2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಪ್ರಕರಣದಲ್ಲಿ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಗುಜರಾತ್ ಹೈಕೋರ್ಟ್‌ನ ಆದೇಶವನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎಎಸ್ ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರ ಪೀಠ ತಳ್ಳಿಹಾಕಿತು.
ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು, ಸೆಟಲ್ವಾಡ್ ಅವರ ಬಂಧನದ ಉದ್ದೇಶಗಳು ಮತ್ತು ಕಾರ್ಯ ಚಟುವಟಿಕೆಯ ಬಗ್ಗೆ ಸರ್ಕಾರಿ ಅಭಿಯೋಜಕರನ್ನು ಪ್ರಶ್ನಿಸಿದರು. “2022ರವರೆಗೆ ನೀವು ಏನು ಮಾಡುತ್ತಿದ್ದೀರಿ? ಜೂನ್ 24 ಮತ್ತು ಜೂನ್ 25 ರಿಂದ ನೀವು ಯಾವ ತನಿಖೆಯನ್ನು ಮಾಡಿದ್ದೀರಿ” ಎಂದು ಮುಂತಾದವುಗಳ ಬಗ್ಗೆ ಪ್ರಶ್ನಿಸಿದರು.
ತೀಸ್ತಾ ಅವರಿಗೆ ಜುಲೈ 19 ರವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂ ಕೋರ್ಟ್ ಈ ತಿಂಗಳ ಆರಂಭದಲ್ಲಿ ವಿಸ್ತರಿಸಿತ್ತು.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ದಲಿತ ಬಾಲಕನ ಕೈಯಿಂದ ಮಲ ತೆಗೆಸಿ ಹೀನ ಕೃತ್ಯ
ಕಸ್ಟಡಿ ವಿಚಾರಣೆಯ ಅಗತ್ಯವನ್ನು ತೆಗೆದುಹಾಕಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರಬಾರದು ಎಂದು ನ್ಯಾಯಾಧೀಶರು ತೀಸ್ತಾ ಅವರಿಗೆ ಸೂಚಿಸಿದ್ದಾರೆ. ತೀಸ್ತಾ ಅವರನ್ನು ಕೂಡಲೇ ಶರಣಾಗುವಂತೆ ಆದೇಶ ನೀಡಿ, ಜಾಮೀನು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಗೋಧ್ರಾ ನಂತರದ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ ಜೂನ್‌ನಲ್ಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ ತೀಸ್ತಾ ಸೆಟಲ್ವಾಡ್, ಗುಜರಾತ್ ಪೊಲೀಸ್ ಮಹಾ ನಿರ್ದೇಶಕ ಆರ್ ಬಿ ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಬಂಧಿಸಲಾಗಿತ್ತು.