಾಕಾಂಕ್ಷಿ ವೆಚ್ಚ ಮಸೂದೆಯ ವಿರುದ್ಧ ಇರುವ ಕೆಲವು ಸಂಸದರು, ಕಳೆದ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಭಾರಿ ಪ್ರಮಾಣದಲ್ಲಿ ನೆರವು ನೀಡಿದ್ದ ಎಲಾನ್ ಮಸ್ಕ್ಗೆ ಕರೆ ಮಾಡಿ, ಈ ಮಸೂದೆಯ ಪರ ಮತ ಚಲಾಯಿಸಿದ ರಿಪಬ್ಲಿಕ್ ಸದಸ್ಯರಿಗೆ ಸವಾಲು ಒಡ್ಡಲು ಪ್ರಾಥಮಿಕ ನೆರವು ಒದಗಿಸುವಂತೆ ಮನವಿ ಮಾಡಿದ್ದರು ಎಂದು ವರದಿಯಾಗಿದೆ.
ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, “ಅವರೇನಾದರೂ ಹಾಗೆ ಮಾಡಿದರೆ, ಅದಕ್ಕಾಗಿ ಅವರು ತುಂಬಾ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಬೆದರಿಕೆ ಹಾಕಿದ್ದಾರೆ. ಆದರೆ, ಆ ಪರಿಣಾಮಗಳೇನು ಎಂಬುದರ ಕುರಿತು ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ.
“ಎಲಾನ್ ಮಸ್ಕ್ ರೊಂದಿಗಿನ ಸಂಬಂಧವನ್ನು ಸರಿಪಡಿಸಿಕೊಳ್ಳುವ ಯಾವ ಇರಾದೆಯೂ ನನಗಿಲ್ಲ. ನನಗೆ ಅವರೊಂದಿಗೆ ಮಾತನಾಡುವ ಬಯಕೆಯೂ ಇಲ್ಲ” ಎಂದು ಟ್ರಂಪ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.