ವ್ಯವಸಾಯ ಅಂದುಕೊಂಡಷ್ಟು ಸುಲಭವಲ್ಲ. ಕೃಷಿ ಕ್ಷೇತ್ರದಲ್ಲಿ ಅನೇಕ ಸವಾಲುಗಳನ್ನು ಅನುಭವಿಸಬೇಕಾಗುತ್ತದೆ. ಅಂತಹ ಎಲ್ಲ ಸವಾಲು ಎದುರಿಸಿ ಮತ್ತು ಸರ್ಕಾರಿ ನೌಕರಿ ಬಿಟ್ಟನೆಂದು ಹಂಗಿಸುವ ಮಾತುಗಳಿಗೆ ಲಕ್ಷ್ಯ ಕೊಡದೆ ದಿಟ್ಟತನದ ಹೆಜ್ಜೆಯಿಟ್ಟು ಕೃಷಿ ಕ್ಷೇತ್ರದಲ್ಲಿ ಯಶಸನ್ನು ಕಂಡವರು ಧೂಳಪ್ಪ ಡೊಳ್ಳಿನ.
ಇವರ ಕುರಿತು ಬರೆಯಲು ಹಲವು ಮುಖ್ಯ ಕಾರಣಗಳಿವೆ. ಸಾಮಾನ್ಯವಾಗಿ ಮೂಲತಃ ವ್ಯವಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಉಳಿಮೆಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದವರೇ ಅನೇಕ ಸವಾಲುಗಳು ಎದುರಿಸಬೇಕಾಗುತ್ತದೆ. ಆದರೆ, ಮೂಲತಃ ರೈತರೂ ಅಲ್ಲದ, ವ್ಯವಸಾಯದ ಬಗ್ಗೆ ಮಾಹಿತಿಯೂ ಇಲ್ಲದ ಒಬ್ಬ ವ್ಯಕ್ತಿ ಮಾಡುತ್ತಿದ್ದ ಸರ್ಕಾರಿ ನೌಕರಿಗೆ ವಿದಾಯ ಹೇಳಿ ವ್ಯವಸಾಯದಲ್ಲಿ ಯಶಸ್ಸನ್ನು ಕಾಣುತ್ತಾರೆ. ಕೃಷಿಯ ಜ್ಞಾನವಿಲ್ಲದ ಸಮಯದಲ್ಲಿ ವ್ಯವಸಾಯದ ಸಮುದ್ರದಲ್ಲಿ ಧುಮುಕಿ ಈಜಿ ದಡತಲುಪಿ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವ ಇವರ ಬಗ್ಗೆ ನಾವು ತಿಳಿಯಲೇಬೇಕು.
ಧೂಳಪ್ಪ ಡೊಳ್ಳಿನ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದವರು. ಎಸ್ಎಸ್ಎಲ್‌ಸಿ (ಮೆಟ್ರಿಕ್) ಪಾಸಾದ ಅವರು 2003ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಚಾಲಕ ಹುದ್ದೆಗೆ ಆಯ್ಕೆಯಾಗುತ್ತಾರೆ. ಆ ಸಮಯದಲ್ಲಿ ಅವರಿಗೆ ಸಂಬಳ ಕಡಿಮೆ ಇರುವ ಕಾರಣದಿಂದ ಆ ಕೆಲಸವನ್ನು ಬಿಡುತ್ತಾರೆ. ನಂತರ 2006ರಲ್ಲಿ ಪುನಃ ಕೆಎಸ್ಆರ್‌ಟಿಸಿ ಯಲ್ಲಿ ಆಯ್ಕೆಯಾಗಿ, 1 ವರ್ಷ ಬೆಂಗಳೂರು-ಮೈಸೂರು ಭಾಗದಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅಲ್ಲಿಯೂ ತೃಪ್ತಿ ಸಿಗದ ಕಾರಣ, ಚಾಲಕ ಹುದ್ದೆಗೆ ರಾಜೀನಾಮೆ ನೀಡಿ ಸ್ವಂತ ಊರಿಗೆ ವಾಪಸ್ಸಾಗುತ್ತಾರೆ. ಮತ್ತೆ ಧಾರವಾಡ ಸಾರಿಗೆ ಸಂಸ್ಥೆಯಲ್ಲಿ ಆಯ್ಕೆ ಆಗುತ್ತಾರೆ. ಅಲ್ಲಿಯೂ ಕೆಲಸ ಬೇಡವೆಂದು ರಾಜೀನಾಮೆ ನೀಡುತ್ತಾರೆ. ಮನೆಯಲ್ಲಿ ತಂದೆಯಿಂದ ಬೈಗಳಕ್ಕೂ ಒಳಗಾಗುತ್ತಾರೆ. ಅತ್ತ ಹೆಣ್ಣು ಕೊಟ್ಟ ಮಾವನ ಮನೆಯವರೂ ನೌಕರಿ ಇತ್ತೆಂದು ಹೆಣ್ಣು ಕೊಟ್ಟೆವು ಎಂದು ಆಡಿಕೊಳ್ಳಲು ಶುರು ಮಾಡುತ್ತಾರೆ. ಇದಾವುದಕ್ಕೂ ಕುಗ್ಗದ, ಹೆದರದ ಧೂಳಪ್ಪ ಕೃಷಿ ಕ್ಷೇತ್ರದಲ್ಲಿಯೇ ಮುನ್ನಡೆಯಬೇಕೆಂಬ ಛಲದಿಂದ ಮುನ್ನುಗ್ಗುತ್ತಾರೆ.

ಈ ಕುರಿತು ಧೂಳಪ್ಪ ಡೊಳ್ಳಿನ ಈದಿನ.ಕಾಂ ಜೊತೆಗೆ ಮಾತನಾಡುತ್ತಾ ತಮ್ಮ ಸಾಧನಾ ಹಾದಿಯನ್ನು ನೆನಪಿಸಿಕೊಂಡಿದ್ದು ಹೀಗೆ, “ನನಗ ಮೊದಲ ಹೇಳಬೇಕಂದರ ಹೊಲದಾಗ ದುಡಿಯೋದು ಗೊತ್ತಿರಲಿಲ್ಲ. ಪಗಾರ ಕಡಿಮೆ ಇರೋ ಕಾರಣಕ್ಕ, ನೌಕರಿ ಬಿಟ್ಟೆ. ಆ ಸಂದರ್ಭದಾಗ ಏನು ಮಾಡಬೇಕು ಅಂತ ತೋಚಲಿಲ್ಲ. ನಾನು ಕೃಷಿಗೆ ಧುಮುಕಿದಾಗ ನನ್ನನ್ನು ಯಾರೂ ಕೈ ಹಿಡಿಯಲಿಲ್ಲ. ಕೃಷಿ ಇಲಾಖಾ ಅಧಿಕಾರಿಗಳ ಮಾರ್ಗದರ್ಶನದಿಂದ ಸಸಿ ಖರೀದಿಸಿ ಉಳಿಮೆ ಮಾಡಲು ಶುರುಮಾಡಿದೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಅನ್ನೊಹಾಂಗ; ಭೂಮ್ಯಾಗ ಪ್ರಾಮಾಣಿಕವಾಗಿ ದುಡಿದರ ಭೂತಾಯಿ ಯಾವತ್ತೂ ಮೋಸ ಮಾಡಾಂಗಿಲ್ಲ. ಅದರಂತೆ ನಾನು ಗಟ್ಟಿಮನಸ್ಸಿನಿಂದ ದುಡಿಲಿಕ್ಕೆ ಪ್ರಾರಂಭ ಮಾಡಿದೆ. ಹೂವು, ತರಕಾರಿ ಬೆಳೆಯಲ್ಲಿ ನೀರಿಕ್ಷೆಗೂ ಮೀರಿ ನನಗ ಲಾಭ ತಂದುಕೊಟ್ಟಿತು. ಬೆಳಿಗ್ಗೆಯಿಂದ ಸಾಯಂಕಾಲದ ತನಕ ದುಡಿಯುತ್ತೇನೆ. ಹೂವು, ತರಕಾರಿಗಳನ್ನು ಸ್ವತಃ ನಾನೇ ಮಾರುಕಟ್ಟೆಗೆ ಒಯ್ದು, ಸವಾಲಿನೊಳಗೆ ಮಾರಾಟ ಮಾಡುತ್ತೇನೆ. ಶ್ರಮಪಟ್ಟು ದುಡಿದರೆ; ಯಶಸ್ಸು ಸಾಧ್ಯ ಅನ್ನುವುದಕ್ಕೆ ನಾನೆ ಸಾಕ್ಷಿ”
“ಆರಂಭದೊಳಗ ನನ್ನನ್ನು ಕಡೆಗಣಿಸಿ ಇವನಾರವ ಎನ್ನುತ್ತಿದ್ದ, ಬಹುತೇಕರು ನಾನು ವ್ಯವಸಾಯದೊಳಗ ಹೆಚ್ಚು ಲಾಭ ಸಂಪಾದಿಸದ ತಕ್ಷಣ ಇವನಮ್ಮವ ಎನ್ನುತ್ತಾ ನನ್ನ ಹೆಸರಿನಿಂದ ಗುರುತಿಸಿಕೊಳ್ಳಲಿಕ್ಕೆ ಮುಂದಾದರು. ಕೆಲವರು ನೀವು ಹೇಗೆ ಹೀಗೆಲ್ಲ ಸಾಧಿಸಲು ಸಾಧ್ಯ ಆಯ್ತು? ಅಂತ ಕೇಳಿದರು. ಹಲವರು ಮೊದಲಿನಿಂದ ಕೃಷಿ ಗೊತ್ತಿಲ್ಲದವನಿಂದ ನಾವೇನು ಕಲಿಯೋದು? ಅಂತ ಮಾತನಾಡಲು ಶುರುಮಾಡಿದರು. ಹಿಂಗಾಗಿ; ನಾನು ಯಾರಿಗೂ ಮಾರ್ಗದರ್ಶನ ಮಾಡಲು ಮುಂದಾಗಲಿಲ್ಲ. ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ದುಡಿದರೆ ಗೆಲುವು ಸಾಧ್ಯ. ಮುಖ್ಯವಾಗಿ, ‘ವ್ಯವಸಾಯ; ಮನೆ ಮಕ್ಕಳೆಲ್ಲಾ ಸಾಯ’ ಎನ್ನುವ ಗಾದೆ ಮಾತಿನಂತೆ; ನನ್ನ ಕೃಷಿಕಾರ್ಯಕ್ಕೆ ನನ್ನ ಹೆಂಡತಿ ಜಯಶ್ರೀ ನನ್ನ ಬೆಂಬಲವಾಗಿ ನಿಂತ ಕಾರಣ ನಾನು ಸಾಧಿಸಲು ಸಾಧ್ಯವಾಯಿತು” ಅನ್ನುತ್ತಾರೆ ಧೂಳಪ್ಪ.

2022ರಿಂದ ಮೂರು ಎಕರೆ ಹೊಲದಲ್ಲಿ 6 ಸಾವಿರ ಗುಲಾಬಿ ಸಸಿಗಳನ್ನು ತಮಿಳುನಾಡಿನಿಂದ ತಂದು ಬೆಳೆಯುತ್ತಿದ್ದು, ತಿಂಗಳಿಗೆ ಲಕ್ಷ ರೂಪಾಯಿ ಸಂಪಾದಿಸಿದ್ದಾರೆ. ಇದುವರೆಗೂ ಗುಲಾಬಿ ಬೆಳೆಯಲ್ಲಿ ಖರ್ಚು ಕಳೆದು 21 ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆ. ಇನ್ನುಳಿದ ಮೂರು ಎಕರೆಯಲ್ಲಿ ಸೇವಂತಿ ಹೂವು, ಹಸಿ ಮೆಣಸಿನಕಾಯಿ, ಹೀರೆಕಾಯಿ ಬೆಳೆಯುತ್ತಾರೆ. ಸೇವಂತಿ ಬೆಳೆಯಿಂದ ಒಂದು ವರ್ಷ 5 ಲಕ್ಷ, ಹಸಿ ಮೆಣಸಿನಕಾಯಿ ಬೆಳೆಯಿಂದ ವರ್ಷಕ್ಕೆ 6 ಲಕ್ಷ ಆದಾಯ ಗಳಿಸಿದ್ದಾರೆ. ಧಾರವಾಡದಿಂದ ಬೆಣ್ಣಿ ಹಳ್ಳದ ಕಡೆಗೆ ಹರಿದು ಹೋಗುವ ಕೊಳಿ ಕೆರೆಯ ನೀರನ್ನು ಪಂಪ್‌ಸೆಟ್ ಮೂಲಕ ಹೊಲಕ್ಕೆ ಬಳಸಿ, ಕೃಷಿ ಮಾಡುತ್ತಾ ಬಂದಿದ್ದಾರೆ. ಗುಲಾಬಿ ಬೆಳೆಗೆ ಕೆಂಪು ಮಣ್ಣು ಸೂಕ್ತವೆಂದು ಕೃಷಿ ಇಲಾಖೆಯ ಅಧಿಕಾರಿಗಳು ದೂಳಪ್ಪನವರಿಗೆ ಹೇಳುತ್ತಾರೆ. ಆದರೆ; ಲಾಭವಾಗಲಿ, ನಷ್ಟವಾಗಲಿ ಎಂದು ಅದನ್ನು ಸವಾಲಾಗಿ ಸ್ವೀಕರಿಸಿ ಕಪ್ಪು ಮಣ್ಣಿನಲ್ಲಿಯೇ ಗುಲಾಬಿ, ಸೇವಂತಿಯನ್ನು ನರೇಗಾ ಯೋಜನೆ ಅಡಿಯಲ್ಲಿ ಸಹಾಯಧನ ಪಡೆದುಕೊಂಡು ಬೆಳೆ ಬೆಳೆಯಲು ಮುಂದಾಗುತ್ತಾರೆ. ಹಬ್ಬ, ಮದುವೆ ಮತ್ತು ಶುಭ ಸಮಾರಂಭಗಳಲ್ಲಿ ನೇರವಾಗಿ ತೋಟಕ್ಕೆ ಬಂದು ಗುಲಾಬಿ ಪೆಂಡಿಗಳನ್ನು ಜನ ಖರೀದಿಸುತ್ತಾರೆ.

“ಬಸವಣ್ಣ ಕಾಯಕವೇ ಕೈಲಾಸ ತತ್ವವನ್ನು ಸಾರಿದ್ದಾರೆ. ಅದರಂತೆ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ದೇವರನ್ನು ಎಲ್ಲಿಯೂ ಹುಡುಕುವ ಹಾಗಿಲ್ಲ. ದುಡಿಮೆಗಿಂತ ದೊಡ್ಡ ದೇವರಿಲ್ಲ. ದೇವರು ನಮ್ಮ ಬದುಕನ್ನು ಉದ್ಧಾರವೂ ಮಾಡಲಾರ ಮತ್ತು ಹಾಳೂ ಮಾಡಲಾರ. ನಮ್ಮ ನಮ್ಮ ಯೋಚನೆಗಳೇ ನಮ್ಮ ಅಳಿವು ಉಳಿವಿಗೆ ಕಾರಣ” ಎನ್ನುತ್ತಾರೆ ಧೂಳಪ್ಪ. ಇವತ್ತಿನ ಯುವಕರು ಕೆಲಸವಿಲ್ಲ ಎಂದು ಸೋಮಾರಿತನದಿಂದ ಮೊಬೈಲ್ ಹಿಡಿದು ಕೂಡ್ರುತ್ತಾರೆ. ಆದರೆ, ಯಾರೂ ಸಹಿತ ದುಡಿಮೆ ಮಾಡಲು ಮುಂದಾಗುವುದಿಲ್ಲ. ಯುವಕರು ಹೆಚ್ಚೆಚ್ಚು ಕೃಷಿ ಕಡೆಗೆ ಮುಖ ಮಾಡುವಂತೆ ಸರ್ಕಾರವೂ ಕೂಡಾ ಒಳ್ಳೆಯ ಕೃಷಿ ಯೋಜನೆಗಳನ್ನು ರೂಪಿಸಬೇಕು. ಹೊಸ ಹೊಸ ತಂತ್ರಜ್ಞಾನದ ಕೃಷಿ ಉಪಕರಣಗಳ ಸದುಪಯೋಗದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎನ್ನುತ್ತಾರೆ.
ಮಳೆ ಇಲ್ಲದಿದ್ದರೂ, ಬೋರ್, ಹನಿ ನೀರಾವರಿ ಮುಂತಾದ ಪದ್ಧತಿಗಳನ್ನು ರೈತರು ಅನುಸರಿಸುತ್ತಾರೆ. ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಂತೆ ರೈತರು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಮೂಲದಲ್ಲಿ ವ್ಯವಸಾಯವೇ ಈ ನೆಲದ ಪ್ರಮುಖ ಕಸುಬಾಗಿತ್ತು. ದೇಶದ ಪ್ರಮುಖ ಉದ್ಯೋಗ ಬೇಸಾಯವೇ. ನಂಬಿದವರನ್ನು ಈ ಭೂಮಿ ತಾಯಿ ಕೈ ಬಿಡಲ್ಲ ಎಂಬುದು ಭಾರತೀಯ ರೈತರ ನಂಬಿಕೆ. ರೈತರು ಬೆಳೆ ನಷ್ಟವಾದರೂ ಕೃಷಿ ಮಾಡುವುದನ್ನು ಬಿಡುವುದಿಲ್ಲ. ಮತ್ತೆ ಬೇರೆ ಬೆಳೆ ಬೆಳೆದು ಹಣ ಗಳಿಸಲು ಪ್ರಯತ್ನ ಮಾಡುತ್ತಾರೆ. ಆ ರೀತಿಯ ಪ್ರಯತ್ನ ಕೃಷಿಕ ಧೂಳಪ್ಪ ಡೊಳ್ಳಿನ ಮಾಡಿದ್ದಾರೆ.

ಭಾರತೀಯ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿರುವ ಕಾರಣ ರೈತನಿಗೆ ನೇರ ಮಾರುಕಟ್ಟೆ ಸಂಪರ್ಕ ಮತ್ತು ಬೆಳೆಗೆ ಸರಿಯಾದ ಬೆಲೆ ಸಿಗುವುದಿಲ್ಲ. ಇದರಲ್ಲಿ ಕಮಿಷನ್ ಏಜೆಂಟ್‌ಗಳು ರೈತರ ದಾರಿ ತಪ್ಪಿಸುತ್ತಾರೆ. ರೈತರೇ ನೇರವಾಗಿ ಮಾರುಕಟ್ಟೆ ಮಾಡುವಂತೆ ಆಗಬೇಕು. ಸರ್ಕಾರವು ರೈತರಿಗೆ ಮಣ್ಣಿನ ಸಂರಕ್ಷಣೆ, ಬಳಕೆ, ಪರೀಕ್ಷೆಗಳ ಬಗ್ಗೆ ಜ್ಞಾನ ನೀಡುತ್ತದೆ. ಅದರ ಸದುಪಯೋಗ ತೆಗೆದುಕೊಳ್ಳಬೇಕು. ಇತ್ತೀಚೆಗೆ ನನ್ನ ಕೃಷಿ ಕಾಯಕಕ್ಕೆ ಯೂಟ್ಯೂಬ್ ನಿಂದ ಬಹಳಷ್ಟು ಮಾರ್ಗಸೂಚಿಗಳನ್ನು ಪಡೆದುಕೊಂಡಿದ್ದೇನೆ ಅನ್ನುತ್ತಾರೆ ಧೂಳಪ್ಪ ಡೊಳ್ಳಿನ.