- ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೋರು ಮಳೆ ಸಾಧ್ಯತೆ
- ಕರಾವಳಿ ತೀರ ಪ್ರದೇಶಗಳಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 40-45 ಕಿ.ಮೀ
ಮುಂಗಾರು ಮಳೆ ಇದೀಗ ಚುರುಕಾಗಿದ್ದು, ರಾಜ್ಯದ ಹಲವೆಡೆ ಜೋರು ಮಳೆಯಾಗುತ್ತಿದೆ. ಬುಧವಾರದಿಂದ ಇನ್ನೂ ಮೂರು ದಿನಗಳ ಕಾಲ ಜೋರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜುಲೈ 19ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೋರು ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ನೀಡಿದೆ. ಬೀದರ್, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ಜುಲೈ 20 ಮತ್ತು 21ರಂದು ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದ್ದು, ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ಬೆಂಗಳೂರು ನಗರ, ಬೆಂ. ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಗದಗ, ಹಾವೇರಿ, ಧಾರವಾಡ, ರಾಯಚೂರು, ಯಾದಗಿರಿ, ಕೊಪ್ಪಳದಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈ ಮಳೆ ಇನ್ನೂ ಮೂರು ದಿನಗಳ ಕಾಲ ಮುಂದುವರೆಯಲಿದೆ. ಕರಾವಳಿ ತೀರ ಪ್ರದೇಶಗಳಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 40-45 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಹಾಗಾಗಿ, ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಎಲ್ಲೆಲ್ಲಿ ಮಳೆಯಾಗಿದೆ?
ಮಂಗಳವಾರ ಬೆಳಗಾವಿಯ ಕಣಬರ್ಗಿ, ಚಿಕ್ಕಮಗಳೂರಿನ ಮೂಡಿಗೆರೆ, ಹಾವೇರಿಯ ಹನುಮಾನ್ ಮಟ್ಟಿ, ಕೊಡಗಿನ ಗೋಣಿಕೊಪ್ಪ, ಬಾಗಲಕೋಟೆ ಮತ್ತು ಯಾದಗಿರಿ ಸೇರಿ ಹಲವು ಭಾಗಗಳಲ್ಲಿ ಜೋರು ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್‌ರಾಕ್‌ನಲ್ಲಿ 12 ಸೆಂ.ಮೀ ಮಳೆಯಾಗಿದೆ.
ಮಲಪ್ರಭೆಯಲ್ಲಿ ಮುಳುಗಿದ ಹೆಬ್ಬಾನಟ್ಟಿ ಮಾರುತಿ ಮಂದಿರ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ನದಿ ಉಕ್ಕಿ ಹರಿಯುತ್ತಿರುವುದರಿಂದ ಹೆಬ್ಬಾನಟ್ಟಿ ಗ್ರಾಮದಲ್ಲಿರುವ ಮಾರುತಿ ಮಂದಿರ ಮತ್ತು ರಾಮಮಂದಿರಗಳು ಮುಕ್ಕಾಲು ಭಾಗದಷ್ಟು ಮುಳುಗಡೆಯಾಗಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ. ಮೂಡಿಗೆರೆ, ಕಳಸ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಬುಧವಾರ ಮುಂಜಾನೆಯಿಂದ ಜೋರು ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ನಲ್ಲಿ ವಾಹನಗಳ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ. ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.
ಗದಗ-ಬೆಟಗೇರಿ ಜಿಲ್ಲೆಯಲ್ಲಿ ಮುಂಜಾನೆಯಿಂದಲೇ ಬಿಟ್ಟು ಬಿಡದೇ ಜಿಟಿ ಜಿಟಿ ಮಳೆ ಶರುವಾಗಿದೆ. ಮಳೆಗೆ ಜನರು ಮನೆಯಿಂದ ಹೊರ ಬರುತ್ತಿಲ್ಲ. ನಗರಗಳಲ್ಲಿ ಎರಡು ದಿನಗಳಿಂದ ಮೋಡಕವಿದ ವಾತಾವರಣವಿದೆ.
ಈ ಸುದ್ದಿ ಓದಿದ್ದೀರಾ? ಈಜಿಪುರ ಮೇಲ್ಸೇತುವೆ ನಿರ್ಮಾಣ ನಿಧಾನಗತಿ ಅಣಕಿಸಿ ಟ್ವೀಟ್: ಕಂಬಗಳ ಮೇಲೆ ಕಾಣಿಸಿಕೊಂಡ ವಿದ್ಯುತ್ ದೀಪ!
ಮಳೆ ಕೊರತೆ ಎಲ್ಲೆಲ್ಲಿ?
ಮುಂಗಾರು ರಾಜ್ಯಕ್ಕೆ ವಾಡಿಕೆಯಂತೆ ಆಗಮನವಾಗದಿದ್ದರೂ ಜುಲೈ ತಿಂಗಳಿನಲ್ಲಿ ಮುಂಗಾರು ಚುರುಕಾಗಿದೆ. ರಾಜ್ಯದ ಕೆಲವೆಡೆ ಜೋರು ಮಳೆ ಸುರಿಯುತ್ತಿದ್ದರೆ, ಇನ್ನೂ ಕೆಲವೆಡೆ ಮಳೆಯ ಕೊರತೆ ಉಂಟಾಗಿದೆ.
ರಾಜ್ಯದ ಒಟ್ಟು 21 ಜಿಲ್ಲೆಗಳಲ್ಲಿ ಮಳೆಯ ಕೊರತೆ ಉಂಟಾಗಿದೆ. ರಾಜ್ಯಾದ್ಯಂತ ವಾಡಿಕೆಯಂತೆ ಜೂನ್ 1 ರಿಂದ ಜುಲೈ 18ರವರೆಗೆ 356 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 234 ಮಳೆಯಾಗಿ ಶೇ. 34ರಷ್ಟು ಮಳೆ ಕೊರತೆ ಉಂಟಾಗಿದೆ.
ದಕ್ಷಿಣ ಒಳನಾಡಿನಲ್ಲಿ ಶೇ.13, ಉತ್ತರ ಒಳನಾಡಿನಲ್ಲಿ ಶೇ.36, ಮಲೆನಾಡಲ್ಲಿ ಶೇ.54 ಹಾಗೂ ಕರಾವಳಿಯಲ್ಲಿ ಶೇ.25 ಮಳೆ ಅಭಾವ ಉಂಟಾಗಿದೆ.